Asianet Suvarna News Asianet Suvarna News

ತೆಲಂಗಾಣ ರಾಜಕೀಯಕ್ಕೆ ಡಿಕೆಶಿ ಎಂಟ್ರಿ

ಕರ್ನಾಟಕ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಸಚಿವ ಡಿ.ಕೆ ಶಿವಕುಮಾರ್ ಇದೀಗ ತೆಲಂಗಾಣ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

DK Shivakumar Entry in Telangana Congress
Author
Bengaluru, First Published Nov 23, 2018, 7:35 AM IST

ಹೈದರಾಬಾದ್‌: ಕರ್ನಾಟಕದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶಾಸಕರು ‘ಆಪರೇಷನ್‌ ಕಮಲ’ಕ್ಕೆ ಈಡಾಗದಂತೆ ನೋಡಿಕೊಂಡಿದ್ದ, ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಈಗ ತೆಲಂಗಾಣ ಕಾಂಗ್ರೆಸ್‌ ಪಾಲಿಗೆ ‘ಟ್ರಬಲ್‌ ಶೂಟರ್‌’ ಆಗಿದ್ದಾರೆ.

ಡಿ.7ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಅಳೆದೂತೂಗಿ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಬಂಡಾಯ ಭುಗಿಲೆದ್ದಿದ್ದು, 90 ನಾಯಕರು ಅಸಮಾಧಾನಗೊಂಡಿದ್ದಾರೆ. ಆ ನಾಯಕರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯದಂತೆ ನೋಡಿಕೊಳ್ಳುವುದು ಹಾಗೂ ಪಕ್ಷಕ್ಕೆ ಒಳ ಏಟು ನೀಡದಂತೆ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಈಗ ಡಿಕೆಶಿ ಮೊರೆ ಹೋಗಿದೆ.

ಉಳಿದೆಲ್ಲಾ ರಾಜ್ಯಗಳಲ್ಲಿ ಸಮನ್ವಯ ಸಮಿತಿ, ಕೋರ್‌ ಕಮಿಟಿ, ಪ್ರಚಾರ ಸಮಿತಿ ಹಾಗೂ ಇನ್ನಿತರೆ ಸಮಿತಿಗಳನ್ನು ರಚಿಸುವ ಕಾಂಗ್ರೆಸ್‌, ತೆಲಂಗಾಣದಲ್ಲಿ ಬಂಡಾಯಗಾರರ ಓಲೈಸಲು ‘ಮನವೊಲಿಕೆ ಸಮಿತಿ’ಯೊಂದನ್ನು ಸ್ಥಾಪಿಸಿದೆ. ಅದರಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮುಖ್ಯಸ್ಥರಾಗಿದ್ದರೆ, ಡಿ.ಕೆ. ಶಿವಕುಮಾರ್‌ ಹಾಗೂ ಪುದುಚೇರಿಯ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣ ರಾವ್‌ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಡಿಕೆಶಿ ಅವರು ಇರುವ ಸಮಿತಿ ಹಲವಾರು ನಾಯಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಚುನಾವಣೆ ಸಂದರ್ಭದಲ್ಲಿ ಪ್ರತಿ ರಾಜಕೀಯ ಪಕ್ಷಕ್ಕೂ ಬಂಡಾಯದ ಬಿಸಿ ಎದುರಾಗುತ್ತದೆ. ನಾವು ನಾಯಕರ ಅನುಭವ ಹಾಗೂ ಪರಿಣತಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಹಲವು ನಾಯಕರನ್ನು ಭೇಟಿ ಮಾಡಿ ಈ ಸಮಿತಿ ಸಾಂತ್ವನಪಡಿಸಿದೆ ಎಂದು ತೆಲಂಗಾಣ ಚುನಾವಣೆಯಲ್ಲಿ ವ್ಯಸ್ತರಾಗಿರುವ ಕರ್ನಾಟಕದ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ತಿಳಿಸಿದ್ದಾರೆ. ಆದರೆ ಡಿಕೆಶಿ ಆಟ ತೆಲಂಗಾಣದಲ್ಲಿ ನಡೆಯುವುದಿಲ್ಲ. ತೆಲಂಗಾಣ ಎಂಬುದು ಕರ್ನಾಟಕವಲ್ಲ ಎಂದು ಬಿಜೆಪಿ ನಾಯಕ ಎಸ್‌. ಪ್ರಕಾಶ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಬಿಡುಗಡೆ ಬೆನ್ನಲ್ಲೇ ಅಲ್ಪಸಂಖ್ಯಾತ ನಾಯಕರಾದ ಅಬೀದ್‌ ರಸೂಲ್‌ ಖಾನ್‌, ಖಾಲಿಕುರ್‌ ರೆಹಮಾನ್‌ರಂತಹ ನಾಯಕರು ಅಸಮಾಧಾನಗೊಂಡು ಪಕ್ಷ ತೊರೆದಿದ್ದಾರೆ. ಮಾಜಿ ಸಂಸದ ಅಜರುದ್ದೀನ್‌ ಮತ್ತಿತರರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಅಸಮಾಧಾನ ಮುಂದುವರಿಯಲು ಬಿಟ್ಟರೆ ಚುನಾವಣೆಯಲ್ಲಿ ಭಾರಿ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಡಿಕೆಶಿ ಅವರನ್ನು ಕಾಂಗ್ರೆಸ್‌ ನಿಯೋಜಿಸಿದೆ.

Follow Us:
Download App:
  • android
  • ios