Asianet Suvarna News Asianet Suvarna News

ಪ್ರೊ ಕಬಡ್ಡಿ: 2ನೇ ಕ್ವಾಲಿಫೈಯರ್‌’ನಲ್ಲಿ ಗುಜರಾತ್‌-ಯು.ಪಿ.ಯೋಧಾ ಸೆಣಸು

ಕ್ವಾಲಿಫೈಯರ್‌ 1ರಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ 29-41ರಲ್ಲಿ ಸೋಲುಂಡಿದ್ದ ಗುಜರಾತ್‌, ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ತಂಡಕ್ಕೆ ಇದೀಗ 2ನೇ ಅವಕಾಶ ಸಿಕ್ಕಿದ್ದು, ಇದರ ಸಂಪೂರ್ಣ ಲಾಭ ಪಡೆಯುವ ವಿಶ್ವಾಸದಲ್ಲಿದೆ.

Pro Kabaddi 2018 Can UP Yoddha stop Gujarat Fortunegaints in Qualifier 2
Author
Mumbai, First Published Jan 3, 2019, 10:32 AM IST

ಮುಂಬೈ[ಜ.03]: ಪ್ರೊ ಕಬಡ್ಡಿ 6ನೇ ಆವೃತ್ತಿಯ 2ನೇ ಕ್ವಾಲಿಫೈಯರ್‌ ಪಂದ್ಯ ಗುರುವಾರ ಇಲ್ಲಿ ನಡೆಯಲಿದ್ದು, ಕಳೆದ ಬಾರಿಯ ರನ್ನರ್‌-ಅಪ್‌ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಹಾಗೂ ಯು.ಪಿ.ಯೋಧಾ ತಂಡಗಳು ಸೆಣಸಲಿವೆ. ಗೆಲ್ಲುವ ತಂಡಕ್ಕೆ ಫೈನಲ್‌ಗೇರುವ ಅವಕಾಶ ಸಿಗಲಿದೆ.

ಬೆಂಗಳೂರು ಬುಲ್ಸ್ ಫೈನಲ್‍‌ಗೆ -ಡಬಲ್ ಆಯ್ತು ಹೊಸ ವರ್ಷದ ಸಂಭ್ರಮ!

ಕ್ವಾಲಿಫೈಯರ್‌ 1ರಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ 29-41ರಲ್ಲಿ ಸೋಲುಂಡಿದ್ದ ಗುಜರಾತ್‌, ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ತಂಡಕ್ಕೆ ಇದೀಗ 2ನೇ ಅವಕಾಶ ಸಿಕ್ಕಿದ್ದು, ಇದರ ಸಂಪೂರ್ಣ ಲಾಭ ಪಡೆಯುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಸತತ 8 ಪಂದ್ಯಗಳಲ್ಲಿ ಸೋಲೇ ಕಾಣದ ಯು.ಪಿ.ಯೋಧಾ, ಎಲಿಮಿನೇಟರ್‌ ಪಂದ್ಯಗಳಲ್ಲಿ ಬೆಂಗಾಲ್‌ ವಾರಿಯ​ರ್ಸ್ ಹಾಗೂ ದಬಾಂಗ್‌ ಡೆಲ್ಲಿಯನ್ನು ಸೋಲಿಸಿ, ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಡಿಫೆಂಡರ್‌ಗಳ ಕಾಳಗ: ಗುಜರಾತ್‌ ಹಾಗೂ ಯೋಧಾ ಎರಡೂ ತಂಡಗಳು ತನ್ನ ರಕ್ಷಣಾ ಪಡೆಯ ಮೇಲೇ ಹೆಚ್ಚು ಅವಲಂಬಿತಗೊಂಡಿವೆ. ಈ ಆವೃತ್ತಿಯ ಶ್ರೇಷ್ಠ ಡಿಫೆಂಡರ್‌ ನಿತೇಶ್‌ ಕುಮಾರ್‌ ಹಾಗೂ ಹಿರಿಯ ಆಟಗಾರ ಜೀವ ಕುಮಾರ್‌ ಜೋಡಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಲಿದೆ. ಎಡ ಕಾರ್ನರ್‌ ಡಿಫೆಂಡರ್‌ ಸಚಿನ್‌ ಕುಮಾರ್‌ ಸಹ ಉತ್ತಮ ಲಯದಲ್ಲಿದ್ದಾರೆ. ಮತ್ತೊಂದೆಡೆ ಸೋದರ ಸಂಬಂಧಿಗಳಾದ ಪರ್ವೇಶ್‌ ಭೈನ್ಸ್‌ವಾಲ್‌ ಹಾಗೂ ಸುನಿಲ್‌ ಕುಮಾರ್‌ ಗುಜರಾತ್‌ ರಕ್ಷಣಾ ಪಡೆಯ ಆಧಾರ ಸ್ತಂಭ. ಕರ್ನಾಟಕದ ಸಚಿನ್‌ ವಿಠ್ಠಲಾ ಹಾಗೂ ಇರಾನ್‌ನ ಹಾಡಿ ಅಸ್ಟಾರಾಕ್‌ ಸಹ ತಂಡಕ್ಕೆ ಅಗತ್ಯ ಸಂದರ್ಭಗಳಲ್ಲಿ ನೆರವಾಗಿದ್ದಾರೆ. ಡಿಫೆಂಡರ್‌ಗಳ ಪ್ರದರ್ಶನದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಯು.ಪಿ.ಯೋಧಾದ ರೈಡಿಂಗ್‌ ವಿಭಾಗವನ್ನು ಪ್ರಶಾಂತ್‌ ಕುಮಾರ್‌ ರೈ ಹಾಗೂ ರಿಶಾಂಕ್‌ ದೇವಾಡಿಗ ಮುನ್ನಡೆಸಲಿದ್ದಾರೆ. ಶ್ರೀಕಾಂತ್‌ ಜಾಧವ್‌ 3ನೇ ರೈಡರ್‌ ಆಗಿ ಯಶಸ್ಸು ಸಾಧಿಸಿದ್ದರೂ, ಅವರ ಇತ್ತೀಚಿನ ಲಯದ ಸಮಸ್ಯೆ ತಂಡದ ಆತಂಕಕ್ಕೆ ಕಾರಣವಾಗಿದೆ. ಗುಜರಾತ್‌ ತನ್ನ ಯುವ ರೈಡರ್‌ ಸಚಿನ್‌ ತವಾರ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ಸಚಿನ್‌ಗೆ ಪ್ರಪಂಜನ್‌ ಹಾಗೂ ರೋಹಿತ್‌ ಗುಲಿಯಾ ಬೆಂಬಲ ನೀಡಬೇಕಿದೆ.

ಲಯದ ಆಧಾರದ ಮೇಲೆ ಹೇಳುವುದಾದರೆ ಯು.ಪಿ.ಯೋಧಾ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಗುಜರಾತ್‌ ಯಾವುದೇ ಬಲಿಷ್ಠ ತಂಡವನ್ನು ಬಗ್ಗುಬಡಿದು, ಗೆಲುವನ್ನು ತನ್ನದಾಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 2

Follow Us:
Download App:
  • android
  • ios