Asianet Suvarna News Asianet Suvarna News

ಬೈಕ್‌ಗಾಗಿ 22 ಬಾರಿ ಇರಿದು ಭೀಕರ ಹತ್ಯೆ!

ಕುಡಿದ ಅಮಲಿನಲ್ಲಿ ಬೆಂಗಳೂರಿನಲ್ಲಿ ವಾಹನ ಕಳ್ಳನೊಬ್ಬನನ್ನು ಸ್ನೇಹಿತರೇ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

vehicle Thief Killed By his Friends in Bangalore
Author
Bengaluru, First Published Apr 4, 2019, 8:19 AM IST

ಬೆಂಗಳೂರು :  ಮದ್ಯದ ಅಮಲಿನಲ್ಲಿದ್ದ ಸ್ನೇಹಿತರ ಮಧ್ಯೆ ಉಂಟಾದ ಜಗಳದಲ್ಲಿ ಕುಖ್ಯಾತ ವಾಹನ ಕಳ್ಳನೊಬ್ಬನನ್ನು 22 ಬಾರಿ ಇರಿದು ಕೊಲೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ರಾಜಗೋಪಾಲ ನಗರದ ಕುಖ್ಯಾತ ಕಳ್ಳ ನರಸಿಂಹ ಅಲಿಯಾಸ್‌ ಚೌಕಿ (25) ಕೊಲೆಯಾದ ಡಕಾಯಿತ. ಕ್ಷುಲ್ಲಕ ಕಾರಣಕ್ಕೆ ರಾಜಗೋಪಾಲ ನಗರ ಸಮೀಪದ ಅನ್ನಪೂರ್ಣೇಶ್ವರಿ ನಗರ 2ನೇ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನರಸಿಂಹ ಅಲಿಯಾಸ್‌ ಚೌಕಿ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು 22 ಬಾರಿ ಚಾಕುವಿನಿಂದ ಮನಬಂದಂತೆ ಇರಿದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ನಂದಿನಿ ಲೇಔಟ್‌ನಲ್ಲಿ ಸ್ನೇಹಿತರ ಜತೆ ಸಿಕೆಎಂ ಬಾರ್‌ನಲ್ಲಿ ಗೆಳೆಯರ ಜತೆ ಮದ್ಯ ಸೇವಿಸಿ ನರಸಿಂಹ, ಅಲ್ಲಿಂದ ರಾತ್ರಿ 11.30ರ ಸುಮಾರಿಗೆ ಮನೆಗೆ ಮರಳುವಾಗ ಈ ಹತ್ಯೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಡಕಾಯಿತನಾದ ಕಾರು ಚಾಲಕ :  ಮೃತ ನರಸಿಂಹ ತುರುವೆಕೆರೆ ತಾಲೂಕಿನವನಾಗಿದ್ದು, ಹಲವು ವರ್ಷಗಳಿಂದ ತನ್ನ ಪತ್ನಿ ಮತ್ತು ಮಕ್ಕಳ ಜತೆ ರಾಜಗೋಪಾಲನಗರದಲ್ಲಿ ನೆಲೆಸಿದ್ದ. ಮೊದಲು ಪುರುಷೋತ್ತಮ್‌ ಎಂಬುವವರ ಬಳಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ನರಸಿಂಹ, ಸುಲಭವಾಗಿ ಹಣ ಸಂಪಾದನೆಗೆ ದರೋಡೆ ಕೃತ್ಯಕ್ಕೆ ಇಳಿದ. ಚಾಲಕ ವೃತ್ತಿ ತೊರೆದ ಆತ ಕೊನೆಗೆ ವೃತ್ತಿಪರ ಕ್ರಿಮಿನಲ್‌ ಆಗಿ ರೂಪಾಂತರಗೊಂಡ. ಈ ಕೃತ್ಯಗಳ ಹಿನ್ನೆಲೆಯಲ್ಲಿ ನರಸಿಂಹನ ವಿರುದ್ಧ ಕೆಂಗೇರಿ, ರಾಜಗೋಪಾಲನಗರ ಹಾಗೂ ಹಿರಿಯೂರು ಠಾಣೆಗಳಲ್ಲಿ ವಿರುದ್ಧ ದರೋಡೆ ಪ್ರಕರಣಗಳು ದಾಖಲಾಗಿವೆ. ಈ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ.

ಎಂಟು ತಿಂಗಳ ಹಿಂದೆ ಹಿರಿಯೂರಿನ ಬಳಿ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿದರೋಡೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ ಆತ, ವಾರದ ಹಿಂದಷ್ಟೆಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದ ಖುಷಿಯಲ್ಲಿ ಗೆಳೆಯರಿಗೆ ಮಂಗಳವಾರ ತಾನೇ ಪಾರ್ಟಿ ಕೊಡಿಸಿದ್ದ. ಕಂಠ ಪೂರ್ತಿ ಕುಡಿದ ಬಳಿಕ ಇತ್ತೀಚಿಗೆ ಕಳವು ಮಾಡಿದ್ದ ಬೈಕ್‌ಗಳ ವಿಚಾರವಾಗಿ ನರಸಿಂಹನ ಜತೆ ಅವರು ಜಗಳ ತೆಗೆದಿದ್ದರು. ಆಗ ಬಾರ್‌ ಸಿಬ್ಬಂದಿ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಇದಾದ ಕೆಲವೇ ತಾಸಿನಲ್ಲಿ ನರಸಿಂಹನ ಹತ್ಯೆಯಾಗಿದೆ. ಈ ಕೊಲೆ ಬಳಿಕ ತಪ್ಪಿಸಿಕೊಂಡಿರುವ ಮೃತನ ಸ್ನೇಹಿತರ ಮೇಲೆ ಅನುಮಾನ ಮೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನ್ನಪೂರ್ಣೇಶ್ವರಿ ನಗರದಲ್ಲಿ ನರಸಿಂಹನ ಮೇಲೆ ಐವರು ದಾಳಿ ನಡೆಸಿದ್ದಾರೆ. ಮೊದಲು ಕುತ್ತಿಗೆಗೆ ಇರಿದಿರುವ ಹಂತಕರು, ಆನಂತರ ನರಸಿಂಹ ಕುಸಿದು ಬೀಳುತ್ತಿದ್ದಂತೆಯೇ ಹೊಟ್ಟೆಹಾಗೂ ಎದೆಗೆ ಮನಸೋ ಇಚ್ಛೆ ಇರಿದಿದ್ದಾರೆ. ಈ ದೃಶ್ಯ ಸಮೀಪದ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ. ದೇಹದ 22 ಕಡೆಗೆ ಇರಿದಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಹೇಳಿದ್ದಾರೆ.

