Asianet Suvarna News Asianet Suvarna News

ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ದಿಢೀರ್ ಹೆಚ್ಚಾಗಲು ಕಾರಣವೇನು?

ಕಾಶ್ಮೀರದಲ್ಲಿ ಹೆಚ್ಚಾಗುತ್ತಿದೆ ಭಯೋತ್ಪಾದಕ ಚಟುವಟಿಕೆ | ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಬಾರಿ ಭಯೋತ್ಪಾದಕರು ಭಾರತದ ಮೇಲೆ ಆಕ್ರಮಣಗೈದಿದ್ದಾರೆ ಎಂಬ ಅಂಕಿ ಅಂಶವನ್ನು ಗೃಹ ಇಲಾಖೆ ಹೊರಗೆಡವಿದೆ. 

The reason behind Terrorism Harboring more in Jammu and Kashmir
Author
Bengaluru, First Published Dec 10, 2018, 2:17 PM IST

ಶ್ರೀನಗರ (ಡಿ. 10): ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ನಿತ್ಯ ಸಾಮಾನ್ಯ. ಆದರೆ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಬಾರಿ ಭಯೋತ್ಪಾದಕರು ಭಾರತದ ಮೇಲೆ ಆಕ್ರಮಣ ಗೈದಿದ್ದಾರೆ ಎಂಬ ಅಂಕಿ ಅಂಶವನ್ನು ಗೃಹ ಇಲಾಖೆ ಹೊರಗೆಡವಿದೆ. ಜೊತೆಗೆ ಭಾರತೀಯ ಸೇನೆ ಈ ವರ್ಷ ಅತಿ ಹೆಚ್ಚು ಉಗ್ರರನ್ನು ಸದೆಬಡಿದು ಬಲಿ ಪಡೆದಿದೆ ಎಂತಲೂ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕಾಣಿವೆ ರಾಜ್ಯ ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಗೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ. 

2010 ರ ನಂತರ ಈ ವರ್ಷ ಅತಿ ಹೆಚ್ಚು ಉಗ್ರರ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೊಸತೇನೂ ಅಲ್ಲ. ಸ್ವಾತಂತ್ರ್ಯಾನಂತರದಲ್ಲಿ ಭಾರತೀಯ ಸೇನೆ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದ್ದರೂ ಪ್ರತಿ ದಿನ ಎಂಬಂತೆ ಉಗ್ರರ ದಾಳಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸುತ್ತದೆ. ಹೀಗೆ ಪ್ರತಿದಾಳಿ ಮಾಡಿದ ಸಂದರ್ಭದಲ್ಲಿ ಈ ವರ್ಷ 226 ಉಗ್ರರನ್ನು (ನಿನ್ನೆಯ 3 ಭಯೋತ್ಪಾದಕರ ಹತ್ಯೆಯನ್ನೂ ಸೇರಿಸಿ) ಭಾರತೀಯ ಸೇನೆ ಹತ್ಯೆ ಮಾಡಿದೆ.

ಕಳೆದ 8 ವರ್ಷದಲ್ಲೇ ಇದು ಹೆಚ್ಚು ಎಂದು ಗೃಹ ಇಲಾಖೆ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆ 2017 ರಲ್ಲಿ 213 ಇತ್ತು. ಗೃಹ ಇಲಾಖೆಯ ಮಾಹಿತಿ ಪ್ರಕಾರ 2010 ರಲ್ಲಿ ಮಾತ್ರ 232 ಭಯೋತ್ಪಾದಕರನ್ನು ಸದೆಬಡಿಯಲಾಗಿತ್ತು. ಅನಂತರದಲ್ಲಿ ಇಷ್ಟೊಂದು ಸಂಖ್ಯೆಯ ಭಯೋತ್ಪಾದಕರನ್ನು ಸೇನೆ ಹತ್ಯೆ ಮಾಡಿದ್ದು ಇದೇ ಮೊದಲು.

80 ದಿನದಲ್ಲಿ  81 ಉಗ್ರರ ಬಲಿ ಪಡೆದ ಭಾರತ ಸೇನೆ!

