Asianet Suvarna News Asianet Suvarna News

ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ: ಈ ಇಬ್ಬರಿಗೆ ಮತ್ತೊಂದು ಚಾನ್ಸ್..?

ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದೆ.
 

Ind Vs Aus 2nd ODI Confident India Aim For Little Gains Against Scratchy Australia
Author
Nagpur, First Published Mar 5, 2019, 11:08 AM IST

ನಾಗ್ಪುರ[ಮಾ.05]: ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ ಇನ್ನು ಕೇವಲ 4 ಏಕದಿನ ಪಂದ್ಯ ಮಾತ್ರ ಬಾಕಿ ಉಳಿದಿದ್ದು, ತಂಡ ಸಂಯೋಜನೆಯನ್ನು ಪಕ್ಕಾ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಐತಿಹಾಸಿಕ ಸರಣಿ ಗೆಲುವುಗಳ ಬಳಿಕ, ತವರಿನಲ್ಲೂ ಜಯದ ಓಟ ಮುಂದುವರಿಸುವ ವಿಶ್ವಾಸದಲ್ಲಿ ವಿರಾಟ್‌ ಕೊಹ್ಲಿ ಪಡೆ ಇದೆ. ಹಾಲಿ ವಿಶ್ವ ಚಾಂಪಿಯನ್‌ ಆಸೀಸ್‌ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತ, ಮಂಗಳವಾರ ಇಲ್ಲಿನ ಜಾಮ್ತಾ ಕ್ರೀಡಾಂಗಣದಲ್ಲಿ 2ನೇ ಏಕದಿನ ಪಂದ್ಯವನ್ನು ಆಡಲಿದೆ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ಭಾರತ, ಎಲ್ಲಾ ವಿಭಾಗಗಳಲ್ಲೂ ಲಯ ಕಾಪಾಡಿಕೊಳ್ಳಲು ಎದುರು ನೋಡುತ್ತಿದೆ. ವಿಶ್ವಕಪ್‌ಗೆ ಆಯ್ಕೆಯಾಗಬೇಕಿರುವ ತಂಡದಲ್ಲಿ 2 ಸ್ಥಾನದ ಬಗ್ಗೆ ಇನ್ನೂ ಗೊಂದಲವಿದೆ. ಆ ಸ್ಥಾನಗಳಿಗೆ ಸೂಕ್ತ ಆಟಗಾರರ ಹುಡುಕಾಟವನ್ನು ಈ ಸರಣಿಯಲ್ಲಿ ಮುಕ್ತಾಯಗೊಳಿಸುವುದು ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಮುಂದಿರುವ ಸವಾಲು.

ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ವೈಫಲ್ಯ ಕಂಡಿದ್ದರೂ, ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಧವನ್‌ ಜಾಗದಲ್ಲಿ ಕೆ.ಎಲ್‌.ರಾಹುಲ್‌ರನ್ನು ಆಡಿಸುವ ಲಕ್ಷಣಗಳಿಲ್ಲ. ಅವಕಾಶಕ್ಕಾಗಿ ತುಡಿಯುತ್ತಿರುವ ರಾಹುಲ್‌, ತಮ್ಮನ್ನು ಕಣಕ್ಕಿಳಿಸಿದರೆ ಖಂಡಿತವಾಗಿಯೂ ತಂಡದ ಆಡಳಿತದ ಗಮನ ಸೆಳೆಯುವ ವಿಶ್ವಾಸ ಹೊಂದಿದ್ದಾರೆ. ಉಪನಾಯಕ ರೋಹಿತ್‌ ಶರ್ಮಾ ಹಾಗೂ ನಾಯಕ ವಿರಾಟ್‌ ಕೊಹ್ಲಿ ಪ್ರತಿ ಪಂದ್ಯದಲ್ಲೂ ಸಾಧ್ಯವಾದಷ್ಟು ರನ್‌ ಕಲೆಹಾಕುತ್ತಾ, ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಈ ಇಬ್ಬರ ಪಾತ್ರ ತಂಡಕ್ಕೆ ನಿರ್ಣಾಯಕವಾಗಲಿದೆ.

ಅಂಬಟಿ ರಾಯುಡು ಸ್ಥಿರತೆ ಕಂಡುಕೊಳ್ಳಲು ಪದೇ ಪದೇ ಎಡವುತ್ತಿದ್ದರೂ, ಅವರಿಗೆ ಆಯ್ಕೆಗಾರರ ಹಾಗೂ ತಂಡದ ಆಡಳಿತದ ಬೆಂಬಲಿವಿದೆ. ಹಲವು ತಿಂಗಳುಗಳ ಮೊದಲೇ ರಾಯುಡು, ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಎಂದು ಕೊಹ್ಲಿ ಘೋಷಿಸಿದ್ದರು. ಹೀಗಾಗಿ, ರಾಯುಡುಗೆ ಸ್ಥಾನ ಕಳೆದುಕೊಳ್ಳುವ ಆತಂಕವಿಲ್ಲ.

