Asianet Suvarna News Asianet Suvarna News

ಅಳಿವಿನಂಚಿಗೆ ಸರಿದ ದಶಕಗಳ ಹಿಂದಿನ ಉಳುವೆ ಪಕ್ಷಿಧಾಮ

ಶೃಂಗೇರಿ ಸಮೀಪದ ಕಾವಡಿ ಗ್ರಾಮದ ಉಳುವೆ ಪಕ್ಷಿಧಾಮದ  ಹೆಸರಿಗೆ ಮಾತ್ರ ಪಕ್ಷಿಧಾಮವಾಗಿ ಉಳಿದುಕೊಂಡಿದೆ. ಕಾರಣ ಪಕ್ಷಿಗಳು ನೆಲೆ ನಿಲ್ಲಲು ಅಗತ್ಯ ಸೌಲಭ್ಯಗಳು, ಪೂರಕವಾದ ವಾತಾವರಣವೇ ಇಲ್ಲಿಲ್ಲ. ಆದ್ದರಿಂದ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಲುಪಿದೆ.

Very poor Maintenance Of Bird sanctuary

ಶೃಂಗೇರಿ (ನ.20): ಒಂದು ಕಾಲದಲ್ಲಿ ಇಲ್ಲಿ ಪಕ್ಷಿಗಳ ಕಲರವ ಕಿವಿಗಪ್ಪಳಿಸುತ್ತಿತ್ತು. ನಿಸರ್ಗದತ್ತ ರಮಣೀಯ ಸ್ಥಳ,ಆಹ್ಲಾದಕರ ವಾತಾವರಣ. ಎಲ್ಲವೂ ಪಕ್ಷಿಪ್ರೇಮಿಗಳನ್ನು, ಪ್ರವಾಸಿಗರನ್ನು ಸೆಳೆಯುತ್ತಿತ್ತು. ಬೆಳ್ಳಕ್ಕಿಗಳ ಹಿಂಡೆ ಇಲ್ಲಿ ಅದಿಪತ್ಯ ಸ್ಥಾಪಿಸಿತ್ತು. ಆದರಿಂದು ಪಕ್ಷಿಗಳ ಕಲರವ ಇಲ್ಲ, ಆಹ್ಲಾದಕರ ವಾತಾವರಣವೂ ಇಲ್ಲ. ಹೆಸರಿಗೆ ಮಾತ್ರ ಪಕ್ಷಿಧಾಮವಾಗಿ ಉಳಿದುಕೊಂಡಿದೆ. ಕಾರಣ ಪಕ್ಷಿಗಳು ನೆಲೆ ನಿಲ್ಲಲು ಅಗತ್ಯ ಸೌಲಭ್ಯಗಳು, ಪೂರಕವಾದ ವಾತಾವರಣವೇ ಇಲ್ಲಿಲ್ಲ.

ಇದು ಶೃಂಗೇರಿ ಸಮೀಪದ ಕಾವಡಿ ಗ್ರಾಮದ ಉಳುವೆ ಪಕ್ಷಿಧಾಮದ ಕಥೆ-ವ್ಯಥೆ. ರಂಗನತಿಟ್ಟು ಪಕ್ಷಿಧಾಮ, ಮಂಡಗೆದ್ದೆ ಪಕ್ಷಿಧಾಮ, ಗುಡವಿ ಪಕ್ಷಿಧಾಮಗಳ ಸಾಲಿನಲ್ಲಿ ಒಂದು ಕಾಲದಲ್ಲಿ ಈ ಉಳುವೆ ಪಕ್ಷಿಧಾಮವೂ ಸೇರಿತ್ತು. ಕಳೆದ ಮೂರು ದಶಕಗಳ ಹಿಂದೆ ತಾಲೂಕಿನ ಕಾವಡಿ ಗ್ರಾಮದ ಕೆರೆಯಲ್ಲಿ ಸಾವಿರಾರು ಪಕ್ಷಿಗಳು ಬಂದು ಗೂಡು ಕಟ್ಟಿ ವಂಶಾಭಿವೃದ್ಧಿ ಮಾಡಿಕೊಳ್ಳುತ್ತಿದ್ದವು. ಬೆಳಗ್ಗೆ ಹಾಗೂ ಸಂಜೆ ಇಲ್ಲಿ ಪಕ್ಷಿಗಳದ್ದೆ ರಾಜ್ಯಭಾರವಾಗಿತ್ತು. ಹಕ್ಕಿಗಳ ಚಿಲಿಪಿಲಿ ಇಂಚರ ಕೇಳುವುದು ಮನಸ್ಸಿಗೆ ಹಿತವಾಗುತ್ತಿತ್ತು.

ಅರಣ್ಯ ಇಲಾಖೆ ಈ ಪಕ್ಷಿಧಾಮದ ಪರಿಸರಕ್ಕೆ ಹಾನಿಯಾಗದಂತೆ ತಂತಿ ಬೇಲಿ ನಿರ್ಮಿಸಿ ವೀಕ್ಷಣಾ ಗೋಪುರ ನಿರ್ಮಿಸಿ ಪಕ್ಷಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದರು. ರಂಗನತಿಟ್ಟು, ಮಂಡಗದ್ದೆ, ಗುಡುವಿಯಂತಹ ದೂರದಲ್ಲಿರುವ ಪಕ್ಷಿಧಾಮಗಳಿಗೆ ಹೋಗಲು ಸಾಧ್ಯವಾಗದ ಪಕ್ಷಿ ಪ್ರೇಮಿಗಳು, ಶಾಲಾ ವಿದ್ಯಾರ್ಥಿಗಳು ಈ ಪಕ್ಷಿಧಾಮಕ್ಕೆ ಬೇಟಿ ನೀಡಿ ಪಕ್ಷಿಗಳ ಕಲರವ ಕಂಡು ಆನಂದಪಡುತ್ತಿದ್ದರು. ಸ್ಥಳೀಯವಾಗಿ ಇದೊಂದು ಪಕ್ಷಿಧಾಮವಾಗಿ ಪ್ರವಾಸಿ ಸ್ಥಳವೂ ಆಗಿತ್ತು. ಹಂತಹಂತವಾಗಿ ಇಲ್ಲಿಗೆ ಬರುತ್ತಿರುವ ವೀಕ್ಷಕರ ಸಂಖ್ಯೆಯೂ ಹೆಚ್ಚತೊಡಗಿತ್ತು.

ವಿನಾಶದಂಚಿನತ್ತ ಪಕ್ಷಿಧಾಮ: ಪ್ರವಾಸೋದ್ಯಮ ಇಲಾಖೆ ಇಂತಹ ಒಂದು ಪಕ್ಷಿಧಾಮದ ಬಗ್ಗೆ ಗಮನ ಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ಪಕ್ಷಿಗಳಿಗಾಗಲೀ, ಪಕ್ಷಿವೀಕ್ಷಕರಿಗಾಗಲೀ ಸೌಲಭ್ಯಗಳು ಅಗತ್ಯವಿತ್ತು. ಪಕ್ಷಿಗಳು ನೆಲೆ ಕಂಡುಕೊಳ್ಳಲು ಪೂರಕ ವಾತಾವರಣ ನಿರ್ಮಾಣವಾದಂತೆ ವರ್ಷಕ್ಕೆ ಪಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿತ್ತು. ಅದೇ ರೀತಿ ಪಕ್ಷಿಗಳ ಸಂಖ್ಯೆ ಹೆಚ್ಚಿದಂತೆ ಪಕ್ಷಿವೀಕ್ಷಕರ ಸಂಖ್ಯೆಯೂ ಹೆಚ್ಚುತ್ತಿತ್ತು. ಆದರೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಾ, ಇಲ್ಲಿಗೆ ಬರುವ ಪಕ್ಷಿ ವೀಕ್ಷಕರ ಸಂಖ್ಯೆಯೂ ಕಡಿಮೆಯಾಗತೊಡಗಿತು. ಕ್ರಮೇಣವಾಗಿ ಈ ಪಕ್ಷಿಧಾಮ ವಿನಾಶದ ಅಂಚಿಗೆ ತಲುಪಿತು.

ಶಿಥಿಲಗೊಂಡ ಪಕ್ಷಿ ವೀಕ್ಷಣಾ ಗೋಪುರ : ಪಕ್ಷಿ ಪ್ರೇಮಿಗಳಿಗಾಗಿ ಸರ್ಕಾರ ಸುಮಾರು ಹತ್ತು ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ್ದ ಇಲ್ಲಿನ ವೀಕ್ಷಣಾ ಗೋಪುರ ಇದೀಗ ಶಿಥಿಲಾವಸ್ಥೆಗೆ ತಲುಪಿ ನಾಶದಂಚಿಗೆ ತಲುಪಿದೆ. ಪಕ್ಷಿಗಳು ನೆಲೆ ನಿಲ್ಲಲು ಅಗತ್ಯ ಸೌಲಭ್ಯವಿಲ್ಲ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಬೇಕಿದೆ. ಅರಣ್ಯ ಇಲಾಖೆಯವರು ಇಲ್ಲಿ ಕಾಡು ಜಾತಿಯ ಗಿಡಗಳನ್ನು, ಹಣ್ಣು ಹಂಪಲುಗಳ ಗಿಡಗಳನ್ನು ನೆಟ್ಟು ಬೆಳೆಸುವತ್ತ ಗಮನ ಹರಿಸಬೇಕಿದೆ. ಸರ್ಕಾರ, ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಈ ಪಕ್ಷಿಧಾಮಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕಿದೆ. ಈ ಪಕ್ಷಿಧಾಮಕ್ಕೆ ಪುನಶ್ಚೇತನ ಕಲ್ಪಿಸಿಕೊಡಬೇಕಿದೆ.

(ಸಾಂದರ್ಭಿಕ ಚಿತ್ರ)

ವರದಿ: ನೆಮ್ಮಾರ್ ಅಬೂಬಕರ್ ಶೃಂಗೇರಿ - ಕನ್ನಡಪ್ರಭ

Follow Us:
Download App:
  • android
  • ios