sports
By Suvarna Web Desk | 04:18 PM January 11, 2017
ಇನಿಂಗ್ಸ್ ಮುನ್ನಡೆ ಕಂಡ ಪಾರ್ಥೀವ್ ಪಡೆ

Highlights

ಗುಜರಾತ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 92 ಓವರ್‌'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ ಆ ಮೂಲಕ 64 ರನ್ ಮುನ್ನಡೆ ಕಾಣುವಲ್ಲಿ ಸಫಲವಾಯಿತು.

ಇಂದೋರ್(ಜ.11): ಅರವತ್ತಾರು ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿರುವ ಅಪೂರ್ವ ಅವಕಾಶವನ್ನು ಅತ್ಯಂತ ಎಚ್ಚರಿಕೆಯಿಂದ ಸದ್ಬಳಕೆ ಮಾಡಿಕೊಳ್ಳುವತ್ತ ಗುಜರಾತ್ ಯಶಸ್ವಿಯಾಗಿದ್ದು, ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಮಹತ್ವಪೂರ್ಣ ಇನ್ನಿಂಗ್ಸ್ ಮುನ್ನಡೆ ಕಂಡಿದೆ.

ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಪ್ರಶಸ್ತಿ ಸುತ್ತಿನ ಸೆಣಸಾಟದ ಎರಡನೇ ದಿನವಾದ ಇಂದು ಮುಂಬೈನ 228 ರನ್‌'ಗೆ ಉತ್ತರವಾಗಿ ನಾಯಕ ಪಾರ್ಥೀವ್ ಟೇಲ್ (90) ಹಾಗೂ ಮನ್ಪ್ರೀತ್ ಜುನೇಜಾ (77) ಗಳಿಸಿದ ಅರ್ಧಶತಕದ ನೆರನಿಂದ ಗುಜರಾತ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 92 ಓವರ್‌'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ ಆ ಮೂಲಕ 64 ರನ್ ಮುನ್ನಡೆ ಕಾಣುವಲ್ಲಿ ಸಫಲವಾಯಿತು.

ಮೊದಲ ದಿನದಂದು ಬೌಲರ್‌ಗಳು ನಡೆಸಿದ ಪರಿಣಾಮಕಾರಿ ದಾಳಿಯು ವ್ಯರ್ಥವಾಗದಂತೆ ಎಚ್ಚರಿಕೆಯ ಆಟವಾಡಿದ ಗುಜರಾತ್ ಎರಡನೇ ದಿನದಂದೂ ಪ್ರಾಬಲ್ಯ ಮೆರೆಯಿತು.

ದಿನದಾಟ ನಿಂತಾಗ ಚಿರಾಗ್ ಗಾಂಧಿ ಮತ್ತು ರುಶ್ ಕಲಾರಿಯ ಕ್ರಮವಾಗಿ 17 ಹಾಗೂ 16 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈಗಾಗಲೇ 300 ರನ್ ಅಂಚಿನಲ್ಲಿರುವ ಗುಜರಾತ್ ಉಳಿದ ನಾಲ್ಕು ವಿಕೆಟ್‌'ಗಳಿಂದ ಇನ್ನಷ್ಟು ರನ್ ಕಲೆಹಾಕಿ ಮುಂಬೈ ಬೇಗುದಿಯನ್ನು ಹೆಚ್ಚಿಸಿಲು ಕಾರ್ಯತಂತ್ರ ಹೆಣೆದಿದೆ. ಆದಾಗ್ಯೂ ದಿನದಾಟದ ಮೊದಲ ಅವಧಿಯಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸದ ಹೊರತು, ಪಾರ್ಥೀವ್ ಪಡೆಯ ಯೋಜನೆ ಸಾಕಾರಗೊಳ್ಳದು.

