news
By Suvarna Web Desk | 12:21 PM September 13, 2017
ಕಾವೇರಿದ ಬಿಬಿಎಂಪಿ ಮೇಯರ್ ಕಣ; ಸಂಪಂತ್, ಗೋವಿಂದ್ ಪೈಪೋಟಿ

Highlights

ಮತ್ತೆ ಮೇಯರ್ ಗಾದಿ ನಮಗೇ ಬೇಕು ಎನ್ನುತ್ತಿದೆ ಕಾಂಗ್ರೆಸ್. ಆದರೆ, ಮೈತ್ರಿ ಧರ್ಮದ ಪ್ರಕಾರ ಈಗಾಗಲೇ ಎರಡು ಬಾರಿ ಮೇಯರ್ ಹುದ್ದೆ ನಿಮಗೆ ಕೊಟ್ಟಿದ್ದೇವೆ, ಈ ಬಾರಿ ಆ ಹುದ್ದೆ ನಮಗೆ ಬಿಟ್ಟುಕೊಡಿ ಎಂದು ಪಟ್ಟು ಹಿಡಿದಿದೆ ಜೆಡಿಎಸ್. ಇದರಿಂದ  ಕಾಂಗ್ರೆಸ್ ಜತೆಗೆ ಜೆಡಿಎಸ್‌ನಲ್ಲೂ ಈಗ ಮೇಯರ್ ಗಾದಿ ಆಕಾಂಕ್ಷಿಗಳು ಸೃಷ್ಟಿಯಾಗಿದ್ದಾರೆ.

ಬೆಂಗಳೂರು: ಮತ್ತೆ ಮೇಯರ್ ಗಾದಿ ನಮಗೇ ಬೇಕು ಎನ್ನುತ್ತಿದೆ ಕಾಂಗ್ರೆಸ್. ಆದರೆ, ಮೈತ್ರಿ ಧರ್ಮದ ಪ್ರಕಾರ ಈಗಾಗಲೇ ಎರಡು ಬಾರಿ ಮೇಯರ್ ಹುದ್ದೆ ನಿಮಗೆ ಕೊಟ್ಟಿದ್ದೇವೆ, ಈ ಬಾರಿ ಆ ಹುದ್ದೆ ನಮಗೆ ಬಿಟ್ಟುಕೊಡಿ ಎಂದು ಪಟ್ಟು ಹಿಡಿದಿದೆ ಜೆಡಿಎಸ್. ಇದರಿಂದ  ಕಾಂಗ್ರೆಸ್ ಜತೆಗೆ ಜೆಡಿಎಸ್‌ನಲ್ಲೂ ಈಗ ಮೇಯರ್ ಗಾದಿ ಆಕಾಂಕ್ಷಿಗಳು ಸೃಷ್ಟಿಯಾಗಿದ್ದಾರೆ.

ಸೆ.28ಕ್ಕೆ ಮೇಯರ್ ಉಪಮೇಯರ್ ಚುನಾವಣೆ ನಿಗದಿಯಾಗಿದೆ. ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಠ ಜಾತಿಗೆ, ಉಪಮೇಯರ್ ಹುದ್ದೆ ಸಾಮಾನ್ಯ ವರ್ಗ (ಮಹಿಳೆ)ಕ್ಕೆ ಮೀಸಲಾಗಿದೆ. ಹಾಗಾಗಿ ಕಾಂಗ್ರೆಸ್’ನಿಂದ ಎಸ್ಸಿ ವರ್ಗಕ್ಕೆ ಸೇರಿದ ದೇವರ ಜೀವನಹಳ್ಳಿ ವಾರ್ಡ್ ಸದಸ್ಯ ಆರ್. ಸಂಪತ್‌ರಾಜ್ ಮತ್ತು ಸುಭಾಷ್‌ನಗರ ವಾರ್ಡ್‌ನ ಗೋವಿಂದರಾಜ್  ನಡುವೆ ಮೇಯರ್ ಹುದ್ದೆಗಾಗಿ ಪೈಪೋಟಿ ನಡೆದಿದೆ.