ಚಿಲ್ಲರೆ ವಿಚಾರಕ್ಕೆ ಸ್ನೇಹಿತನ ಕೊಲೆ!

ಕುಡಿದ ಮತ್ತಿನಲ್ಲಿ ಚಿಲ್ಲರೆ ವಿಚಾರಕ್ಕೆ ತನ್ನ ಸ್ನೇಹಿತನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೂಲಿ ಕಾರ್ಮಿಕನೊಬ್ಬನನ್ನು ಕೊಂದಿರುವ ಮತ್ತೊಂದು ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ಜಾಲಹಳ್ಳಿ ಸಮೀಪದ ರಾಮಚಂದ್ರಾಪುರ ನಿವಾಸಿ ಪ್ರತಾಪ್‌ ಅಲಿಯಾಸ್‌ ಬ್ಲಡ್‌ ಬಾಬು (36) ಹತ್ಯೆಯಾದ ದುರ್ದೈವಿ. ಈ ಸಂಬಂಧ ಮೃತನ ಸ್ನೇಹಿತ ಶ್ರೀನಿವಾಸ್‌ ಮೂರ್ತಿ ಅಲಿಯಾಸ್‌ ಚಿನ್ನುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಶಕಗಳಿಂದ ಗೆಳೆಯರಾಗಿದ್ದ ಪ್ರತಾಪ್‌ ಹಾಗೂ ಶ್ರೀನಿವಾಸ್‌ ಅವರು, ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಪ್ರತಾಪ್‌ ಮದ್ಯ ತರುವಂತೆ ಗೆಳೆಯನಿಗೆ 500 ಕೊಟ್ಟು ಕಳುಹಿಸಿದ್ದ. ಅದರಂತೆ ಮನೆ ಹತ್ತಿರದ ಬಾರ್‌ಗೆ ಹೋಗಿ ಮದ್ಯ ತಂದಿದ್ದ ಶ್ರೀನಿವಾಸ್‌, ಗೆಳೆಯನಿಗೆ ಉಳಿಕೆ ಹಣ ಮರಳಿಸಿರಲಿಲ್ಲ. ನಂತರ ಇಬ್ಬರು ಒಟ್ಟಿಗೆ ಪಾನಮತ್ತರಾಗಿದ್ದರು. ಮದ್ಯ ಸೇವಿಸಿದ ಮೇಲೆ ಪ್ರತಾಪ್‌ ಚಿಲ್ಲಗೆ ಕೊಡುವಂತೆ ಕೇಳಿದ್ದ. ಆಗ ಚಿಲ್ಲರೆ ಉಳಿಯಲಿಲ್ಲ ಎಂದು ಆತ ಉತ್ತರಿಸಿದ್ದ. ಇದೇ ವಿಷಯವಾಗಿ ಇಬ್ಬರ ಮಾತಿಗೆ ಮಾತು ಬೆಳೆದಿದೆ.

ಈ ಹಂತದಲ್ಲಿ ಗೆಳೆಯನ ಮುಖಕ್ಕೆ ಶ್ರೀನಿವಾಸ್‌ ಮುಷ್ಠಿಯಿಂದ ಗುದ್ದಿದ್ದ. ಕುಸಿದು ಬಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಸಂಜೆವರೆಗೆ ಚೆನ್ನಾಗಿಯೇ ಇದ್ದ ಪ್ರತಾಪ್‌, ರಾತ್ರಿ ಮತ್ತೆ ಮೂಗಿನಿಂದ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾನೆ ಎಂದು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಿವರಿಸಿದ್ದಾರೆ.

ಹಲವು ದಿನಗಳಿಂದ ಹೀಮೋಫಿಲಿಯಾ (ರಕ್ತಸ್ರಾವದ ಸಮಸ್ಯೆ) ಕಾಯಿಲೆಯಿಂದ ಪ್ರತಾಪ್‌ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ನಮ್ಮೊಂದಿಗೆ ಮಾತನಾಡಿದ್ದ ಆತ, ‘ನನ್ನ ಗೆಳೆಯ ಶ್ರೀನಿವಾಸ್‌. ಸ್ನೇಹದಲ್ಲೇ ನಮ್ಮಿಬ್ಬರ ನಡುವೆ ಜಗಳ ಸಾಮಾನ್ಯವಾಗಿತ್ತು. ಹೀಗಾಗಿ ಆತನ ವಿರುದ್ಧ ಯಾವುದೇ ಕೇಸ್‌ ಮಾಡ್ಬೇಡಿ ಸರ್‌’ ಎಂದಿದ್ದ. ಆದರೆ ರಾತ್ರಿ ಪ್ರತಾಪ್‌ ಮೃತಪ್ಟಟ ಬಳಿಕ ಆತನ ಪತ್ನಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Follow Us:
Download App:
  • android
  • ios