Asianet Suvarna News Asianet Suvarna News

ನನ್ನ ಇನ್ನೊಂದು ಕೆನ್ನೆ ಏನು ಪಾಪ ಮಾಡಿತ್ತು ಹುಡುಗಿ..?

ನೀನು ಕಳೆದ ಸಲ ಬೆಂಗಳೂರಿಗೆ ಬಂದಾಗ ನಮ್ಮಿಬ್ಬರ ಮೊದಲ ಭೇಟಿ. ಗೆಳೆಯನ ಮದುವೆಯ ಹಿಂದಿನ ದಿನ ನಾವೆಲ್ಲ ಹುಡುಗರು ಗಲಾಟೆ ಮಾಡುತ್ತಿದ್ದಾಗ ಸದ್ದಿಲ್ಲದೇ ನನ್ನ ಹೃದಯ ಕದ್ದವಳು ನೀನು. ನಿನ್ನ ಫ್ರೆಂಡ್ ಸಖತ್ತಾಗಿ ಡ್ರೆಸ್ ಮಾಡಿ ನಗುತ್ತಾ ಕಣ್ಣಲ್ಲೇ ಹುಡುಗರನ್ನು ಕೊಲ್ಲುತ್ತಿದ್ದರೆ, ನಾನು ಮಾತ್ರ ಆ ಹುಡುಗಿ ಪಕ್ಕದಲ್ಲಿ ಸಂಕೋಚದ ಮುದ್ದೆಯಾಗಿ ಕೂತಿದ್ದ ನಿನ್ನಿಂದ ಕಣ್ಣು ಕೀಳಲಾಗದೇ ಒದ್ದಾಡುತ್ತಿದ್ದೆ.

Why did you kissed my only one cheek
Author
Bengaluru, First Published Feb 10, 2020, 11:32 AM IST

ನನ್ನ ಹುಡುಗಿ,

ಇನ್ನು ನಾಲ್ಕೈದು ದಿನ ಕಳೆದರೆ ವ್ಯಾಲೆಂಟೈನ್ಸ್ ಡೇ. ನಂಗೆ ಎದೆಯಲ್ಲೇ ಅವಲಕ್ಕಿ ಕುಟ್ಟಿದ ಅನುಭವ ಆಗ್ತಾ ಇದೆ. ಅವತ್ತು ನಿನ್ನೊಂದಿಗೆ ಕಳೆಯುವ ಆ ದಿನ ಹೇಗಿರಬಹುದು ಅನ್ನೋದನ್ನು ನೆನೆಸಿಕೊಂಡರೇ ಕೈ ನಡುಗುತ್ತದೆ. ಬೈ ಹಾರ್ಟ್ ನಿಂದ ಬರುವ ಪ್ರತಿಕ್ರಿಯೆಗಳು ಯಾವತ್ತೂ ಹೀಗಿರುತ್ತವೆ ಎಂದು ಯಾರೋ ದೊಡ್ಡವರು ಹೇಳಿದ ನೆನಪು. ನಿನ್ನ ಬಗ್ಗೆ ನನ್ನ ಪ್ರತೀ ಪ್ರತಿಕ್ರಿಯೆಗಳಲ್ಲಿ ಇಂಥಾದ್ದೊಂದು ನಡುಕ, ರೋಮಾಂಚನ ಒಟ್ಟೊಟ್ಟಿಗೆ ಬರೋದಕ್ಕೆ ಇದು ಕಾರಣ ಇರಬಹುದಾ.. ಅಥವಾ ಇಷ್ಟು ದಿನ ದೂರವೇ ಇದ್ದ ನಾವು ಈಗ ಪ್ರೇಮಿಗಳ ದಿನಕ್ಕೆ ಜೊತೆಗೆ ಓಡಾಡುತ್ತೇವೆ ಅನ್ನೋ ಕಾರಣಕ್ಕೆ ಈ ರಿಯಾಕ್ಷನ್ ಇರಬಹುದಾ.. ಗೊತ್ತಿಲ್ಲ.

