Asianet Suvarna News Asianet Suvarna News

ಶಬರಿಮಲೆ ರತ್ನ ರಹಸ್ಯವೇನು? ಆಭರಣಗಳ ವಿಶೇಷತೆಗಳೇನು?

ಶಬರಿಮಲೆಯ ಆಭಣಗಳ ವಿಶೇಷತೆ ಏನು? ಅವು ಪಂದಳ ರಾಜಮನೆತನದ ಬಳಿ ಏಕಿವೆ? ಆಭರಣಗಳನ್ನು ಪ್ರತಿ ವರ್ಷ ಶಬರಿಮಲೆಗೆ ತರುವಾಗ ಪಾಲಿಸುವ ಸಂಪ್ರದಾಯಗಳೇನು ಎಂಬಿತ್ಯಾದಿ ಕುತೂಹಲಕರ ಮಾಹಿತಿ ಇಲ್ಲಿದೆ.

Secret of Shabarimale ornaments and interesting facts of this temple
Author
Bengaluru, First Published Oct 10, 2018, 12:29 PM IST

ತಿರುವನಂತಪುರಂ (ಅ. 10): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ 10-50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಕೇರಳದಲ್ಲಿ
ಪ್ರತಿಭಟನೆಗಳು ನಡೆಯುತ್ತಿವೆ.

ಅದರ ನಡುವೆ, ಶಬರಿಮಲೆ ಅಯ್ಯಪ್ಪ ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಂದಳ ರಾಜಮನೆತನ ಕೂಡ ತೀರ್ಪನ್ನು ವಿರೋಧಿಸಿದೆ. ಶಬರಿಮಲೆಗೆ ಮಹಿಳೆ ಪ್ರವೇಶಿಸಿದರೆ ತಮ್ಮಲ್ಲಿರುವ ಅಯ್ಯಪ್ಪನ ಆಭರಣಗಳನ್ನು ಕೊಡುವುದಿಲ್ಲ ಎಂದು ರಾಜಮನೆತನದವರು ಹೇಳಿದ್ದಾಗಿಯೂ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಶಬರಿಮಲೆಯ ಆಭಣಗಳ ವಿಶೇಷತೆ ಏನು? ಅವು ಪಂದಳ ರಾಜಮನೆತನದ ಬಳಿ ಏಕಿವೆ? ಆಭರಣಗಳನ್ನು ಪ್ರತಿ ವರ್ಷ ಶಬರಿಮಲೆಗೆ ತರುವಾಗ ಪಾಲಿಸುವ ಸಂಪ್ರದಾಯಗಳೇನು ಎಂಬಿತ್ಯಾದಿ ಕುತೂಹಲಕರ ಮಾಹಿತಿ ಇಲ್ಲಿದೆ.

ಅಯ್ಯಪ್ಪನ  ಆಭರಣಗಳು ರಾಜಮನೆತನದಲ್ಲಿ ಏಕಿವೆ?

ಪಂದಳ ರಾಜರು ತಮ್ಮ ವಂಶಸ್ಥನಾದ ಸ್ವಾಮಿ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಚಿನ್ನದ ಆಭರಣಗಳೇ ‘ತಿರುವಾಭರಣಗಳು’. ಈ ಆಭರಣಗಳಿಂದ ಮಕರ ಸಂಕ್ರಾಂತಿ ದಿನ ಅಯ್ಯಪ್ಪ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ. ಇವು ಪೂರ್ವಕಾಲದಿಂದ ಪಂದಳ ರಾಜರ ಅಧೀನದಲ್ಲಿವೆ.