ಎಂ.ಎಸ್‌.ಧೋನಿ ಹಾಗೂ ಕೇದಾರ್‌ ಜಾಧವ್‌ ಹೈದರಾಬಾದ್‌ ಪಂದ್ಯದಲ್ಲಿ ತೋರಿದ ಪ್ರದರ್ಶನ ತಂಡಕ್ಕಿದ್ದ ತಲೆನೋವು ದೂರಾಗಿಸಿದೆ. ಜಾಧವ್‌ ವಿಶ್ವಕಪ್‌ ತಂಡದಲ್ಲಿ 6ನೇ ಕ್ರಮಾಂಕವನ್ನು ತಮ್ಮದಾಗಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಧೋನಿ ಕೀಪಿಂಗ್‌ ಜತೆ ಬ್ಯಾಟಿಂಗ್‌ನಲ್ಲೂ ಮಿಂಚಿದರೆ ಭಾರತ ಖಂಡಿತವಾಗಿಯೂ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ. ತಂಡವನ್ನು ಮುನ್ನಡೆಸುವುದರಲ್ಲೂ ಕೊಹ್ಲಿಗೆ ಧೋನಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದಾರೆ. ದೆಹಲಿಯ ಸ್ಫೋಟಕ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದ್ದು, ವಿಜಯ್‌ ಶಂಕರ್‌ ಬದಲು ಕಣಕ್ಕಿಳಿಯುವ ಅವಕಾಶ ಪಡೆದರೆ ಅಚ್ಚರಿಯಿಲ್ಲ. ವಿಜಯ್‌ ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ತಂಡಕ್ಕಿನ್ನೂ ಸಂಪೂರ್ಣವಾಗಿ ನಂಬಿಕೆ ಬಂದಿಲ್ಲ.

ಕುಲ್ದೀಪ್‌ ಯಾದವ್‌ ಮೊದಲ ಆಯ್ಕೆಯ ಸ್ಪಿನ್ನರ್‌ ಆಗಿ ಆಡಲಿದ್ದಾರೆ. ತಂಡ ರವೀಂದ್ರ ಜಡೇಜಾರನ್ನು ಮುಂದುವರಿಸುವ ಸಾಧ್ಯತೆ ಹೆಚ್ಚು. ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ ಪ್ರಚಂಡ ಲಯದಲ್ಲಿದ್ದು, ಕೊಹ್ಲಿ ಈ ಇಬ್ಬರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಆಸ್ಪ್ರೇಲಿಯಾ, ವಿಶ್ವಕಪ್‌ ಉಳಿಸಿಕೊಳ್ಳಬೇಕಿದ್ದರೆ ತಂಡದಲ್ಲಿ ಭಾರೀ ಬದಲಾವಣೆ ಮಾಡಬೇಕಿದೆ. ಆದರೆ ಸಮಯದ ಕೊರತೆಯಿಂದಾಗಿ ತಂಡದಲ್ಲಿ ಈಗಾಗಲೇ ಗೊಂದಲ ಶುರುವಾಗಿರುವುದು ಸ್ಪಷ್ಟವಾಗಿ ತೋರುತ್ತಿದೆ. ಆ್ಯರೋನ್‌ ಫಿಂಚ್‌ ನಾಯಕತ್ವದ ಒತ್ತಡದಿಂದಾಗಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಮೊದಲ ಪಂದ್ಯಕ್ಕೆ ಗೈರಾಗಿದ್ದ ಶಾನ್‌ ಮಾರ್ಷ್ ಈ ಪಂದ್ಯದಲ್ಲಿ ಆಡಲಿದ್ದು, ಆಸೀಸ್‌ ಬ್ಯಾಟಿಂಗ್‌ ಬಲ ಹೆಚ್ಚಿಸಲಿದ್ದಾರೆ. ಅನನುಭವಿ ಬೌಲಿಂಗ್‌ ಪಡೆ, ಸರಣಿಯ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದೆ. ಕಾಂಗರೂ ಪಡೆ ಸುಧಾರಿತ ಪ್ರದರ್ಶನದೊಂದಿಗೆ ಪುಟಿದೇಳುವ ವಿಶ್ವಾಸದಲ್ಲಿದೆ.

ಸಂಭವನೀಯ ತಂಡಗಳು

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ಅಂಬಟಿ ರಾಯುಡು, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ವಿಜಯ್‌ ಶಂಕರ್‌, ರವೀಂದ್ರ ಜಡೇಜಾ, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಪ್ರೇಲಿಯಾ: ಉಸ್ಮಾನ್‌ ಖವಾಜ, ಆ್ಯರೋನ್‌ ಫಿಂಚ್‌(ನಾಯಕ), ಶಾನ್‌ ಮಾಷ್‌ರ್‍, ಮಾರ್ಕಸ್‌ ಸ್ಟೋಯ್ನಿಸ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕಾರ್ರಿ, ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಬೆಹ್ರನ್‌ಡೊಫ್‌ರ್‍, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

Follow Us:
Download App:
  • android
  • ios