Asianet Suvarna News Asianet Suvarna News

ಬಿಜೆಪಿಗೆ ರಾಮಮಂದಿರ ಚುನಾವಣಾ ವಿಚಾರವೇ ಅಲ್ಲ: ಪ್ರಕಾಶ್ ಜಾವಡೇಕರ್

ಬಿಜೆಪಿಗೆ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ವಿಚಾರವೇ ಅಲ್ಲ | ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಂದರ್ಶನದ ಪೂರ್ಣಪರಿಪಾಠ ಇಲ್ಲಿದೆ.  

Prakash Javadekar speaks on Ram Mandir Issue in an interview
Author
Bengaluru, First Published Oct 26, 2018, 1:27 PM IST

ನವದೆಹಲಿ (ಅ. 26): ಪಂಚರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ಲೋಕಸಭೆ ಚುನಾವಣೆಗೆ ಸರಿಯಾಗಿ ರಾಮಮಂದಿರದ ವಿವಾದ ಮತ್ತೆ ಚರ್ಚೆಗೆ ಬರುತ್ತಿದೆ. ಇನ್ನೊಂದೆಡೆ, ರಾಜಸ್ಥಾನ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಕಷ್ಟವಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ ಪ್ರಮುಖ ನಾಯಕ, ಕೇಂದ್ರ ಸಚಿವ ಹಾಗೂ ರಾಜಸ್ಥಾನದ ಉಸ್ತುವಾರಿ ಈ ಕುರಿತು ಹಫ್‌ಪೋಸ್ಟ್‌ ಇಂಡಿಯಾ ಜೊತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನೀವೇ ಬಿಜೆಪಿ ಉಸ್ತುವಾರಿ. ನಿಮ್ಮ ಆರಂಭಿಕ ಅವಲೋಕನ ಏನು ಹೇಳುತ್ತಿದೆ?

ಕಳೆದ 20 ವರ್ಷಗಳಿಂದ ರಾಜಸ್ಥಾನದಲ್ಲಿರುವ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್‌ ಎಂಬ ಸಂಪ್ರದಾಯವನ್ನು ಈ ಬಾರಿ ಖಂಡಿತ ಮುರಿಯುತ್ತೇವೆ. ಭಾಜಪಾ ಫಿರ್‌ಸೆ ಎಂಬುದು ನಮ್ಮ ಘೋಷವಾಕ್ಯ. ಪ್ರತಿ ಚುನಾವಣೆಯೂ ಹೊಸ ಚುನಾವಣೆಯಾಗಿರುವುದರಿಂದ ಈ ಬಾರಿ ನಮಗೆ ಹೊಸ ಸವಾಲುಗಳೂ ಇವೆ, ಹೊಸ ಅವಕಾಶಗಳೂ ಇವೆ.

ಸಮಸ್ಯೆ ಏನಾಗಿದೆ ಅಂದರೆ, ನಮ್ಮ ಸರ್ಕಾರ ರಾಜಸ್ಥಾನದಲ್ಲಿ ಸಾಕಷ್ಟುಒಳ್ಳೆಯ ಕೆಲಸ ಮಾಡಿದ್ದರೂ ಅದನ್ನು ಜನರಿಗೆ ತಿಳಿಸುವಲ್ಲಿ ಸಂವಹನದ ಕೊರತೆಯಿಂದ ಒಂದಷ್ಟುಲೋಪಗಳಾಗಿದ್ದವು. ಆದರೆ, ಈಗ ನಾವು ಅದನ್ನು ಸರಿಪಡಿಸಿದ್ದೇವೆ.

ಜನರಿಗೆ ಇದು ಅತ್ಯುತ್ತಮ ಸರ್ಕಾರವಾಗಿತ್ತು ಎಂಬುದು ಮನವರಿಕೆಯಾಗಿದೆ. ಇದು ಬಹಳ ಮುಖ್ಯವಾದ ಬದಲಾವಣೆ. 2014ರಲ್ಲಿ ಮೋದಿ ಪ್ರಧಾನಿಯಾದಾಗ ಕೇವಲ 6 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿತ್ತು. ಕಾಂಗ್ರೆಸ್‌ ಬಳಿ 16 ಸರ್ಕಾರವಿತ್ತು. ಇಂದು ಬಿಜೆಪಿ ಬಳಿ 19 ಸರ್ಕಾರವಿದೆ ಮತ್ತು ಕಾಂಗ್ರೆಸ್‌ ಬಳಿ 4 ಇದೆ. ಏಕೆ ಕಾಂಗ್ರೆಸ್‌ಗೆ ಈ ಗತಿ ಬಂತು ಎಂಬುದನ್ನು ನೋಡಬೇಕು.