 

ನಾನು ತುಂಬ ಸಿನಿಮಾ ನೋಡೋದು, ಓದೋದು ನಿನಗೆ ತಿಳಿಯದಲ್ಲ, ಆದರೆ ನಮ್ಮಿಬ್ಬರ ಪ್ರೀತಿ ಚಿಗುರಿದಾಗಿನಿಂದ ಮೊದಲಿನ ತನ್ಮಯತೆಯಿಂದ ಸಿನಿಮಾ ನೋಡೋದಕ್ಕೆ ಆಗ್ತಾನೇ ಇಲ್ಲ. ಯಾಕೆ ಗೊತ್ತಾ, ಅದರಲ್ಲಿ ಬರುವ ಪ್ರೇಮ ನನ್ನನ್ನು ಕಂಗೆಡಿಸಿಬಿಡುತ್ತದೆ. ಆ ಹುಡುಗ ಹುಡುಗಿ ಬೇರಾದರೆ ನಾನು ಉಗುಳು ನುಂಗುತ್ತೇನೆ. ಬೇರಾದರೂ ಒಳಗೊಳಗೇ ಕುಸಿಯುತ್ತೇನೆ, ಮನೆಯಲ್ಲೆಲ್ಲ ಒರಟ ಅಂತ ಕರೆಸಿಕೊಂಡ ನನ್ನಲ್ಲಿ ಹೀಗೊಂದು ಬದಲಾವಣೆ ತಂದ ನಿಂಗೇನೇ ಹೇಳಲಿ ಬಂಗಾರಿ..

 

ಮೊದಲೆಲ್ಲ ವೀಕೆಂಡ್ ಬಂದರೆ ಗೆಳೆಯರ ಪಡೆಯ ಜೊತೆಗೆ ಎಂಜಿ ರೋಡ್, ಬ್ರಿಗೇಡ್ ರೋಡ್ ಅಂತೆಲ್ಲ ಸುತ್ತುತ್ತಾ ಇದ್ದೆ. ಆದರೆ ನೀನು ಸಿಕ್ಕಿದ ಮೇಲಿಂದ ನನಗೆ ಮಲ್ವೇಶ್ವರಂನ ಬೀದಿಗಳೇ ಇಷ್ಟವಾಗ್ತಿವೆ. ಯಾಕೆ ಗೊತ್ತಿಲ್ಲ. ವೀಕೆಂಡ್ನಲ್ಲಿ ಅಲ್ಲಿ ಸಿಕ್ಕೋ ಲೈಫ್ನ ಚಿತ್ರಗಳು ಬಹುಶಃ ಎಂ.ಜಿ ರೋಡ್ ಬ್ರಿಗೇಡ್ ರೋಡ್ನಲ್ಲಿ ಸಿಗಲಿಕ್ಕಿಲ್ಲ. ಬೀದಿ ಬದಿಯ ಬಣ್ಣ ಕುರ್ತಿಗಳೊಳಗೆ ಕಳೆದುಹೋದ ಖುಷಿಯನ್ನು ಹುಡುಕೋ ಹುಡುಗಿಯರು, ಗುಲಾಬಿ ಬಣ್ಣದ ಸಕ್ಕರೆ ಮಿಠಾಯಿಯನ್ನು ಕಣ್ಣಲ್ಲೇ ರುಚಿನೋಡೋ ಮಗು, ಅನ್ಯ ಮನಸ್ಕ ಗಂಡಸರು, ಅವರನ್ನು ಕ್ಯಾರೇ ಮಾಡದ ತುಂಟ ಹೆಂಗಸರು, ಲೆಗ್ಗಿನ್ಸ್ ನೋಡ್ತಿರೋ ಹುಡುಗಿಯನ್ನೇ ವಾರೆ ನೋಟದಲ್ಲಿ ನೋಡೋ ವ್ಯಾಪಾರಿ ಹುಡುಗ.. ಇಲ್ಲಿಗೊಮ್ಮೆ ನಿನ್ನನ್ನೂ ಕರೆದುಕೊಂಡು ಬರಬೇಕು ನಾನು, ನಿನ್ನ ಕಣ್ಣಿನ ಅಚ್ಚರಿಯನ್ನು ಮಿಠಾಯಿ ಸವಿಯೋ ಮಗುವಿನ ಹಾಗೆ ಕಣ್ಣಲ್ಲೇ ಸವಿಯಬೇಕು.

