Asianet Suvarna News Asianet Suvarna News

ಶಬರಿಮಲೆ ವಿವಾದ: ಪಿಣರಾಯಿಗೆ ಕಾಮನ್‌ಸೆನ್ಸ್ ಇಲ್ಲ!

ಶಬರಿಮಲೆಯ ಕಗ್ಗಂಟು ಒಂದು ಪರಿಹಾರ ಸೂತ್ರದ ಕಡೆ ಸಾಗುತ್ತಿರುವುದಕ್ಕೆ ಎರಡು ಅಂಶಗಳು ಅಡ್ಡಿಯನ್ನುಂಟುಮಾಡುತ್ತಿವೆ. ಬಿಜೆಪಿ-ಆರ್‌ಎಸ್‌ಎಸ್‌ ಶಕ್ತಿಗಳು ತಮ್ಮ ಬಲವನ್ನು ವರ್ಧಿಸಿಕೊಳ್ಳುವ ರಾಜಕಾರಣ ಮಾಡುತ್ತಿರುವುದೂ ಅವುಗಳಲ್ಲಿ ಒಂದು. ಹಿಂದುತ್ವ ತೀವ್ರವಾದಿಗಳ ರಾಜಕೀಯ ಅಡತಡೆಗಳು ಆರಂಭದ ದಿನಗಳಲ್ಲಿ ಹಿಂಸೆಯ ಮೂಲಕ ಗಮನ ಸೆಳೆದದ್ದು ನಿಜ. ಅವರ ಆಂದೋಲನವು ಸಂಪ್ರದಾಯದ ಹೆಸರಿನಲ್ಲಿ ಇದ್ದರೂ ಸಂಪ್ರದಾಯಗಳನ್ನು ಮುರಿಯುವ ಸಂಬಂಧದಲ್ಲಿ ಅವರಿಗೆ ಯಾವುದೇ ಧರ್ಮಭೀತಿ ಇರಲಿಲ್ಲ. 

Shabarimale Row: anger against Kerala CM Pinarayi Vijayan
Author
Bengaluru, First Published Jan 13, 2019, 11:30 AM IST

ಕೇರಳ (ಜ. 12): ಶಬರಿಮಲೆಯ ಕಗ್ಗಂಟು ಒಂದು ಪರಿಹಾರ ಸೂತ್ರದ ಕಡೆ ಸಾಗುತ್ತಿರುವುದಕ್ಕೆ ಎರಡು ಅಂಶಗಳು ಅಡ್ಡಿಯನ್ನುಂಟುಮಾಡುತ್ತಿವೆ. ಬಿಜೆಪಿ-ಆರ್‌ಎಸ್‌ಎಸ್‌ ಶಕ್ತಿಗಳು ತಮ್ಮ ಬಲವನ್ನು ವರ್ಧಿಸಿಕೊಳ್ಳುವ ರಾಜಕಾರಣ ಮಾಡುತ್ತಿರುವುದೂ ಅವುಗಳಲ್ಲಿ ಒಂದು.

ಹಿಂದುತ್ವ ತೀವ್ರವಾದಿಗಳ ರಾಜಕೀಯ ಅಡತಡೆಗಳು ಆರಂಭದ ದಿನಗಳಲ್ಲಿ ಹಿಂಸೆಯ ಮೂಲಕ ಗಮನ ಸೆಳೆದದ್ದು ನಿಜ. ಅವರ ಆಂದೋಲನವು ಸಂಪ್ರದಾಯದ ಹೆಸರಿನಲ್ಲಿ ಇದ್ದರೂ ಸಂಪ್ರದಾಯಗಳನ್ನು ಮುರಿಯುವ ಸಂಬಂಧದಲ್ಲಿ ಅವರಿಗೆ ಯಾವುದೇ ಧರ್ಮಭೀತಿ ಇರಲಿಲ್ಲ. ಒಬ್ಬ ನಾಯಕ ಭಾಷಣ ಬಿಗಿಯುವುದಕ್ಕೆ ಪವಿತ್ರ ಮೆಟ್ಟಿಲುಗಳನ್ನು ಏರಿದನು. ತಮ್ಮ ಪ್ರತಿಭಟನೆಯಿಂದ ಪ್ರತಿಕೂಲ ಪರಿಣಾಮಗಳಾಗುತ್ತಿವೆ ಎಂಬುದು ಅವರಿಗೆ ಮನದಟ್ಟಾಗುತ್ತಿದ್ದಂತೆಯೇ ಅವರ ಪ್ರತಿಭಟನೆಯು ತ್ರಿವೇಂದ್ರಂ ಕಡೆಗೆ ತಿರುಗಿತು.

ಅಲ್ಲಿ ‘ನಿಜಕ್ಕೂ’ ಉಪವಾಸ ಮಾಡಿದರು. ಅದೊಂದು ಮೋಸದ ಆಟ ಎಂಬುದು ಬಳಿಕ ಗೊತ್ತಾಯಿತು. ಒಬ್ಬ ವ್ಯಕ್ತಿ ಹಾಸಿಗೆಯ ಮೇಲೆ ಎರಡು ದಿನ ಅನ್ನಾಹಾರವಿಲ್ಲದೆ ಬಿದ್ದುಕೊಂಡಿದ್ದ. ಆತನು ತಿಂದುಬರಲು ಎದ್ದುಹೋದಾಗ ಇನ್ನೊಬ್ಬ ವ್ಯಕ್ತಿ ಹೊಟ್ಟೆತುಂಬ ಊಟ ಮಾಡಿಕೊಂಡು ಬಂದು ಆತ ಮಲಗಿದಲ್ಲಿ ತಾನು ಮಲಗಿಕೊಂಡ.

ಶಬರಿಮಲೆಯಲ್ಲಿ ಬಿಕ್ಕಟ್ಟು ಇನ್ನೂ ಮುಂದುವರಿದಿರುವುದರ ಹಿಂದಿರುವ ನಿಜವಾದ ಕಾರಣ, ಮೊದಲಿನದು, ತಾರತಮ್ಯ ನಡೆಯುತ್ತಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದು ಮತ್ತು ಎರಡನೆಯದು, ಮುಖ್ಯಮಂತ್ರಿಯ ವ್ಯವಹಾರಕುಶಲತೆ ಇಲ್ಲದ ನಡೆ. ಅವರಿಗೆ ಸಾಮಾನ್ಯಜ್ಞಾನವೂ ಇಲ್ಲ ಎಂಬುದನ್ನು ಅದು ತೋರಿಸಿತು.

ಶಬರಿಮಲೆಯ ವಿಷಯದಲ್ಲಿ ಮಹಿಳೆಯರ ಸಮಾನತೆಯ ಹಕ್ಕು ಎಂಬ ಏಕಮುಖ ದಾರಿಯ ನಿಲುವನ್ನು ಉದಾರವಾದಿ ಅಭಿಪ್ರಾಯವೆಂದು ತೆಗೆದುಕೊಳ್ಳಲಾಯಿತು. ಅವರ ಪ್ರಕಾರ, ಕೇರಳದಲ್ಲಿ ದಲಿತರಿಗೆ ದೇವಾಲಯ ಪ್ರವೇಶವನ್ನು ಒದಗಿಸುವುದಕ್ಕೆ ಹೇಗೆ ಸುದೀರ್ಘವಾದ ಹೋರಾಟದ ಅಗತ್ಯ ಉಂಟಾಗಿತ್ತೋ ಅದೇ ರೀತಿಯ ಹೋರಾಟ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೂ ಅಗತ್ಯವಾಗಿದೆ ಎಂಬುದಾಗಿತ್ತು.

ಐತಿಹಾಸಿಕವಾಗಿಯಾಗಲಿ ಇಲ್ಲವೆ ಸಾಮಾಜಿಕವಾಗಿಯಾಗಲಿ ಸಾಮ್ಯತೆ ಇಲ್ಲದ ವಿಷಯಗಳ ಸಂಕರ ಇದು. ದಲಿತರನ್ನು ತುಳಿಯುವುದು ಕೇರಳದಲ್ಲಿ ಹಿಂಸಾರತಿಯ ಮಟ್ಟಕ್ಕೆ ತಲುಪಿತ್ತು. ಅದು ಬಹಿರಂಗವಾಗಿಯೇ, ನಾಚಿಕೆಯಿಲ್ಲದಂತೆ ಜಾತಿ ಆಧಾರಿತ ತಾರತಮ್ಯವನ್ನು ಆಧರಿಸಿತ್ತು. ಇದು ನಂಬಿಕೆ, ಸಂಪ್ರದಾಯವನ್ನು ಆಧರಿಸಿದ್ದು.