ಹತ್ಯೆಗೊಳಗಾದ ಉಗ್ರರ ಪೈಕಿ 81 ಉಗ್ರರನ್ನು 80 ದಿನದಲ್ಲಿ ಕೊಲ್ಲಲಾಗಿದೆಯಂತೆ. ಜೂನ್ 25 ರಿಂದ ಸೆಪ್ಟೆಂಬರ್ 14 ರವರೆಗೆ, 80 ದಿನಗಳ ಅಂತರದಲ್ಲಿಯೇ 51 ಉಗ್ರರ ಹತ್ಯೆ ಮಾಡಲಾಗಿದೆ. ಅಂತೆಯೇ ಸೆಪ್ಟೆಂಬರ್ 15 ರಿಂದ ಡಿಸೆಂಬರ್ 5 ರವರೆಗೆ 85 ಉಗ್ರರು ಸೇನಾ ದಾಳಿಗೆ ಪ್ರಾಣಬಿಟ್ಟಿದ್ದಾರೆ. ನವೆಂಬರ್ ತಿಂಗಳಿಂದೀಚೆಗೆ ಅತಿಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಜಮ್ಮುಕಾಶ್ಮೀರಲ್ಲಿ ಸ್ಥಳೀಯ ಚುನಾವಣೆಗಳು ಘೋಷಣೆಯಾದಾಗಿನಿಂದ ಉಗ್ರರ ಆಕ್ರಮಣ ಹೆಚ್ಚಾಗಿತ್ತು. ಆದರೆ ಚುನಾವಣೆಗಳಲ್ಲಿ ಯಾವುದೇ ಹಿಂಸಾತ್ಮಕ ಘಟನೆಗಳು ನಡೆಯದಂತೆ ಜಮ್ಮು-ಕಾಶ್ಮೀರ ಸರ್ಕಾರ ಸೂಕ್ತ ನಿಗಾ ವಹಿಸಿ ಸಾಕಷ್ಟು ಭದ್ರತಾ ಪಡೆಯನ್ನು ನಿಯೋಜಿಸಿತ್ತು. 

ಉಗ್ರರ ಅಟ್ಟಹಾಸಕ್ಕೆ  77 ಜನರು, 80 ಸೈನಿಕರೂ ಸಾವು

ಭಯೋತ್ಪಾದಕ ದಾಳಿಯಿಂದಾಗಿ ಕಾಶ್ಮೀರದ ಜನತೆ ಪ್ರತಿಕ್ಷಣ ಜೀವವನ್ನು ಕೈಯಲ್ಲಿ ಹಿಡಿದು ಬದುಕಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕಾಗಿ ಭಾರತೀಯ ಸೇನೆ ಭದ್ರತೆಗಾಗಿ ಸಾಕಷ್ಟು ಹಣವನ್ನೂ ಮೀಸಲಿಟ್ಟಿದೆ. ಇದರ ಹೊರತಾಗಿಯೂ ಉಗ್ರರು ಮತ್ತು ಸೇನೆಯ ಹೋರಾಟದಲ್ಲಿ ಅಮಾಯಕ ನಾಗರಿಕರು ಮತ್ತು ಸೈನಿಕರೂ ಬಲಿಯಾಗುತ್ತಿದ್ದಾರೆ. 2018 ರಲ್ಲಿಯೇ 77 ನಾಗರಿಕರು ಮತ್ತು 80 ಸೈನಿಕರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

ಕಳೆದ ವರ್ಷ 40 ನಾಗರಿಕರು ಬಲಿಯಾಗಿದ್ದು, ಈ ವರ್ಷ ಈ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಜೂನ್ 25 ರಿಂದ ಸೆಪ್ಟೆಂಬರ್ 14 ರವರೆಗೆ ಭದ್ರತಾ ಸಿಬ್ಬಂದಿ ಸೇರಿ ಎಂಟು ಮಂದಿ ಮೃತರಾಗಿದ್ದು, 216 ಮಂದಿ ಗಾಯಗೊಂಡಿದ್ದಾರೆ.

ಅಂತೆಯೇ ಸೆಪ್ಟೆಂಬರ್ 15 ರಿಂದ ಡಿಸೆಂಬರ್ ೫ರವರೆಗೆ 80 ದಿನಗಳ ಅಂತರದಲ್ಲಿ ಇಬ್ಬರು ಮಾತ್ರ ಅಸುನೀಗಿದ್ದು, 170 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

ಗವರ್ನರ್ ಆಡಳಿತದಲ್ಲೇ ಟಾಪ್ ಉಗ್ರರು ನಿರ್ನಾಮ

ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಮುರಿದು ಬಿದ್ದು ಸರ್ಕಾರ ಪತನವಾದ ಬಳಿಕ ಸದ್ಯ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಇದೆ. ವಿಶೇಷ ಎಂದರೆ ಜೂನ್ 19 ರಿಂದ ರಾಜ್ಯಪಾಲರ ಆಡಳಿತ ಪ್ರಾರಂಭವಾಗಿದ್ದು ಅನಂತರದಲ್ಲಿ ಅನೇಕ ಉಗ್ರರು ಹತ್ಯೆಯಾಗಿದ್ದಾರೆ. ಈ ಅವಧಿಯಲ್ಲಿ ಲಷ್ಕರ್ ಕಮಾಂಡರ್ ನವೇದ್ ಸಿಂಗ್, ಜೈಶ್ ಉಗ್ರ ಉಸ್ಮಾನ್ ಹೈದರ್ ಮತ್ತು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಅಲ್ತಾಫ್ ಅಹ್ಮದ್ ದಾರ್ ಮುಂತಾದ ಪ್ರಮುಖ ಉಗ್ರರು ಹತ್ಯೆಯಾಗಿದ್ದಾರೆ. 