ಜೆಡಿಎಸ್ ತನಗೆ ಮೇಯರ್ ಹುದ್ದೆ ಬೇಕೆಂದು ಹಿಡಿದಿರುವ ಪಟ್ಟು ಸಡಿಸಲಿಸಿದರೆ ಈ ಇಬ್ಬರಲ್ಲಿ ಒಬ್ಬರು ಮೇಯರ್ ಆಗೋದು ಖಚಿತ. ಆದರೆ, ಮೇಯರ್ ಉಪಮೇಯರ್ ಹುದ್ದೆಗಳ ಹಂಚಿಕೆಗಾಗಿ ಮಂಗಳವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ನಡೆಸಿದ ಸಭೆಯಲ್ಲಿ ಜೆಡಿಎಸ್ ಈ ಬಾರಿ ಮೇಯರ್ ಗಾದಿ ನಮಗೆ ಬಿಟ್ಟುಕೊಡಿ ಎಂದು ಕಟ್ಟು ಹಿಡಿದಿದೆ.

ಮೈತ್ರಿ ಧರ್ಮದ ಪ್ರಕಾರ, ಎರಡು ಬಾರಿ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಮೇಯರ್ ಹುದ್ದೆಗೆ ಸಮರ್ಥರು ನಮ್ಮ ಪಕ್ಷದಲ್ಲೂ ಇದ್ದಾರೆ. ಸಂಖ್ಯಾಬಲಕ್ಕಿಂತ ಮೈತ್ರಿಯ ಧರ್ಮ ಮುಖ್ಯ. ಹೀಗಾಗಿ, ಈ ಬಾರಿ ಮೇಯರ್ ಪದವಿ ಬಿಟ್ಟುಕೊಡಿ ಎಂದು ಜೆಡಿಎಸ್ ಬೇಡಿಕೆ ಇಟ್ಟಿದೆ. ಈ ಬಗ್ಗೆ ಸ್ವತಃ ರಾಮಲಿಂಗಾರೆಡ್ಡಿ ಅವರೇ ಹೇಳಿಕೆ ನೀಡಿದ್ದು, ಜೆಡಿಎಸ್ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ, ಜೆಡಿಎಸ್‌ನಲ್ಲೂ ಮೇಯರ್ ಹುದ್ದೆ ಆಂಕಾಂಕ್ಷಿಗಳು ಸೃಷ್ಟಿಯಾಗಿದ್ದಾರೆ. ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಜೆಡಿಎಸ್‌ನಲ್ಲಿ ಎಸ್‌ಸಿ ವರ್ಗಕ್ಕೆ ಸೇರಿದ ಮಾರಪ್ಪನಪಾಳ್ಯ ವಾರ್ಡ್‌ನ ಮಹದೇವ್ ಹಾಗೂ ಶಕ್ತಿ ಗಣಪತಿ ನಗರ ವಾರ್ಡ್‌ನಿಂದ ಗಂಗಮ್ಮ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ನಾಯಕರು ಪಟ್ಟು ಬಿಡದೆ ಮೇಯರ್ ಗಾದಿ ತಮ್ಮದಾಗಿಸಿಕೊಂಡರೆ ಈ ಇಬ್ಬರಲ್ಲಿ ಒಬ್ಬರಿಗೆ ಮೇಯರ್ ಹುದ್ದೆಯ ಅದೃಷ್ಟ ಒಲಿಯಬಹುದು.

