news
By Suvarna Web Desk | 10:21 PM August 12, 2017
ಸಂಘ-ಪರಿವಾರ, ಎಸ್‌ಡಿಪಿಐ ಕಾರ್ಯಕರ್ತರ ಕೊಲೆಗೆ ರಾಜಕೀಯ ಪಿತೂರಿಯೇ ಕಾರಣ:ಡಿಜಿಪಿ ವರದಿ

Highlights

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಕೊಲೆ ಕೃತ್ಯಗಳು ಪೂರ್ವನಿಯೋಜಿತವಾಗಿ ನಡೆದಿವೆ. ಆದರೆ ಕೆಲವು ರಾಜಕೀಯ ಹಿತಾಸಕ್ತಿಗಳಿಂದ ಅವುಗಳು ಕೋಮುದ್ವೇಷಕ್ಕೆ ನಡೆದ ಕೃತ್ಯಗಳು ಎಂದು ಬಿಂಬಿತವಾಗಿದ್ದವು ಎಂಬುದಾಗಿ ಸರ್ಕಾರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸಿದ್ದಾರೆ. 

ಬೆಂಗಳೂರು(ಆ.12): ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಕೊಲೆ ಕೃತ್ಯಗಳು ಪೂರ್ವನಿಯೋಜಿತವಾಗಿ ನಡೆದಿವೆ. ಆದರೆ ಕೆಲವು ರಾಜಕೀಯ ಹಿತಾಸಕ್ತಿಗಳಿಂದ ಅವುಗಳು ಕೋಮುದ್ವೇಷಕ್ಕೆ ನಡೆದ ಕೃತ್ಯಗಳು ಎಂದು ಬಿಂಬಿತವಾಗಿದ್ದವು ಎಂಬುದಾಗಿ ಸರ್ಕಾರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸಿದ್ದಾರೆ. 

ಕೆಲ ದಿನಗಳ ಹಿಂದೆ ನಡೆದ ಕರಾವಳಿ ಪ್ರದೇಶದ ‘ಕೋಮು ಘರ್ಷಣೆ’ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿರುವ ಡಿಜಿ-ಐಜಿ ರೂಪಕ್ ಕುಮಾರ್ ದತ್ತಾ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ ಪರಿಸ್ಥಿತಿಗೂ ಅದು ಹೊರಗಡೆ ಬಿಂಬಿತವಾಗಿರುವುದಕ್ಕೂ ವ್ಯತ್ಯಾಸವಿದೆ. ಈ ಘಟನಾವಳಿಗೆ ರಾಜಕೀಯ ಪಿತೂರಿಯಿಂದ ಕೋಮು ಬಣ್ಣ ಬಂದಿದೆ ಎಂದು ಹೇಳಿದ್ದಾರೆ. 

ನಗರದ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರಾವಳಿ ಗಲಾಟೆ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವುದನ್ನು ಖಚಿತಪಡಿಸಿದ ಡಿಜಿಪಿ ಆರ್.ಕೆ.ದತ್ತಾ ಅವರು, ಆ ವರದಿಯಲ್ಲಿನ ಉಲ್ಲೇಖಿತ ಅಂಶಗಳ ಕುರಿತು ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದರು.  ಈ ವರದಿಯಲ್ಲಿ ಕೋಮು ಸಂಘರ್ಷಣೆ ಕುರಿತು ಮಾತ್ರವಷ್ಟೆ ಉಲ್ಲೇಖಿಸಲಾಗಿದೆ. ಆದರೆ ಯಾವುದೇ ಸಂಘಟನೆಗಳ ವಿರುದ್ಧ ನಿರ್ದಿಷ್ಟವಾಗಿ ದೋಷಾರೋಪಗಳನ್ನು ಮಾಡಿಲ್ಲ. ಅಲ್ಲದೆ ಸಂಘಟನೆಗಳ ನಿಷೇಧಕ್ಕೂ ಶಿಫಾರಸು ಮಾಡಿಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದರು. 