ಕಾಂಗ್ರೆಸ್‌ನ ನಾಯಕತ್ವದಲ್ಲಿ, ಅದರ ಕಾರ್ಯಕ್ರಮಗಳಲ್ಲಿ, ಆ ಪಕ್ಷ ನೀಡಿದ್ದ ಭರವಸೆಗಳಲ್ಲಿ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಒಂದು ಕಾಲದ ಪ್ರಮುಖ ರಾಜಕೀಯ ಪಕ್ಷ ಹಾಗೂ ಗಾಂಧೀಜಿಯವ ಪಕ್ಷ ಇಂದು ಅಪ್ರಸ್ತುತ ಪಕ್ಷವಾಗಿದೆ.

ಪ್ರಚಾರ ಕಾವು ಪಡೆಯುತ್ತಿದ್ದಂತೆ ಮತ್ತೆ ರಾಮ ಮಂದಿರದ ವಿಷಯ ಚರ್ಚೆಗೆ ಬರುತ್ತಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ರಾಮಮಂದಿರಕ್ಕೆ ಪ್ರತ್ಯೇಕ ಕಾಯ್ದೆ ಬೇಕು ಎಂದಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ 2019ರೊಳಗೆ ರಾಮಂದಿರ ಕಟ್ಟಬೇಕು ಎಂದಿದ್ದಾರೆ. ಚುನಾವಣೆಗೆ ಸರಿಯಾಗಿ ಏಕೆ ಈ ವಿಷಯ ಎತ್ತಿದ್ದೀರಿ?

ನಾವಲ್ಲ ಈ ವಿಷಯ ಪ್ರಸ್ತಾಪಿಸಿದ್ದು. ಕಾಂಗ್ರೆಸ್‌ನ ಕಪಿಲ್‌ ಸಿಬಲ್‌ ಅವರು ಕೋರ್ಟ್‌ಗೆ ಹೋಗಿ, ಬಹಳ ಹಿಂದಿನಿಂದ ಬಾಕಿಯಿರುವ ರಾಮಮಂದಿರದ ವಿಷಯವನ್ನು 2019ರ ಜುಲೈ ನಂತರವೇ ವಿಚಾರಣೆ ನಡೆಸಬೇಕೆಂದು ಕೇಳಿದರು. ರಾಜಕೀಯ ಉದ್ದೇಶದಿಂದ ಯಾರಾದರೂ ಇಂತಹದ್ದೊಂದು ಬೇಡಿಕೆ ಮುಂದಿಟ್ಟರೆ ನಾವದನ್ನು ವಿರೋಧಿಸಲೇಬೇಕಾಗುತ್ತದೆ.

ನಮಗೆ ರಾಮಮಂದಿರ ಚುನಾವಣೆಯ ವಿಷಯ ಅಲ್ಲ. ಕಪಿಲ್‌ ಸಿಬಲ್‌ ಅವರೇ ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಎತ್ತಿ 2019ರ ಜುಲೈ ನಂತರ ಇದನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಕೇಳಿದರು. ಆದರೆ ಇದು ಬಹಳ ವರ್ಷಗಳಿಂದ ಬಾಕಿಯುಳಿದಿರುವ ವಿಷಯವಾದ್ದರಿಂದ ಈಗಲೇ ಬಗೆಹರಿಸಬೇಕೆಂದು ನಾವು ಕೇಳುತ್ತಿದ್ದೇವೆ.

ಏಕೆ ಈಗಲೇ? ಏಕೆ 2019ಕ್ಕಿಂತ ಮೊದಲೇ ಆಗಬೇಕು?

ಏಕೆಂದರೆ ಈ ವಿವಾದ 40 ವರ್ಷಗಳಿಂದ ಹಾಗೇ ಉಳಿದಿದೆ. ಇದು ಕೋರ್ಟ್‌ನ ತೀರ್ಪಿನಿಂದಾದರೂ ಬಗೆಹರಿಯಲಿ ಅಥವಾ ಎರಡು ಸಮುದಾಯಗಳ ಮಧ್ಯೆ ಮಾತುಕತೆಯಿಂದಾದರೂ ಬಗೆಹರಿಯಲಿ, ಒಟ್ಟಿನಲ್ಲಿ ಆದಷ್ಟುಬೇಗ ಬಗೆಹರಿದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ನಮ್ಮ ಪಕ್ಷದ ಅತ್ಯಂತ ಹಳೆಯ ನಿಲುವು.

