Asianet Suvarna News Asianet Suvarna News

ಪ್ರಿಯಾಂಕಾ ಗಾಂಧಿ ಮೊದಲ ಭಾಷಣ ಇಂದು?

ಪ್ರಿಯಾಂಕಾ ಗಾಂಧಿ ಮೊದಲ ಭಾಷಣ ಇಂದು? | ಗುಜರಾತ್‌ನಲ್ಲಿ ಬೃಹತ್‌ ಜನಸಂಕಲ್ಪ ರ್ಯಾಲಿ|  ಮೋದಿ ತವರಲ್ಲಿ ಇಂದು ಕಾಂಗ್ರೆಸ್‌ ಶಕ್ತಿ ಪ್ರದರ್ಶನ
 

Priyanka Gandhi's debut speech in Gujarat today on march 12
Author
Bengaluru, First Published Mar 12, 2019, 9:35 AM IST

ಅಹಮದಾಬಾದ್‌ (ಮಾ. 12):  ಲೋಕಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ಕಾಂಗ್ರೆಸ್‌ ಮಂಗಳವಾರ ಶಕ್ತಿ ಪ್ರದರ್ಶನ ನಡೆಸಲು ತಯಾರಾಗಿದೆ. ‘ಜನಸಂಕಲ್ಪ’ ಹೆಸರಿನಲ್ಲಿ ಗಾಂಧಿನಗರದ ಅದಲಜ್‌ ಪಟ್ಟಣದಲ್ಲಿ ಮೆಗಾ ರ್ಯಾಲಿಯೊಂದನ್ನು ಆಯೋಜಿಸಿದೆ. ಅಂದಾಜು 3 ಲಕ್ಷ ಮಂದಿ ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಗುಜರಾತಿನ ಪಟೇಲ್‌ ಸಮುದಾಯದ ಪ್ರಭಾವಿ ಮುಖಂಡ ಹಾರ್ದಿಕ್‌ ಪಟೇಲ್‌ ಈ ರಾರ‍ಯಲಿಯಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ. ಅಲ್ಲದೆ ಕಳೆದ ತಿಂಗಳು ಸಕ್ರಿಯ ರಾಜಕೀಯ ಪ್ರವೇಶಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೋದರಿ ಪ್ರಿಯಾಂಕಾ ವಾದ್ರಾ ಅವರು ಚೊಚ್ಚಲ ರಾಜಕೀಯ ಭಾಷಣ ಮಾಡುವ ನಿರೀಕ್ಷೆ ಇದೆ.

ಕಳೆದ ಜನವರಿ ತಿಂಗಳಷ್ಟೇ ಪ್ರಿಯಾಂಕಾರನ್ನು ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ನೇಮಕದ ಬಳಿಕ ಅವರು ಉತ್ತರಪ್ರದೇಶಕ್ಕೆ ತೆರಳಿ ಪಕ್ಷದ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರಾದರೂ, ಬಹಿರಂಗ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರಲಿಲ್ಲ.

ಮೊದಲ ಪತ್ರಿಕಾಗೋಷ್ಠಿಯ ದಿನವೇ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆದಿತ್ತು. ಹೀಗಾಗಿ ಪತ್ರಿಕಾಗೋಷ್ಠಿಯನ್ನೇ ರದ್ದುಗೊಳಿಸಲಾಗಿತ್ತು. ಹೀಗಾಗಿ ಅವರ ಮೊದಲ ಭಾಷಣ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನ ಅಹಮದಾಬಾದ್‌ನಲ್ಲೇ ನಡೆಯುವುದು ಖಚಿತವಾಗಿದೆ.

ಸಿಡಬ್ಲ್ಯುಸಿ ಸಭೆ:

ಸಮಾವೇಶಕ್ಕೂ ಮುನ್ನ ಸರ್ದಾರ್‌ ಪಟೇಲ್‌ ಸ್ಮಾರಕ ಕಟ್ಟಡದಲ್ಲಿ ಕಾಂಗ್ರೆಸ್ಸಿನ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ‘ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ’ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಭಾಗವಹಿಸಲಿದ್ದಾರೆ. 1961ರಲ್ಲಿ ಕೊನೆಯ ಬಾರಿಗೆ ಗುಜರಾತಿನಲ್ಲಿ ಸಿಡಬ್ಲ್ಯುಸಿ ಸಭೆ ನಡೆದಿತ್ತು. 58 ವರ್ಷಗಳ ಬಳಿಕ ಈ ರಾಜ್ಯದಲ್ಲಿ ಆಯೋಜನೆಗೊಂಡಿದೆ. 

Follow Us:
Download App:
  • android
  • ios