ಉಗ್ರರ ದಾಳಿ ಈ ವರ್ಷ ಏರಿಕೆಯಾಗಿದ್ದೇಕೆ? 

ಜಮ್ಮು ಕಾಶ್ಮೀರದಲ್ಲಿ 2018 ರಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಉಗ್ರರ ಆಕ್ರಮಣ ಘಟನೆಗಳೂ ನಡೆದಿವೆ. 2017ರಲ್ಲಿ 342 ಉಗ್ರರ ಆಕ್ರಮಣಗಳು ನಡೆದರೆ ಈ ವರ್ಷ ಅದು 429 ಕ್ಕೆ ಏರಿಕೆಯಾಗಿದೆ. ವರ್ಷದ ಮೊದಲ ಆರು ತಿಂಗಳು ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಇದ್ದುದರಿಂದ ಬಿಜೆಪಿ ಆಳ್ವಿಕೆಯನ್ನು ವಿಫಲಗೊಳಿಸಬೇಕೆಂದು ಭಯೋತ್ಪಾದಕ ದಾಳಿಗಳು ಹೆಚ್ಚು ನಡೆಯುತ್ತಿದ್ದವು.

ಜೂನ್ ನಂತರ ಮೈತ್ರಿ ಸರ್ಕಾರ ಬಿದ್ದಮೇಲೆ ರಾಜ್ಯಪಾಲರ ಆಳ್ವಿಕೆಯಲ್ಲಿ ಭಯೋತ್ಪಾದಕರ ದಮನ ಕಾರ್ಯಾಚರಣೆಯನ್ನು ಸೇನಾಪಡೆಗಳು ಮತ್ತಷ್ಟು ಹೆಚ್ಚಿಸಿದ್ದರಿಂದ ಅದಕ್ಕೆ ಪ್ರತಿಯಾಗಿ ಉಗ್ರರ ದಾಳಿಯೂ ಹೆಚ್ಚಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಜಿಕಲ್ ಸ್ಟ್ರೈಕ್‌ನಿಂದಲೂ ಪಾಠ ಕಲಿಯದ ಪಾಕ್

ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಹಿಂದೆ ನೆರೆ ರಾಷ್ಟ್ರ ಪಾಕಿಸ್ತಾನದ ಕೈವಾಡವಿದೆ. ಪಾಕಿಸ್ತಾನದ ಸೇನೆಯೇ ಭಯೋತ್ಪಾದಕರ ನೆರವಿಗೆ ನಿಂತಿದೆ. ಜುಮ್ಮು-ಕಾಶ್ಮೀರದಲ್ಲಿ ಈ ವರ್ಷ ಸ್ಥಳೀಯ ಚುನಾವಣೆಗಳಿರುವ ಹಿನ್ನೆಲೆಯಲ್ಲಿ ಅದಕ್ಕೆ ಅಡ್ಡಿ ಮಾಡಲು ಪಾಕಿಸ್ತಾನ ಸಂಚು ರೂಪಿಸಿ ಉಗ್ರರಿಗೆ ನೆರವಾಗುತ್ತಿದೆ. ಈ ಉಗ್ರರು ಪ್ರತ್ಯೇಕತಾವಾದಿಗಳೊಂದಿಗೆ ಸೇರಿ ಮುಷ್ಕರ ಹಾಗೂ ಬಂದ್ ನಡೆಸಿ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಹಿಂಸಾತ್ಮಕ ಘಟನೆಗಳಿಗೆ ಪ್ರೇರಣೆ ನೀಡುತ್ತಿದ್ದಾರೆ.

ಭಾರತ ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಮೆರಿಕ ಕೂಡ ಪಾಕಿಸ್ತಾನ ಭಯೋತ್ಪಾದಕರ ಆಶ್ರಯ ತಾಣವಾಗಿದೆ ಎಂಬ ಕಾರಣಕ್ಕಾಗಿ ತಾನು ನೀಡುವ ವಿದೇಶಿ ನೆರವನ್ನು ನಿಲ್ಲಿದೆ. ಇದಲ್ಲದೆ ಹಲವು ರಾಷ್ಟ್ರಗಳು ಇದೇ ಕಾರಣದಿಂದಾಗಿ ಪಾಕಿಸ್ತಾನಕ್ಕೆ ಎಚ್ಚರಿಸುತ್ತಿದ್ದರೂ ಪಾಕ್ ಮಾತ್ರ ಜಾಗತಿಕ ಕೂಗನ್ನು ನಿರ್ಲಕ್ಷಿಸುತ್ತ ಬರುತ್ತಿದೆ. ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕ್‌ನ ಗಡಿಯೊಳಗೇ ನುಗ್ಗಿ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ್ದರೂ ಅಲ್ಲಿನ ಸೇನಾಪಡೆ ಪಾಠ ಕಲಿತಿಲ್ಲ.

 

 

Follow Us:
Download App:
  • android
  • ios