ಉಪಮೇಯರ್‌ಗೆ ಯಾರ್ ಯಾರು?: ಸದ್ಯ ಕಾಂಗ್ರೆಸ್ ಪಾಲಿಗೆ ಮತ್ತೆ ಮೇಯರ್ ಪಟ್ಟ, ಉಪಮೇಯರ್ ಪಟ್ಟ ಜೆಡಿಎಸ್‌ಗೆ ಎನ್ನುವ ಸ್ಥಿತಿ ಇರುವುದರಿಂದ ಬಿಬಿಎಂಪಿಯ ಜೆಡಿಎಸ್ ನಾಯಕಿ ರಮೀಳಾ ಉಮಾಶಂಕರ್, ಹಾಲಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್, ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ, ಪದ್ಮಾವತಿ ನರಸಿಂಹಮೂರ್ತಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಇದರಲ್ಲಿ ರಮೀಳಾ ಉಮಾಶಂಕರ್ ಮತ್ತು ನೇತ್ರಾ ನಾರಾಯಣಸ್ವಾಮಿ ನಡುವೆ ಪೈಪೋಟಿ ನಡೆಯುತ್ತಿದೆ. ತಾವು ಪ್ರಸ್ತುತ ಪಾಲಿಕೆಯಲ್ಲಿ ಪಕ್ಷದ ನಾಯಕಿ ಸ್ಥಾನದ ಅನುಭವ ಹೊಂದಿರುವುದರಿಂದ ಹಾಗೂ ಈ ವರೆಗೆ ಯಾವುದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಂತಹ ಅಧಿಕಾರ ಅನುಭವಿಸದ ಕಾರಣ ಉಪಮೇಯರ್ ಹುದ್ದೆ ನೀಡುವಂತೆ ರಮೀಳಾ ಅವರು ಪಕ್ಷದಲ್ಲಿ ಬೇಡಿಕೆ ಇಟ್ಟಿದ್ದಾರೆ. ಇದರ ನಡುವೆ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಅನುಭವ ಇರುವುದರಿಂದ ತಮ್ಮನ್ನು ಉಪಮೇಯರ್ ಮಾಡುವಂತೆ ನೇತ್ರಾ ಅವರು ತಮ್ಮ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರ ನಡುವೆ ಏನಾದರೂ, ಮೇಯರ್ ಹುದ್ದೆ ಕಾಂಗ್ರೆಸ್ ಬದಲು ಜೆಡಿಎಸ್ ಪಾಲಾದರೆ, ಇವರೆಲ್ಲರ ಆಕಾಂಕ್ಷೆ ಕಮರಿ ಹೋಗಲಿದೆ.
ಕಾಂಗ್ರೆಸ್‌ನಲ್ಲಿ ಸಾಮಾನ್ಯ ವರ್ಗದ ಮಹಿಳಾ ಸದಸ್ಯರು ಹೆಚ್ಚಾಗಿರುವುದರಿಂದ ಉಪಮೇಯರ್ ಹುದ್ದೆಗೆ ಅಲ್ಲಿ ಭಾರೀ ಪೈಪೋಟಿ ಆರಂಭವಾಗಲಿದೆ.

ಗೆಲುವಿಗೆ ಪಕ್ಷೇತರ ಮತಗಳೂ ಬೇಕು!

ಮೇಯರ್, ಉಪಮೇಯರ್ ಚುನಾವಣೆಗೆ ಪಾಲಿಕೆ ಸದಸ್ಯರು ಮತ್ತು ಸದಸ್ಯೇತರ ಮತದಾರರು ಸೇರಿ ಒಟ್ಟು 266 ಜನ ಮತದಾರರಿದ್ದಾರೆ. ಗೆಲ್ಲಲು 134 ಮತಗಳು ಅಗತ್ಯವಿದೆ.ಪಾಲಿಕೆ ಸದಸ್ಯರು, ಸದಸ್ಯೇತರರ ಮತಗಳೂ ಸೇರಿದಂತೆ ಪಕ್ಷವಾರು ಬಿಜೆಪಿ 124, ಕಾಂಗ್ರೆಸ್‌ನ 108, ಜೆಡಿಎಸ್‌ನ 24 ಹಾಗೂ 9 ಪಕ್ಷೇತರರ ಮತಗಳನ್ನು ಹೊಂದಿವೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಎರಡೂ ಪಕ್ಷಗಳ ಸದಸ್ಯರ ಮತಗಳನ್ನು ಸೇರಿಸಿದರೆ 132 ಆಗಲಿದೆ. ಗೆಲುವಿಗೆ ಇನ್ನೂ ಎರಡು ಮತ ಬೇಕಾಗುತ್ತದೆ. ಹಾಗಾಗಿ ಕನಿಷ್ಠ ಇಬ್ಬರು ಪಕ್ಷೇತರ ಸದಸ್ಯರ ಮತವಾದರೂ ಬೇಕಾಗುತ್ತದೆ.

Show Full Article


Recommended


bottom right ad