Asianet Suvarna News Asianet Suvarna News

ಯುವಜನತೆಯಲ್ಲಿ ಹೆಚ್ಚುತ್ತಿದೆ ಸೋಮಾರಿತನ

ಯುವಕರಲ್ಲಿ ಆಲಸ್ಯ ಹಾಗೂ ಅಭಿಮಾನದ ಕೊರತೆಯಿಂದಾಗಿ ಗ್ರಾಮೀಣ ಜನಪದ ನಶಿಸಿ ಹೋಗುತ್ತಿದೆ. ಯಂತ್ರೋಪರಕರಣಗಳ ಪ್ರಭಾವದಿಂದ ಸೋಮಾರಿತನ ಜಾಸ್ತಿಯಾಗುತ್ತಿದೆ.

nowadays young peoples becoms lazy

ಬೀದರ್(ನ.21): ಇಂದು ಯುವಕರಲ್ಲಿ ಆಲಸ್ಯ ಹಾಗೂ ಅಭಿಮಾನದ ಕೊರತೆಯಿಂದಾಗಿ ಗ್ರಾಮೀಣ ಜನಪದ ನಶಿಸಿ ಹೋಗುತ್ತಿದೆ. ಯಂತ್ರೋಪರಕರಣಗಳ ಪ್ರಭಾವದಿಂದ ಸೋಮಾರಿತನ ಜಾಸ್ತಿಯಾಗುತ್ತಿದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಹಾಗೂ ಕೇಂದ್ರ ಸರ್ಕಾರದ ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ನಗರದ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾ ಯುವಜನೋತ್ಸವ ಉದ್ಘಾಟಿಸಿ, ವಿಶ್ವದಲ್ಲಿ ಹೆಚ್ಚು ಯುವಕರು ಹೊಂದಿದ್ದ ದೇಶ ನಮ್ಮದು. ಅಷ್ಟೇ ಸಂಸ್ಕಾರ ಹಾಗೂ ಸಂಸ್ಕೃತಿ ಪ್ರಪಂಚಕ್ಕೆ ಧಾರೆ ಎರೆದ ನಮ್ಮವರ ಬಗ್ಗೆ ಅಭಿಮಾನ ಪಡಬೇಕು. ನಗರೀಕರಣ ಹಾಗೂ ಖಾಸಗಿಕರಣದ ಪ್ರಭಾವದಿಂದ ವಿಭಕ್ತ ಕುಟುಂಬಗಳು ಹುಟ್ಟಿಕೊಂಡು, ಪ್ರೀತಿ, ಪ್ರೇಮ ಹಾಗೂ ಸಹನಶೀಲ ಶಕ್ತಿ ಕುಗ್ಗುತಿದ್ದು, ಅಳಿವಿನ ಅಂಚಿನಲ್ಲಿರುವ ದೇಶಿ ಕಲೆ, ಸಾಹಿತ್ಯ ಹಾಗೂ ಸಂಗೀತವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಜೀವಂತವಾಗಿಡಬೇಕಿದೆ ಎಂದು ಹೇಳಿದರು.

ಕಲಾ ತರಬೇತಿ ಕೇಂದ್ರ ಆರಂಭಿಸಿ: ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ವೀರುಪಾಕ್ಷ ಗಾದಗಿ ಮಾತನಾಡಿ, ಇಂದು ಕಲೆ ಉತ್ತುಂಗ ಶಿಖರಕ್ಕೇರಲು ತರಬೇತಿ ಅಗತ್ಯವಾಗಿದ್ದು, ಹಿಂದುಳಿದ ಈ ಜಿಲ್ಲೆಯಲ್ಲಿ ಕಲಾವಿದರ ಕೊರತೆ ಇಲ್ಲ. ಆದರೆ ಅವರಿಗೆ ತರಬೇತಿ ನೀಡದ್ದಕ್ಕೆ ನಮ್ಮವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಚ್ಚಾಗಿ ಭಾಗವಹಿಸಲು ಹಿಂದೇಟು ಹಾಕುವರು. ನಮ್ಮ ಜನಪ್ರತಿನಿಧಿಗಳು ದೊಡ್ಡ ಮನಸ್ಸು ಮಾಡಿ ಇಲ್ಲಿ ಸುಸಜ್ಜಿತ ಕಲಾ ತರಬೇತಿ ಕೇಂದ್ರ ಆರಂಭಿಸುವಂತೆ ಕರೆ ಕೊಟ್ಟರು.

