Asianet Suvarna News Asianet Suvarna News

ಉಡುಪಿ ಜಿಲ್ಲೆಯ ಕಾಪುವಿನಲ್ಲೂ ಈಗ ಸ್ಕೂಬಾ ಡೈವಿಂಗ್

ಸಮುದ್ರದ ಜೀವ ವೈವಿಧ್ಯ ಹಾಗೂ ಸೌಂದರ್ಯ ವೀಕ್ಷಿಸುವ ಸ್ಕೂಬಾ ಡೈವಿಂಗ್ ಜಲಕ್ರೀಡೆಯನ್ನು ಉಡುಪಿಯ ಕಾಪು ಕಡಲತೀರದಲ್ಲಿ ಭಾನುವಾರ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟನೆ ನೆರವೇರಿಸಿದರು.

Scuba Diving At Kaup Beach

ಉಡುಪಿ: ಸಮುದ್ರದ ಜೀವ ವೈವಿಧ್ಯ ಹಾಗೂ ಸೌಂದರ್ಯ ವೀಕ್ಷಿಸುವ ಸ್ಕೂಬಾ ಡೈವಿಂಗ್ ಜಲಕ್ರೀಡೆಯನ್ನು ಉಡುಪಿಯ ಕಾಪು ಕಡಲತೀರದಲ್ಲಿ ಭಾನುವಾರ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟನೆ ನೆರವೇರಿಸಿದರು.

ಉಡುಪಿ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಈ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗವನ್ನು ಪರಿಶೀಲಿಸಿ ಅಂತಿಮವಾಗಿ ಬೋಟ್ ಫೆಡರೇಷನ್ ನೀಡಿದ ಅಭಿಪ್ರಾಯದಂತೆ ಕಾಪು ಬೀಚ್‌ನಿಂದ ಸಮುದ್ರದಲ್ಲಿ 8 ಕಿ.ಮೀ. ದೂರದ ಮೂಲ್ಕಿ ಪಾರ್ ಎಂಬಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ನೀಡಲಾಗಿದೆ.

ಇಲ್ಲಿನ ಸಮುದ್ರದಾಳದಲ್ಲಿ ಹವಳದ ದಿಬ್ಬ, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ. ಅಲ್ಲದೆ, ದೃಶ್ಯಗಳು ಇತರೆಡೆಗಿಂತ ಸ್ಪಷ್ಟವಾಗಿ ಕಾಣಿಸಲಿವೆ. ಸ್ಕೂಬಾ ಡೈವಿಂಗ್ ನಡೆಸಲು ವೆಸ್ಟ್ ಕೋ ಅಡ್ವೆಂಚರ್ಸ್‌ ಕಂಪನಿ ಉಡುಪಿ ಜಿಲ್ಲಾಡಳಿತದಿಂದ 3 ವರ್ಷಗಳ ಗುತ್ತಿಗೆ ಪಡೆದಿದ್ದು, ಇದೇ ಕಂಪನಿ ಈಗಾಗಲೇ ಗೋವಾ, ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದೆ.

ಅರ್ಹತೆ ಏನು?: ಸ್ಕೂಬಾ ಡೈವಿಂಗ್‌ಗೆ ಈಜು ಬರಬೇಕೆಂಬ ನಿಯಮವಿಲ್ಲ. 10 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬ ಹುದು. 71 ವರ್ಷದ ವೃದ್ಧೆ ಒಬ್ಬರು ಈಗಲೂ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾರೆ. ಆದರೆ, ಹೃದಯರೋಗ ಸೇರಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬ ಬಗ್ಗೆ ಸ್ವಯಂ ಘೋಷಿತ ಪತ್ರಕ್ಕೆ ಸಹಿ ಮಾಡಬೇಕು.

ನುರಿತ ತರಬೇತುದಾರರ ಸಹಾಯದಿಂದ ಡೈವಿಂಗ್ ಮಾಡಬಹುದು. ಇದಕ್ಕೆ ಅಗತ್ಯವಾದ ₹35 ಲಕ್ಷ ವೆಚ್ಚದ ಎಲ್ಲ ಜೀವ ರಕ್ಷಕ ಉಪಕರಣಗಳು ಇಲ್ಲಿ ಲಭ್ಯವಿದೆ. ಒಬ್ಬರಿಗೆ ₹3500 ಶುಲ್ಕ ನಿಗದಿ ಪಡಿಸಿದ್ದು, ಕಾರವಾರದ ನೇತ್ರಾಣಿ ದ್ವೀಪದಲ್ಲಿ ₹6000 ದರವಿದೆ. ಮುಂಗಡ ಬುಕ್ಕಿಂಗ್ ಮಾಡಲು ಮೊ:7057066669 ಅನ್ನು ಸಂಪರ್ಕಿಸಬಹುದು ಎಂದು ವೆಸ್ಟ್ ಕೋ ಅಡ್ವೆಂಚರ್‌ನ ವ್ಯವಸ್ಥಾಪಕ ಪವನ್ ಶೌರಿ ತಿಳಿಸಿದ್ದಾರೆ.

 

Follow Us:
Download App:
  • android
  • ios