1991ರಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಮರೆಯಬಾರದು. ‘ಅನಾದಿ ಕಾಲದಿಂದ’ ಈ ಪದ್ಧತಿಯು ನಡೆದುಬಂದಿದೆ, ಏಕೆಂದರೆ, ಮಹಿಳೆಯರು ಋುತುಮತಿಯರಾಗುವುದರಿಂದ ಕಡ್ಡಾಯ 41 ದಿನಗಳ ವ್ರತವನ್ನು ಪಾಲಿಸುವುದು ಅವರಿಂದ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಈಗಿನ ಕೋರ್ಟ್‌ ಆದೇಶವು ಹಿಂದಿನ ಆದೇಶದ ವಿರುದ್ಧವಿದೆ.

ಅತಿ ಮುಖ್ಯವಾದುದೆಂದರೆ, ಶಬರಿಮಲೆಯ ಮಹಿಳೆಯರ ಪ್ರವೇಶವಿಲ್ಲದ ಸಂಪ್ರದಾಯವು ಇತರ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎಂಬ ಸಂಪ್ರದಾಯಕ್ಕೆ ಸಮಾನಾಂತರವಾಗಿ ನಡೆದು ಬರುತ್ತಿದೆ. ಪೊಂಗಲ್‌ ಸಮಯದಲ್ಲಿ ಅಟ್ಟುಕಲ್‌ ದೇವಾಲಯದಲ್ಲಿಯ ದೇವಿಗೆ ಮಣ್ಣಿನ ಮಡಿಕೆಯಲ್ಲಿ ಅನ್ನವನ್ನು ಮಾಡಿ ನೈವೇದ್ಯ ಮಾಡುವುದಕ್ಕೆ ಮಹಿಳೆಯರು ಸೇರುತ್ತಾರೆ. ಜಗತ್ತಿನಲ್ಲೇ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸೇರುವ ತಾಣ ಇದು ಎಂದು ಪ್ರಸಿದ್ಧವಾಗಿದೆ. ಇಲ್ಲಿ ತ್ರಿವೇಂದ್ರಂನ ಮುಖ್ಯ ರಸ್ತೆಯಲ್ಲಿಯೇ ಅಡುಗೆ ಮಾಡಲಾಗುತ್ತದೆ. ಮತ್ತು ಇಲ್ಲಿಗೆ ಪುರುಷರಿಗೆ ಪ್ರವೇಶವಿಲ್ಲ. ವಾಸ್ತವವೆಂದರೆ ಅಟ್ಟುಕಲ್‌ನ ದೇವಾಲಯವು ಶಬರಿಮಲೆಯ ಸ್ತ್ರೀರೂಪ ಎಂದು ತಿಳಿಯಲಾಗಿದೆ.

ಕೇರಳದ ಇನ್ನೊಂದು ಪ್ರಸಿದ್ಧ ಯಾತ್ರಾ ಕೇಂದ್ರ ಚಕ್ಕುಲತು ಕಾವು. ಇಲ್ಲಿಗೆ ಕೂಡ ಮಹಿಳೆಯರು ಮಾತ್ರ ಹೋಗುವುದು. ಅದೇ ರೀತಿ ಕನ್ಯಾಕುಮಾರಿಯಲ್ಲಿಯ ಪ್ರಸಿದ್ಧ ಭಗತಿ ಮಾ ದೇವಾಲಯ. ಈ ದೇವಾಲಯಗಳಲ್ಲಿ ಪುರುಷರಿಗೆ ತಾರತಮ್ಯ ಮಾಡಲಾಗಿದೆ ಎಂದು ಯಾರೊಬ್ಬರೂ ಆರೋಪಿಸುತ್ತಿಲ್ಲ. ಪುರುಷ ಸಮಾನತೆಯ ಬಗ್ಗೆ ಆಂದೋಲನವೂ ನಡೆದಿಲ್ಲ. ಅದೇ ಸೂತ್ರವನ್ನು ಅನ್ವಯಿಸಿದರೆ, ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಯಾರೂ ಆರೋಪಿಸಲಾಗದು. ನಮ್ಮ ಬದುಕಿನಲ್ಲಿ ನಂಬಿಕೆಗೆ ಅವಕಾಶ ನೀಡುವುದು ನ್ಯಾಯಯುತವಾದದ್ದು. ನಂಬಿಕೆ ಇಲ್ಲದವರು ನಂಬಿಕೆ ಇದ್ದವರಿಗೆ ಅಡ್ಡಿಪಡಿಸಬಾರದು. ಇದುವೇ ಸಮಾಜವನ್ನು ಮುಕ್ತವಾಗಿ ಇಡುವ ಸೂತ್ರ.