ಇವನ್ನು ಅಯ್ಯಪ್ಪನ ಸನ್ನಿಧಾನಕ್ಕೆ ಹೊತ್ತುಕೊಂಡು ಹೋಗುವ ಮತ್ತು ಅದನ್ನು ಅಷ್ಟೇ ಸುರಕ್ಷಿತವಾಗಿ ಕಾಪಿಡುವ ಜವಾಬ್ದಾರಿಯನ್ನು ಪಂದಳದ ಒಂದು ಕುಟುಂಬ ಅನುವಂಶಿಕವಾಗಿ ಮುಂದುವರೆಸಿಕೊಂಡು ಬರುತ್ತಿದೆ. ಈಗಲೂ ಶಬರಿಮಲೆಯಲ್ಲಿ ಈ ಕುಟುಂಬ ವಿಶೇಷ ಗೌರವಕ್ಕೆ ಪಾತ್ರವಾಗುತ್ತಿದೆ. ತಿರುವಾಭರಣ ಯಾತ್ರೆಯಿಂದ ಹಿಡಿದು ಮಕರವಿಳುಕ್ಕುವಿನಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮಗಳಲ್ಲೆಲ್ಲಾ ಈ ರಾಜ ಕುಟುಂಬದ ಪಾತ್ರ ಮುಖ್ಯವಾಗಿರುತ್ತದೆ.

ಶಬರಿಮಲೆ ತಲುಪಿದ ರಾಜ ಕುಟುಂಬದ ವಾರಸುದಾರನಿಗೆ ‘ಮೇಲ್‌ಸಂತಿ ಪದುನೆಟ್ಟಾಂಬಡಿ’ ಬಳಿ ಸ್ವಾಗತ ಕೋರಿ ಸನ್ನಿಧಿಗೆ ಕರೆದೊಯ್ಯುತ್ತಾರೆ. ಇರುಮುಡಿ ಇಲ್ಲದಿದ್ದರೂ ಈ ಪಡಿಮೆಟ್ಟಿಲನ್ನು ಹತ್ತುವ ಅವಕಾಶ ಪಂದಳ ರಾಜವಂಶಕ್ಕೆ ಮಾತ್ರ ಇದೆ. ಇವರು ಸ್ವಾಮಿ ದರ್ಶನವನ್ನು ವಿಗ್ರಹಕ್ಕೆ ಎದುರಾಗಿ ನಿಂತು ಮಾಡುವುದಿಲ್ಲ. ಗರ್ಭಗುಡಿಯಲ್ಲಿ ಒಂದು ಪಕ್ಕದಲ್ಲಿ ನಿಂತು ಪ್ರಣಾಮ ಸಲ್ಲಿಸುತ್ತಾರೆ. 

ಆಭರಣ ಹಾಕೋದು ವರ್ಷಕ್ಕೊಂದೇ ಬಾರಿ

ಧನುರ್ಮಾಸದಲ್ಲಿ 28 ನೇ ದಿನದಂದು ಶಬರಿಮಲೆಗೆ 90 ಕಿ.ಮೀ ದೂರದಲ್ಲಿರುವ ಪಂದಳಂನಲ್ಲಿರುವ ವಲಿಯ ಕೋಲಿಕಲ್‌ನಿಂದ ಆಭರಣಗಳ ಮೂರು ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗುವ ಯಾತ್ರೆ ಆರಂಭವಾಗುತ್ತದೆ. ಆ ದಿನ ಬೆಳಗ್ಗೆ ಪಂದಳ ಮನೆತನದವರು ತಿರುವಾಭರಣಗಳಿಗೆ ಪೂಜೆ ಮಾಡುತ್ತಾರೆ.

ಒಂದು ಪೆಟ್ಟೆಗೆಯಲ್ಲಿ ಅಯ್ಯಪ್ಪ ಸ್ವಾಮಿಯ ಆಭರಣಗಳು, ಇನ್ನೆರಡು ಪಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತವೆ. ಪಂದಳದ ರಾಜ ಕುಟುಂಬದ ಹಿರಿಯರು ಸೂಚಿಸಿದ ವಾರಸುದಾರರು ಈ ಆಭರಣಗಳ ಜವಾಬ್ದಾರಿಯನ್ನು ವಹಿಸಿಕೊಂಡು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವ ಕೆಲಸ ಮಾಡುತ್ತಾರೆ. ಮುಂದೆ ತಿರುವಾಭರಣಗಳು, ಹಿಂದೆ ಪಲ್ಲಕ್ಕಿಯಲ್ಲಿ ಪಂದಳರಾಜ ಶಬರಿಯಾತ್ರೆಗೆ ಹೊರಡುತ್ತಾರೆ.

ಹೀಗೆ ಆಭರಣಗಳನ್ನು ತೆಗೆದುಕೊಂಡು ಹೋಗುವವರು ಅಯ್ಯಪ್ಪನ ದೀಕ್ಷೆ ಸ್ವೀಕರಿಸಬೇಕು. ಮೊದಲು ಅಡವಿ ಮಾರ್ಗದಲ್ಲಿ ಶರವೇಗದಲ್ಲಿ ಸಾಗುವ ಇವರು ಅಯುರೂರ್-ಪುದಿಯಕಾಪು ಪ್ರದೇಶದಲ್ಲಿ ವಿರಾಮ ತೆಗೆದುಕೊಳ್ಳುತ್ತಾರೆ. ಪಂಪಾ ತೀರ ತಲುಪಿದ ಬಳಿಕ ಪಂದಳ ವಾರಸುದಾರ ವಲಿಯನವೊತ್ತಂ ಎಂಬ ಪ್ರದೇಶದಲ್ಲಿ ನಿಲ್ಲುತ್ತಾರೆ.

ಮಕರ ಸಂಕ್ರಾಂತಿ ದಿನದಂದು ಸಂಜೆ ವೇಳೆಯಲ್ಲಿ ತಿರುವಾಭರಣಗಳು ಪಂಪಾ ತೀರಕ್ಕೆ, ಅಲ್ಲಿಂದ ಶರಂಗುತ್ತಿಗೆ ತಲುಪುತ್ತವೆ. ಈ ಚಿನ್ನದ ಆಭರಣಗಳನ್ನು ಅಯ್ಯಪ್ಪನಿಗೆ ಅಲಂಕರಿಸಿ ದ್ವಾರ ತೆರೆಯುವ ಸಮಯಕ್ಕೆ ಮಕರ ನಕ್ಷತ್ರ ಉದ್ಭವಿಸುತ್ತದೆ. ತದನಂತರ ಜ್ಯೋತಿ ದರ್ಶನ ನೀಡುತ್ತದೆ. ಮಕರ ಸಂಕ್ರಾಂತಿ ಮುಗಿದ ಬಳಿಕ ಅದನ್ನು ಮತ್ತೆ ಪಂದಳ ರಾಜಮನೆತನದ ವಶಕ್ಕೇ ನೀಡಲಾಗುತ್ತದೆ. ಮತ್ತೆ ಆ ಪೆಟ್ಟಿಗೆಗಳನ್ನು ಹೊರ ತೆರೆಯುವುದು ಮುಂದಿನ ಮಕರ ಸಂಕ್ರಾಂತಿಯಂದೇ.

ಆಭರಣಕ್ಕೇ ಇಲ್ಲಿ ಪೂಜೆ ನಡೆಯುತ್ತೆ!

ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ಪಂದಳ ರಾಜಮನೆತದ ಶ್ರಾಂಬಿಕಲ್ ಅರಮನೆಯಲ್ಲಿ ಭದ್ರವಾಗಿಡಲಾಗುತ್ತದೆ. ಮಕರ ಸಂಕ್ರಮಣ ಸಮಯದಲ್ಲಿ ಮಾತ್ರ ಅವುಗಳನ್ನು ಹೊರತೆಗೆದು ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಅಯ್ಯಪ್ಪಸ್ವಾಮಿಗೆ ಅಲಂಕಾರ ಮಾಡಲಾಗುತ್ತದೆ. ಈ ಆಭರಣಗಳು ಮೂರು ಪೆಟ್ಟಿಗೆಗಳಲ್ಲಿವೆ. ಇವುಗಳನ್ನು ಅಯ್ಯಪ್ಪನ ಭಕ್ತರು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಈ ಪೆಟ್ಟಿಗೆಗಳು ಶಬರಿಮಲೆಗೆ ಬಂದ ಮೇಲೆ ಇವುಗಳಿಗೆ ವಿಶೇಷ ಪೂಜೆ ಪುನಸ್ಕಾರ ಮಾಡಿ ಪ್ರಸಾದ ಹಂಚಲಾಗುತ್ತದೆ.

ಅಯ್ಯಪ್ಪನಿಗೂ ಪಂದಳ ರಾಜರಿಗೂ ಏನು ಸಂಬಂಧ?

ಅಯ್ಯಪ್ಪನಿಗೆ ಪಂದಳದ ಕಂದ ಎಂಬ ಹೆಸರೂ ಇದೆ. ಶಬರಿಮಲೆ ಸ್ಥಳ ಪುರಾಣದ ಪ್ರಕಾರ ಅಯ್ಯಪ್ಪ ಸ್ವಾಮಿ ಮಣಿಕಂಠ ಎಂಬ ನಾಮದಿಂದ ಪಂದಳ ರಾಜ ಕುಟುಂಬದಲ್ಲಿ ಬೆಳೆದವನು. ಕೇರಳದ ಇತರೆ ರಾಜಮನೆತನಗಳು ವೈಷ್ಣವಿ ಗೋತ್ರ ಹೊಂದಿದ್ದರೆ, ಪಂದಳ ಮನೆತನ ಮಾತ್ರ ಭಾರ್ಗವ ಗೋತ್ರವನ್ನು ಹೊಂದಿದೆ ಎಂಬುದು ಪಂದಳ ರಾಜಮನೆತನದ ವಿಶೇಷತೆ.

ಈ ಮನೆತನದ ರಾಜನಾದ ರಾಜಶೇಖರ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಪಂಪಾ ನದಿ ತೀರದಲ್ಲಿ ಮಗುವೊಂದು ಅಳುವ ಶಬ್ದ ಕೇಳುತ್ತದೆ. ಹುಡುಕಿದಾಗ, ಮಣಿಯನ್ನು ತೊಟ್ಟ ಮಗುವೊಂದು ರಾಜನ ಕಣ್ಣಿಗೆ ಗೋಚರವಾಗುತ್ತದೆ. ಮನೆಗೆ ಕೊಂಡೊಯ್ಯಲು ರಾಜಶೇಖರ ಅನುಮಾನಿಸುತ್ತಿದ್ದಾಗ ಅಗಸ್ತ್ಯ ಋಷಿಗಳು ಬಂದು ರಾಜನ ಗೊಂದಲವನ್ನು ಬಗೆಹರಿಸುತ್ತಾರೆ. ಮಕ್ಕಳಿಲ್ಲದ ರಾಜ ಅದನ್ನು ಮನೆಗೆ ಕರೆತಂದು ‘ಮಣಿಕಂಠ’ ಎಂದು ನಾಮಕರಣ ಮಾಡುತ್ತಾನೆ.

ಮಣಿಕಂಠನ ಆಗಮನದ ಬಳಿಕ ರಾಣಿ ಇನ್ನೊಂದು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಮಣಿಕಂಠನೇ ಮುಂದಿನ ಯುವರಾಜ ಎಂದು ಘೋಷಿಸಲು ರಾಜ ರಾಜಶೇಖರ ನಿರ್ಧರಿಸುತ್ತಾರೆ. ಆದರೆ ಮಂತ್ರಿಯ ಕುತಂತ್ರದಿಂದಾಗಿ ರಾಣಿ ಅದನ್ನು ತಿರಸ್ಕರಿಸಲು ಯೋಜನೆಯೊಂದನ್ನು ರೂಪಿಸಿ ಹುಲಿಯ ಹಾಲು ತರುವಂತೆ ಮಣಿಕಂಠನನ್ನು ಕಾಡಿಗೆ ಕಳುಹಿಸುತ್ತಾಳೆ. ಆದರೆ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೇ ಕುಳಿತು ಮಣಿಕಂಠ ವಾಪಸ್ಸಾಗುತ್ತಾನೆ. ಅದಾದ ಬಳಿಕ ಮಣಿಕಂಠ ಸಾಮಾನ್ಯನಲ್ಲ ಎಂಬುದು ಎಲ್ಲರ ಗಮನಕ್ಕೆ ಬರುತ್ತದೆ.

ಅಂದಿನಿಂದ ಮಣಿಕಂಠನನ್ನು ಅಯ್ಯಪ್ಪನ ಸ್ವರೂಪ ಎಂದು ಕರೆಯುತ್ತಾರೆ. ಮುಂದೆ ಪಂದಳ ಮನೆತನವು ಅಯ್ಯಪ್ಪನನ್ನು ಆರಾಧಿಸಲು ಪ್ರಾರಂಭಿಸುತ್ತದೆ. ಅಲ್ಲಿಂದಿಲ್ಲಿಯವರೆಗೂ ಶಬರಿಮಲೆಯಲ್ಲಿ ಈ ಕುಟುಂಬ ವಿಶೇಷ ಗೌರವಕ್ಕೆ ಪಾತ್ರವಾಗುತ್ತಿದೆ.

ಆಭರಣಗಳ ವಾರ್ಷಿಕ ಯಾತ್ರೆ ಕೂಡ ವಿಶೇಷ

ಪಂದಳದ ಅರಮನೆಯಿಂದ ಶಬರಿಮಲೆಗೆ ತಿರುವಾಭರಣಗಳನ್ನು ತರುವ ಹಾಗೂ ಪೂಜೆಯ ನಂತರ ಮತ್ತೆ ಮರಳಿ ಕೊಂಡೊಯ್ಯುವ ಸಂಪ್ರದಾಯಗಳು ಅತ್ಯಂತ ವಿಶಿಷ್ಟವಾಗಿವೆ. ಮಕರವಿಳುಕ್ಕುವಿನ ಬಳಿಕ 7 ನೇ ಮಕರಂ ಮುಂಜಾನೆ ಆ ಋತುವಿನ ಶಬರಿಮಲೆ ದರ್ಶನ ಅಂತಿಮಗೊಳ್ಳುತ್ತದೆ. ಮತ್ತೆ ಅದು ತೆರೆಯುವುದು ಮುಂದಿನ ಸಂಕ್ರಮಣದಲ್ಲಿಯೇ.

ತಿರುವಾಭರಣಗಳೂ ಕೂಡ ಪಂದಳ ರಾಜ ಮನೆತನದಿಂದ ಸಕಲ ಪೂಜಾ ವಿಧಿವಿಧಾನಗಳ ಮೂಲಕ ಅರಮನೆಯಿಂದ ಬಂದಂತೆಯೇ ಮತ್ತದೇ ಪೂಜಾಕ್ರಮಗಳ ಮುಖಾಂತರ ರಾಜಮನೆತನದ ವಶಕ್ಕೆ ಹೋಗುತ್ತವೆ. ಸಂಕ್ರಮಣ ಮುಗಿದ ಮೊದಲನೇ ರಾತ್ರಿ ತಿರುವಾಭರಣ ಹೊತ್ತೊಯ್ಯುವ ವಾರಸುದಾರರು ಎಸ್ಟೇಟ್‌ನಲ್ಲಿ ತಂಗುತ್ತಾರೆ.

ಎರಡನೇ ದಿನ ಪೆರುನಾಡು ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಈ ಪೆರುನಾಡು ದೇವಾಲಯವು ಸ್ವತಃ ಪಂದಳ ರಾಜನು ತಾನೇ ನಿಂತು ಕಟ್ಟಿಸಿದ್ದ ದೇವಸ್ಥಾನ. ಭಕ್ತಾದಿಗಳೂ ಕೂಡ ಇದೇ ಮಾರ್ಗವಾಗಿ ಬಂದು ಪವಿತ್ರ ತಿರುವಾಭರಣಗಳ ದರ್ಶನ ಪಡೆಯುತ್ತಾರೆ.

9 ನೇ ಮಕರಂನಂದು ತಿರುವಾಭರಣಗಳೊಂದಿಗೆ ಆರನ್‌ಮುಲಾ ಅರಮನೆಗೆ ತಲುಪಿ ಅಲ್ಲಿಯೇ ತಂಗಲಾಗುತ್ತದೆ. ಮಾರನೇ ದಿನ ಪಂದಳ ಅರಮನೆಯ ಆವರಣದಲ್ಲಿರುವ ತಿಜೋರಿಯಲ್ಲಿ ಅವುಗಳನ್ನು ಇರಿಸಲಾಗುತ್ತದೆ. ಅಲ್ಲಿಗೆ ತಿರುವಾಭರಣಗಳ ವರ್ಷದ ಪ್ರಯಾಣ ಮುಕ್ತಾಯವಾಗುತ್ತದೆ.

 

Follow Us:
Download App:
  • android
  • ios