Asianet Suvarna News Asianet Suvarna News

ಹಿಂದು ಧರ್ಮದ ಬಗ್ಗೆ ಬ್ರಾಹ್ಮಣರಷ್ಟೇ ಮಾತಾಡಬೇಕು! ಕಾಂಗ್ರೆಸ್ ಮುಖಂಡ

ಹಿಂದೂ ಧರ್ಮದ ಬಗ್ಗೆ ಮಾತನಾಡಲು ಬ್ರಾಹ್ಮಣರು, ಪಂಡಿತರು ಮಾತ್ರ ಅರ್ಹ. ಕೆಳಜಾತಿಯವರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಅಲ್ಲ’ ಎಂದು ಹೇಳುವ ಮೂಲಕ ರಾಜಸ್ಥಾನ ಕಾಂಗ್ರೆಸ್‌ ಮುಖಂಡ ಸಿ.ಪಿ. ಜೋಶಿ ವಿವಾದ ಸೃಷ್ಟಿಸಿದ್ದಾರೆ. ಇದರಿಂದ ಎಚ್ಚೆತ್ತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಜೋಶಿ ಕ್ಷಮೆಯಾಚಿಸಿದ್ದಾರೆ.

Only Brahmins can talk about Hindusim not Modi says  CP Joshi
Author
Bengaluru, First Published Nov 24, 2018, 7:33 AM IST

ನವದೆಹಲಿ :  ಐದು ರಾಜ್ಯಗಳ ಚುನಾವಣೆಯಲ್ಲಿ ಮತ್ತೆ ಜಾತಿ-ಧರ್ಮ ಪ್ರಧಾನ ವಿಷಯವಾಗುತ್ತಿದೆ. ‘ಹಿಂದೂ ಧರ್ಮದ ಬಗ್ಗೆ ಮಾತನಾಡಲು ಬ್ರಾಹ್ಮಣರು, ಪಂಡಿತರು ಮಾತ್ರ ಅರ್ಹ. ಕೆಳಜಾತಿಯವರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಅಲ್ಲ’ ಎಂದು ಹೇಳುವ ಮೂಲಕ ರಾಜಸ್ಥಾನ ಕಾಂಗ್ರೆಸ್‌ ಮುಖಂಡ ಸಿ.ಪಿ. ಜೋಶಿ ವಿವಾದ ಸೃಷ್ಟಿಸಿದ್ದಾರೆ.

ಈ ಹೇಳಿಕೆ ವಿವಾದಕ್ಕೆ ಈಡಾಗಿ ಬಿಜೆಪಿಗೆ ಚುನಾವಣಾ ವಿಷಯವಾಗುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಜೋಶಿ ಕ್ಷಮೆಯಾಚಿಸಿದ್ದಾರೆ.

ಜೋಶಿ ಹೇಳಿದ್ದೇನು?: ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರೂ ಆದ ಜೋಶಿ, ‘ಹಿಂದೂ ಧರ್ಮದ ಬಗ್ಗೆ ಕೇವಲ ಬ್ರಾಹ್ಮಣರು, ಪಂಡಿತರು ಹಾಗೂ ಜ್ಞಾನಿಗಳು ಮಾತ್ರ ಮಾತನಾಡಬೇಕು. ಆದರೆ ಇಂದು ಬೇರೆ ಜಾತಿಯವರು ಹಿಂದೂ ಧರ್ಮದ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಉಮಾಭಾರತಿ ಲೋದಿ ಸಮಾಜಕ್ಕೆ ಸೇರಿದವರು. ನರೇಂದ್ರ ಮೋದಿ ಕೂಡ ಯಾವುದೋ ಜಾತಿಯವರು. ಸಾಧ್ವಿ ಋುತಾಂಬರಾ ಕೂಡ ಕೆಳಜಾತಿಗೆ ಸೇರಿದವರು. ಅವರೆಲ್ಲ ಇಂದು ಹಿಂದೂ ಧರ್ಮದ ಬಗ್ಗೆ ಮಾತಾಡತೊಡಗಿದ್ದಾರೆ. ಅವರಿಗೇನು ಗೊತ್ತು ಹಿಂದೂ ಧರ್ಮದ ಬಗ್ಗೆ?’ ಎಂದು ಛೇಡಿಸಿದರು.

ಈ ಹೇಳಿಕೆಯ ಬಗ್ಗೆ ಬಿಜೆಪಿ ಗರಂ ಆಗಿದೆ. ಪಕ್ಷದ ವಕ್ತಾರ ಸಂಬಿತ್‌ ಪಾತ್ರ ಮಾತನಾಡಿ, ‘ಕರ್ನಾಟಕದಲ್ಲಿ ಹಿಂದೂ ಧರ್ಮ ಒಡೆದು ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಹೋಗಿದ್ದ ಕಾಂಗ್ರೆಸ್‌ ಈಗ ಪಂಚರಾಜ್ಯ ಚುನಾವಣೆಯಲ್ಲೂ ಹಿಂದೂ ಧರ್ಮವನ್ನು ಜಾತಿ ಭೇದದ ಆಧಾರದಲ್ಲಿ ಒಡೆಯಹೊರಟಿದೆ. ಈ ಬಗ್ಗೆ ಖುದ್ದು ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ವಿವಾದದ ತೀವ್ರತೆ ಅರಿತ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ‘ಜೋಶಿ ಅವರ ಹೇಳಿಕೆ ಕಾಂಗ್ರೆಸ್‌ ಪಕ್ಷದ ತತ್ವಕ್ಕೆ ವಿರುದ್ಧವಾಗಿವೆ. ಪಕ್ಷದ ನಾಯಕರು ಸಮಾಜ ವಿಘಟನೆಗೆ ಕಾರಣವಾಗುವ ಹೇಳಿಕೆ ನೀಡಬಾರದು. ಜೋಶಿ ಅವರು ಕಾಂಗ್ರೆಸ್‌ ತತ್ವಗಳಿಗೆ ಬೆಲೆ ನೀಡಿ ತಪ್ಪಿನ ಅರಿವು ಮಾಡಿಕೊಳ್ಳಲಿದ್ದಾರೆ ಎಂಬ ಭರವಸೆ ನನಗಿದೆ. ಅವರು ತಮ್ಮ ಹೇಳಿಕೆಗೆ ವಿಷಾದಿಸಬೇಕು’ ಎಂದು ಸೂಚಿಸಿದರು.

ಬಳಿಕ ಜೋಶಿ ಟ್ವೀಟ್‌ ಮಾಡಿ, ‘ಕಾಂಗ್ರೆಸ್‌ ಪಕ್ಷದ ತತ್ವ ಹಾಗೂ ಕಾರ್ಯಕರ್ತರ ಭಾವನೆಯನ್ನು ಅರಿತು ನಾನು ಕ್ಷಮೆ ಕೋರುತ್ತಿದ್ದೇನೆ’ ಎಂದರು. ಆದರೆ ಇದಕ್ಕೂ ಮುನ್ನ ಬಿಜೆಪಿ ತಮ್ಮ ಹೇಳಿಕೆಯನ್ನು ತಿರುಚುತ್ತಿದೆ ಎಂದು ಅವರು ಆರೋಪಿಸಿದ್ದರು.

ಅಯ್ಯರ್‌ ಎಡವಟ್ಟು:  ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನ ಮಣಿಶಂಕರ್‌ ಅಯ್ಯರ್‌ ಅವರು ‘ನರೇಂದ್ರ ಮೋದಿ ಒಬ್ಬ ನೀಚ’ ಎಂದು ಟೀಕಿಸಿದ್ದರು. ಹಿಂದಿಯಲ್ಲಿ ನೀಚ ಎಂದರೆ ‘ಕೆಳಜಾತಿಯವ’ ಎಂಬ ಅರ್ಥ ಇದ್ದು, ಅಯ್ಯರ್‌ ಹೇಳಿಕೆಯ ಲಾಭವನ್ನು ಪಡೆದಿದ್ದ ಬಿಜೆಪಿ ಗುಜರಾತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು.

Follow Us:
Download App:
  • android
  • ios