Asianet Suvarna News Asianet Suvarna News

ಸಮರಕ್ಕೆ ಸಿದ್ಧವಾದ BJP-JDS : DKS ಸಹೋದರರಿಲ್ಲದ ಲಾಭ ಪಡೆಯಲು ತಯಾರಿ

ಚುನಾವಣೆಗೆ ಬಿಜೆಪಿ ಜೆಡಿಎಸ್ ನಲ್ಲಿ ಭರ್ಜರಿ ತಯಾರಿ ಆರಂಭವಾಗಿದ್ದು, ಚುನಾವಣೆ ಗೆಲುವಿನ ಉತ್ಸಾಹ ಹೆಚ್ಚಿದೆ. ಡಿಕೆ ಸಹೋದರರಿಲ್ಲದ ಲಾಭ ಪಡೆಯಲು ಮಾಸ್ಟರ್ ಪ್ಲಾನ್ ಆರಂಭವಾಗಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

BJP JDS Leaders  Prepare For Magadi Kanakapura Local Body Election
Author
Bengaluru, First Published Oct 23, 2019, 1:12 PM IST

ಎಂ.ಅಫ್ರೋಜ್ ಖಾನ್

ರಾಮನಗರ [ಅ.23]: ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಸಂಕಷ್ಟದಲ್ಲಿ ಸಿಲುಕಿರುವಾಗಲೇ ಎದುರಾಗಿರುವ ಮಾಗಡಿ ಪುರಸಭೆ ಹಾಗೂ ಕನಕಪುರ ನಗರಸಭೆ ಚುನಾವಣೆ ಕಾಂಗ್ರೆಸ್ಸಿಗರಲ್ಲಿ ರಣೋತ್ಸಾಹ ಕುಂದುವಂತೆ ಮಾಡಿ ದ್ದರೆ, ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲಿ ಮಿನಿಸಮರಕ್ಕೆ ಭರದಿಂದ ಸಿದ್ಧತೆಗಳು ನಡೆದಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದರೆ, ಡಿ.ಕೆ.ಸುರೇಶ್ ಇಡಿ ವಿಚಾರಣೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ಯಲ್ಲಿಯೇ ಸ್ಥಳೀಯ ಸಂಸ್ಥೆ ಚುನಾವಣೆ ಬಂದಿರುವುದು ಕಾಂಗ್ರೆಸ್ ನಾಯಕರು ಮತ್ತು ಸ್ಪರ್ಧಾಕಾಂಕ್ಷಿಗಳಲ್ಲಿ ಖುಷಿಗಿಂತ ಹೆಚ್ಚಾಗಿ ಆತಂಕವೇ ಮನೆ ಮಾಡಿದೆ.

ಡಿಕೆ ಸಹೋದರರ ಅನುಪಸ್ಥಿತಿಯ ಲಾಭ ಪಡೆದು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ದಳ ಮತ್ತು ಕಮಲ ಪಕ್ಷಗಳು ಲೆಕ್ಕಾಚಾರದಲ್ಲಿ ಮುಳುಗಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾರಣ ಮಿನಿ ಸಮರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಪಕ್ಷ ಹೆಚ್ಚಿನ ಉತ್ಸಾಹದಲ್ಲಿದೆ. 

ಡಿಕೆ ಸಹೋದರರ ತೀರ್ಮಾನವೇ ಅಂತಿಮ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಡಿ.ಕೆ.ಸಹೋದರರ ನಿಲುವು ಏನಾಗಿರುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ದೋಸ್ತಿ ಸರ್ಕಾರ ಇದ್ದಾಗ ರಾಜ್ಯ ನಾಯಕರ ಮಟ್ಟದಲ್ಲಿ ಯಶಸ್ವಿಯಾದ ಮೈತ್ರಿ ಕಾರ್ಯಕರ್ತರಲ್ಲಿ ಕಂಡು ಬರಲಿಲ್ಲ.

ಇದು ಲೋಕಸಭಾ ಚುನಾವಣೆ ಫಲಿತಾಂಶದಿಂದ ನಾಯಕರ ಅರಿವಿಗೂ ಬಂದಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಗಳ ಕಾರ್ಯಕರ್ತರು ಇದನ್ನೇ ಬಯಸುತ್ತಿದ್ದಾರೆ.

