Asianet Suvarna News Asianet Suvarna News

ಪ್ಲೇ-ಆಫ್‌ ಹೊಸ್ತಿಲಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ರಾಯಲ್ಸ್‌, ಪ್ಲೇ-ಆಫ್‌ಗೇರಬೇಕಿದ್ದರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಸ್ಟೀವ್‌ ಸ್ಮಿತ್‌ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದರು.

Confident Delhi Capitals look to maintain winning run against resurgent Rajasthan
Author
Jaipur, First Published Apr 22, 2019, 2:20 PM IST

ಜೈಪುರ[ಏ.22]: ಡೆಲ್ಲಿ ಕ್ಯಾಪಿಟಲ್ಸ್‌ ದಿಢೀರನೆ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿದೆ. 6 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಡೆಲ್ಲಿ, ಸೋಮವಾರ ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯ ಗೆದ್ದು ಪ್ಲೇ-ಆಫ್‌ ಹೊಸ್ತಿಲು ತಲುಪುವ ಉತ್ಸಾಹದಲ್ಲಿದೆ. ಈ ಪಂದ್ಯ ಸೇರಿ ಡೆಲ್ಲಿಗೆ ಇನ್ನೂ 4 ಪಂದ್ಯ ಬಾಕಿ ಇದ್ದು, 2ರಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ.

ಮತ್ತೊಂದೆಡೆ ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ರಾಯಲ್ಸ್‌, ಪ್ಲೇ-ಆಫ್‌ಗೇರಬೇಕಿದ್ದರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಸ್ಟೀವ್‌ ಸ್ಮಿತ್‌ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದರು. ಸ್ಮಿತ್‌ ತಮ್ಮ ತಂಡವನ್ನು ಪ್ಲೇ-ಆಫ್‌ಗೇರಿಸಿ ಬಳಿಕ ವಿಶ್ವಕಪ್‌ ತಯಾರಿಗಾಗಿ ಆಸ್ಪ್ರೇಲಿಯಾಕ್ಕೆ ತೆರಳಲು ಎದುರು ನೋಡುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಜೋಸ್‌ ಬಟ್ಲರ್‌ ಅನುಪಸ್ಥಿತಿ ಕಾಡಿತ್ತು. ಈ ಪಂದ್ಯದಲ್ಲೂ ಅದು ಮುಂದುವರಿಯುವ ಸಾಧ್ಯತೆ ಇದೆ. ಹಲವು ಸಮಸ್ಯೆಗಳ ನಡುವೆಯೂ ರಾಯಲ್ಸ್‌ ಗೆಲುವಿನ ಲೆಕ್ಕಾಚಾರ ಹಾಕಿದೆ.

ಆಲ್ರೌಂಡ್‌ ಆಟವಾಡಿ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಡೆಲ್ಲಿ, ಮತ್ತೊಮ್ಮೆ ಸಂಘಟಿತ ಪ್ರದರ್ಶನ ನೀಡಲು ಕಾಯುತ್ತಿದೆ. ತಂಡ ಸಂಯೋಜನೆಯಲ್ಲಿ ಮಾಡಿಕೊಂಡಿರುವ ಕೆಲ ಬದಲಾವಣೆಗಳು ಡೆಲ್ಲಿಗೆ ಮತ್ತೆ ಲಾಭ ತರುವ ನಿರೀಕ್ಷೆ ಇದೆ. ತವರಿನಾಚೆ ಕ್ಯಾಪಿಟಲ್ಸ್‌ ಉತ್ತಮ ದಾಖಲೆ ಹೊಂದಿದ್ದು, ಆ ದಾಖಲೆ ಮುಂದುವರಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವುದು ಡೆಲ್ಲಿಯ ಗುರಿ. ಶ್ರೇಷ್ಠ ಬ್ಯಾಟ್ಸ್‌ಮನ್‌ ಸ್ಮಿತ್‌ ಹಾಗೂ ಪ್ರಚಂಡ ವೇಗಿ ಕಗಿಸೋ ರಬಾಡ ನಡುವಿನ ಪೈಪೋಟಿ ಕುತೂಹಲ ಹೆಚ್ಚಿಸಿದೆ.
ಪಿಚ್‌ ರಿಪೋರ್ಟ್‌

ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಈ ವರ್ಷ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಇಲ್ಲಿ 5 ಪಂದ್ಯಗಳು ನಡೆದಿದ್ದು, ಕಳೆದ 4ರಲ್ಲಿ 2ನೇ ಬ್ಯಾಟಿಂಗ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡುವ ತಂಡ 175-180 ರನ್‌ ಗಳಿಸಿದರೆ ಸುರಕ್ಷಿತ ಎನಿಸಿದೆ.

ಒಟ್ಟು ಮುಖಾಮುಖಿ: 18

ರಾಜಸ್ಥಾನ: 11

ಡೆಲ್ಲಿ: 07

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಸ್ಯಾಮ್ಸನ್‌, ರಹಾನೆ, ಸ್ಮಿತ್‌ (ನಾಯಕ), ಸ್ಟೋಕ್ಸ್‌, ಪರಾಗ್‌, ಬಿನ್ನಿ, ಟರ್ನರ್‌, ಆರ್ಚರ್‌, ಶ್ರೇಯಸ್‌, ಉನಾದ್ಕತ್‌, ಕುಲಕರ್ಣಿ.

ಡೆಲ್ಲಿ: ಪೃಥ್ವಿ, ಧವನ್‌, ಶ್ರೇಯಸ್‌ (ನಾಯಕ), ಪಂತ್‌, ಇನ್‌ಗ್ರಾಂ, ಅಕ್ಷರ್‌, ರುಥರ್‌ಫೋರ್ಡ್‌, ಮಿಶ್ರಾ, ರಬಾಡ, ಇಶಾಂತ್‌, ಸಂದೀಪ್‌.

ಸ್ಥಳ: ಜೈಪುರ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

Follow Us:
Download App:
  • android
  • ios