 

ಈ ದೇಶಗಳಲ್ಲಿ ವ್ಯಾಲೆಂಟೈನ್ಸ್ ಡೇ ಹೇಗೆ ಅಚರಿಸುತ್ತಾರಂದ್ರೆ...

 

ನೀನು ಕಳೆದ ಸಲ ಬೆಂಗಳೂರಿಗೆ ಬಂದಾಗ ನಮ್ಮಿಬ್ಬರ ಮೊದಲ ಭೇಟಿ. ಗೆಳೆಯನ ಮದುವೆಯ ಹಿಂದಿನ ದಿನ ನಾವೆಲ್ಲ ಹುಡುಗರು ಗಲಾಟೆ ಮಾಡುತ್ತಿದ್ದಾಗ ಸದ್ದಿಲ್ಲದೇ ನನ್ನ ಹೃದಯ ಕದ್ದವಳು ನೀನು. ನಿನ್ನ ಫ್ರೆಂಡ್ ಸಖತ್ತಾಗಿ ಡ್ರೆಸ್ ಮಾಡಿ ನಗುತ್ತಾ ಕಣ್ಣಲ್ಲೇ ಹುಡುಗರನ್ನು ಕೊಲ್ಲುತ್ತಿದ್ದರೆ, ನಾನು ಮಾತ್ರ ಆ ಹುಡುಗಿ ಪಕ್ಕದಲ್ಲಿ ಸಂಕೋಚದ ಮುದ್ದೆಯಾಗಿ ಕೂತಿದ್ದ ನಿನ್ನಿಂದ ಕಣ್ಣು ಕೀಳಲಾಗದೇ ಒದ್ದಾಡುತ್ತಿದ್ದೆ. ನಿನ್ನ ಕಣ್ಣುಗಳೆಂಬ ದೀಪಕ್ಕೆ ಹಾರುವ ಪತಂಗದ ಹಾಗೆ. ಥೋ, ರಿಯಲ್ ಆಗಿ ಬರೀಬೇಕು ಅಂತ ಅಂದುಕೊಂಡು ಶುರು ಮಾಡಿದ್ರೆ ಮತ್ತೆ ಮತ್ತೆ ಏನೇನೋ ಮೆಟಫರ್ ಗಳೇ ಬರುತ್ತವೆ. ಆ ಕ್ಷಣದಲ್ಲಿ ಮದುವೆ ಮನೆ, ಅಲ್ಲಿಯ ಗದ್ದಲ, ಓಡಾಡೋ ಜನ, ಕಾಲೆಳೆಯೋ ಫ್ರೆಂಡ್ಸ್.. ಎಲ್ಲ ಮರೆತೇ ಹೋಗಿ ನೀನೇ ನನ್ನ ಪ್ರಪಂಚವಾಗಿದ್ದೆ.

 

ಆದರೆ ಅವತ್ತು ಗೆಳತಿ ಪಕ್ಕ ಸಂಕೋಚದಿಂದ ಕೂತಿದ್ದವಳಲ್ಲಿ ಅಷ್ಟೊಂದು ಧೈರ್ಯ ಇರುತ್ತೆ ಅಂತ ಗೊತ್ತಿರಲಿಲ್ಲ. ರಾತ್ರಿ ಫ್ರೆಂಡ್ಸ್ ಎಲ್ಲ ಮದುವೆ ಮನೆಯ ಗೌಜಿನಲ್ಲಿ ಕಳೆದು ಹೋಗಿದ್ದಾಗ ನಾನು ಅಲ್ಲಿಂದ ಸ್ವಲ್ಪ ದೂರದ ಕೃತಕ ನೀರಿನ ಹಳ್ಳದ ಪಕ್ಕದಲ್ಲಿ ಕೂತಿದ್ದೆ. ಅಲ್ಲಿಯವರೆಗೆ ಮನಸ್ಸು ಅಂತ ಏಕಾಂತವನ್ನು ಖಂಡಿತಾ ಬಯಸಿರಲಿಲ್ಲ. ಆದರೆ ಅವತ್ತು ಮಾತ್ರ ಏಕಾಂತ ಬೇಕು ಅಂತ ಮನಸ್ಸು ಹಂಬಲಿಸ್ತಾ ಇತ್ತು. ಒಂದಿಷ್ಟು ಹೊತ್ತಿನ ನಂತರ ಪಕ್ಕದಲ್ಲಿ ಸದ್ದಾಯ್ತು.

