Asianet Suvarna News Asianet Suvarna News

ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್

7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿ ಬೆಂಗಾಲ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡೆಲ್ಲಿ ವಿರುದ್ಧ 34-39 ಅಂಕಗಳಿಂದ ಬೆಂಗಾಲ್ ಗೆಲುವಿನ ಕೇಕೆ ಹಾಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Pro Kabaddi Bengal Warriors 7th Season Champions
Author
Ahmedabad, First Published Oct 19, 2019, 9:10 PM IST

ಅಹಮದಾಬಾದ್[ಅ.19]: 7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಕಾದಾಟದಲ್ಲಿ ದಬಾಂಗ್ ಡೆಲ್ಲಿಯನ್ನು 34-39 ಅಂಕಗಳ ಅಂತರದಿಂದ ಮಣಿಸಿ ಚೊಚ್ಚಲ ಬಾರಿಗೆ ಬೆಂಗಾಲ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಅನುಪಸ್ಥಿತಿಯಲ್ಲಿ ಸುಕೇಶ್ ಹೆಗ್ಡೆ ಮೊದಲ ರೈಡ್ ಮಾಡಿದರು. ಚಂದ್ರನ್ ರಂಜಿತ್ ಬೋನಸ್ ಮೂಲಕ ಡೆಲ್ಲಿಗೆ ಅಂಕಗಳ ಖಾತೆ ತೆರೆದರು. ಇದರ ಬೆನ್ನಲ್ಲೇ ಪ್ರಪಂಜನ್’ರನ್ನು ಟ್ಯಾಕಲ್ ಮಾಡಿದ ಡೆಲ್ಲಿ 2-0 ಅಂಕಗಳಿಂದ ಮುನ್ನಡೆಯಿತು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ಅಂಕಗಳ ಖಾತೆ ತೆರೆಯಿತು. ರವೀಂದರ್ ರಮೇಶ್, ರಿಂಕು ನರ್ವಾಲರನ್ನು ಔಟ್ ಮಾಡುವ ಮೂಲಕ ವಾರಿಯರ್ಸ್’ಗೆ ಮೊದಲ ಯಶಸ್ಸು ತಂದಿತ್ತರು. ಡಿಫೆಂಡಿಂಗ್’ನಲ್ಲಿ ಪ್ರಾಬಲ್ಯ ಮೆರೆದ ಡೆಲ್ಲಿ 6ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಆಲೌಟ್ ಮಾಡಿ 11-3 ಅಂಕಗಳ ಭರ್ಜರಿ ಮುನ್ನಡೆ ಸಾಧಿಸಿತು. ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಲ್ಲಲು ಬೆಂಗಾಲ್ ವಾರಿಯರ್ಸ್ ಆಕ್ರಮಣಕಾರಿ ಆಟದ ರಣತಂತ್ರ ಅಳವಡಿಸಿಕೊಂಡಿತು. ಪರಿಣಾಮ ಪಂದ್ಯದ 16ನೇ ನಿಮಿಷದಲ್ಲಿ ದಬಾಂಗ್ ಡೆಲ್ಲಿಯನ್ನು ಆಲೌಟ್ ಮಾಡುವ ಮೂಲಕ 14-15 ಅಂಕಗಳೊಂದಿಗೆ ಕೇವಲ ಒಂದಂಕದ ಹಿನ್ನಡೆ ಅನುಭವಿಸಿತು. ಕೊನೆಗೂ ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 17-17 ಅಂಕಗಳ ಸಮಬಲ ಸಾಧಿಸಿದವು.

ಪ್ರೊ ಕಬಡ್ಡಿ ಫೈನ​ಲ್‌: ಹೊಸ ಚಾಂಪಿಯನ್ ಉದಯಕ್ಕೆ ಕ್ಷಣಗಣನೆ

ಮೊದಲಾರ್ಧದಲ್ಲಿ ಆಕ್ರಮಣಕಾರಿಯಾಟದ ರಣತಂತ್ರ ಫಲಕೊಟ್ಟಿದ್ದರಿಂದ ಕನ್ನಡಿಗ ರಮೇಶ್ ಕುಮಾರ್ ಮಾರ್ಗದರ್ಶನದ ಬೆಂಗಾಲ್ ವಾರಿಯರ್ಸ್ ತಂಡ ಮೊದಲ ಬಾರಿಗೆ ದ್ವಿತಿಯಾರ್ಧದಲ್ಲಿ ನಿಚ್ಚಳ ಮುನ್ನಡೆ ಗಳಿಸಿತು. ದ್ವಿತಿಯಾರ್ಧದ 6ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ಬೆಂಗಾಲ್ 25-21 ಅಂಕಗಳ ಮುನ್ನಡೆ ಗಳಿಸಿಕೊಂಡಿತು. ನಭೀಭಕ್ಷ್ ಹಾಗೂ ಸುಕೇಶ್ ಹೆಗ್ಡೆ ನಿರಂತರ ಅಂಕ ಗಳಿಸುತ್ತಲೇ ಸಾಗಿದರು. ಪರಿಣಾಮ 32ನೇ ನಿಮಿಷದಲ್ಲಿ ಡೆಲ್ಲಿಯನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ಬೆಂಗಾಲ್ ತಂಡ 34-24 ಅಂಕಗಳೊಂದಿಗೆ 10 ಅಂಕಗಳ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ನವೀನ್ ಕುಮಾರ್ ಮಿಂಚಿನ ರೈಡಿಂಗ್ ನಡೆಸಿದರಾದರೂ ಅಂಕಗಳ ಅಂತರವನ್ನು ಕಡಿಮೆ ಮಾಡಿದರೇ ಹೊರತು, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

ಬೆಂಗಾಲ್ ವಾರಿಯರ್ಸ್ ಪರ ನಭೀಭಕ್ಷ್ 10 ಅಂಕ ಪಡೆದರೆ, ಕನ್ನಡಿಗರಾದ ಸುಕೇಶ್ ಹಗ್ಡೆ 8 ಹಾಗೂ ಜೀವಾ ಕುಮಾರ್ 4 ಅಂಕ ಪಡೆದರು. ಇನ್ನು ಡೆಲ್ಲಿ ಪರ ನವೀನ್ ಕುಮಾರ್ 18 ಅಂಕ ಪಡೆದರೆ, ಅನಿಲ್ ಕುಮಾರ್ ಹಾಗೂ ವಿಜಯ್ ತಲಾ ಮೂರು ಅಂಕ ಗಳಿಸಿದರು.

ಟರ್ನಿಂಗ್ ಪಾಯಿಂಟ್: ಒಂದು ಹಂತದವರೆಗೂ ಉಭಯ ತಂಡಗಳಿಂದಲೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಆರಂಭಿಕ ಹಿನ್ನಡೆಯ ಹೊರತಾಗಿಯೂ ದ್ವಿತಿಯಾರ್ಧದ ಆರಂಭದಲ್ಲೇ ಡೆಲ್ಲಿಯನ್ನು ಆಲೌಟ್ ಮಾಡಿದ್ದ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿತು. ಆ ಬಳಿಕ ಸಿಕ್ಕ ಮುನ್ನಡೆಯನ್ನು ಬೆಂಗಾಲ್ ತಂಡದ ಲಾಭ ಪಡೆದು ಗೆಲುವಿನ ನಗೆ ಬೀರಿತು.

Follow Us:
Download App:
  • android
  • ios