Asianet Suvarna News Asianet Suvarna News

ಶಾ ಭೇಟಿಗೆ 15 ಜನರೊಂದಿಗೆ ರಮೇಶ್ ಜಾರಕಿಹೊಳಿ : ಸರ್ಕಾರದ ಭವಿಷ್ಯವೇನು..?

ಕಾಂಗ್ರೆಸ್‌ನ ಅತೃಪ್ತ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗಾಗಿ ಕಾದಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಭೇಟಿ ಬಳಿಕ ಸರ್ಕಾರದ ಭವಿಷ್ಯ ಏನಾಗಲಿದೆ ಎನ್ನುವುದು ನಿರ್ಧಾರವಾಗಲಿದೆ. 

Ramesh Jarkiholi to meet Amit Shah With 15 Leaders
Author
Bengaluru, First Published Jan 1, 2019, 7:06 AM IST

ಬೆಂಗಳೂರು : ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗಾಗಿ ಕಾದು ಕುಳಿತಿದ್ದಾರೆ.

"

ಇನ್ನೆರಡು ದಿನಗಳಲ್ಲಿ ಅಮಿತ್ ಶಾ ಅವರೊಂದಿಗೆ ಭೇಟಿ ಮಾಡುವ ನಿರೀಕ್ಷೆಯಿದ್ದು, ಈ ಭೇಟಿಯ ನಂತರವೇ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಬಹುದು. ಇನ್ನೆರಡು ದಿನಗಳಲ್ಲಿ ಭೇಟಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ರಮೇಶ್ ಜಾರಕಿಹೊಳಿ ಅವರೊಂದಿಗೆ ಕಾಂಗ್ರೆಸ್ಸಿನ ಮತ್ತೊಬ್ಬ ಶಾಸಕ ನಾಗೇಂದ್ರ ಅವರೂ ಇದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ತಂಡದ ಇತರ ಶಾಸಕರು ದೆಹಲಿಯಲ್ಲಿ ಇರುವ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ತಮ್ಮನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿರುವ ನಡೆಯಿಂದ ಆಕ್ರೋಶಗೊಂಡಿರುವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರೂ ಸೇರಿದಂತೆ ಅವರ ಕುಟುಂಬ ವರ್ಗದ ಸಂಪರ್ಕಕ್ಕೆ ಸಿಗದೆ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಮೂಲಕ ಮಾತುಕತೆ ನಡೆಸಿದಲ್ಲಿ ಪತ್ತೆ ಹಚ್ಚಬಹುದು ಎಂಬ ಕಾರಣಕ್ಕಾಗಿ ಅದರಿಂದಲೂ ದೂರ ಉಳಿದಿದ್ದಾರೆ. ಆದರೆ, ದೆಹಲಿಯಲ್ಲೇ ಕುಳಿತು ಬಿಜೆಪಿ ನಾಯಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಕೇಂದ್ರ ಸಚಿವರೂ ಸೇರಿದಂತೆ ಎರಡನೇ ಹಂತದ ವಿವಿಧ ನಾಯಕರೊಂದಿಗೆ ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸುತ್ತಿರುವ ರಮೇಶ್ ಜಾರಕಿಹೊಳಿ ಅವರು ಅಂತಿಮ ಹಂತದ ಕಸರತ್ತಿಗಾಗಿ ಅಮಿತ್ ಶಾ ಅವರ ಭೇಟಿಯ ನಿರೀಕ್ಷೆಯಲ್ಲಿದ್ದಾರೆ. ಅಮಿತ್ ಶಾ ಅವರು ಹಸಿರು ನಿಶಾನೆ 
ತೋರಿದ ನಂತರವೇ ರಮೇಶ್ ಜಾರಕಿಹೊಳಿ ಅವರ ಪ್ರಯತ್ನಕ್ಕೆ ಮಹತ್ವ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ತಮ್ಮೊಂದಿಗೆ 12 ರಿಂದ 15 ಮಂದಿ ಶಾಸಕರು ಇದ್ದಾರೆ ಎಂಬುದಾಗಿ ರಮೇಶ್ ಜಾರಕಿಹೊಳಿ ಅವರು ಹೇಳುತ್ತಿದ್ದರೂ ಬಿಜೆಪಿ ನಾಯಕರಿಗೆ ಅದು ಮನವರಿಕೆ ಆಗುತ್ತಿಲ್ಲ.

 ಕೇವಲ ಮೂರ್ನಾಲ್ಕು ಶಾಸಕರಷ್ಟೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಲ್ಲಿ ಅದರಿಂದ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಹಾಗೊಂದು ವೇಳೆ ಹೆಚ್ಚೂ ಕಡಮೆ ಆದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ದೇಶಾದ್ಯಂತ ಬಿಜೆಪಿ ವಿರುದ್ಧ ಅಭಿಯಾನ ಆರಂಭಿಸಬ ಹುದು. ಅದರಿಂದ ಪಕ್ಷದ ವರ್ಚಸ್ಸಿಗೆ ನಷ್ಟವಾಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಈ
ಕಾರಣಕ್ಕಾಗಿಯೇ ಮೊದಲು ಸರ್ಕಾರ ಪತನಗೊಳ್ಳಲಿ.

ನಂತರ ಪರ್ಯಾಯ ಸರ್ಕಾರ ರಚನೆ ಪ್ರಯತ್ನ ಮಾಡೋಣ. ಸರ್ಕಾರ ಪತನಗೊಂಡಲ್ಲಿ ಅದರಲ್ಲಿ ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ ಎಂಬ ಸಂದೇಶ ರವಾನಿ ಸುವ ಚಿಂತನೆ ಬಿಜೆಪಿ ಪಾಳೆಯದಲ್ಲಿದೆ ಎನ್ನಲಾಗಿದೆ. ಅಮಿತ್ ಶಾ ಅವರು ಸೋಮವಾರ ತಡರಾತ್ರಿ ದೆಹಲಿಗೆ ವಾಪಸಾಗುವ ಕಾರ್ಯಕ್ರಮವಿತ್ತು. ಹೀಗಾಗಿ, ಇನ್ನೆರಡು ದಿನಗಳಲ್ಲಿ ರಮೇಶ್ ಜಾರಕಿಹೊಳಿ ಅವರು ಶಾ ಜತೆ ಮಾತುಕತೆ ನಡೆಸಿದ ನಂತರ ಬೆಂಗಳೂರಿಗೆ ಹಿಂದಿರುಗಿ ಮುಂದಿನ ತಂತ್ರ ಅನುಷ್ಠಾನಗೊಳಿಸುವ ಸಂಭವವಿದೆ.

Follow Us:
Download App:
  • android
  • ios