Asianet Suvarna News Asianet Suvarna News

ಕತಲೂನಿಯಾದ ವಶಕ್ಕೆ ಸ್ಪೇನ್ ಸರಕಾರ ಮುಂದು

ಕೇಂದ್ರ ಸರಕಾರವು ಸ್ಪೇನ್ ಸಂವಿಧಾನದ 155ನೇ ಪರಿಚ್ಛೇದದ ಕಾನೂನನ್ನು ಜಾರಿಗೊಳಿಸುವುದಾಗಿ ಬೆದರಿಕೆ ಹಾಕಿದೆ. ಪ್ರಾದೇಶಿಕ ಸರಕಾರ ಹಾಗೂ ಅದರ ಹಣಕಾಸು ಮತ್ತು ಪೊಲೀಸ್ ವ್ಯವಸ್ಥೆಯನ್ನು ವಶಕ್ಕೆ ಪಡೆದುಕೊಳ್ಳಲು ಕೇಂದ್ರ ಸರಕಾರಕ್ಕೆ ಈ ಕಾನೂನು ಅನುವು ಮಾಡಿಕೊಡುತ್ತದೆ. ಶೀಘ್ರದಲ್ಲೇ ಕೇಂದ್ರ ಸರಕಾರದ ಸಚಿವ ಸಂಪುಟದ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

spain threatens to take over catalonia govt

ಬಾರ್ಸಿಲೋನಾ(ಅ. 19): ಸ್ಪೇನ್ ದೇಶದ ಸ್ವಾಯತ್ತ ಸಂಸ್ಥಾನವಾದ ಕತಲೂನಿಯಾವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಳ್ಳಲು ಅಲ್ಲಿಯ ಕೇಂದ್ರ ಸರಕಾರ ಮುಂದಾಗಿದೆ. ಸ್ವಾತಂತ್ರ್ಯಕ್ಕಾಗಿ ಕತಲೂನಿಯಾ(Catalonia) ಪ್ರದೇಶದಿಂದ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಪೇನ್ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ. ಕತಲೂನಿಯಾದ ಅಧಿಕಾರ ಕಿತ್ತುಕೊಂಡು ಸ್ಪೇನ್'ನ ಸಂವಿಧಾನವನ್ನು ಜಾರಿಗೆ ತರುವುದಾಗಿ ಸ್ಪೇನ್ ಪ್ರಧಾನಿ ಮಾರಿಯಾನೋ ರಾಜೋಯ್ ತಿಳಿಸಿದ್ದಾರೆ.

ಸ್ವಾತಂತ್ರ್ಯದ ಹೋರಾಟ ಕೈಬಿಡಲಾಗುತ್ತದೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಸ್ಪೇನ್ ಸರಕಾರವು ಕತಲೂನಿಯಾ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅದಕ್ಕೆ ಡೆಡ್'ಲೈನ್ ಕೂಡ ನೀಡಿತು. ಇದಕ್ಕೆ ಉತ್ತರ ನೀಡಿದ ಕತಲೂನಿಯಾ, ಸ್ವಾತಂತ್ರ್ಯ ಘೋಷಣೆಯ ಇರಾದೆ ತಮ್ಮ ಸರಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿತು.

ಆದರೆ, ಕತಲೂನಿಯಾ ಭಾಗವು ಈ ವಿಚಾರದ ಕುರಿತು ಮಾತುಕತೆಗೆ ಬರುವಂತೆ ಸ್ಪೇನ್ ಸರಕಾರವನ್ನು ಒತ್ತಾಯಿಸುತ್ತಿದೆ. ಒಂದು ವೇಳೆ ಸ್ಪೇನ್ ಸರಕಾರವು ಮಾತುಕತೆಗೆ ಬರದೇಹೋದಲ್ಲಿ ಹಾಗೂ ತಮ್ಮ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ದಲ್ಲಿ, ತಾವು ಸ್ವಾತಂತ್ರ್ಯ ಘೋಷಣೆಯ ಪ್ರಕ್ರಿಯೆಗೆ ಮುಂದಾಗಬೇಕಾಗುತ್ತದೆ ಎಂದೂ ಕತಲೂನಿಯಾದ ಅಧ್ಯಕ್ಷ ಕಾರ್ಲ್ಸ್ ಪ್ಯುಡೆಮೋಂಟ್ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರವು ಸ್ಪೇನ್ ಸಂವಿಧಾನದ 155ನೇ ಪರಿಚ್ಛೇದದ ಕಾನೂನನ್ನು ಜಾರಿಗೊಳಿಸುವುದಾಗಿ ಬೆದರಿಕೆ ಹಾಕಿದೆ. ಪ್ರಾದೇಶಿಕ ಸರಕಾರ ಹಾಗೂ ಅದರ ಹಣಕಾಸು ಮತ್ತು ಪೊಲೀಸ್ ವ್ಯವಸ್ಥೆಯನ್ನು ವಶಕ್ಕೆ ಪಡೆದುಕೊಳ್ಳಲು ಕೇಂದ್ರ ಸರಕಾರಕ್ಕೆ ಈ ಕಾನೂನು ಅನುವು ಮಾಡಿಕೊಡುತ್ತದೆ. ಶೀಘ್ರದಲ್ಲೇ ಕೇಂದ್ರ ಸರಕಾರದ ಸಚಿವ ಸಂಪುಟದ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬಾರ್ಸಿಲೋನಾ, ಗಿರೋನಾ, ಲೀಡಾ ಮತ್ತು ಟರಾಗೊನಾ ಎಂಬುದು ಕತಲೂನಿಯಾದ ನಾಲ್ಕು ಪ್ರಾಂತ್ಯಗಳು. ಇವುಗಳ ಪೈಕಿ ಬಾರ್ಸಿಲೋನಾ ಬಹಳ ಸಿರಿವಂತ ನಗರವೆನಿಸಿದೆ. ವಿಶ್ವದ ಪ್ರಮುಖ ನಗರಗಳಲ್ಲಿ ಬಾರ್ಸಿಲೋನಾ ಕೂಡ ಒಂದು.

