Asianet Suvarna News Asianet Suvarna News

ಟೀಂ ಇಂಡಿಯಾಗೆ ವಿಶ್ವ ಚಾಂಪಿಯನ್ನರ ಸವಾಲು

ಧೋನಿಯನ್ನು ತಂಡದಿಂದ ಕೈಬಿಟ್ಟು ಇನ್ನೂ ಒಂದು ವಾರವೂ ಆಗಿಲ್ಲ. ಅಷ್ಟರಲ್ಲಿ ನಾಯಕ ವಿರಾಟ್‌ ಕೊಹ್ಲಿ, ಧೋನಿ ಇನ್ನೂ ತಂಡದ ಅವಿಭಾಜ್ಯ ಅಂಗವಾಗಿ ಉಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಧೋನಿ ಇದು ‘ದಿ ಎಂಡ್‌’ ಅಲ್ಲ, ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಸಹ ಸ್ಪಷ್ಟಪಡಿಸಿದ್ದಾರೆ. ಆದ್ರೂ ಧೋನಿಯ ಅನುಪಸ್ಥಿತಿ ಭಾರತೀಯ ಡ್ರೆಸ್ಸಿಂಗ್‌ ಕೋಣೆಯಲ್ಲಿ ಸ್ಪಷ್ಟವಾಗಿ ತೋರಲಿದೆ.

Cricket Ind Vs WI T20I All eyes on Rohit and Rishabh in first outing at Eden
Author
Kolkata, First Published Nov 4, 2018, 10:03 AM IST

ಕೋಲ್ಕತಾ[ನ.04]: ‘ಎಂ.ಎಸ್‌.ಧೋನಿ ಯುಗಾಂತ್ಯ’ ಕಲ್ಪನೆಯನ್ನು ಭಾರತ ತಂಡ ತಳ್ಳಿಹಾಕಿದ್ದರೂ, ಇದೇ ಮೊದಲ ಬಾರಿಗೆ ಧೋನಿಯಂಬ ‘ದೈತ್ಯ’ ಪತ್ರಿಭೆಯಿಲ್ಲದೆ ಭಾರತ ತಂಡ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. ವಿಂಡೀಸ್‌ ವಿರುದ್ಧ ಇಂದು ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಟೆಸ್ಟ್‌ ಹಾಗೂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿರುವ ಭಾರತ, ಟಿ20 ಮೇಲೂ ಕಣ್ಣಿಟ್ಟಿದೆ.

ಧೋನಿಯನ್ನು ತಂಡದಿಂದ ಕೈಬಿಟ್ಟು ಇನ್ನೂ ಒಂದು ವಾರವೂ ಆಗಿಲ್ಲ. ಅಷ್ಟರಲ್ಲಿ ನಾಯಕ ವಿರಾಟ್‌ ಕೊಹ್ಲಿ, ಧೋನಿ ಇನ್ನೂ ತಂಡದ ಅವಿಭಾಜ್ಯ ಅಂಗವಾಗಿ ಉಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಧೋನಿ ಇದು ‘ದಿ ಎಂಡ್‌’ ಅಲ್ಲ, ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಸಹ ಸ್ಪಷ್ಟಪಡಿಸಿದ್ದಾರೆ. ಆದ್ರೂ ಧೋನಿಯ ಅನುಪಸ್ಥಿತಿ ಭಾರತೀಯ ಡ್ರೆಸ್ಸಿಂಗ್‌ ಕೋಣೆಯಲ್ಲಿ ಸ್ಪಷ್ಟವಾಗಿ ತೋರಲಿದೆ.