 

ನೋಡಿದರೆ ನೀನು! ಹುಡುಗೀ, ಆಗ ನನ್ನ ಮನಸ್ಥಿತಿ ಹೇಗಿತ್ತು ಗೊತ್ತಾ? ಹೃದಯ ಬಡಿಕೊಳ್ಳುತ್ತಿದ್ದ ರೀತಿ ನೋಡಿದ್ರೆ ಹಾರ್ಟ್ ಅಟ್ಯಾಕೇ ಆಗ್ಬಿಡುತ್ತೋ ಅನ್ನೋ ಹಾಗೆ. ಹಾಗೆ ಬಂದವಳು ನನಗಿಂತ ಸ್ವಲ್ಪ ದೂರದಲ್ಲಿ ಮೌನವಾಗಿ ಕೂತೆ, ಅದೆಷ್ಟೋ ಹೊತ್ತು. ಆ ಮೌನದಲ್ಲೇ ನಮ್ಮ ಪ್ರೇಮ ನಿವೇದನೆಯೂ ಆಗಿತ್ತು ಅನಿಸುತ್ತೆ. ಅಷ್ಟರಲ್ಲಿ ನಿನ್ನನ್ನು ಯಾರೋ ಕರೆದರು, ನೀನು ನನ್ನ ಸಮೀಪಕ್ಕೆ ಬಂದೆ, ಬಹಳ ಸಮೀಪಕ್ಕೆ. ನನ್ನ ಹೆಗಲಿಗೆ ಒರಗಿ ಜಗತ್ತನ್ನು ಮರೆಯೋ ಹಾಗೆ. ನನ್ನ ಒರಟು ಕೆನ್ನೆಗಳು ನಿನ್ನ ನುಣುಪು ಕೆನ್ನೆಯ ಸ್ಪರ್ಶದಲ್ಲಿ ಮೈ ಮರೆತವು. ನಿನ್ನ ಕೈ ನನ್ನ ಕೈಯೊಳಗಿತ್ತು. ಹೋಗುವ ಮೊದಲು ನೀನು ನನ್ನ ಕೆನ್ನೆಗೆ ಮುತ್ತನ್ನೊತ್ತಿ ಹೋಗಿದ್ದೆ. ಯಾಕೆ, ನನ್ನ ಇನ್ನೊಂದು ಕೆನ್ನೆ ಏನು ಪಾಪ ಮಾಡಿತ್ತು ಹೇಳು..

 

ಮದುವೆಗೆ ಸಪ್ತಪದಿಯಾದ್ರೆ ಪ್ರೀತಿಗೆ ಸಪ್ತದಿನ; ವ್ಯಾಲೆಂಟೆನ್ಸ್ ವೀಕ್ 

 

ಈಗ ವಾಲೆಂಟೈನ್ ಡೇಗೆ ಮತ್ತೆ ನೀನು ಬರುತ್ತಿದ್ದೀ. ಈ ಟೈಮೂ ಬಹಳ ಲೇಟಾಗಿ ಚಲಿಸುತ್ತಿದೆ, ರಾತ್ರಿಯೂ ಸುದೀರ್ಘ, ನಿದ್ದೆ ಹತ್ತಿರವೂ ಸುಳಿಯದೇ ಹುಚ್ಚನ ಹಾಗಾಗಿದ್ದೇನೆ, ನಿನ್ನ ಪ್ರೀತಿಯ ಹುಚ್ಚ. ಈ ಹುಚ್ಚನ್ನು ನಿವಾರಿಸುವವಳು ನೀನೇ. ಸೋ, ಹೆಚ್ಚು ಸತಾಯಿಸದೇ ಬೇಗ ಬಾ, ಬರೀ ಬೆಂಗಳೂರಿಗೆ ಮಾತ್ರ ಅಲ್ಲ.. ನನ್ನದೆಯೊಳಗೆ, ಬದುಕಿನೊಳಗೂ..

Follow Us:
Download App:
  • android
  • ios