Asianet Suvarna News Asianet Suvarna News

ವಿಮಾನದಲ್ಲೂ ಹುತಾತ್ಮ ಯೋಧರಿಗೆ ಗೌರವ : ಕೇಂದ್ರ ಸ್ಪಂದನೆ

ದೇಶದ ಯಾವುದೇ ಭಾಗದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗುವ ಯೋಧರ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವಾಗ, ಯೋಧರ ಕುರಿತ ಮಾಹಿತಿಯನ್ನು ವಿಮಾನದ ಪ್ರಯಾಣಿಕರಿಗೆ ನೀಡುವುದನ್ನು ಕೇಂದ್ರ ಸರ್ಕಾರ  ಕಡ್ಡಾಯಗೊಳಿಸಿದೆ.

Pilot must reveal about martyr body if in flight Central responds to RCs appeal
Author
Bengaluru, First Published Nov 5, 2018, 9:00 AM IST

ನವದೆಹಲಿ: ದೇಶ ಸೇವೆ ವೇಳೆ ಹುತಾತ್ಮರಾಗುವ ಯೋಧರಿಗೆ ಕೇಂದ್ರ ಸರ್ಕಾರ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು ಮುಂದಾಗಿದೆ. ದೇಶದ ಯಾವುದೇ ಭಾಗದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗುವ ಯೋಧರ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವಾಗ, ಯೋಧರ ಕುರಿತ ಮಾಹಿತಿಯನ್ನು ವಿಮಾನದ ಪ್ರಯಾಣಿಕರಿಗೆ ನೀಡುವುದನ್ನು ಕೇಂದ್ರ ಸರ್ಕಾರ  ಕಡ್ಡಾಯಗೊಳಿಸಿದೆ.
 
ಹೀಗಾಗಿ ಇನ್ನು ಮುಂದೆ ಯೋಧರ ಶವಗಳನ್ನು ಸಾಗಿಸುವ ವೇಳೆ, ವಿಮಾನದ ಮುಖ್ಯ ಪೈಲಟ್, ಈ ವಿಮಾನದಲ್ಲಿ ದೇಶ ಸೇವೆ ವೇಳೆ ಮಡಿದ ಯೋಧರ ಶವವನ್ನು ಸಾಗಿಸಲಾಗುತ್ತಿದೆ ಎಂದು ಘೋಷಣೆ ಮಾಡಬೇಕಾಗುತ್ತದೆ. ಈ ವೇಳೆ ಯೋಧನ ಹೆಸರು, ಅವರು ನಿರ್ವಹಿಸುತ್ತಿದ್ದ ಹುದ್ದೆ, ಅವರು ಕಾರ್ಯನಿರ್ವಹಿಸುತ್ತಿದ್ದ ರೆಜಿಮೆಂಟ್ ಹೆಸರನ್ನೂ ಹೇಳಬೇಕಾಗುತ್ತದೆ. ಅಂತಿಮವಾಗಿ ಜೈ ಹಿಂದ್ ಎಂದು ಘೋಷಣೆ ಮಾಡುವುದನ್ನು ವಿಮಾನಯಾನ ನಿರ್ದೇಶನಾಲಯ ಕಡ್ಡಾಯ ಮಾಡಿದೆ. 

ಇದರ ಜೊತೆಗೆ ವಿಮಾನ ನಿಲ್ದಾಣದಲ್ಲಿ ಶವವನ್ನು ಇಳಿಸುವ ವೇಳೆ ಅದಕ್ಕೆಂದೇ ಪ್ರತ್ಯೇಕ ಜಾಗ ಗುರುತಿಸು ವಂತೆ ಯೂ ಡಿಜಿಸಿಎ ಎಲ್ಲಾ ವಿಮಾನ ಯಾನ ಸಂಸ್ಥೆಗಳಿಗೆ ಸೂಚಿಸಿದೆ. ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾ ಈಗಾ ಗಲೇ ಡಿಜಿಸಿಎ ಆದೇಶವನ್ನು ಪಾಲನೆ ಮಾಡುತ್ತಿದೆ. ವಿದೇಶಗಳಲ್ಲಿ ಬಹಳ ಹಿಂದಿನಿಂದಲೂ ಜಾರಿಯಲ್ಲಿರುವ ಇಂಥ ಕ್ರಮವನ್ನು ಭಾರತದಲ್ಲೂ ಜಾರಿಗೆ ತರಬೇಕು ಎಂದು ಸಂಸದ ರಾಜೀವ್ ಚಂದ್ರಶೇಖರ್ 2014 ರಲ್ಲೇ ಅಂದಿನ ಏರ್ ಇಂಡಿಯಾ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿದ್ದರು. 

ಬಳಿಕ ಸರ್ಕಾರದ ಗಮನಕ್ಕೂ ಈ ವಿಷಯ ತಂದಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಕ್ಷಣಾ ಸಚಿವಾಲಯವು ಡಿಜಿಸಿಎಗೆ ಪತ್ರ ಬರೆದು, ಹುತಾತ್ಮ ಯೋಧರಿಗೆ ವಿಶಿಷ್ಟ ಗೌರವ ಸಲ್ಲಿಸುವ ಕ್ರಮ ಜಾರಿಗೆ ಮನವಿ ಮಾಡಿತ್ತು. ಆ ಮನವಿಯನ್ನು ಇದೀಗ ಡಿಜಿಸಿಎ ಕಾನೂನು ರೂಪದಲ್ಲಿ ಜಾರಿಗೆ ತಂದಿದೆ.

Follow Us:
Download App:
  • android
  • ios