ಮೊದಲೇ ಹೇಳಿದಂತೆ, ‘ಹಳೆಯ ಆಚರಣೆಗಳನ್ನು ಹೊಂದಿರುವುದು ಹಳೆಯ ನಾಗರಿಕತೆಯಲ್ಲಿ ಸ್ವಾಭಾವಿಕ. ಬುದ್ಧಿಜೀವಿಗಳ ತರ್ಕದೊಂದಿಗೆ ಭಿನ್ನ ಅಭಿಪ್ರಾಯ ಹೊಂದಿದ ನಂಬಿಕೆಯುಳ್ಳವರು ಬದುಕುವುದರಲ್ಲಿ ಯಾವುದೇ ಅಪರಾಧವಿಲ್ಲ ಎಂಬುದನ್ನು ಗುರುತಿಸುವುದರಲ್ಲಿ ನ್ಯಾಯವು ಅತ್ಯುತ್ತಮವಾಗಿರುತ್ತದೆ.’

ಶಬರಿಮಲೆಯನ್ನು ಕುದಿಯುತ್ತಿರುವಂತೆ ಮಾಡಿದ ಎರಡನೆಯ ಅಂಶ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದಕ್ಕೆ ನೆರವಾಗುವುದಕ್ಕೆ ತೋರಿದ ಆತುರ. ಅವರು ತೆಗೆದುಕೊಂಡಿರುವ ಕ್ರಮಗಳು ಸುಪ್ರೀಂಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿತ್ತು ಮತ್ತು ನಿಮ್ಮಿಂದ ಸಾಧ್ಯವಾದರೆ ನನ್ನನ್ನು ತಡೆಯಿರಿ ಎನ್ನುವ ಧೋರಣೆಯ ಅವರ ಹೇಳಿಕೆಗಳು ಮುಖ್ಯಮಂತ್ರಿಯ ಬದಲಿಗೆ ಕಮ್ಯುನಿಸ್ಟ್‌ ನಾಯಕನೊಬ್ಬನ ಪ್ರವೃತ್ತಿಯನ್ನು ಪ್ರತಿಫಲಿಸಿತು.

ಸರ್ಕಾರವೊಂದರ ಮುಖ್ಯಸ್ಥರಾಗಿ ತಮ್ಮ ಕೋಪತಾಪವನ್ನು ತಣ್ಣಗಿರಿಸಿಕೊಳ್ಳುವುದರಿಂದ, ಶಾಂತಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದರಿಂದ ಮತ್ತು ಹೊಸ ಪರಿಕಲ್ಪನೆಗಳಿಗೆ ಹೊಂದಿಕೊಳ್ಳಲು ಇದರಲ್ಲಿ ಭಾಗಿಯಾಗಿರುವ ವಿವಿಧ ಜನರಿಗೆ ಸಮಯವನ್ನು ಒದಗಿಸುವುದರ ಮೂಲಕ ಅವರು ಹೆಚ್ಚಿನದನ್ನು ಸಾಧಿಸಬಹುದು. ಆದರೆ ಅವರು, ಕೋರ್ಟ್‌ ಆದೇಶವನ್ನು ಪಾಲಿಸುವುದರ ಹೊರತು ತಮಗೆ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಹೇಳುವ ಮೂಲಕ ತರಾತುರಿಯ ಕ್ರಮಕ್ಕೆ ಧಾವಿಸಿದರು.

