Asianet Suvarna News Asianet Suvarna News

‘ಕೈ’ ಬಂಡಾಯ ಅರ್ಧ ಥಂಡಾ! ರಾಮಲಿಂಗಾರೆಡ್ಡಿ ನಿರ್ಧಾರವೇನು..?

ಸಂಪುಟ ಪುನಾ​ರ​ಚನೆ ನಂತರ ಹೊಂದಿದ್ದ ಹಿರಿಯ ನಾಯಕ ರಾಮ​ಲಿಂಗಾ​ರೆಡ್ಡಿ ಅವ​ರನ್ನು ಸಮಾ​ಧಾನ ಪಡಿ​ಸು​ವಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಯಶ​ಸ್ವಿ​ಯಾ​ಗಿ​ದ್ದಾರೆ

Ramalinga Reddy Happy After Meeting With Congress Leader Siddaramaiah
Author
Bengaluru, First Published Dec 26, 2018, 7:21 AM IST

ಬೆಂಗ​ಳೂರು :  ಸಚಿವ ಸಂಪುಟ ಪುನಾ​ರ​ಚನೆ ನಂತರ ತೀವ್ರ ಅತೃಪ್ತಿ ಹೊಂದಿದ್ದ ಹಿರಿಯ ನಾಯಕ ರಾಮ​ಲಿಂಗಾ​ರೆಡ್ಡಿ ಅವ​ರನ್ನು ಸಮಾ​ಧಾನ ಪಡಿ​ಸು​ವಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಯಶ​ಸ್ವಿ​ಯಾ​ಗಿ​ದ್ದಾರೆ. ಆದರೆ, ಮತ್ತೊಬ್ಬ ಅತೃಪ್ತ ರಮೇಶ್‌ ಜಾರ​ಕಿ​ಹೊಳಿ ಹಾಗೂ ಅವರ ತಂಡ ಮಾತ್ರ ತಮ್ಮ ಮುಂದಿನ ನಡೆ​ಯ ಬಗ್ಗೆ ಯಾವುದೇ ಗುಟ್ಟು ಬಿಟ್ಟು​ಕೊ​ಡದೆ ಮುಗುಂ ಆಗಿ ಉಳಿ​ದಿ​ದೆ.

ಪಕ್ಷದ ಕೆಲ ನಾಯ​ಕರು ಉದ್ದೇ​ಶ​ಪೂ​ರ್ವ​ಕ​ವಾಗಿ ಹೈಕ​ಮಾಂಡ್‌ಗೆ ತಪ್ಪು ಮಾಹಿತಿ ನೀಡಿ ತಮಗೆ ಸಚಿವ ಸ್ಥಾನ ತಪ್ಪಿ​ಸಿ​ದ್ದಾರೆ ಎಂದು ಅಸ​ಮಾ​ಧಾ​ನ​ಗೊಂಡಿದ್ದ ರಾಮ​ಲಿಂಗಾ​ರೆಡ್ಡಿ ಅವ​ರೊಂದಿಗೆ ಮಂಗ​ಳ​ವಾರ ಮಾತು​ಕತೆ ನಡೆ​ಸಿದ ಸಿದ್ದ​ರಾ​ಮಯ್ಯ ಅವರು, ಕೆಲ ಅನಿ​ವಾರ್ಯ ಕಾರ​ಣ​ಗ​ಳಿಂದ ಹಿರಿ​ಯ​ರಾ​ಗಿ​ದ್ದರೂ ನಿಮಗೆ ಸಚಿವ ಸ್ಥಾನ ತಪ್ಪಿದೆ. ಆದರೆ, ಒಳ್ಳೆಯ ಕಾಲ ಬರು​ತ್ತದೆ. ಸ್ವಲ್ಪ ತಾಳೆ ವಹಿಸಿ. ಈಗ ನಾನು ಅಧಿ​ಕಾರ ಇಲ್ಲದೇ ಕಾಯು​ತ್ತಿ​ಲ್ಲವೇ? ಅದೇ ರೀತಿ ನೀವು ತಾಳ್ಮೆ ವಹಿಸಿ. ಖಂಡಿ​ತ​ವಾ​ಗಿಯೂ ಉತ್ತಮ ಅವ​ಕಾಶ ಬರು​ತ್ತದೆ ಎಂದು ಭರ​ವಸೆ ನೀಡಿದ ಹಿನ್ನೆ​ಲೆ​ಯಲ್ಲಿ ರಾಮ​ಲಿಂಗಾ​ರೆಡ್ಡಿ ತಾಳ್ಮೆ ವಹಿ​ಸಲು ನಿರ್ಧ​ರಿ​ಸಿ​ದ್ದಾರೆ ಎಂದು ಮೂಲ​ಗಳು ಹೇಳಿ​ವೆ.

ಈ ಮಾತು​ಕ​ತೆಯ ವೇಳೆ ರಾಮ​ಲಿಂಗಾ​ರೆಡ್ಡಿ ಅವ​ರು, ತಮ್ಮ ವಿರುದ್ಧ ಷಡ್ಯಂತ್ರ ನಡೆ​ಸಿದ ಇಬ್ಬರು ನಾಯ​ಕರ ವಿರುದ್ಧ ಹರಿ​ಹಾ​ಯ್ದರು ಎನ್ನ​ಲಾ​ಗಿದೆ. ಅಲ್ಲದೆ, ನಾಲ್ಕು ಬಾರಿ ಸಚಿ​ವ​ರಾ​ದ​ವ​ರಿಗೆ ಹುದ್ದೆ ಬೇಡ ಎಂಬ ಮಾನ​ದಂಡ ಅನು​ಸ​ರಿ​ಸಿ​ರು​ವು​ದಾಗಿ ಹೇಳು​ತ್ತಾರೆ. ಆದರೆ, ನಾಲ್ಕು ಬಾರಿ ಸಚಿ​ವ​ರಾ​ಗಿದ್ದ ಡಾ.ಜಿ. ಪರ​ಮೇ​ಶ್ವರ್‌, ದೇಶ​ಪಾಂಡೆ, ಡಿ.ಕೆ. ಶಿವ​ಕು​ಮಾರ್‌ ಮೊದ​ಲಾ​ದ​ವ​ರೆಲ್ಲ ಸಚಿ​ವ​ರಾ​ಗಿ​ದ್ದಾರೆ. ಈ ಮಾನ​ದಂಡ ಅನು​ಸ​ರಿ​ಸಿದ್ದೇ ನಿಜ​ವಾ​ಗಿ​ದ್ದರೆ ಅವ​ರೆಲ್ಲ ಸಚಿ​ವ​ರಾ​ಗಿದ್ದು ಏಕೆ? ಇದು ತಾರ​ತಮ್ಯವಲ್ಲವೇ ಎಂದು ನೇರ​ವಾಗಿ ಪ್ರಶ್ನಿ​ಸಿ​ದರು ಎನ್ನ​ಲಾ​ಗಿ​ದೆ.

ಅಲ್ಲದೆ, ನಾನು ಸಚಿವ ಸ್ಥಾನ​ಕ್ಕಾಗಿ ಲಾಬಿ ನಡೆ​ಸ​ಲಿಲ್ಲ. ನೀವು ಸೇರಿ​ದಂತೆ ಯಾರ ಬಳಿಯೂ ಸಚಿವ ಸ್ಥಾನ​ಕ್ಕಾಗಿ ಬೇಡಿ​ಕೆ​ಯಿ​ಟ್ಟಿರ​ಲಿಲ್ಲ. ಆದರೆ, ತಾರ​ತಮ್ಯ ನಡೆ​ದಾಗ ಕ್ಷೇತ್ರದ ಜನರು ಹೀಗೇಕೆ ಎಂದು ಕೇಳು​ತ್ತಾರೆ. ಆಗ ನಾನು ಜನ​ರಿಗೆ ಹೇಗೆ ಮುಖ ತೋರಿ​ಸು​ವುದು? ನಾನೆಂದೂ ಪಕ್ಷ ವಿರೋಧಿ ಚಟು​ವ​ಟಿ​ಕೆ​ಯಲ್ಲಿ ಪಾಲ್ಗೊಂಡ​ವ​ನಲ್ಲ. ಬಿಬಿ​ಎಂಪಿಯಲ್ಲಿ ಪಕ್ಷ ಅಧಿ​ಕಾ​ರಕ್ಕೆ ಬರಲು ಶ್ರಮಿ​ಸಿ​ದ್ದೇನೆ. ನನ್ನ ಕ್ಷೇತ್ರ​ವ​ಲ್ಲದೆ, ಇತರ ಕ್ಷೇತ್ರ​ಗ​ಳಲ್ಲೂ ಕಾಂಗ್ರೆಸ್‌ ಗೆಲು​ವಿಗೆ ಪ್ರಾಮಾ​ಣಿಕ ಪ್ರಯತ್ನ ಮಾಡಿ​ದ್ದೇನೆ. ಹೀಗಿ​ದ್ದರೂ, ತಾರ​ತಮ್ಯ ಮಾಡಿ​ರು​ವುದು ನೋವು ತಂದಿದೆ ಎಂದು ತಮ್ಮ ಬೇಸ​ರ​ವನ್ನು ತೋಡಿ​ಕೊಂಡರು ಎನ್ನ​ಲಾಗಿ​ದೆ.

ಈ ಮಾತು​ಕತೆ ವೇಳೆ ಸಿದ್ದ​ರಾ​ಮಯ್ಯ, ನೀವು ಹಿರಿ​ಯರು, ರಾಜ​ಕಾ​ರ​ಣ​ದಲ್ಲಿ ಒಮ್ಮೊಮ್ಮೆ ಇಂತಹ ಪರಿ​ಸ್ಥಿತಿ ಬರು​ತ್ತದೆ. ಹಾಗಂತ ಇದು ಶಾಶ್ವ​ತ​ವಲ್ಲ. ಒಳ್ಳೆ ಕಾಲ ಬರು​ತ್ತದೆ. ಈಗ ನನಗೂ ಅಧಿ​ಕಾ​ರ​ವಿಲ್ಲ. ನಾನು ಕಾಯು​ತ್ತಿ​ಲ್ಲವೇ? ನಿಮಗೂ ಒಳ್ಳೆ ಕಾಲ ಬರು​ತ್ತದೆ. ಲೋಕ​ಸಭೆ ಚುನಾ​ವಣೆವರೆಗೂ ತಾಳ್ಮೆ​ವ​ಹಿಸಿ ಅನಂತರ ಉತ್ತಮ ಅವ​ಕಾ​ಶ​ಗಳು ಬರು​ತ್ತವೆ ಎಂದು ಸಮಾ​ಧಾನ ಪಡಿ​ಸಿ​ದರು ಎನ್ನ​ಲಾ​ಗಿ​ದೆ.

ಸಿದ್ದ​ರಾ​ಮಯ್ಯ ಅವರ ಭೇಟಿಯ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ರಾಮ​ಲಿಂಗಾ​ರೆಡ್ಡಿ, ಪಕ್ಷ​ದಲ್ಲಿ ಕೆಲ​ವೊಂದು ನ್ಯೂನ​ತೆ​ಗ​ಳಿ​ದ್ದವು. ಅವು​ಗಳನ್ನು ಸಿದ್ದ​ರಾ​ಮಯ್ಯ ಅವರ ಗಮ​ನಕ್ಕೆ ತಂದಿ​ದ್ದೇನೆ. ಅವ​ರೊಂದಿಗೆ ಮಾತು​ಕ​ತೆ​ ನಡೆಸಿದ ನಂತರ ಸಮಾ​ಧಾನ ಆಗಿದೆ. ಮೈತ್ರಿ ಸರ್ಕಾರ ಇರು​ವು​ದ​ರಿಂದ ಇಂತಹ ಸಮ​ಸ್ಯೆ​ಗಳು ಇರು​ತ್ತವೆ. ಕಾಂಗ್ರೆಸ್‌ ಸರ್ಕಾರ ಬಂದಿ​ದ್ದರೆ ಈ ಸಮಸ್ಯೆ ಇರುತ್ತಿರ​ಲಿಲ್ಲ ಎಂದ​ರು.

ಕಾಂಗ್ರೆಸ್‌ ಪಕ್ಷ ತೊರೆ​ಯುವ ಬಗ್ಗೆ ತಾವು ಎಂದಿಗೂ ಯೋಚಿ​ಸಿಲ್ಲ. ಬಿಜೆ​ಪಿಯ ಯಾವ ನಾಯ​ಕರೂ ಈ ಬಗ್ಗೆ ನನ್ನನ್ನು ಸಂಪ​ರ್ಕಿ​ಸಿಲ್ಲ. ವಿಶ್ವ​ನಾಥ್‌ ಅವರು ಆಮಂತ್ರಣ ಪತ್ರಿಕೆ ನೀಡಲು ಭೇಟಿ​ಯಾ​ಗಿ​ದ್ದರೇ ಹೊರತು ರಾಜ​ಕೀಯ ಚರ್ಚೆ​ಗಲ್ಲ. ನಾನು ಪಕ್ಷ ಬಿಡು​ವು​ದಿಲ್ಲ. ನನಗೆ ಸಚಿವ ಸ್ಥಾನ ದೊರ​ಕ​ಲಿಲ್ಲ ಎಂದು ಯಾವುದೇ ಕಾರ್ಪೊ​ರೇ​ಟರ್‌ ಹಾಗೂ ಪದಾ​ಧಿ​ಕಾ​ರಿ​ಗಳು ರಾಜೀ​ನಾಮೆ ನೀಡು​ವು​ದಿಲ್ಲ ಎಂದು ಅವರು ಸ್ಪಷ್ಟ​ಪ​ಡಿ​ಸಿ​ದ​ರು.

ಸೋಮ​ವಾ​ರವೇ ಕರೆ ಮಾಡಿದ್ದ ಸಿದ್ದು:

ಸಚಿವ ಸ್ಥಾನಕ್ಕೆ ತಮ್ಮನ್ನು ಪರಿ​ಗ​ಣಿ​ಸದೇ ಇರು​ವುದು ಹಾಗೂ ಪಕ್ಷದ ಕೆಲ ನಾಯ​ಕರು ಷಡ್ಯಂತ್ರ ನಡೆಸಿ ತಮ್ಮನ್ನು ಮೂಲೆ​ಗುಂಪು ಮಾಡಲು ಯತ್ನಿ​ಸು​ತ್ತಿ​ರು​ವು​ದರ ವಿರುದ್ಧ ಸಿಡಿ​ದೆ​ದ್ದಿದ್ದ ರಾಮ​ಲಿಂಗಾ​ರೆಡ್ಡಿ ಅವರು ಬಂಡಾ​ಯದ ಕಹಳೆ ಊದಿ​ದ್ದರು. ಇದೇ ವೇಳೆ ಅವರ ಬೆಂಬ​ಲಿ​ಗ ಕಾರ್ಪೊ​ರೇ​ಟ​ರ್‌​ಗಳು ಹಾಗೂ ಪಕ್ಷದ ಪದಾ​ಧಿ​ಕಾ​ರಿ​ಗಳು ಸಾಮೂ​ಹಿಕ ರಾಜೀ​ನಾ​ಮೆಯ ಬೆದ​ರಿ​ಕೆ​ಯನ್ನು ಒಡ್ಡಿ​ದ್ದರು. ಇದೇ ವೇಳೆ ಕೆಲ ಬಿಜೆಪಿ ನಾಯ​ಕರು ರಾಮ​ಲಿಂಗಾ​ರೆಡ್ಡಿ ಅವ​ರನ್ನು ಸಂಪ​ರ್ಕಿ​ಸಲು ಮುಂದಾ​ಗಿದ್ದು ಸುದ್ದಿ​ಯಾ​ಗಿ​ತ್ತು.

ಈ ಹಿನ್ನೆ​ಲೆ​ಯಲ್ಲಿ ಸೋಮ​ವಾ​ರವೇ ದೂರ​ವಾಣಿ ಮೂಲಕ ರಾಮ​ಲಿಂಗಾ​ರೆಡ್ಡಿ ಅವ​ರನ್ನು ಸಂಪ​ರ್ಕಿ​ಸಿದ್ದ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ಸಮಾ​ಧಾನಪಡಿ​ಸಲು ಯತ್ನಿ​ಸಿ​ದ್ದರು. ಅಲ್ಲದೆ, ಬುಧವಾರ ತಮ್ಮನ್ನು ಭೇಟಿ​ಯಾ​ಗು​ವಂತೆಯೂ ಸೂಚಿ​ಸಿ​ದ್ದರು. ಅದ​ರಂತೆ ಬುಧ​ವಾರ ಸಿದ್ದ​ರಾ​ಮಯ್ಯ ಅವರ ನಿವಾ​ಸಕ್ಕೆ ತೆರಳಿ ರಾಮ​ಲಿಂಗಾ​ರೆಡ್ಡಿ ಸುಮಾರು ಒಂದು ತಾಸು​ ಮಾತು​ಕತೆ ನಡೆ​ಸಿ​ದರು. ಇದೇ ವೇಳೆ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಕೂಡ ಸಿದ್ದ​ರಾ​ಮಯ್ಯ ನಿವಾ​ಸಕ್ಕೆ ಆಗ​ಮಿಸಿ ರಾಮ​ಲಿಂಗಾರೆಡ್ಡಿ ಅವ​ರೊಂದಿ​ಗಿನ ಮಾತು​ಕ​ತೆ​ಯಲ್ಲಿ ಪಾಲ್ಗೊಂಡಿದ್ದ​ರು.

Follow Us:
Download App:
  • android
  • ios