ಇದರಲ್ಲಿ ಹೊಸತೇನೂ ಇಲ್ಲ. ಕಾಂಗ್ರೆಸ್‌ನವರು 2019ರ ನಂತರ ಆಗಲಿ ಎಂದು ಹೇಳುತ್ತಿರುವುದರಿಂದ ನಾವು 2019ಕ್ಕಿಂತ ಮೊದಲೇ ಆಗಬೇಕು ಎಂದು ಕೇಳುತ್ತಿದ್ದೇವೆ.

ರಾಜಸ್ಥಾನದಲ್ಲಿ ಜನರ ಮನಸ್ಸು ಬದಲಾಗಿದೆ ಎಂದು ಹೇಳಿದ್ದೀರಿ. ಅಂದರೆ ವಸುಂಧರಾ ರಾಜೇ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲವೇ?

ಸಾಮಾನ್ಯವಾಗಿ ಸ್ಥಳೀಯ ಶಾಸಕರ ವಿರುದ್ಧ ಯಾವಾಗಲೂ ಸಣ್ಣ ಪ್ರಮಾಣದ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಈ ಬಾರಿ ಏನಾಗಿದೆ ನೋಡಿ. ಜನರಿಗಾಗಿ ಎಷ್ಟೊಂದು ಯೋಜನೆಗಳು ಜಾರಿಯಾಗಿವೆ. ಉದಾಹರಣೆಗೆ, ನೀರಿನ ಬರಕ್ಕೆ ರಾಜಸ್ಥಾನ ಯಾವಾಗಲೂ ಪ್ರಸಿದ್ಧ. ಆದರೆ, ಮುಖ್ಯಮಂತ್ರಿ ಜಲ ಸ್ವಾಭಿಮಾನ ಯೋಜನೆಯಿಂದ ಕಳೆದ ಐದು ವರ್ಷದಲ್ಲಿ ಅಂತರ್ಜಲ ಮಟ್ಟ5ರಿಂದ 30 ಅಡಿಗಳಷ್ಟುಮೇಲೆ ಬಂದಿದೆ. ಇದು ಬಹುದೊಡ್ಡ ಸಾಧನೆ.

ಹಾಗಾದರೆ ಚುನಾವಣಾ ಪೂರ್ವ ಸಮೀಕ್ಷೆಗಳು ರಾಜಸ್ಥಾನದಲ್ಲಿ ಬಿಜೆಪಿ ಸೋಲುತ್ತದೆ ಎಂದೇಕೆ ಹೇಳುತ್ತಿವೆ?

ಚುನಾವಣಾ ಸಮೀಕ್ಷೆ ಎಂಬುದು ಇನ್ನೂ ಬೆಳೆಯುತ್ತಿರುವ ವಿಜ್ಞಾನ. ಬಿಎಸ್‌ಪಿ ಗೆಲ್ಲುತ್ತದೆ ಎಂದು ಇಲ್ಲಿಯವರೆಗೆ ಯಾವ ಚುನಾವಣಾ ಸಮೀಕ್ಷೆಯೂ ಹೇಳಿರಲಿಲ್ಲ. ಆದರೆ ಆ ಪಕ್ಷ 3 ಬಾರಿ ಗೆದ್ದಿತಲ್ಲವೇ? ಪ್ರತಿ ಚುನಾವಣೆಯಲ್ಲೂ ಎಷ್ಟೊಂದು ಸಮೀಕ್ಷೆಗಳು ಸುಳ್ಳಾಗುತ್ತಿವೆ. ಆದರೂ ನಾವು ಅವುಗಳಿಂದ ಸುಳಿವು ಪಡೆದು ಇನ್ನಷ್ಟುಕಷ್ಟಪಟ್ಟು ಕೆಲಸ ಮಾಡುತ್ತೇವೆ.

ವಿಧಾನಸಭೆ ಚುನಾವಣೆಗಳಲ್ಲಿ ಟಿಕೆಟ್‌ ನೀಡುವಾಗ ರಾಜ್ಯ ಘಟಕಗಳಿಗೆ ಹೆಚ್ಚಿನ ಪಾತ್ರವಿರುತ್ತದೆ. ಈ ಬಾರಿ ಕೇಂದ್ರ ನಾಯಕರೇ ಹೆಚ್ಚಿನ ಪಾತ್ರ ವಹಿಸಿದ್ದೇಕೆ?

ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸುವುದು, ರಾಜ್ಯ ನಾಯಕರ ಅಭಿಪ್ರಾಯ ಕೇಳಿ ಕೇಂದ್ರ ಬಿಜೆಪಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುವುದು ನಮ್ಮಲ್ಲಿರುವ ಹಳೆಯ ವ್ಯವಸ್ಥೆ. ಕೇಂದ್ರ ನಾಯಕರು ರಾಜ್ಯ ನಾಯಕರಿಗೆ ಸಹಕಾರ ನೀಡುತ್ತಾರೆ. ಇದರಲ್ಲಿ ಹೊಸತೇನಿಲ್ಲ.

ಆದರೂ ರಾಜಸ್ಥಾನದಲ್ಲಿ ವಸುಂಧರಾ ರಾಜೇ ಬಣ ಹಾಗೂ ಅಮಿತ್‌ ಶಾ ಬಣ ಎಂಬ ಎರಡು ಪ್ರತ್ಯೇಕ ಬಣಗಳಿಂದ ಪ್ರಚಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆಯಲ್ಲ?

ಇದೊಂದು ತಪ್ಪು ಕಲ್ಪನೆ. ಮುಖ್ಯಮಂತ್ರಿಗಳು ಮೊದಲೇ ‘ಗೌರವ ಯಾತ್ರೆ’ ಆರಂಭಿಸಿದ್ದರು. ಇದು ಜನಸಂಪರ್ಕ ಕಾರ್ಯಕ್ರಮ. ಹಾಗಾಗಿ ಅಮಿತ್‌ ಶಾ ಅವರು ಪಕ್ಷದ ಕಾಯರ್ಯಕರ್ತರ ಸಂಘಟನೆ ಹಾಗೂ ರಾರ‍ಯಲಿ ಮಾಡತೊಡಗಿದರು. ವಿವಿಧ ಮೋರ್ಚಾಗಳು, ಬೂತ್‌ಗಳು ಹಾಗೂ ಕಾರ್ಯಕರ್ತರ ಸಂಘಟನೆಯೇ ನಮ್ಮ ಪಕ್ಷದ ಜೀವಾಳ. ಅದರಿಂದಾಗಿಯೇ ನಾವು ಚುನಾವಣೆಯ ಮೇಲೆ ಚುನಾವಣೆಗಳನ್ನು ಗೆಲ್ಲುತ್ತಿರುವುದು. ಹೀಗಾಗಿ ಅಮಿತ್‌ ಶಾ ಅವುಗಳನ್ನು ಆಯೋಜಿಸಿದರು. ಈಗ ನಾವೂ ಜನರ ರಾರ‍ಯಲಿ ಏರ್ಪಡಿಸಲಿದ್ದೇವೆ.

ದೇಶದಲ್ಲಿ ಉದ್ಯೋಗದ ಕೊರತೆಯಿಂದ ಹತ್ಯೆಗಳು ನಡೆಯುತ್ತಿವೆ ಎಂದು ವಸುಂಧರಾ ರಾಜೇ ಹೇಳಿದ್ದಾರೆ. ಈ ಸಮಸ್ಯೆಯ ಬಗ್ಗೆ ನಿಮಗೆ ಕಳವಳ ಇದೆಯೇ?

ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇಂತಹ ಹತ್ಯೆಗಳು 2014ರಿಂದ ನಡೆಯುತ್ತಿಲ್ಲ. 1984ರಲ್ಲಿ 3000 ಸಿಖ್ಖರನ್ನು ಕೊಲ್ಲಲಾಯಿತು. ಅದು ಅತಿದೊಡ್ಡ ಹತ್ಯಾಕಾಂಡ. ನಂತರ ಭಾಗಲ್ಪುರದಲ್ಲಿ ನೂರಾರು ಮುಸ್ಲಿಮರನ್ನು ಸಜೀವವಾಗಿ ಸುಡಲಾಯಿತು. ಅದೂ ಹತ್ಯೆಯೇ. ನಂತರ 52 ಕರಸೇವಕರನ್ನು ಕೊಂದರು. ಅದೂ ಹತ್ಯೆಯೇ. ಇವೆಲ್ಲವೂ ಘೋರ ಅಪರಾಧಗಳು. ಇತ್ತೀಚೆಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಎಲ್ಲ ಕಡೆಯೂ ಹತ್ಯೆಗಳಾಗಿವೆ.

