Asianet Suvarna News Asianet Suvarna News

ಇಂದು ಮೂವರು ಕಾಂಗ್ರೆಸ್ ಮುಖಂಡರ ಅಧಿಕಾರ ಸ್ವೀಕಾರ

ಇಂದು ಮೂವರು ಕಾಂಗ್ರೆಸ್ ಮುಖಂಡರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಮೂರು ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳಲಿದೆ. 

Opposition Leaders Invited As Congress Takes Charge In 3 States
Author
Bengaluru, First Published Dec 17, 2018, 7:49 AM IST

ಭೋಪಾಲ್/ಜೈಪುರ/ರಾಯ್‌ಪುರ: ಇತ್ತೀಚಿನ ಪಂಚರಾಜ್ಯ ವಿಧಾನಸಭಾ ಚುನಾವಣೆ ಪೈಕಿ ಕಾಂಗ್ರೆಸ್ ಗೆಲುವು ಸಾಧಿಸಿದ್ದ 3 ರಾಜ್ಯಗಳಲ್ಲಿ ಸೋಮವಾರ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ರಾಜಧಾನಿಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. 

ಈ ಪೈಕಿ ಮಧ್ಯಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮೈತ್ರಿಕೂಟ ಕಟ್ಟುವ ಸಿದ್ಧತೆಯಲ್ಲಿರುವ ವಿಪಕ್ಷಗಳ ಶಕ್ತಿಪ್ರದರ್ಶನಕ್ಕೆ ಭೋಪಾಲ್
ಕಾರ್ಯಕ್ರಮ ಮತ್ತೊಂದು ವೇದಿಕೆಯಾಗಲಿದೆ. ಭೋಪಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಎಚ್.ಡಿ.ದೇವೇಗೌಡ, ಸಿದ್ಧರಾಮಯ್ಯ, ಹಾಲಿ ಸಿಎಂ ಕುಮಾರ ಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್, ಸೇರಿ ಇತರೆ ಕೆಲ ನಾಯಕರು ಭಾಗಿಯಾಗಲಿದ್ದಾರೆ. 

ಇದಲ್ಲದೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ಡಿಎಂಕೆ ನಾಯಕ ಸ್ಟಾಲಿನ್, ಸಿಪಿಎಂ, ಸಿಪಿಐ, ನ್ಯಾಷನಲ್ ಕಾನ್ಫರೆನ್ಸ್, ಎನ್‌ಸಿಪಿ ನಾಯಕರು ಕೂಡಾ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 

ಹೀಗಾಗಿ ಸೋಮವಾರದ ಕಾರ್ಯಕ್ರಮ ಕಾಂಗ್ರೆಸ್ ಪಾಲಿಗೆ ರಾಜ್ಯದಲ್ಲಿ 15 ವರ್ಷಗಳ ಅಧಿಕಾರಕ್ಕೆ ಬಂದ ಸಂಭ್ರಮವಾಗಲಿದ್ದರೆ, ವಿಪಕ್ಷಗಳ  ಪಾಲಿಗೆ ಹೊಸ ಮೈತ್ರಿಕೂಟ ರಚನೆಯಲ್ಲಿ ಮತ್ತೊಂದು ಹೆಜ್ಜೆಯಾಗಲಿದೆ. ಈ ಹಿಂದೆ ಕರ್ನಾಟಕ ಸಿಎಂ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಇದೇ ರೀತಿಯಲ್ಲಿ ವಿಪಕ್ಷಗಳ ನಾಯಕರು ದೊಡ್ಡ ಮಟ್ಟದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. 

ಪ್ರಮಾಣ ವಚನ: ಸೋಮವಾರ ಬೆಳಗ್ಗೆ 10 ಗಂಟೆಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್, ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಧಾನಿ  ಜೈಪುರದ ಆಲ್ಬರ್ಟ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹೊರಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಇನ್ನು ಮಧ್ಯಾಹ್ನ 1.30ಕ್ಕೆ ಭೋಪಾಲ್‌ನಲ್ಲಿ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಮಲ್‌ನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಜಂಬೂರಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್ ಪಾಲಿಗೆ ಇದು ಬಹುದೊಡ್ಡ ಕಾರ್ಯಕ್ರಮವಾಗಿರಲಿದೆ. ಮತ್ತೊಂದೆಡೆ ಛತ್ತೀಸ್‌ಗಢದ ರಾಜಧಾನಿ ಸಂಜೆ 5 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲೂ ಪಕ್ಷದ ಹಲವು ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.

ಸಾಲ ಮನ್ನಾ ಪ್ರಕಟ: ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಶ್ವಾಸನೆ ನೀಡಿದ್ದರು. ಹೀಗಾಗಿ ರಾಹುಲ್ ಇಮೇಜ್ ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ದಿನವೇ ಮೂರೂ ರಾಜ್ಯಗಳಲ್ಲಿ ರೈತರ ತಲಾ 2 ಲಕ್ಷ ರು.ವರೆಗಿನ ಸಾಲ ಮನ್ನಾ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 

Follow Us:
Download App:
  • android
  • ios