3 ಪಂದ್ಯಗಳ ಸರಣಿಗೆ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್‌ ಶರ್ಮಾ ಹಾಲಿ ವಿಶ್ವ ಟಿ20 ಚಾಂಪಿಯನ್ನರ ವಿರುದ್ಧ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 6 ದಿನಗಳಲ್ಲಿ 2 ಟೆಸ್ಟ್‌ ಪಂದ್ಯಗಳ ಸರಣಿಯನ್ನು ಗೆದ್ದು ಬೀಗಿದ ಭಾರತ, ಏಕದಿನ ಸರಣಿಯಲ್ಲಿ ತಕ್ಕಮಟ್ಟಿಗಿನ ಪ್ರತಿರೋಧ ಎದುರಾದರೂ 3-1 ಅಂತರದಲ್ಲಿ ಏಕದಿನ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಆದರೆ ಕಾರ್ಲೋಸ್‌ ಬ್ರಾಥ್‌ವೇಟ್‌ ನಾಯಕತ್ವದ ವಿಂಡೀಸ್‌ ವಿರುದ್ಧ ಟಿ20 ಸರಣಿಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಪ್ರವಾಸಿ ತಂಡಕ್ಕೆ ಪ್ರತಿಷ್ಠೆ ಉಳಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಟೆಸ್ಟ್‌ ಹಾಗೂ ಏಕದಿನ ಸರಣಿಯಲ್ಲಿ ವಿಂಡೀಸ್‌ಗೆ ಕಾಡಿದ್ದ ಅನುಭವಿಗಳ ಕೊರತೆ ಟಿ20ಯಲ್ಲಿ ನೀಗಲಿದೆ. ಕಾರಣ ಡರೆನ್‌ ಬ್ರಾವೋ, ಕೀರನ್‌ ಪೊಲ್ಲಾರ್ಡ್‌, ದಿನೇಶ್‌ ರಾಮ್‌ದಿನ್‌’ರಂತಹ ಟಿ20 ತಜ್ಞರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ವಿಂಡೀಸ್‌ ಮೇಲುಗೈ: ಭಾರತ ವಿರುದ್ಧ ಟಿ20 ಮಾದರಿಯಲ್ಲಿ ವಿಂಡೀಸ್‌ ಮೇಲುಗೈ ಸಾಧಿಸಿದೆ. 2009-17ರವರೆಗೂ ಉಭಯ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ವಿಂಡೀಸ್‌ 5ರಲ್ಲಿ ಗೆದ್ದು 2ರಲ್ಲಿ ಮಾತ್ರ ಗೆಲುವನ್ನು ಭಾರತಕ್ಕೆ ಬಿಟ್ಟುಕೊಟ್ಟಿದೆ. ವಿಂಡೀಸ್‌ ವಿರುದ್ಧ ಕಳೆದ 4 ಟಿ20 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2016ರ ಟಿ20 ವಿಶ್ವಕಪ್‌ನ ಸೆಮೀಸ್‌ನಲ್ಲಿ ಭಾರತದ ಓಟವನ್ನು ವಿಂಡೀಸ್‌ ಅಂತ್ಯಗೊಳಿಸಿತ್ತು.