ಬಂಟ್ವಾಳದ ಸಂಘ ಪರಿವಾರದ ಕಾರ್ಯಕರ್ತ ಶರತ್ ಹಾಗೂ ಎಸ್‌ಡಿಪಿಐ ಆಶ್ರಫ್ ಕೊಲೆ ಕೃತ್ಯಗಳಿಗೆ ಕೋಮು ಹಗೆತನ ಕಾರಣವಲ್ಲ. ಈ ಹತ್ಯೆಗಳಿಗೆ ವ್ಯವಸ್ಥಿತವಾದ ಸಂಚು ರೂಪಿಸಿ ಕಾರ್ಯಗತಗೊಳಿಸಲಾಗಿದೆ. ಆ ಕ್ಷಣದ ಕಾರಣಕ್ಕೆ ಪ್ರಚೋದನೆಗೊಂಡು ಹತ್ಯೆ ನಡೆದಿದ್ದರೆ ಅವುಗಳನ್ನು ಕೋಮು ಗಲಾಟೆ ಎನ್ನಬಹುದು. ಆದರೆ ಇವುಗಳ ಹತ್ಯೆ ರೀತಿ ಗಮನಿಸಿದರೆ ಆ ಕ್ಷಣದ ಕೋಪಕ್ಕೆ ನಡೆದಿರುವುದಲ್ಲ ಎಂಬುದು ಘಟನಾವಳಿಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ ಎಂದು ಡಿಜಿಪಿ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಳೆದ ಹತ್ತು ವರ್ಷಗಳಿಂದ ಸುರತ್ಕಲ್, ಪುತ್ತೂರು, ಭಟ್ಕಳ, ಕಲ್ಲಡ್ಕ ಹಾಗೂ ಬಂಟ್ವಾಳ ವ್ಯಾಪ್ತಿಯಲ್ಲಿ ನಿರಂತರವಾಗಿ ಕೋಮು ಸಾಮರಸ್ಯವನ್ನು ಕದಡುವಂತಹ ಕೃತ್ಯಗಳು ನಡೆದಿವೆ. ಅವುಗಳ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಪದೇ ಪದೇ ಕೋಮು ಗಲಾಟೆಗಳಲ್ಲಿ ತೊಡಗುವವರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಈಗಾಗಲೇ ಇಂತಹ ಕೆಲವರ ಪಟ್ಟಿ ಸಿದ್ಧಪಡಿಸಿ ಗೂಂಡಾ ಕಾಯ್ದೆ ಜಾರಿಗೊಳಿಸಲು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಪ್ರಸ್ತಾವನೆ ಕಳುಹಿಸಿದ್ದಾರೆ ಎಂದು ಡಿಜಿಪಿ ತಿಳಿಸಿದರು. 

 

----

ಹೊರ ರಾಜ್ಯಗಳಿಗೆ ತಂಡ 

ಸಂಘ ಪರಿವಾರದ ಕಾರ್ಯಕರ್ತ ಶರತ್ ಕೊಲೆ ಪ್ರಕರಣದ ಆರೋಪಿಗಳು ಯಾರು ಎಂಬುದು ನಿಖರವಾದ ಮಾಹಿತಿ ಇದೆ. ಈ ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಹೊರ ರಾಜ್ಯಗಳಲ್ಲಿ ತನಿಖಾ ತಂಡಗಳು ಹುಡುಕಾಟ ನಡೆಸಿವೆ ಎಂದು ಡಿಜಿಪಿ ರೂಪಕ್ ಕುಮಾರ್ ದತ್ತಾ ಹೇಳಿದರು.

ನೆರೆ ರಾಜ್ಯದಲ್ಲಿ ನಡೆದಿರುವ ಹಿಂದೂ ಪರ ಸಂಘಟನೆಗಳ ಹತ್ಯೆ ಮಾದರಿಯಲ್ಲೇ ಶರತ್ ಕೊಲೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಇದಕ್ಕೂ ಪೂರಕವಾದ ಮಾಹಿತಿ ಸಿಕ್ಕಿಲ್ಲ. ಹಾಗಿದ್ದರೂ ಈ ನಿಟ್ಟಿನಲ್ಲಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು. 

 

ಪೊಲೀಸರ ಲೋಪಗಳ ಬಗ್ಗೆ ವರದಿ ಕೇಳಿದ ಡಿಜಿಪಿ 

ಬಂಟ್ವಾಳ ಕೋಮು ಗಲಾಟೆ ನಿಯಂತ್ರಣದಲ್ಲಿ ಪೊಲೀಸ್ ವೈಫಲ್ಯ ಕುರಿತು ವರದಿ ನೀಡುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಡಿಜಿಪಿ ಸೂಚಿಸಿದ್ದಾರೆ. ಈ ವರದಿ ಆಧರಿಸಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಡಿಜಿಪಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಎರಡು ವಾರಗಳ ಅಂತರದಲ್ಲಿ ಸಂಘ ಪರಿವಾರ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಕೊಲೆ ನಡೆದಿವೆ. ಇದರಿಂದ ಆ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದರೂ ಶರತ್ ಮೃತದೇಹದ ಮೆರವಣಿಗೆಗೆ ಅವಕಾಶ ಕೊಟ್ಟ ಅಧಿಕಾರಿಗಳ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿದ್ದವು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಕಲ್ಲು ತೂರಾಟ ನಡೆದು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಿತು. ಹೀಗಾಗಿ ಕೆಲವು ಪೊಲೀಸ್ ಲೋಪಗಳ ಬಗ್ಗೆ ಎಡಿಜಿಪಿ ಅವರಿಂದ ವರದಿ ಕೇಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ

Show Full Article


Recommended


bottom right ad