Asianet Suvarna News Asianet Suvarna News

ರೋಷನ್ ಬೇಗ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ ಕೇಂದ್ರ ಸಚಿವ

ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿ ಗರಂ ಆಗಿರುವ ರೋಷನ್ ಬೇಗ್ ಅವರನ್ನು ಇದೀಗ ಬಿಜೆಪಿಗೆ ಆಹ್ವಾನಿಸಲಾಗಿದೆ. 

Sadananda Gowda indirectly Invites Congress Leader Roshan Baig
Author
Bengaluru, First Published May 22, 2019, 11:37 AM IST

ನವದೆಹಲಿ :  ‘‘ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರನ್ನೂ ನಾವು ಸ್ವಾಗತಿಸುತ್ತೇವೆ. ನಮಗೆ ವ್ಯಕ್ತಿಗತ ದ್ವೇಷವಿಲ್ಲ. ರಾಜಕಾರಣ ವ್ಯಕ್ತಿ ವ್ಯಕ್ತಿಗಳ ದ್ವೇಷದ ಅಖಾಡವಲ್ಲ. ನಮ್ಮ ತತ್ವ ಸಿದ್ಧಾಂತವನ್ನು ಒಪ್ಪಿ ಬಂದವರನ್ನು ನಾವು ಸ್ವೀಕರಿಸುತ್ತೇವೆ. ಉಮೇಶ್‌ ಜಾಧವ್‌ ಮತ್ತವರ ಮಗನನ್ನು ನಾನು ಒಪ್ಪಿಕೊಂಡು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ’’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ, ಶಾಸಕ ರೋಷನ್‌ ಬೇಗ್‌ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸುವ ವೇಳೆ ಪರೋಕ್ಷವಾಗಿ ಪಕ್ಷದ ಬಾಗಿಲು ತೆರೆದಿದೆ ಎಂಬ ಸಂದೇಶ ರವಾನಿಸಿದರು. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಎಲ್ಲರನ್ನೂ ಸ್ವಾಗತಿಸುವುದಾಗಿ ಹೇಳಿದರು.

ಬೇಗ್‌ ಈಗ ಸತ್ಯ ಬಿಚ್ಚಿಟ್ಟಿದ್ದಾರೆ:  ಸತ್ಯ ಸಂಗತಿಗಳನ್ನು ಯಾರಿಗೂ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯ ಒಂದಲ್ಲ ಒಂದು ದಿನ ಸಾರ್ವಜನಿಕರ ಮುಂದೆ ಬಂದೇ ಬರುತ್ತದೆ. ಬೇಗ್‌ ಅವರು ಸತ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಸಿದ್ದರು. ಆದರೆ ಈಗ ಅನಿವಾರ್ಯವಾಗಿ ಸತ್ಯ ಹೊರ ಹಾಕಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ ಎಂದು ಸದಾನಂದ ಗೌಡ ಹೇಳಿದರು.

ಸಿದ್ದರಾಮಯ್ಯ ಅವರಿಗೆ ಪ್ರತಿರೋಧ ವ್ಯಕ್ತಪಡಿಸಲು ಎಲ್ಲರೂ ಹೆದರುತ್ತಿದ್ದರು. ಆದರೆ ಬೆಂಗಳೂರಿನಲ್ಲಿನ ತನ್ನ ಸ್ಥಾನವನ್ನು ಜಮೀರ್‌ ಅಹ್ಮದ್‌ ಆಕ್ರಮಿಸುತ್ತಿದ್ದು ಇದಕ್ಕೆ ಸಿದ್ದರಾಮಯ್ಯ ಅವರೇ ಪರೋಕ್ಷವಾಗಿ ಕಾರಣರು ಎಂದು ಬೇಗ್‌ ಅವರಿಗೆ ಅನಿಸಿರಬೇಕು. ಇದರಿಂದ ಸತ್ಯ ಹೊರಬಂದಿದೆ. ಇದು ರಾಜ್ಯದ ರಾಜಕಾರಣಕ್ಕೆ ಹೊಸ ದಿಕ್ಕು ನೀಡಬಹುದು ಎಂದರು.

ಬಿಜೆಪಿ, ಎನ್‌ಡಿಎ ಸರ್ಕಾರ ಮುಸ್ಲಿಮರ ಪರ ಅನೇಕ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೆ ಏನೂ ಮಾಡಿಲ್ಲ ಎಂಬ ಬೇಗ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು, ಬೇಗ್‌ ಅವರಿಗೆ ತಡವಾಗಿ ಎಚ್ಚರವಾಗಿದೆ. ಅಥವಾ ಎಚ್ಚರವಾಗಿದ್ದರೂ ಹೇಳಲಿಕ್ಕೆ ಆಗದೆ ಚಡಪಡಿಸಿದ್ದರೋ ಏನೋ. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಹಜ್ ಭವನಕ್ಕೆ 40 ಕೋಟಿ ರು. ನೀಡಿದ್ದೆ. ಎಲ್ಲರನ್ನೂ ಸಮಾನವಾಗಿ ನೋಡುವ ವ್ಯವಸ್ಥೆ ಬಿಜೆಪಿಯಲ್ಲಿ ಮಾತ್ರವಿದೆ ಎಂದು ಹೇಳಿದರು.

Follow Us:
Download App:
  • android
  • ios