ಕೊನೆ ಬಾರಿಗೆ ಭಾರತ, ವಿಂಡೀಸ್‌ ವಿರುದ್ಧ ಟಿ20 ಪಂದ್ಯವನ್ನು ಗೆದ್ದಿದ್ದು 2014ರ ಟಿ20 ವಿಶ್ವಕಪ್‌ನಲ್ಲಿ. ಹೀಗಾಗಿ ರೋಹಿತ್‌ ಶರ್ಮಾ ಪಡೆ ಮುಂದೆ ಅತಿದೊಡ್ಡ ಸವಾಲಿದೆ. ತಮ್ಮ ನೆಚ್ಚಿನ ಕ್ರೀಡಾಂಗಣ, ಈಡನ್‌ ಗಾರ್ಡನ್ಸ್‌ನಲ್ಲಿ ರೋಹಿತ್‌ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಈ ಮೈದಾನದಲ್ಲಿ ಅವರು ಲಂಕಾ ವಿರುದ್ಧ ಏಕದಿನದಲ್ಲಿ ವಿಶ್ವ ದಾಖಲೆಯ 264 ರನ್‌ ಚಚ್ಚಿದ್ದರು. ಜತೆಗೆ 2013, 2015ರ ಐಪಿಎಲ್‌ ಟ್ರೋಫಿಯನ್ನು ಜಯಿಸಿದ್ದು ಇದೇ ಮೈದಾನದಲ್ಲೇ. ಆದರೆ ಭಾರತ ಈ ಮೈದಾನದಲ್ಲಿ ಮಿಶ್ರಫಲ ಅನುಭವಿಸಿದೆ. 3 ಟಿ20 ಪಂದ್ಯಗಳನ್ನಾಡಿದ್ದು ತಲಾ 1 ಗೆಲುವು, ಸೋಲು ಕಂಡಿದೆ. 1 ಪಂದ್ಯ ರದ್ದುಗೊಂಡಿತ್ತು. ವಿಂಡೀಸ್‌ ವಿರುದ್ಧ ಏಕದಿನ ಸರಣಿಯಲ್ಲಿ 389 ರನ್‌ ಕಲೆಹಾಕಿ, ಪ್ರಚಂಡ ಲಯದಲ್ಲಿರುವ ರೋಹಿತ್‌ ಭಾರತ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿದ್ದಾರೆ.

ರಾಹುಲ್‌, ಪಂತ್‌ ಮೇಲೆ ನಿರೀಕ್ಷೆ: ನಾಯಕತ್ವ ರೋಹಿತ್‌ಗೆ ಉತ್ತಮವಾಗಿ ಒಗ್ಗಿಬಂದಂತೆ ಕಾಣುತ್ತಿದ್ದು, ಏಷ್ಯಾಕಪ್‌ನಲ್ಲಿ 5 ಪಂದ್ಯಗಳಲ್ಲಿ ಅವರು 317 ರನ್‌ ಸಿಡಿಸಿದ್ದರು. ಅವರ ಮೇಲೆಯೇ ತಂಡ ಹೆಚ್ಚಾಗಿ ಅವಲಂಬಿತಗೊಂಡಿದೆ. ಲಯ ಕಳೆದುಕೊಂಡಿರುವ ಶಿಖರ್‌ ಧವನ್‌ ಮೇಲೆ ಭಾರೀ ಒತ್ತಡವಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಕೆ.ಎಲ್‌.ರಾಹುಲ್‌ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ. ರಿಶಭ್‌ ಪಂತ್‌, ಮನೀಶ್‌ ಪಾಂಡೆ ಹಾಗೂ ದಿನೇಶ್‌ ಕಾರ್ತಿಕ್‌ ಮಧ್ಯಮ ಕ್ರಮಾಂಕದ ಬಲವೆನಿಸಿದ್ದಾರೆ. ಭುವನೇಶ್ವರ್‌ ಕುಮಾರ್‌ ವೇಗದ ಪಡೆಯನ್ನು ಮುನ್ನಡೆಸಲಿದ್ದು ಜಸ್ಪ್ರೀತ್‌ ಬುಮ್ರಾ ತಮ್ಮ ವೇಗದಿಂದ ಕೆರಿಬಿಯನ್ನರನ್ನು ಕಟ್ಟಿಹಾಕಲು ಕಾತರಿಸುತ್ತಿದ್ದಾರೆ. ಖಲೀಲ್‌ ಅಹ್ಮದ್‌ ತಂಡದಲ್ಲಿರುವ 3ನೇ ವೇಗಿ. ಸ್ಪಿನ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ತಮ್ಮ ಲಯ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇವರಿಬ್ಬರ ಜತೆಗೆ ಕೃನಾಲ್‌ ಪಾಂಡ್ಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ವಿಂಡೀಸ್‌ಗೆ ಅನುಭವಿ ಆಟಗಾರರ ಜತೆ ಯುವ ಆಟಗಾರ ಶಿಮ್ರೊನ್‌ ಹೆಟ್ಮೇಯರ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಹೆಟ್ಮೇಯರ್‌ ಸಹ ಸೇರ್ಪಡೆಗೊಂಡಿದ್ದು, ಭಾರತೀಯರನ್ನು ಚೆಂಡಾಡುವ ವಿಶ್ವಾಸದಲ್ಲಿದ್ದಾರೆ.

ಒಟ್ಟು ಮುಖಾಮುಖಿ: 08

ಭಾರತ: 02

ವಿಂಡೀಸ್‌: 05

ಟಿ20 ಶ್ರೇಯಾಂಕ

ಭಾರತ: 02

ವಿಂಡೀಸ್‌: 07

ತಂಡಗಳ ವಿವರ

ಭಾರತ (ಅಂತಿಮ 12): ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌, ಮನೀಶ್‌ ಪಾಂಡೆ, ರಿಶಭ್‌ ಪಂತ್‌, ಕೃನಾಲ್‌ ಪಾಂಡ್ಯ, ಯಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌, ಜಸ್ಪ್ರೀತ್ ಬುಮ್ರಾ, ಖಲೀಲ್‌ ಅಹ್ಮದ್‌.

ವಿಂಡೀಸ್‌: ಬ್ರಾಥ್‌ವೇಟ್‌ (ನಾಯಕ), ಆಲನ್‌, ಡರೆನ್‌ ಬ್ರಾವೋ, ಹೆಟ್ಮೇಯರ್‌, ಕೀಮೋ ಪೌಲ್‌, ಪೊಲ್ಲಾರ್ಡ್‌, ರಾಮ್‌ದಿನ್‌, ರುಥರ್‌ಫೋರ್ಡ್‌, ಒಶಾನೆ ಥಾಮಸ್‌, ಖಾರಿ ಪಿರ್ರಿ, ಒಬೆಡ್‌ ಮೊಕ್ಕೊಯ್‌, ರೊವ್ಮನ್‌ ಪೋವೆಲ್‌, ನಿಕೋಲಸ್‌ ಪೂರನ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಟ್‌

ಈಡನ್‌ ಗಾರ್ಡನ್ಸ್‌ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿ ಪಿಚ್‌ ಎನಿಸಿದ್ದು, ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ವಿಂಡೀಸ್‌ ವಿರುದ್ಧ ಭಾರತ ಸ್ಪಿನ್‌ ಅಸ್ತ್ರವನ್ನು ಬಳಸಿದರೆ ಅಚ್ಚರಿಯಿಲ್ಲ.

ವಿಂಡೀಸ್‌ಗೆ ಸವಿಸವಿ ನೆನಪು!

2016ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದು, ವಿಂಡೀಸ್‌ ವಿಶ್ವ ಚಾಂಪಿಯನ್‌ ಆಗಿದ್ದು ಇದೇ ಮೈದಾನದಲ್ಲಿ. ಕೊನೆಯಲ್ಲಿ 4 ಎಸೆತಗಳಲ್ಲಿ 4 ಸಿಕ್ಸರ್‌ ಸಿಡಿಸಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಕಾರ್ಲೋಸ್‌ ಬ್ರಾಥ್‌ವೇಟ್‌, ಈಗ ತಂಡದ ನಾಯಕರಾಗಿದ್ದಾರೆ. ವಿಂಡೀಸ್‌ ತನ್ನ ಅದೃಷ್ಟತಾಣದಲ್ಲಿ ಮತ್ತೊಂದು ಸ್ಮರಣೀಯ ಗೆಲುವು ದಾಖಲಿಸಲು ಕಾಯುತ್ತಿದೆ. ವಿಶ್ವಕಪ್‌ ಫೈನಲ್‌ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಅಂ.ರಾ.ಟಿ20 ಪಂದ್ಯ ಇದಾಗಿದೆ.

Follow Us:
Download App:
  • android
  • ios