Asianet Suvarna News Asianet Suvarna News

ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ| ಕರ್ನಾಟಕದ ಅವಕಾಶವಾದಿ ಸರ್ಕಾರದಿಂದ ಜನರಿಗೆ ಬೇಸರ| ಮೈತ್ರಿ ಪಕ್ಷಗಳ ತಿಕ್ಕಾಟದಿಂದ ರೈತರಿಗೆ ತೀವ್ರ ನಿರಾಸೆ

People in Karnataka are fed up of coalition government narendra Modi
Author
Bangalore, First Published Mar 1, 2019, 10:19 AM IST

ಬೆಂಗಳೂರು[ಮಾ.01]: ಕರ್ನಾಟಕದ ಜನರು ಅವಕಾಶವಾದಿ ರಾಜ್ಯ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಗುರುವಾರ ‘ಮೇರಾ ಬೂತ್‌ ಸಬ್‌ ಸೇ ಮಜಬೂತ್‌’ ಕಾರ್ಯಕ್ರಮದ ಅಂಗವಾಗಿ ದೆಹಲಿಯಿಂದ ವಿವಿಧ ರಾಜ್ಯಗಳ ಪಕ್ಷದ ಬೂತ್‌ ಪ್ರಮುಖರೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಬಲ ಹೆಚ್ಚುವ ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡಿನ ಕೊಯಮತ್ತೂರಿನಿಂದ ಪಕ್ಷದ ಸ್ಥಳೀಯ ಮುಖಂಡ ಅರುಣ್‌ ಮುರುಗನ್‌, ದಕ್ಷಿಣ ಭಾರತದಲ್ಲಿ ಮಾಧ್ಯಮಗಳು ಬಿಜೆಪಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಕ್ಷಿಣ ಭಾರತದಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸುವ ವಿಶ್ವಾಸ ನಿಮಗಿದೆಯೇ ಎಂದು ಮೋದಿ ಅವರನ್ನು ಪ್ರಶ್ನಿಸಿದರು.

ಅದಕ್ಕೆ ನಗುತ್ತಲೇ ಉತ್ತರಿಸಿದ ಪ್ರಧಾನಿ, ನಾನು ಯಾವಾಗಲೂ ಆತ್ಮವಿಶ್ವಾಸದಿಂದ ತುಂಬಿರುತ್ತೇನೆ ಎಂಬ ಆರೋಪವೂ ಇದೆ. ಆತ್ಮವಿಶ್ವಾಸ ನನ್ನ ಸ್ವಭಾವದ ಒಂದು ಭಾಗವಾಗಿದೆ. ಮಾಧ್ಯಮಗಳ ಒಂದು ವರ್ಗದಲ್ಲಿ ನಿರ್ದಿಷ್ಟಅಭಿಪ್ರಾಯವಿದೆ. ಚುನಾವಣೆಗೆ ಮೊದಲು ಅವು ನಮ್ಮನ್ನು ಅನುಮಾನದಿಂದಲೇ ನೋಡುತ್ತವೆ. ಸವಾಲು ಎದುರಾಗಿದೆ ಎಂದೇ ಹೇಳುತ್ತವೆ. ಹೀಗಾಗಿ, ನಾವು ಮಾಧ್ಯಮವನ್ನು ದೂಷಿಸುವ ಬದಲು ಅವರ ಅಭಿಪ್ರಾಯವನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಪ್ರತಿಪಕ್ಷ ಹಾಗೂ ಮಾಧ್ಯಮಗಳ ಒಂದು ವರ್ಗದಲ್ಲಿದೆ. ಆದರೆ, 2008ರಲ್ಲಿ ಕರ್ನಾಟಕದಲ್ಲಿ ನಮ್ಮ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಿತು. ಕಳೆದ 2018ರ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಎಂದರು.

ಕರ್ನಾಟಕದ ಜನರು ರಾಜ್ಯದಲ್ಲಿನ ಅವಕಾಶವಾದಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಜೆಡಿಎಸ್‌ಗೆ ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್‌ ಜೊತೆ ಸೇರಿ ಆಡಳಿತ ನಡೆಸುತ್ತಿದೆ. ಖಾತೆಗಳ ಹಂಚಿಕೆ ಮತ್ತಿತರ ವಿಷಯಗಳಿಗಾಗಿ ಉಭಯ ಪಕ್ಷಗಳ ನಡುವೆ ತಿಕ್ಕಾಟ ನಡೆದಿದೆ. ರೈತರ ವಿಷಯದಲ್ಲಿ ತೀವ್ರ ನಿರಾಸೆ ಉಂಟುಮಾಡಿದೆ ಎಂದು ಆಪಾದಿಸಿದರು.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಹೆಚ್ಚಿನ ಬಲ, ಗೆಲುವು ಸಿಗಲಿದೆ. ದಕ್ಷಿಣ ಭಾರತದಲ್ಲೂ ಜನರ ಅಭಿವೃದ್ಧಿ ಆಗಬೇಕು ಎಂಬ ಭಾವನೆಯಿದೆ. ಎಲ್ಲಿ ಅಭಿವೃದ್ಧಿಯ ಆಕಾಂಕ್ಷೆ ಇರುತ್ತದೆಯೊ ಅಲ್ಲಿ ಬಿಜೆಪಿಯೊಂದೇ ಉತ್ತರವಾಗಬಲ್ಲದು ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios