Asianet Suvarna News Asianet Suvarna News

ರಫೇಲ್‌ ಡೀಲ್: ಮೋದಿ ವಿರುದ್ಧ ಗುಡುಗಿದ ರಾಹುಲ್‌ಗೆ ಮಹಿಳಾ ಆಯೋಗದ ನೋಟಿಸ್!

ರಫೇಲ್‌ ದಾಳಿ ತಡೆಗೆ ಮಹಿಳೆಗೆ ಮೋದಿ ಮೊರೆ| ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ| ಕಾಂಗ್ರೆಸ್‌ನಿಂದ ಮಹಿಳಾ ಶಕ್ತಿಗೆ ಅವಮಾನ: ಮೋದಿ ತಿರುಗೇಟು| ಹೇಳಿಕೆ ವಿರುದ್ಧ ರಾಹುಲ್‌ಗೆ ಮಹಿಳಾ ಆಯೋಗ ನೋಟಿಸ್‌ ಜಾರಿ

Rahul Gandhi says PM Modi asked a woman for his rescue on Rafale
Author
New Delhi, First Published Jan 10, 2019, 1:17 PM IST

ಜೈಪುರ/ಆಗ್ರಾ[ಜ.10]: ರಫೇಲ್‌ ಖರೀದಿ ವ್ಯವಹಾರ ಸಂಬಂಧ ಎನ್‌ಡಿಎ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಅವಮಾನಿಸುವ ರೀತಿಯ ಹೇಳಿಕೆಯೊಂದನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ. ರಫೇಲ್‌ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯೊಬ್ಬರ ಮೊರೆ ಹೋಗಿದ್ದಾರೆ. ಅವರಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಇಲ್ಲ ಎಂದು ರಾಹುಲ್‌ ಟೀಕಿಸಿದ್ದಾರೆ. ಈ ಹೇಳಿಕೆಗೆ ಕೆಲ ಹೊತ್ತಿನಲ್ಲೇ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಅವಮಾನಿಸಿದೆ. ಇದು ಮಹಿಳಾ ಶಕ್ತಿಗೆ ಮಾಡಿದ ಅವಮಾನ ಎಂದು ದೂರಿದ್ದಾರೆ.

ರಾಹುಲ್‌ರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗುತ್ತಲೇ, ಈ ಬಗ್ಗೆ ಪ್ರಕ್ರಿಯೆ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಗೆಗಿನ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗುವುದು. ಅವರ ಹೇಳಿಕೆ ಸ್ತ್ರೀದ್ವೇಷಿ ಆಗಿದೆ ಎಂದು ಹೇಳಿದ್ದಾರೆ.

56 ಇಂಚಿನ ಎದೆಯ ಕಾವಲುಗಾರ ಸಂಸತ್ತಿನಲ್ಲಿ ಚರ್ಚೆಯಿಂದ ಓಡಿಹೋಗಿ, ನನಗೆ ನನ್ನನ್ನು ರಕ್ಷಿಸಿಕೊಳ್ಳಲು ಆಗುವುದಿಲ್ಲ. ನನ್ನನ್ನು ರಕ್ಷಿಸಿ ಎಂದು ಸೀತಾರಾಮನ್‌ ಜಿ ಎಂಬ ಮಹಿಳೆಯ ಬಳಿ ಹೇಳಿದ್ದಾರೆ.

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಮಹಿಳಾ ರಕ್ಷಣೆ: ಜೈಪುರದಲ್ಲಿ ಬುಧವಾರ ರೈತ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘56 ಇಂಚಿನ ಎದೆಯ ಕಾವಲುಗಾರ ಸಂಸತ್ತಿನಲ್ಲಿ ಚರ್ಚೆಯಿಂದ ಓಡಿಹೋಗಿ, ನನಗೆ ನನ್ನನ್ನು ರಕ್ಷಿಸಿಕೊಳ್ಳಲು ಆಗುವುದಿಲ್ಲ. ನನ್ನನ್ನು ರಕ್ಷಿಸಿ ಎಂದು ಸೀತಾರಾಮನ್‌ ಜಿ ಎಂಬ ಮಹಿಳೆಯ ಬಳಿ ಹೇಳಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ. ಜೊತೆಗೆ ‘ಎರಡೂವರೆ ಗಂಟೆ ಮಾತನಾಡಿದರೂ ಆ ಮಹಿಳೆಗೆ ಮೋದಿಯನ್ನು ರಕ್ಷಿಸಲಾಗಲಿಲ್ಲ. ನಾನು ‘ಹೌದು’ ಅಥವಾ ‘ಇಲ್ಲ’ ಎಂದು ಉತ್ತರಿಸುವಂತೆ ನೇರವಾದ ಪ್ರಶ್ನೆಯನ್ನು ಕೇಳಿದ್ದೆ. ಆದರೆ, ಅದಕ್ಕೆ ಅವರು ಉತ್ತರಿಸಲಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಕೇವಲ ಮಹಿಳೆ (ನಿರ್ಮಲಾ ಸೀತಾರಾಮನ್‌)ಯನ್ನಷ್ಟೇ ಅವಮಾನಿಸಿಲ್ಲ. ದೇಶದ ಮಹಿಳಾ ಶಕ್ತಿಗೆ ಮಾಡಿದ ಅವಮಾನ. ಇದಕ್ಕಾಗಿ ಇಂತಹ ಬೇಜವಾಬ್ದಾರಿಯುತ ನಾಯಕರು ಬೆಲೆ ತೆರಲಿದ್ದಾರೆ.

ನರೇಂದ್ರ ಮೋದಿ, ಪ್ರಧಾನಿ

ಮೋದಿ ತಿರುಗೇಟು:

ರಾಹುಲ್‌ ಟೀಕೆಗೆ ಆಗ್ರಾ ರ್ಯಾಲಿಯಲ್ಲಿ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡರು ದೇಶದ ಮಹಿಳೆಯನ್ನು ಅವಮಾನಿಸಿದ್ದಾರೆ ಎಂದು ರಾಹುಲ್‌ ಅವರ ಹೆಸರು ಎತ್ತದೇ ಆರೋಪಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಸತ್ಯದ ಮೇಲೆ ಸತ್ಯಗಳನ್ನು ಮಂಡಿಸುತ್ತಾ, ವಿಪಕ್ಷವನ್ನು ನೆಲಸಮ ಮಾಡಿದ್ದಾರೆ. ಕಾಂಗ್ರೆಸ್‌ ಕೇವಲ ಮಹಿಳೆ (ನಿರ್ಮಲಾ ಸೀತಾರಾಮನ್‌)ಯನ್ನಷ್ಟೇ ಅವಮಾನಿಸಿಲ್ಲ. ದೇಶದ ಮಹಿಳಾ ಶಕ್ತಿಗೆ ಮಾಡಿದ ಅವಮಾನ. ಇದಕ್ಕಾಗಿ ಇಂತಹ ಬೇಜವಾಬ್ದಾರಿಯುತ ನಾಯಕರು ಬೆಲೆ ತೆರಲಿದ್ದಾರೆ. ಮಹಿಳೆಯೊಬ್ಬಳು ದೇಶದ ರಕ್ಷಣಾ ಸಚಿವೆ ಆಗಿರುವುದು ನಮ್ಮ ಹೆಮ್ಮೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios