Asianet Suvarna News Asianet Suvarna News

ನ.16ರವರೆಗೆ ಸಂಸತ್‌ ಅಮಾನತು ಸ್ಥಿತಿಯಲ್ಲಿ

ನೂತನ ಪ್ರಧಾನಿ ನೇಮಕದಿಂದ ಸೃಷ್ಟಿಯಾಗಿರುವ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟು ಶನಿವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧ್ಯಕ್ಷ ಸಿರಿಸೇನ ಅವರು ನವೆಂಬರ್‌ 16ರವರೆಗೆ ಸಂಸತ್ತನ್ನು ಅಮಾನತಿನಲ್ಲಿ ಇರಿಸಲು ಆದೇಶಿಸಿದ್ದಾರೆ. 

Sri Lanka Parliament Suspended
Author
Bengaluru, First Published Oct 28, 2018, 7:51 AM IST

ಕೊಲಂಬೊ: ಶ್ರೀಲಂಕಾದಲ್ಲಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ಪದಚ್ಯುತಿ ಹಾಗೂ ನೂತನ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ಅವರ ನೇಮಕದಿಂದ ಸೃಷ್ಟಿಯಾಗಿರುವ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟು ಶನಿವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಈ ನಡೆಯಿಂದ ಕ್ರುದ್ಧರಾಗಿರುವ ರನಿಲ್‌ ವಿಕ್ರಮಸಿಂಘೆ ಅವರು ಹುದ್ದೆ ಬಿಡಲು ನಿರಾಕರಿಸಿದ್ದು, ಸಂಸತ್ತಿನಲ್ಲಿ ತಮಗೇ ಬಹುಮತವಿದೆ ಎಂಬುದನ್ನು ಸಾಬೀತುಪಡಿಸಲು ಸಿದ್ಧವಿರುವುದಾಗಿ ಶನಿವಾರ ಬೆಳಗ್ಗೆ ಘೋಷಿಸಿದ್ದರು. ಅಲ್ಲದೆ, ಅಧಿವೇಶನ ಕರೆಯುವಂತೆ ಸ್ಪೀಕರ್‌ ಕರು ಜಯಸೂರ್ಯ ಅವರಿಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ ಸಿರಿಸೇನ ಅವರು ನವೆಂಬರ್‌ 16ರವರೆಗೆ ಸಂಸತ್ತನ್ನು ಅಮಾನತಿನಲ್ಲಿ ಇರಿಸಲು ಆದೇಶಿಸಿದ್ದಾರೆ. ಸಿರಿಸೇನ ಅವರ ಈ ನಡೆಯಿಂದಾಗಿ ಬಹುಮತದ ಕೊರತೆ ಎದುರಿಸುತ್ತಿರುವ ರಾಜಪಕ್ಸೆ ಅವರಿಗೆ ‘ಕುದುರೆ ವ್ಯಾಪಾರ’ ನಡೆಸಲು ಅವಕಾಶ ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.

225 ಸದಸ್ಯಬಲದ ಸಂಸತ್ತಿನಲ್ಲಿ ವಿಕ್ರಮಸಿಂಘೆ ಅವರ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ಪರ 105 ಸಂಸದರು ಇದ್ದರೆ, ರಾಜಪಕ್ಸೆ ಅವರ ಪರ ಕೇವಲ 95 ಸಂಸದರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯುಎನ್‌ಪಿ, ‘ರಾಜಪಕ್ಸೆ ಅವರಿಗೆ ಬಹುಮತ ಇಲ್ಲದಿರುವ ಕಾರಣಕ್ಕೇ ಸಂಸತ್ತನ್ನು ಅಮಾನತಿನಲ್ಲಿ ಇರಿಸಲಾಗಿದೆ’ ಎಂದು ಕಿಡಿಕಾರಿದೆ. ಈ ಮುಂಚಿನ ಕಾರ‍್ಯಕ್ರಮ ಪಟ್ಟಿಯ ಪ್ರಕಾರ ಬಜೆಟ್‌ ಮಂಡನೆಗಾಗಿ ನವೆಂಬರ್‌ 5ರಿಂದ ಸಂಸತ್‌ ಅಧಿವೇಶನ ನಡೆಯಬೇಕಿತ್ತು.

ಬ್ರಿಟನ್‌, ಅಮೆರಿಕ, ಇಯು ಆಗ್ರಹ:  ಈ ನಡುವೆ, ಶ್ರೀಲಂಕಾದ ರಾಜಕೀಯ ಪಕ್ಷಗಳು ಸಂವಿಧಾನ ಅನುಸರಿಸಬೇಕು. ಹಿಂಸಾಚಾರಕ್ಕೆ ಜನತೆ ಇಳಿಯಬಾರದು ಎಂದು ಬ್ರಿಟನ್‌, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳು ಆಗ್ರಹಿಸಿವೆ.

ಇದೊಂದು ಕೃತವಾಗಿ ಸೃಷ್ಟಿಸಿದ ಬಿಕ್ಕಟ್ಟು. ಇದರ ಅಗತ್ಯವೇ ಇರಲಿಲ್ಲ. ಇದು ಕಠಿಣ ಸಮಯ. ಜನರು ಇದರಿಂದ ಬಳಲುವಂತಾಗಬಾರದು. ಸಂಸತ್‌ ಅಧಿವೇಶನ ಕರೆದರೆ ಬಿಕ್ಕಟ್ಟು ತನ್ನಿಂತಾನೇ ನಿವಾರಣೆಯಾಗಲಿದೆ. ನನಗೆ ಬಹುಮತವಿದ್ದು, ಅದನ್ನು ಸಾಬೀತುಪಡಿಸಲು ಸಿದ್ಧನಿದ್ದೇನೆ.

- ರನಿಲ್‌ ವಿಕ್ರಮಸಿಂಘೆ, ಪದಚ್ಯುತ ಪ್ರಧಾನಿ

Follow Us:
Download App:
  • android
  • ios