ರಾಜ್ಯ ಸರ್ಕಾರಗಳು ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಾಸ್ತವವಾಗಿ ಇಂತಹ ಹತ್ಯೆಗೂ ನಿರುದ್ಯೋಗಕ್ಕೂ ಏನೂ ಸಂಬಂಧವಿಲ್ಲ. ನಾವು ಉದ್ಯೋಗ ಸೃಷ್ಟಿಸುತ್ತಲೇ ಇದ್ದೇವೆ. ನಮ್ಮದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಇಲ್ಲಿ ಸಹಜವಾಗಿಯೇ ಉದ್ಯೋಗಗಳು ತಳಮಟ್ಟದಲ್ಲಿ ಸೃಷ್ಟಿಯಾಗುತ್ತಿವೆ.

14 ಕೋಟಿ ಯುವಕರಿಗೆ ಮುದ್ರಾ ಸಾಲ ದೊರಕಿದೆ. ಅವರೆಲ್ಲ ಸ್ವಂತ ಉದ್ಯೋಗ ಆರಂಭಿಸಿದ್ದಾರೆ ಅಂದರೆ ಅಷ್ಟುಉದ್ಯೋಗ ಸೃಷ್ಟಿಯಾಗಿದೆ ಎಂದೇ ಲೆಕ್ಕ. ಔದ್ಯೋಗಿಕ, ಔದ್ಯೋಗಿಕೇತರ, ಕೃಷಿ ಹಾಗೂ ಸೇವಾ ಕ್ಷೇತ್ರಗಳಲ್ಲಿ ಎಲ್ಲೆಡೆ ಎಲ್ಲ ವಿಧದ ಉದ್ಯೋಗಗಳ ಸೃಷ್ಟಿಹೆಚ್ಚಾಗಿದೆ.

ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನ ಸಮೀಪಿಸುತ್ತಿದೆ. ಪ್ರಧಾನಿ ರಾರ‍ಯಲಿಗಳನ್ನು ನಡೆಸಲಿದ್ದಾರೆ. ನೀವು ಪ್ರಮುಖವಾಗಿ ಪ್ರಸ್ತಾಪಿಸುವ ವಿಚಾರಗಳು ಯಾವವು?

ನಾವು ಪ್ರಸ್ತಾಪಿಸುವುದು ಕೇವಲ ಒಂದು ವಿಷಯ. ಅದು ಅಭಿವೃದ್ಧಿ ಅಭಿವೃದ್ಧಿ ಅಭಿವೃದ್ಧಿ. ಪ್ರತಿಯೊಬ್ಬ ಬಡ ವ್ಯಕ್ತಿಗೂ ಶ್ರೀಮಂತನಾಗುವ ಹಕ್ಕಿದೆ. ಎಲ್ಲ ಮಾನವ ಹಕ್ಕುಗಳೊಂದಿಗೆ ಬದುಕಲು ಎಲ್ಲರಿಗೂ ಹಕ್ಕಿದೆ. ತೆರಿಗೆ ಪಾವತಿದಾರರಿಗೆ ನೀವು ತೆರಿಗೆ ಪಾವತಿಸುತ್ತಿರುವುದರಿಂದ ಬಡವರಿಗೆ ನೆರವಾಗುತ್ತಿದ್ದೀರಿ ಎಂಬುದನ್ನು ನಾವು ಹೇಳುತ್ತೇವೆ. ಕಾಂಗ್ರೆಸ್‌ನವರು ಬಡತನವನ್ನು ಹಂಚುವುದರಲ್ಲಿ ನಂಬಿಕೆ ಹೊಂದಿದ್ದಾರೆ. ಆದರೆ, ನಾವು ಸಮೃದ್ಧಿಯನ್ನು ಹಂಚುವುದರಲ್ಲಿ ನಂಬಿಕೆ ಹೊಂದಿದ್ದೇವೆ. ಇದೇ ನಮ್ಮ ಚುನಾವಣಾ ಅಜೆಂಡಾ.

- ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ 

Follow Us:
Download App:
  • android
  • ios