ಒಂದು ವಾರದ ಹಿಂದೆ ಅವರು ತಮಗೆ ಆಯ್ಕೆಗಳಿವೆ ಎಂಬುದನ್ನು ತೋರಿಸಿದರು. ವಿವಾದಿತ ಚಚ್‌ರ್‍ವೊಂದರಲ್ಲಿ ಸೇವೆ ಸಲ್ಲಿಸುವುದಕ್ಕೆ ಕ್ರಿಶ್ಚಿಯನ್ನರ ಒಂದು ಗುಂಪಿಗೆ ಕೋರ್ಟ್‌ನ ಆದೇಶ ಅವಕಾಶ ನೀಡಿತ್ತು. ಇನ್ನೊಂದು ಗುಂಪು ದೈಹಿಕವಾಗಿ ಇದಕ್ಕೆ ಅಡ್ಡಿಪಡಿಸುತ್ತಿತ್ತು. ಆದರೆ ರಾಜ್ಯ ಸರ್ಕಾರವು ಕೋರ್ಟ್‌ ಆದೇಶವನ್ನು ಸರಿಯಾಗಿ ಜಾರಿ ಮಾಡುವುದಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸ್ಪಷ್ಟವಾಗಿ ಪಿಣರಾಯಿ ಸರ್ಕಾರವು ಯಾವ ಪ್ರಕರಣಗಳಲ್ಲಿ ಕೋರ್ಟ್‌ಗಳನ್ನು ತಾನು ಬಳಸಿಕೊಳ್ಳಬೇಕು ಮತ್ತು ಯಾವ ಪ್ರಕರಣಗಳಲ್ಲಿ ನ್ಯಾಯಾಂಗವನ್ನು ನಿರ್ಲಕ್ಷಿಸಬೇಕು ಎಂಬುದನ್ನು ಹೆಕ್ಕಿ ಆಯ್ಕೆಮಾಡಿಕೊಳ್ಳುತ್ತದೆ.

ಕೇರಳ ರಾಜಕಾರಣವು ಮೊದಲೆಂದೂ ಈ ರೀತಿ ಗೊಂದಲದ ಗೂಡಾಗಿರಲಿಲ್ಲ. ರಾಜಕಾರಣದಲ್ಲಿ ಪಿಣರಾಯಿ ಬಲಿಷ್ಠ ವ್ಯಕ್ತಿಯೆಂದು ಪರಿಗಣಿತರಾಗಿದ್ದಾರೆ. ಆದರೆ ಅವರ ಬಲಿಷ್ಠತೆಯು ರಾಜ್ಯಕ್ಕೆ ಲಾಭವಾಗುತ್ತಿರುವ ಲಕ್ಷಣಗಳಿಲ್ಲ. ಅವರು ಪೊಲೀಸ್‌ ಪಡೆಯ ಉನ್ನತ ಅಧಿಕಾರಿಗಳನ್ನು ಮೇಲಿಂದ ಮೇಲೆ ಬದಲಾಯಿಸುತ್ತಿದ್ದರೂ ಅದರಲ್ಲಿಯ ಗುಂಪುಗಾರಿಕೆಯನ್ನು ನಿಯಂತ್ರಿಸುವುದು ಅವರಿಂದ ಆಗುತ್ತಿಲ್ಲ.

ಯಾರು ಅದರ ನಾಯಕರು ಮತ್ತು ಯಾರು ಅಲ್ಲ ಎಂಬುದೇ ಗೊತ್ತಿಲ್ಲದೆ ಕಾಂಗ್ರೆಸ್‌ ಪಕ್ಷವು ತ್ರಿಶಂಕು ಸ್ವರ್ಗದಲ್ಲಿದೆ. ಈ ಹೊಯ್‌ಕೈನಲ್ಲಿ ಬಿಜೆಪಿ ಇತರರ ಮೇಲೆ ಬೊಬ್ಬಿರಿಯುತ್ತಿದೆ ಮತ್ತು ಕಮ್ಯುನಿಸ್ಟರ ಕೊಲೆ ರಾಜಕಾರಣವನ್ನು ಸರಿಗಟ್ಟುತ್ತಿದೆ. ಈ ಕುಶಲ ನಿರ್ವಾಹಕರು ಶಬರಿಮಲೆ ದೇವರ ಹೆಸರಿನಲ್ಲಿ ಅಪಚಾರ ಎಸಗುತ್ತಿದ್ದಾರೆ ಅಷ್ಟೇ.

ಶಬರಿಮಲೆಯನ್ನು ಕುದಿಯುತ್ತಿರುವಂತೆ ಮಾಡಿದ ಅಂಶ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದಕ್ಕೆ ನೆರವಾಗುವುದಕ್ಕೆ ತೋರಿದ ಆತುರ. ಅವರ ಧೋರಣೆ ಹಾಗೂ ಹೇಳಿಕೆಗಳು ಒಬ್ಬ ಮುಖ್ಯಮಂತ್ರಿಯ ಬದಲಿಗೆ ಕಮ್ಯುನಿಸ್ಟ್‌ ನಾಯಕನ ಪ್ರವೃತ್ತಿಯನ್ನು ಪ್ರತಿಫಲಿಸುತ್ತಿವೆ.

- ಟಿಜೆಎಸ್ ಜಾರ್ಜ್ 

Follow Us:
Download App:
  • android
  • ios