Asianet Suvarna News Asianet Suvarna News

ಇಂದಿನಿಂದ ಕಲಾಪ: ನೆರೆ ಹಾನಿ, ಪರಿಹಾರದ ಮೇಲೆಯೇ ಹೆಚ್ಚಿನ ಚರ್ಚೆ ಸಂಭವ!

ಗುರುವಾರ ಕಲಾಪ: ನೆರೆ ಜಟಾಪಟಿ| ಸಿದ್ದು ವಿಪಕ್ಷ ನಾಯಕರಾಗಿರುವುದರಿಂದ ಕಲಾಪಕ್ಕೆ ಖದರ್‌| ಎಚ್‌ಡಿಕೆ ಬಜೆಟ್‌ಗೆ ಒಪ್ಪಿಗೆ ಅಥವಾ ಪೂರಕ ಬಜೆಟ್‌ ಸಂಭವ

Karnataka Assembly session from thursday opposition gears up
Author
Bangalore, First Published Oct 10, 2019, 7:38 AM IST

ಬೆಂಗಳೂರು[ಅ.10]: ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಗುರುವಾರದಿಂದ ಆರಂಭವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನಸಭೆಯ ಪ್ರತಿಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರ ನಡುವೆ ನೆರೆ ಪರಿಹಾರ ಮತ್ತಿತರ ವಿಷಯಗಳ ಬಗ್ಗೆ ಜಟಾಪಟಿ ನಡೆಯುವ ನಿರೀಕ್ಷೆಯಿದೆ.

ಅಧಿವೇಶನದ ಹಿಂದಿನ ದಿನವಾದ ಬುಧವಾರ ಸಂಜೆವರೆಗೂ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಪ್ರತಿಪಕ್ಷದ ನಾಯಕರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದರ ಬಗ್ಗೆ ಕುತೂಹಲವಿತ್ತು. ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರಾದರೂ ಪ್ರತಿಪಕ್ಷದ ನಾಯಕರಾಗಿದ್ದರೆ ಸರ್ಕಾರ ತುಸು ನಿರಾಳವಾಗುತ್ತಿತ್ತೇನೊ. ಆದರೆ, ಸಿದ್ದರಾಮಯ್ಯ ಅವರ ನೇಮಕ ಪ್ರಕಟಗೊಳ್ಳುತ್ತಿದ್ದಂತೆಯೇ ಸದನದ ಕಲಾಪ ಖದರು ಪಡೆದುಕೊಳ್ಳುವುದು ನಿಶ್ಚಿತವಾಗಿದೆ.

ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ನಡುವೆ ಭರ್ಜರಿ ವಾಕ್ಸಮರ, ಸಂಘರ್ಷ ನಡೆದಿತ್ತು. ಅದು ಮತ್ತೆ ಪುನರಾವರ್ತನೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕಲಾಪಕ್ಕೆ ಕ್ಯಾಮರಾ, ಮೊಬೈಲ್ ಒಯ್ಯಂಗಿಲ್ಲ..ಮಾಧ್ಯಮಗಳು ಮಾತೇ ಎತ್ತಂಗಿಲ್ಲ!

ಅಧಿವೇಶನ ಈಗ ನಿಗದಿಯಾಗಿರುವಂತೆ ಮೂರು ದಿನಗಳ ಕಾಲ ಮಾತ್ರ ನಡೆಯುತ್ತದೆಯೇ ಅಥವಾ ವಿಸ್ತರಣೆಯಾಗುತ್ತದೆಯೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿವೇಶನದ ಅವಧಿ ವಿಸ್ತರಿಸುವಂತೆ ಒತ್ತಾಯಿಸಲು ನಿರ್ಧರಿಸಿವೆ. ಆದರೆ, ಮುಂಬರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನವನ್ನು ನಿಗದಿಯಾಗಿರುವಂತೆ ಮೂರು ದಿನಕ್ಕಿಂತ ಹೆಚ್ಚು ವಿಸ್ತರಿಸಲು ಆಡಳಿತಾರೂಢ ಬಿಜೆಪಿಗೆ ಮನಸ್ಸಿಲ್ಲ.

ನೆರೆ ಪರಿಹಾರ, ಬಜೆಟ್‌ ಮೇಲಿನ ಚರ್ಚೆ:

ಈ ಅಧಿವೇಶನದಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆ ಹಾವಳಿ ಮತ್ತು ಅದರ ಪರಿಹಾರೋಪಾಯಗಳ ಕುರಿತೇ ಅಧಿವೇಶನದಲ್ಲಿ ಹೆಚ್ಚು ಚರ್ಚೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ. ಜೊತೆಗೆ, ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಮಂಡಿಸಲಾಗಿದ್ದ ಬಜೆಟ್‌ಗೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಯಡಿಯೂರಪ್ಪ ಮತ್ತೊಮ್ಮೆ ಲೇಖಾನುದಾನ ಮಂಡಿಸಲಿದ್ದಾರೆ.

ನೆರೆ ಪರಿಹಾರವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ, ರಾಜ್ಯ ಸರ್ಕಾರ ಹಿಂದಿನ ಸರ್ಕಾರಗಳ ವೇಳೆ ನೆರೆ ಪರಿಹಾರ ಸಂದರ್ಭ ಎಷ್ಟೆಷ್ಟುಹಾಗೂ ಯಾವಾಗ ಪರಿಹಾರ ಬಿಡುಗಡೆ ಮಾಡಲಾಗಿತ್ತು ಎಂಬೆಲ್ಲ ಅಂಕಿ ಅಂಶಗಳೊಂದಿಗೆ ಸದನದಲ್ಲಿ ಮುಂದಿಡಲು ನಿರ್ಧರಿಸಿದೆ. ಈ ಸಂಬಂಧ ಬುಧವಾರ ನಡೆದ ಸಚಿವರ ಸಭೆ ಮತ್ತು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುಳಿವು ನೀಡಿದ್ದಾರೆ. ಕಳೆದ ವಾರ ಕೇಂದ್ರ ಸರ್ಕಾರ 1,200 ಕೋಟಿ ರು.ಗಳನ್ನು ನೆರೆ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಇದೀಗ ಯಡಿಯೂರಪ್ಪ ಅವರು ಒಂದಿಷ್ಟುಧೈರ್ಯದಿಂದಲೇ ಪ್ರತಿಪಕ್ಷಗಳನ್ನು ಎದುರಿಸಲು ಸಜ್ಜಾಗಿದ್ದಾರೆ.

3 ವಿಧಾನ ಮಂಡಲಗಳ ಅಧಿವೇಶನ : ‘ನೆರೆ’ ಬಗ್ಗೆ ಚರ್ಚೆ

ಮುಖ್ಯವಾಗಿ ನೆರೆ ಹಾನಿ ಹಿನ್ನೆಲೆ ಪ್ರತ್ಯೇಕ ಬಜೆಟ್‌ ಮಂಡನೆ ಪ್ರಸ್ತಾಪವನ್ನು ಕೈಬಿಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆರಳೆಣಿಕೆಯಷ್ಟುಹೊಸ ಕಾರ್ಯಕ್ರಮಗಳನ್ನು ಒಳಗೊಂಡ ಪೂರಕ ಅಂದಾಜು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios