Asianet Suvarna News Asianet Suvarna News

ಬಹರೇನ್‌ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಕನ್ನಡ ವೈಭವ’

ಬಹರೇನ್‌ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಕನ್ನಡ ವೈಭವ’| ವಿದೇಶದಲ್ಲಿ ಅದ್ಧೂರಿಯಾಗಿ ಮೊಳಗಿದ ಕನ್ನಡ ಡಿಂಡಿಮ| ತಾರಾ, ರವಿ ಹೆಗಡೆ, ಸಾಧು ಕೋಕಿಲ ಭಾಗಿ

Kannada Rajyotsava Kannada Vaibhava Programme in bahrain by kannada sangha
Author
Bangalore, First Published Dec 17, 2018, 12:18 PM IST

ಬೆಂಗಳೂರು[ಡಿ.17]: ರಾಜ್ಯ ಪ್ರಶಸ್ತಿ ವಿಜೇತ ‘ಕನ್ನಡ ಸಂಘ’ ಬಹರೇನ್‌ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ‘ಕರ್ನಾಟಕ ರಾಜ್ಯೋತ್ಸವ ಕನ್ನಡ ವೈಭವ’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮನಾಮಾದ ಅಲ್‌ ರಜಾ ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚಿನ ಕನ್ನಡಿಗರು ಕಿಕ್ಕಿರಿದು ನೆರೆದು ಕನ್ನಡದ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ, ಬಹರೇನ್‌ ಕನ್ನಡ ಸಂಘದ ಬಗ್ಗೆ ಕೇಳಿದ್ದೆ. ಆದರೆ, ಇಂದು ಕಣ್ಣಾರೆ ಕಾಣುತ್ತಿದ್ದೇನೆ. ವಿದೇಶದಲ್ಲಿ ನೆಲೆಸಿದರೂ ಕನ್ನಡದ ಏಳಿಗೆಗಾಗಿ ದುಡಿಯುತ್ತಿದ್ದೀರಿ. ಕನ್ನಡದ ಕಲೆ, ಸಂಸ್ಕೃತಿ ಬೆಳೆಸುತ್ತಿರುವ ನಿಮಗೆ ಧನ್ಯವಾದಗಳು. ನಿಮ್ಮ ಕನ್ನಡದ ಪ್ರೇಮ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮಾತನಾಡಿ, ದೂರದ ದೇಶದಲ್ಲಿ ನೀವು ಮಾಡುತ್ತಿರುವ ಕನ್ನಡದ ಸೇವೆ ಕಂಡು ಅಚ್ಚರಿಯಾಗುತ್ತಿದೆ. ನಿಮ್ಮ ಕನ್ನಡದ ಕೆಲಸಗಳು ಕರ್ನಾಟಕದ ಕನ್ನಡಿಗರಿಗೆ ತಲುಪುತ್ತಿಲ್ಲ. ಇದು ಎಲ್ಲರಿಗೂ ತಲುಪಿ ಮಾದರಿಯಾಗಬೇಕು. ಶೀಘ್ರದಲ್ಲಿಯೇ ಸುವರ್ಣ ನ್ಯೂಸ್‌ ಚಾನಲ್‌ನಲ್ಲಿ ಅನಿವಾಸಿ ಕನ್ನಡಿಗರ ಚಟುವಟಿಕೆಗೆ ವಾರದಲ್ಲಿ ಒಂದು ನಿರ್ದಿಷ್ಟಸಮಯ ಮತ್ತು ಕನ್ನಡಪ್ರಭದಲ್ಲಿ ನಿರ್ದಿಷ್ಟಸ್ಥಳ ಮೀಸಲಿಡಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾದ ಪ್ರದೀಪ್‌ ಶೆಟ್ಟಿಅತಿಥಿಗಳನ್ನು ಸ್ವಾಗತಿಸಿ, ಸಂಘದ ಯಶೋಗಾಥೆಯನ್ನು ವಿವರಿಸಿದರಲ್ಲದೇ, ಅದಕ್ಕೆ ಸಹಕರಿಸಿದ ಸರ್ವರಿಗೂ ವಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ತಾರಾ ಅನೂರಾಧ ಮತ್ತು ವೇಣುಗೋಪಾಲ್‌ ದಂಪತಿ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮತ್ತು ನಟ, ನಿರ್ದೇಶಕ ಸಾಧು ಕೋಕಿಲ ಅವರನ್ನು ಸನ್ಮಾನಿಸಲಾಯಿತು.

ಅಮೆರಿಕದ ‘ಥ್ರೀ ಅಕ್ಷ’ ತಂಡದವರಿಂದ ಶಾಸ್ತ್ರೀಯ ನೃತ್ಯದ ಜತೆಗೆ ಬಹರೇನ್‌ನ ಸ್ಥಳೀಯ ಕನ್ನಡಿಗರು ಪ್ರದರ್ಶಿಸಿದ ಜಾನಪದ, ಸಾಮಾಜಿಕ ಮತ್ತು ಸಿನಿಮೀಯ ನೃತ್ಯಗಳ ಕಾರ್ಯಕ್ರಮಗಳು ನೆರೆದವರ ಮನಸೂರೆಗೊಂಡವು. ಅತಿಥಿಗಳಾಗಿ ಆಗಮಿಸಿದ್ದ ಉದಯೋನ್ಮುಖ ಕಲಾವಿದೆ ಕುಮಾರಿ ಅದಿತಿ ಅರುಣ್‌ ಸಾಗರ್‌, ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್‌, ಸಾಧು ಕೋಕಿಲಾ ತಮ್ಮ ಹಾಡಿನ ಮೋಡಿಯಿಂದ ನೆರೆದವರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ನಟ ಅರುಣ್‌ ಸಾಗರ್‌, ಉಪಾಧ್ಯಕ್ಷ ಡಿ.ರಮೇಶ್‌, ಪೋಷಕರಾದ ಶಾಂತಾರಾಂ ಶೆಟ್ಟಿ, ನವೀನ್‌ ಶೆಟ್ಟಿ, ಆರ್‌.ವಿ.ಹೆಗಡೆ, ನವೀನ್‌ ಶೆಟ್ಟಿ, ಸಂತೋಷ್‌ ಕರ್ಕೇರಾ, ಸಂತೋಷ ಶೆಟ್ಟಿ, ಶಶಿಧರ್‌ ಶೆಟ್ಟಿಕೆಂಜೂರ್‌ ಮೊದಲಾದವರು ಉಪಸ್ಥಿತರಿದ್ದರು. ಅರುಣ್‌ ಸಾಗರ್‌ ಮತ್ತು ಚೇತನಾ ಹೆಗ್ಡೆ ಮನರಂಜನಾ ಕಾರ್ಯಕ್ರಮವನ್ನು ನಿರೂಪಿಸಿದರು. ಮನರಂಜನಾ ಕಾರ್ಯದರ್ಶಿ ವರುಣ್‌ ಹೆಗ್ಡೆ ವಂದನಾರ್ಪಣೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಕಿರಣ್‌ ಉಪಾಧ್ಯಾಯ್‌ ನಿರೂಪಿಸಿದರು.

Follow Us:
Download App:
  • android
  • ios