ಪ್ರಭುಶೆಟ್ಟಿ ಸೈನಿಕಾರ ಮಾತನಾಡಿ, ಯುವಕರು ಈ ದೇಶದ ಆಸ್ತಿ ಎಂದು ಹೇಳುವ ಜನಪ್ರತಿನಿಧಿಗಳು ಯುವಕರಿಗಾಗಿ ಇರುವ ಕಾರ್ಯಕ್ರಮಗಳಿಗೆ ನಿರ್ಲಕ್ಷಿಸುತ್ತಾರೆ. ಆದ್ದರಿಂದ ಯುವಶಕ್ತಿ ಬಲಿಷ್ಟಗೊಂಡು ಸಚ್ಚಾರಿತ್ರ್ಯವಂತರಾಗಿ ಬಾಳಿ, ಬದುಕಿದಲ್ಲಿ ಜಗತ್ತು ನಮ್ಮನ್ನು ಪೂಜ್ಯನಿಯ ಭಾವದಿಂದ ಗುರುತಿಸುತ್ತದೆ. ಸ್ವಾಮಿ ವಿವೇಕಾನಂದರೇ ನಮ್ಮೆಲ್ಲರಿಗೆ ಆದರ್ಶರಾಗಿದ್ದು, ಅವರ ವಿಚಾರ ಧಾರೆಯಲ್ಲಿ ಸಾಗಿದರೆ ಯಶಸ್ವಿ ಬದುಕು ನಮ್ಮದೆಂದು ಅಭಿಪ್ರಾಯ ಪಟ್ಟರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಘುವೀರ ವಾಡೇಕರ್, ರಾಜಕುಮಾರ ಪಸಾರೆ, ಮೌಲಪ್ಪ ಮಾಳಗೆ, ರಾಷ್ಟ್ರೀಯ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ತಾಲೂಕು ಕಸಾಪ ಅಧ್ಯಕ್ಷ ಎಮ್.ಎಸ್. ಮನೋಹರ್, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೊನಾರೆ, ಎಸ್.ಬಿ.ಕುಚಬಾಳ್, ಯುವ ಮುಖಂಡ ಎಂ.ಪಿ ಮುದಾಳೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ್ ಅಷ್ಟಗಿ, ಇಲಾಖೆಯ ಅಧಿಕ್ಷಕ ಆರ್.ಜಿ.ನಾಡಗೀರ್, ಹಿಂದಿನ ಅಧಿಕಾರಿ ಜಿ.ಬಂಡೆಪ್ಪ, ಸಿಬ್ಬಂದಿ ಖುದ್ದುಸ್, ಯುವ ಸ್ಪಂದನ ಸಿಬ್ಬಂದಿ ಜಯಶ್ರೀ ಸೇರಿದಂತೆ ಜಿಲ್ಲೆಯ ನೂರಾರು ಯುವ ಕಲಾವಿದರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕರು ಭಾಗವಹಿಸಿದ್ದರು.

ಆರಂಭದಲ್ಲಿ ಕಲಾದ ವೈಜಿನಾಥ ಸಜ್ಜನಶಟ್ಟಿ ನಾಡಗೀತೆ ಹಾಡಿದರು. ಜಾನಪದ ದ್ವಾಂಸ ಶಂಭುಲಿಂಗ ವಾಲ್ದೊಡ್ಡಿ ಜಾನಪದ ಗೀತೆ ಹಾಡಿದರು. ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲೆಯ ವಿವಿಧ ಯುವ, ಸಂಘ, ಸಂಸ್ಥೆಗಳು ಮತ್ತು ಯುವ ಸ್ಪಂದನ ವೇದಿಕೆಗಳ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.

Follow Us:
Download App:
  • android
  • ios