ಹಾಗೊಂದು ವೇಳೆ ಜೆಡಿಎಸ್-ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಆಸೆಗೆ ವಿರುದ್ಧವಾಗಿ ಮೈತ್ರಿ ಮುಂದುವರಿಸಿದರೆ ಎರಡು ಪಕ್ಷಗಳ ಮೇಲು ಅದರ ಪರಿಣಾಮ ಬೀರುತ್ತದೆ. ಇದರಿಂದ ಉಭಯ ಪಕ್ಷಗಳಿಂದ ವಲಸೆ ಹೋಗುವವರ ಸಂಖ್ಯೆಯು ಹೆಚ್ಚಾಗುತ್ತದೆ. ಇದು ನೆಲೆಯೇ ಕಂಡುಕೊಳ್ಳಲು ಸಾಧ್ಯವಾಗದ ಸ್ಥಳೀಯ ಸಂಸ್ಥೆಗಳಲ್ಲಿ ಕಮಲ ಅರಳಿ ಬಿಜೆಪಿ ಪಕ್ಷ ಸಂಘಟನೆಗೊಳ್ಳಲು ಸಹಕಾರಿಯಾಗುತ್ತದೆ.

ತ್ರಿಕೋನ ಸ್ಪರ್ಧೆ ಸಾಧ್ಯತೆ: ಡಿ.ಕೆ.ಶಿವಕುಮಾರ್ ಅವರ ಸ್ವ ಕ್ಷೇತ್ರವಾದ ಕನಕಪುರ ನಗರಸಭೆಯಲ್ಲಿ 31 ವಾರ್ಡ್‌ಗಳ ಪೈಕಿ 27 ರಲ್ಲಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದರೆ, ಮಾಗಡಿಯ 23 ವಾರ್ಡ್ ಗಳ ಪೈಕಿ ಅಧಿಕಾರ ಕಳೆದುಕೊಳ್ಳುವ ಮುನ್ನ 15 ಕಾಂಗ್ರೆಸ್ ಹಾಗೂ 8 ಜೆಡಿಎಸ್ ಸದಸ್ಯರು ಇದ್ದರು. ಎರಡು ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಪೈಪೋಟಿ ನಡೆದಿತ್ತು.

ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದಲ್ಲದೇ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಚುನಾವಣೆ ಘೋಷಣೆ ಆಗಿರುವುದು ಕಾಂಗ್ರೆಸಿಗರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಇನ್ನು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಂಡು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆ ಸಹೋದರರ ಅನುಪಸ್ಥಿತಿಯಲ್ಲಿ ಮಾಗಡಿಯಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಚ್. ಎಂ.ರೇವಣ್ಣ ಹಾಗೂ ಕನಕಪುರದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರು ಟಿಕೆಟ್ ಹಂಚಿಕೆಯನ್ನು ತೀರ್ಮಾನಿಸಿದ್ದು, ಸ್ಥಳೀಯ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಹಾಗೂ ಪಕ್ಷದಲ್ಲಿ ಸಕ್ರಿಯರಾಗಿರುವ ಗೆಲ್ಲುವ ವ್ಯಕ್ತಿಗಳಿಗೆ ಆದ್ಯತೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿಯು ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಮೊದಲ ಆದ್ಯತೆ ನೀಡಲಿದ್ದು, ಸ್ಪರ್ಧಿಸಲು ಪದಾಧಿಕಾರಿಗಳು ನಿರಾಕರಿಸಿದರೆ ಅಂತಹ ವಾರ್ಡುಗಳಲ್ಲಿ ಬೇರೆಯವರಿಗೆ ಅವಕಾಶ ನೀಡಲು ತೀರ್ಮಾನಿಸಿದೆ.  ಇನ್ನು ಜೆಡಿಎಸ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕ ಎ.ಮಂಜು ನಾಥ್ ನಿರ್ಧಾರವೇ ಅಂತಿಮವಾಗಿರಲಿದೆ.

Follow Us:
Download App:
  • android
  • ios