ಪಾರ್ಥೀವ್-ಜುನೇಜಾ ಮನೋಜ್ಞ ಆಟ

ಪ್ರಿಯಾಂಕ್ ನಿರ್ಗಮನದ ನಂತರ ಆಡಲಿಳಿದ ನಾಯಕ ಪಾರ್ಥೀವ್ ಪಟೇಲ್‌ಗೆ ಮೆರಾಯ್ ಕೆಲ ಹೊತ್ತು ಜತೆಯಾಟದ ಸಾಥ್ ನೀಡಿದರು. ಭೋಜನ ವಿರಾಮದವರೆಗೆ ಈ ಜೋಡಿ ತಂಡ ಮತ್ತೆ ಎಡವದಂತೆ ನೋಡಿಕೊಂಡಿತು. ಈ ಹಂತದಲ್ಲಿ 2 ವಿಕೆಟ್‌ಗೆ 73 ರನ್ ಗಳಿಸಿದ ಗುಜರಾತ್, ಆನಂತರದ ಅವಧಿಯಲ್ಲಿ ಮೆರಾಯ್ ವಿಕೆಟ್ ಕಳೆದುಕೊಂಡರೂ, ಪುನಃ ಪುಟಿದೆದ್ದು ನಿಂತಿತು. ಕೇವಲ 4 ರನ್‌'ಗಳ ಅಂತರದಲ್ಲಿ ಮೆರಾಯ್ ಅರ್ಧಶತಕದಿಂದ ವಂಚಿತರಾಗಿ ಪೆವಿಲಿಯನ್ ಸೇರಿಕೊಂಡರು. ಮತ್ತೆ ದಾಳಿಗಿಳಿದ ಅಭಿಷೇಕ್ ನಾಯರ್ ಮೆರಾಯ್ ವಿಕೆಟ್ ಪಡೆದು ಗುಜರಾತ್‌ಗೆ ಪೆಟ್ಟು ನೀಡಿದರು. ಬೆಳಗಿನ ಮೊದಲ ಅವಧಿಯಲ್ಲಿ ಬ್ಯಾಟಿಂಗ್ ನಡೆಸುವುದು ದುಸ್ತರವಾಗಿತ್ತಾದರೂ, ಕ್ರಮೇಣ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿ ಬದಲಾಯಿತು. ಇದರ ಸಂಪೂರ್ಣ ಲಾಭ ಪಡೆದ ಪಾರ್ಥೀವ್ ಹಾಗೂ ಜುನೇಜಾ ಜೋಡಿ ಮುಂಬೈ ಬೌಲರ್‌ಗಳನ್ನು ನಿರ್ಭಯವಾಗಿ ಎದುರಿಸಿ ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿತು. ಈ ಇಬ್ಬರ ಸೊಗಸಾದ ಬ್ಯಾಟಿಂಗ್‌'ನಿಂದ ಮಧ್ಯಾಹ್ನದ ಚಹಾ ವಿರಾಮಕ್ಕೆ ಗುಜರಾತ್ ಕೇವಲ 3 ವಿಕೆಟ್‌ಗೆ 203 ರನ್ ಕಲೆಹಾಕಿ ಬೃಹತ್ ಮೊತ್ತದ ಸುಳಿವು ನೀಡಿತು.

ಶತಕ ವಂಚಿತ ಪಾರ್ಥೀವ್

ಅದುವರೆಗೂ ಅಮೋಘ ಬ್ಯಾಟಿಂಗ್‌'ನಿಂದ ತಂಡವನ್ನು ಆದರಿಸಿದ ಪಾರ್ಥೀವ್ ಪಟೇಲ್, ಚಹಾ ವಿರಾಮದ ನಂತರವೂ ಮುಂಬೈಗೆ ಮಾರಕರಾಗಿ ಪರಿಣಮಿಸಿದರು. ಚಹಾ ವಿರಾಮದ ಹೊತ್ತಿಗೆ ಮನ್ಪ್ರೀತ್ ಜುನೇಜಾ 66 ಎಸೆತಗಳಲ್ಲಿ 57 ರನ್ ಕಲೆಹಾಕಿದರೆ, ಪಾರ್ಥೀವ್ 116 ಎಸೆತಗಳಲ್ಲಿ 81 ರನ್ ಗಳಿಸಿದ್ದರು. ಆದರೆ, ಬಳಿಕ ಈ ಇಬ್ಬರನ್ನೂ ಹೊರಗಟ್ಟುವಲ್ಲಿ ಮುಂಬೈ ಸಫಲವಾಯಿತು. ಶತಕದತ್ತ ಹೆಜ್ಜೆ ಇರಿಸಿದ್ದ ಪಾರ್ಥೀವ್ ಪಟೇಲ್, ಅಭಿಷೇಕ್ ನಾಯರ್ ಬೌಲಿಂಗ್‌ನಲ್ಲಿ ಆದಿತ್ಯ ತಾರೆಗೆ ಕ್ಯಾಚಿತ್ತು ಕ್ರೀಸ್ ತೊರೆಯುತ್ತಿದ್ದಂತೆ ಗುಜರಾತ್‌ನ ಅತ್ಯುಪಯುಕ್ತ ಶತಕದ ಜತೆಯಾಟವನ್ನು ಬೇರ್ಪಡಿಸಿದರು. ಪಾರ್ಥೀವ್ ನಿರ್ಗಮನದ ನಂತರದಲ್ಲಿ ಜುನೇಜಾ ಅವರನ್ನು ಕಾಟ್ ಅಂಡ್ ಬೌಲ್ಡ್ ಮಾಡಿದ ಶಾರ್ದೂಲ್ ಮತ್ತೆ ಮುಂಬೈ ಪಾಳೆಯದ ದುಗುಡ ಕಡಿಮೆ ಮಾಡಿದರು. ಬಳಿಕ ರುಜುಲ್ ಭಟ್ 25 ರನ್ ಗಳಿಸಿ ಔಟಾದರು.

ಮುಂಬೈ ಪರ ಅಭಿಷೇಕ್ ನಾಯರ್ 91ಕ್ಕೆ 3 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 67ಕ್ಕೆ 2 ಮತ್ತು ಬಲ್ವೀಂದರ್ ಸಂದು 54ಕ್ಕೆ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ

ಮುಂಬೈ ಮೊದಲ ಇನ್ನಿಂಗ್ಸ್: 228

ಗುಜರಾತ್ ಮೊದಲ ಇನ್ನಿಂಗ್ಸ್: 291/6

ಪಾರ್ಥೀವ್ ಪಟೇಲ್; 91

ಮನ್ಪ್ರೀತ್ ಜುನೇಜಾ: 77

ಬೌಲಿಂಗ್:

ಅಭಿಷೇಕ್ ನಾಯರ್ :91/3

ಶಾರ್ದೂಲ್ ಠಾಕೂರ್: 67/2

Show Full Article


Recommended


bottom right ad