ಕತಲೂನಿಯಾಗೆ ಯಾಕೆ ಬೇಕು ಸ್ವಾತಂತ್ರ್ಯ?
ಕತಲೂನಿಯಾದ ಸ್ವಾತಂತ್ರ್ಯದ ಕೂಗಿಗೆ ಐತಿಹಾಸಿಕ ಕಾರಣಗಳಿವೆ. 8-9ನೇ ಶತಮಾನದಲ್ಲೇ ಕತಲೂನಿಯಾದ ಸಾಮ್ರಾಜ್ಯ ಅಸ್ತಿತ್ವದಲ್ಲಿರುತ್ತದೆ. ಮುಸ್ಲಿಮರ ಆಕ್ರಮಣವನ್ನು ತಡೆಯಲು ಕತಲೂನಿಯಾದ ಸಾಮ್ರಾಜ್ಯ ಕಟ್ಟಲಾಗಿರುತ್ತದೆ. 17ನೇ ಶತಮಾನದವರೆಗೂ ಸ್ಪೇನ್ ದೊರೆಗಳ ಆಡಳಿತದ ಅಡಿಯಲ್ಲಿರುತ್ತದೆ. 17ನೇ ಶತಮಾನದಲ್ಲಿ ಸ್ಪೇನ್'ನ ಸೇನೆಯ ಉಪಸ್ಥಿತಿಯನ್ನು ಪ್ರತಿಭಟಿಸಿ ಕತಲೂನಿಯನ್ನರು ಬಂಡಾಯವೆದ್ದು ಪ್ರತ್ಯೇಕಗೊಂಡು ಫ್ರಾನ್ಸ್ ನೆರವಿನಲ್ಲಿ ಸರಕಾರ ರಚಿಸಿಕೊಳ್ಳುತ್ತಾರೆ. ಆದರೆ, ಫ್ರೆಂಚರು ಕತಲೂನಿಯಾ ಸಾಮ್ರಾಜ್ಯ ವಶಪಡಿಸಿಕೊಂಡಿದ್ದಲ್ಲದೇ, ಅದರ ಸಂಪತ್ತನ್ನು ಲೂಟಿ ಮಾಡಿಬಿಡುತ್ತಾರೆ. ಅದಾದ ಬಳಿಕ ಸ್ಪ್ಯಾನಿಷ್ ಸೇನೆಯು ದಾಳಿ ಮಾಡಿ ಕತಲೂನಿಯಾವನ್ನು ಮತ್ತೆ ವಶಪಡಿಸಿಕೊಳ್ಳುತ್ತದೆ. ಸ್ಪೇನ್-ಫ್ರಾನ್ಸ್ ನಡುವೆ ಪೈರಿನೀಸ್ ಒಪ್ಪಂದದ ಪ್ರಕಾರ ಕತಲೂನಿಯಾದ ಉತ್ತರದ ಭಾಗಗಳು ಫ್ರಾನ್ಸ್ ದೇಶಕ್ಕೆ ಹೋಗುತ್ತವೆ. ಉಳಿದ ಭಾಗಗಳು ಸ್ಪೇನ್'ಗೆ ದಕ್ಕುತ್ತವೆ. 1931ರಲ್ಲಿ ಸ್ಪೇನ್ ರಾಷ್ಟ್ರದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕತಲೂನಿಯಾ ಭಾಗಕ್ಕೆ ಸ್ವಾಯತ್ತ ಅಧಿಕಾರ ಪ್ರಾಪ್ತವಾಗುತ್ತದೆ. 1950ರ ದಶಕದಿಂದೀಚೆ ಕತಲೂನಿಯಾ ಪ್ರದೇಶವು ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದರೆ, ಸ್ವಾಯತ್ತ ಅಧಿಕಾರದ ಬದಲು ಸಂಪೂರ್ಣ ಸ್ವಾತಂತ್ರ್ಯ ಸಿಗಬೇಕೆಂಬ ಕೂಗು ಹಲವು ವರ್ಷಗಳಿಂದ ಈ ಭಾಗದಲ್ಲಿ ಕೇಳಿಬರುತ್ತಿದೆ.

Follow Us:
Download App:
  • android
  • ios