Asianet Suvarna News Asianet Suvarna News

ರಾಮ ಮಂದಿರ ನಿರ್ಮಾಣದ ಕತೆಯೇನು?

ಲೋಕಸಭಾ ಚುನಾವಣೆ ದೃಷ್ಟಿಯಿಂದ ಉತ್ತರ ಪ್ರದೇಶ ನಿರ್ಣಾಯಕ ರಾಜ್ಯ. ಯೋಗಿ ಆದಿತ್ಯನಾಥ್ ಮೇಲೆ ಬಿಜೆಪಿ ಭಾರೀ ನಿರೀಕ್ಷೆ ಇಟ್ಟಿದೆ. ಅಯೋಧ್ಯೆ ನಿರ್ಮಾಣ ವಿಚಾರ ಈಗ ಬಿಜೆಪಿಗೆ ಅಸ್ತ್ರ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಜನರ ಮುಂದೆ ಹೋಗಲಿದೆ. ಈ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. 

Yogi Adityanath exclusive interview about Ayodhya Ram Mandir
Author
Bengaluru, First Published Jan 11, 2019, 2:27 PM IST

ಲಕ್ನೋ (ಜ. 11): ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ನಿರ್ಣಾಯಕ ರಾಜ್ಯ. ಹಾಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಬಿಜೆಪಿಯ ನಿರೀಕ್ಷೆ ಹೆಚ್ಚಿದೆ. ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯ ರಾಮ ಮಂದಿರ ಪ್ರಮುಖ ಚುನಾವಣಾ ವಿಷಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯೋಗಿ ಅವರೊಂದಿಗೆ ಎಕನಾಮಿಕ್ ಟೈಮ್ಸ್ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

ರಾಮ ಮಂದಿರ ನಿರ್ಮಾಣದ ಕತೆಯೇನು?

ರೈತರ 36000 ಕೋಟಿ ರು. ಸಾಲವನ್ನು ಯಶಸ್ವಿಯಾಗಿ ಮನ್ನಾ ಮಾಡಿದ ದೇಶದ ಪ್ರಥಮ ರಾಜ್ಯ ಉತ್ತರ ಪ್ರದೇಶ. ಇವತ್ತು ಇದನ್ನೇ ಇತರೆ ರಾಜ್ಯಗಳೂ ಸಹ ಅನುಸರಿಸುತ್ತಿವೆ. ಅವರೆಲ್ಲಾ ನಮ್ಮಂತೆ ಬಜೆಟ್‌ ಹಣದಲ್ಲಿಯೇ ಸಾಲ ಮನ್ನಾ ಮಾಡಬೇಕೇ ಹೊರತು ಬ್ಯಾಂಕ್‌ಗಳ ಮೊರೆ ಹೋಗಬಾರದು.

ಇತ್ತೀಚೆಗೆ 3 ರಾಜ್ಯದಲ್ಲಿ ಬಿಜೆಪಿ ಸೋತಿತು. ನೀವಿದನ್ನು ಹೇಗೆ ನೋಡುತ್ತೀರಿ?

ಪ್ರಜಾಪ್ರಭುತ್ವದಲ್ಲಿ ಸೋಲಿಗೆ ಮತ್ತು ಗೆಲುವಿಗೆ ತನ್ನದೇ ಆದ ಮಹತ್ವವಿದೆ. ಗೆದ್ದೆವೆಂದು ಅಹಂಕಾರ ಪಡುವುದು ಬೇಡ, ಸೋತೆವೆಂದು ನಿರಾಶರಾಗುವುದೂ ಬೇಡ. ಬಿಜೆಪಿ ಜನರ ಆಯ್ಕೆಯನ್ನು ಸ್ವೀಕರಿಸಿದೆ. ಅದಕ್ಕೆ ಕಾರಣವೇನೆಂದು ಪರಾಮರ್ಶಿಸಿಕೊಂಡಿದ್ದೇವೆ.

ಬಿಜೆಪಿಯ ಸೋಲಿಗೆ ಕಾರಣ ಏನಿರಬಹುದು?

ಮಧ್ಯಪ್ರದೇಶದಲ್ಲಿ ಬಿಜೆಪಿ 15 ವರ್ಷಗಳಿಂದ ಅಧಿಕಾರದಲ್ಲಿತ್ತು. ಆದರೂ ವೋಟ್‌ ಶೇರ್‌ ಕಾಂಗ್ರೆಸ್‌ಗಿಂತ ನಮ್ಮದೇ ಹೆಚ್ಚಿದೆ. ಬಿಜೆಪಿಗೆ ಶೇ.41 ಮತ ದೊರೆತಿದ್ದರೆ, ಕಾಂಗ್ರೆಸ್‌ ಶೇ.40 ಮತ ಪಡೆದಿದೆ. ರಾಜಸ್ಥಾನದಲ್ಲಿ ವಿಶ್ಲೇಷಕರು, ಸಮೀಕ್ಷೆಗಳು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ.

ಆದರೆ ಛತ್ತೀಸ್‌ಗಢದ ಸೋಲು ನಮಗೆ ಆಘಾತ ಮೂಡಿಸಿತ್ತು. ಕಾಂಗ್ರೆಸ್‌ ಸುಳ್ಳು ಪ್ರಚಾರ ಮಾಡುತ್ತಿದೆ. ಅದೆಲ್ಲವನ್ನೂ ಒಂದಾದ ಮೇಲೊಂದರಂತೆ ಹೊರಗೆಳೆಯುತ್ತೇವೆ. ಈಗಾಗಲೇ ರಫೇಲ್‌ ಬಗೆಗಿನ ಕಾಂಗ್ರೆಸ್‌ ಆಪಾದನೆ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೀರಿ. ಅದರಂತೆ ದೇಶಾದ್ಯಂತ ಕೇಂದ್ರ ಸರ್ಕಾರ ಸಾಲ ಮನ್ನಾದ ಭರವಸೆ ನೀಡಬೇಕೆ?

ಕೃಷಿ ಸಾಲಮನ್ನಾ ಉತ್ತರ ಪ್ರದೇಶವನ್ನು 15 ವರ್ಷ ಆಳಿದ ಎಸ್‌ಪಿ ಮತ್ತು ಬಿಎಸ್‌ಪಿ ಸರ್ಕಾರಗಳ ಅಜೆಂಡಾ ಆಗಿರಲಿಲ್ಲ. ಅವರಿಗೆ ಯಾವ ಯೋಜನೆ ಜಾರಿ ಮಾಡಬೇಕೆಂಬ ಅರಿವೇ ಇರಲಿಲ್ಲ. ರೈತರ ಆದಾಯವನ್ನು ಹೇಗೆ ದ್ವಿಗುಣಗೊಳಿಸಬೇಕೆಂಬುದೂ ಅವರಿಗೆ ಗೊತ್ತಿರಲಿಲ್ಲ. 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಭೂ ಆರೋಗ್ಯ ಕಾರ್ಡ್‌ ಜಾರಿ ಮಾಡಿದೆವು. ಅದಕ್ಕೂ ಮೊದಲು ಮಧ್ಯವರ್ತಿಗಳು ಮತ್ತು ಏಜೆಂಟರುಗಳೇ ರೈತರ ಹಣ ಕಬಳಿಸುತ್ತಿದ್ದರು.

ನಿಮಗೆ ಗೊತ್ತಾ, 2012ರಿಂದ 17ರವರೆಗೆ ಕಬ್ಬು ಬೆಳೆಗಾರರು ಬಾಕಿಯನ್ನೇ ಪಡೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಅಗತ್ಯವಾಗಿತ್ತು. ಹಾಗಾಗಿ ಸಾಲ ಮನ್ನಾ ಮಾಡಿದೆವು. ಅದಕ್ಕೆ ಹಣ ಹೊಂದಿಸಲು ಸರ್ಕಾರದ ದುಂದುವೆಚ್ಚಗಳನ್ನು ಕಡಿಮೆ ಮಾಡಿದೆವು, ಯೋಜನೆಗಳಲ್ಲಿನ ಅಕ್ರಮಗಳನ್ನು ನಿಲ್ಲಿಸಿದೆವು. ಆ ಎಲ್ಲಾ ಹಣವನ್ನು ರೈತರಿಗೆ ವರ್ಗಾಯಿಸಿದೆವು. ಹಣ ನೇರವಾಗಿ ರೈತರ ಬ್ಯಾಂಕ್‌ ಖಾತೆ ಸೇರಿತು.

ಸಾಲ ಮನ್ನಾದಿಂದ ಇತರೆ ಯೋಜನೆಗಳ ಮೇಲೆ ದುಷ್ಪರಿಣಾಮ ಉಂಟಾಗಿಲ್ಲವೇ?

ನಮ್ಮ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅಡೆತಡೆ ಆಗಿಲ್ಲ. ಇವತ್ತು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ 24 ಗಂಟೆ ವಿದ್ಯುತ್‌ ಸೌಲಭ್ಯವಿದೆ. ಗ್ರಾಮೀಣ ಪ್ರದೇಶಗಳು ಕನಿಷ್ಠ 18 ಗಂಟೆ ವಿದ್ಯುತ್‌ ಪಡೆಯುತ್ತಿವೆ. ಇನ್ನು ಶೈಕ್ಷಣಿಕವಾಗಿ ವಿದ್ಯಾರ್ಥಿವೇತನ ಪಡೆಯುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಸಂಖ್ಯೆ 12 ಲಕ್ಷದಿಂದ 21 ಲಕ್ಷಕ್ಕೆ ಏರಿಕೆಯಾಗಿದೆ. ಒಬಿಸಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ.

ಹಲವು ಮೆಡಿಕಲ್‌ ಕಾಲೇಜುಗಳಿಗೆ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಅಧಿಕಾರಕ್ಕೆ ಬಂದ 18 ತಿಂಗಳೊಳಗಾಗಿ ನಾನು ಶಂಕುಸ್ಥಾಪನೆ ಮಾಡಿದ್ದೇನೆ. ಸ್ವಾತಂತ್ರ್ಯಾನಂತರದ ಬಳಿಕ ಇಲ್ಲಿಯವರೆಗೆ ಆಗದ್ದನ್ನು ನಾನು ಮಾಡಿದ್ದೇನೆ. ಅಲ್ಲದೆ ನಾವು ಆಹಾರ ಸಂಗ್ರಹಣಾ ನೀತಿಯನ್ನೂ ಜಾರಿ ಮಾಡಿದ್ದೇವೆ. ಸಮಾಜವಾದಿ ಪಕ್ಷವಿದ್ದಾಗ ಕೇವಲ 5 ಲಕ್ಷ ಟನ್‌ ಗೋದಿ ಸಂಗ್ರಹಿಸುವ ವ್ಯವಸ್ಥೆ ಇತ್ತು. ನಮ್ಮ ಸರ್ಕಾರ 37 ಲಕ್ಷ ಟನ್‌ ಪಡೆಯುತ್ತಿದೆ. ಜೊತೆಗೆ ಪ್ರತಿ ರೈತನಿಗೆ ಶೇ.10 ಬೋನಸ್‌ ನೀಡುತ್ತಿದೆ.

ಈ ಮೂಲಕ ಮಧ್ಯವರ್ತಿಗಳಿಂದ ರೈತರನ್ನು ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಾನು ಹೇಳಲು ಹೊರಟಿದ್ದೇನೆಂದರೆ, ಸಾಲಮನ್ನಾ ಈ ಯಾವುದೇ ಯೋಜನೆಗಳಿಗೆ ತಡೆಯಾಗಿಲ್ಲ. ಮತ್ತೊಂದು ವಿಷಯ ಎಂದರೆ ನಮ್ಮ ಬಜೆಟ್‌ನಲ್ಲೇ ಅದಕ್ಕೆ ಹಣ ಹೊಂದಿಸಿದ್ದೇವೆ. ಅದಕ್ಕಾಗಿ ಬ್ಯಾಂಕ್‌ಗಳ ಮೊರೆ ಹೋಗಿಲ್ಲ.

ಸಾಲ ಮನ್ನಾಕ್ಕೆ ಎಷ್ಟುಹಣ ಖರ್ಚು ಮಾಡಿದ್ದೀರಿ?

ಮೂರು ಹಂತಗಳಲ್ಲಿ ಅಂದಾಜು 36,000 ಕೋಟಿ ಖರ್ಚಾಗಿದೆ. ಆ ಮೂಲಕ ಯಶಸ್ವಿಯಾಗಿ ಸಾಲಮನ್ನಾ ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಉತ್ತರ ಪ್ರದೇಶ. ಇವತ್ತು ಇದನ್ನೇ ಇತರೆ ರಾಜ್ಯಗಳೂ ಸಹ ಅನುಸರಿಸುತ್ತಿವೆ. ಅವರೆಲ್ಲಾ ತಮ್ಮ ಬಜೆಟ್‌ ಹಣದಲ್ಲಿಯೇ ಸಾಲಮನ್ನಾ ಮಾಡಬೇಕೇ ಹೊರತು ಬ್ಯಾಂಕ್‌ಗಳ ಮೊರೆ ಹೋಗಬಾರದು.

ಬುಲಂದ್‌ಶಹರದಲ್ಲಿ ಗೋ ರಕ್ಷಣೆ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏಕೆ ನಿಮ್ಮ ನಿಯಂತ್ರಣಕ್ಕೆ ಸಿಗುತ್ತಿಲ್ಲ?

ಅದೊಂದು ಆಕಸ್ಮಿಕ ಘಟನೆ. ಅದರ ಬಗ್ಗೆ ಈಗ ಸ್ಪಷ್ಟಪಡಿಸುತ್ತೇನೆ; ಆ ಘಟನೆ ಹಿಂದೆ ಏನೋ ಪಿತೂರಿ ಇತ್ತು. ಸಂಘರ್ಷ ಸೃಷ್ಟಿಸಿ ರಾಜ್ಯದಲ್ಲಿ ಹಿಂಸಾಚಾರ ಹುಟ್ಟುಹಾಕುವ ಉದ್ದೇಶದಿಂದ ನಡೆಸಿದ ಪಿತೂರಿ ಅದು. ಪಿತೂರಿಯಲ್ಲಿ ಪಾಲ್ಗೊಂಡವರೆಲ್ಲರನ್ನೂ ಬಂಧಿಸಲಾಗಿದೆ.

ಸರ್ಕಾರದ ಕಾರ್ಯಕ್ಷಮತೆಯನ್ನು ಸಹಿಸದವರು ಇಂಥ ಕೆಲಸ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ 15 ವರ್ಷ ಹಿಂದಿಗಿಂತ ಈಗ ಸಾಕಷ್ಟುಕಾನೂನು ವ್ಯವಸ್ಥೆ ಸುಧಾರಿಸಿದೆ. ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ.

ಆ ಘಟನೆ ನಂತರ ನಿಮ್ಮ ಬಗ್ಗೆ ಟೀಕೆಗಳು ಕೇಳಿಬಂದವು. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಹೀಗೆ ಹೇಳುವ ಬುದ್ಧಿಜೀವಿಗಳು ಯಾರು? ಅವರೇನು ಐಎಎಸ್‌ ಆಫೀಸರ್‌ಗಳೇ? ಅವರೆಲ್ಲಾ ಬೇರೆ ಕೆಲಸ ಇಲ್ಲದವರು. ಕಾಶ್ಮೀರವನ್ನು ಭಾರತದಿಂದ ಬೇರೆ ಮಾಡುವ ಮಾತನಾಡುವ ಜನರು. ಹಾಗಾಗಿ ಅವರೆಲ್ಲಾ ನನ್ನ ವಿರುದ್ಧವೇ ಯಾವಾಗಲೂ ಮಾತನಾಡುತ್ತಾರೆ.

ತೀರಾ ಹಿಂದುಳಿದ ಜಾತಿಗಳಲ್ಲಿ ಮತ್ತೆ ವರ್ಗೀಕರಣ ಮಾಡಿ ಮೀಸಲಾತಿ ಒದಗಿಸುವ ಬಗ್ಗೆ ಉತ್ತರ ಪ್ರದೇಶದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ನೀವು ಅದರ ಪರವಾಗಿದ್ದೀರಾ?

ಆ ವರದಿ ಇನ್ನೂ ನನ್ನ ಬಳಿ ಬಂದಿಲ್ಲ. ಅದು ಸಂಬಂಧಪಟ್ಟಇಲಾಖೆಗೆ ಹೋಗಿದೆ. ಅದೇ ಈ ಬಗ್ಗೆ ನಿರ್ಣಯಿಸುತ್ತದೆ. ಅನಂತರ ನಾವು ಈ ಬಗ್ಗೆ ಯೋಚಿಸುತ್ತೇವೆ. ಒಂದು ವೇಳೆ ಅವರು 2002ರ ವರದಿಯನ್ನೇ ಮತ್ತೆ ನೀಡಿದರೆ ನಾನು ಅದನ್ನು ಪರಾಮರ್ಶಿಸಬೇಕಾಗುತ್ತದೆ. ಅದಕ್ಕೆ ಕೋರ್ಟ್‌ ಈಗಾಗಲೇ ತಡೆಯಾಜ್ಞೆ ನೀಡಿದೆ. ಅದನ್ನೇ ಭಿನ್ನ ಶಿಫಾರಸಿನೊಂದಿಗೆ ಇತ್ತೀಚಿನ ದತ್ತಾಂಶಗಳೊಂದಿಗೆ ಕಳುಹಿಸಿದರೆ ನಾವು ಮುಂದಿನದನ್ನು ಯೋಚಿಸಬಹುದು. ಇಲ್ಲದಿದ್ದರೆ ಅದು ಕೋರ್ಟ್‌ನಲ್ಲಿ ಬಿದ್ದುಹೋಗುತ್ತದೆ. ವರದಿ ಮಾತ್ರವಲ್ಲ, ಜನ ಏನು ಹೇಳುತ್ತಾರೆ ಎಂಬುದು ನಮ್ಮ ಆದ್ಯತೆ.

ಅಲಹಾಬಾದ್‌ ಮತ್ತು ಫೈಜಾಬಾದ್‌ ಹೆಸರು ಬದಲಿಸಿದ್ದೇಕೆ?

ಜಿಲ್ಲೆಯ ಹೆಸರುಗಳು ಆ ಪ್ರದೇಶವನ್ನು ದೇಶ ಮತ್ತು ಜಗತ್ತು ಹೇಗೆ ಗುರುತಿಸಿದೆ ಎಂಬ ಆಧಾರದ ಮೇಲಿರಬೇಕು. ಅಲ್ಲದೆ ಹೆಸರು ಬದಲಿಸುವಂತೆ ದೀರ್ಘಕಾಲದಿಂದ ವ್ಯಾಪಕ ಬೇಡಿಕೆ ಇತ್ತು. ಹಾಗಾಗಿ ಜನರನ್ನು ಅವರ ಸಾಂಸ್ಕೃತಿಕ ಪರಂಪರೆ ಮತ್ತು ಅದ್ಭುತ ಐತಿಹಾಸಿಕ ಕ್ಷಣಗಳೊಂದಿಗೆ ಸಂಪರ್ಕಿಸುವ ಪ್ರಯತ್ನ ಎಂದು ಭಾವಿಸಿ ಹೆಸರು ಬದಲಿಸಿದ್ದೇವೆ.

ಬೃಹತ್‌ ರಾಮ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆಯೇ?

ಹೌದು ಕೆಲಸ ಆಗುತ್ತಿದೆ. ಕಾರ್ಯಸಾಧ್ಯತೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆ ಪ್ರದೇಶದ ಮಣ್ಣಿನ ಸಾಮರ್ಥ್ಯದ ಬಗ್ಗೆ ತಪಾಸಣೆ ನಡೆಯುತ್ತಿದೆ. ಅದರ ವರದಿ ಆಧಾರದ ಮೇಲೆ ಕೆಲಸ ಪ್ರಾರಂಭವಾಗುತ್ತದೆ.

ರಾಮ ಮಂದಿರ ನಿರ್ಮಾಣದ ಕತೆ ಏನು?

ರಾಮ ಮಂದಿರ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಇದೊಂದು ಬಹುಸಂಖ್ಯಾತ ಸಾರ್ವಜನಿಕರ ಭಾವನೆಯ ಸಂಕೇತ. ಇದಕ್ಕೆ ಗೌರವ ಸಲ್ಲಲೇಬೇಕು. ದೇಶದ ಅಭಿವೃದ್ಧಿ ದೃಷ್ಟಿಯಿಂದ ಈ ವಿವಾದ ಬೇಗನೆ ಬಗೆಹರಿಯಬೇಕು ಎಂದು ಸುಪ್ರೀಂಕೋರ್ಟನ್ನು ಕೇಳಿಕೊಂಡಿದ್ದೇವೆ. ಖಂಡಿತವಾಗಿಯೂ ಆ ಜಾಗದಲ್ಲಿ ರಾಮಮಂದಿರ ನಿರ್ಮಾಣ ಆಗೇ ಆಗುತ್ತದೆ.

ಜನರು ಯಾಕೆ ಯೋಗಿ ಆದಿತ್ಯನಾಥ್‌ ಬಗ್ಗೆ ಭಯಪಡುತ್ತಾರೆ?

ನನ್ನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಜನರ ಕಲ್ಯಾಣ ಮತ್ತು ಉತ್ತಮ ಆಡಳಿತ ನೀಡುವುದೇ ನನ್ನ ಕೆಲಸ. ಸ್ವಾತಂತ್ರ್ಯಾನಂತರದಲ್ಲಿ ಅಭಿವೃದ್ಧಿಯನ್ನೇ ಕಾಣದ ಅತಿದೊಡ್ಡ ಜನರ ಗುಂಪು ನಮ್ಮ ದೇಶದಲ್ಲಿದೆ. ಅವರು ಬರೀ ಖಾಲಿ ಸ್ಲೋಗನ್‌ಗಳು ಮತ್ತು ಸುಳ್ಳು ಭರವಸೆಯನ್ನೇ ಕೇಳುತ್ತಾ ಬಂದಿದ್ದಾರೆ.

ನಾವು ಅವರನ್ನೂ ಅಭಿವೃದ್ಧಿ ಯೋಜನೆಗಳಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಉತ್ತರ ಪ್ರದೇಶದಲ್ಲಿ 18 ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 11 ಲಕ್ಷ ಮನೆಗಳು, ನಗರ ಪ್ರದೇಶದಲ್ಲಿ 12 ಲಕ್ಷ ಮನೆಗಳು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಾಣವಾಗಿವೆ. ಸ್ವಚ್ಛ ಭಾರತ ಶೇ.100ರಷ್ಟುಪೂರ್ಣಗೊಂಡಿದೆ.

- ಸಂದರ್ಶನ, ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ 

 

Follow Us:
Download App:
  • android
  • ios