Asianet Suvarna News Asianet Suvarna News

ನಗರ, ಪಟ್ಟಣಗಳ ಬಳಿ ಹೊಸ ಸಾಮಿಲ್‌ಗೆ ಲೈಸೆನ್ಸ್‌ ಇಲ್ಲ: ಹೈಕೋರ್ಟ್

ನಗರ, ಪಟ್ಟಣಗಳ ಬಳಿ ಹೊಸ ಸಾಮಿಲ್‌ಗೆ ಲೈಸೆನ್ಸ್‌ ಇಲ್ಲ | ಕೈಗಾರಿಕಾ ಪ್ರದೇಶದಿಂದ 10 ಕಿ.ಮೀ. ಒಳಗೂ ಇಲ್ಲ |  ಹೈಕೋರ್ಟ್‌ ಆದೇಶ: ರಾಜ್ಯ ಸರ್ಕಾರದ ನಿರ್ಧಾರ ರದ್ದು

No licence for new Saw mills near towns and cities orders High Court
Author
Bengaluru, First Published Mar 6, 2019, 11:25 AM IST

ಬೆಂಗಳೂರು (ಮಾ. 06):  ಮುನ್ಸಿಪಲ್‌ ಏರಿಯಾ ಅಥವಾ ಕೈಗಾರಿಕಾ ಪ್ರದೇಶದ ಹತ್ತು ಕಿ.ಮೀ. ವ್ಯಾಪ್ತಿಯೊಳಗೆ ಹೊಸದಾಗಿ ಸಾಮಿಲ್‌ ಹಾಗೂ ಮರ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಕಳೆದ 2013ರಲ್ಲಿ ಹೊರಡಿಸಿದ ಅಧಿಸೂಚನೆ ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿದೆ.

ಎಸ್ ಸಿ- ಎಸ್ ಟಿ ಮುಂಬಡ್ತಿಗೆ ರಾಜ್ಯ ಸರ್ಕಾರದಿಂದ ಬ್ರೇಕ್

ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಮತ್ತು ತಿದ್ದುಪಡಿ ನಿಯಮವು ಅಕ್ರಮ ಹಾಗೂ ಕಾನೂನು ಬಾಹಿರ ಎಂಬುದಾಗಿ ಘೋಷಿಸಬೇಕು ಎಂದು ಕೋರಿ ಕೊಡಗು ಜಿಲ್ಲೆಯ ‘ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ’ ಅರ್ಜಿ ಸಲ್ಲಿಸಿತ್ತು.

ಮಂಗಳವಾರ ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ತಿದ್ದುಪಡಿಸಿ ನಿಯಮಕ್ಕೆ ವಿಧಾನಸಭೆ ಹಾಗೂ ವಿಧಾನಪರಿಷತ್‌ ಒಪ್ಪಿಗೆ ಸಿಕ್ಕಿಲ್ಲ. ಶಾಸನಸಭೆಯ ಒಪ್ಪಿಗೆ ಪಡೆಯದೇ ತಿದ್ದುಪಡಿ ನಿಯಮವನ್ನು ರೂಪಿಸಿ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ನಂತರ ಸರ್ಕಾರದ ತಿದ್ದುಪಡಿ ನಿಯಮವು ಸಂವಿಧಾನಬಾಹಿರ, ಕಾನೂನುಬಾಹಿರ ಹಾಗೂ ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳಿಗೆ ತದ್ವಿರುದ್ಧವಾಗಿದೆ ಎಂಬುದಾಗಿ ಆದೇಶಿಸಿ ಸರ್ಕಾರದ ಗೆಜೆಟ್‌ ಅಧಿಸೂಚನೆ ರದ್ದುಪಡಿಸಿತು.

ವಾಯುದಾಳಿ ಎಫೆಕ್ಟ್, ಯುಪಿಯಲ್ಲಿ ಬಿಜೆಪಿಗೆ 12 ಸೀಟು ಹೆಚ್ಚು ಲಾಭ: ಸಮೀಕ್ಷೆ

ಅಧಿಸೂಚಿತ ಅರಣ್ಯ ಪ್ರದೇಶದ 10 ಕಿ.ಮೀ. ವ್ಯಾಪ್ತಿಯೊಳಗೆ ಸಾಮಿಲ್‌ ಅಥವಾ ಮರ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಲು ಅವಕಾಶವಿಲ್ಲ. ಈ ನಿಯಮವು ಖಾಸಗಿ ವ್ಯಕ್ತಿಗಳು ಮುನ್ಸಿಪಲ್‌ ಏರಿಯಾ ಅಥವಾ ಕೈಗಾರಿಕಾ ಪ್ರದೇಶದ 10 ಕಿ.ಮೀ ವ್ಯಾಪ್ತಿಯೊಳಗೆ ಹೊಸದಾಗಿ ಸಾಮಿಲ್‌ ಅಥವಾ ಮರ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ಅನ್ವಯವಾಗುವುದಿಲ್ಲ ಎಂಬುದಾಗಿ ಕರ್ನಾಟಕ ಅರಣ್ಯ ಅಧಿನಿಯಮ-1969ರ ನಿಯಮ 163ಕ್ಕೆ 2013ರಲ್ಲಿ ಸರ್ಕಾರ ತಿದ್ದುಪಡಿ ತಂದಿತ್ತು. ಮರ ಉದ್ದಿಮೆಗೆ ಉತ್ತೇಜನ ನೀಡುವ ಉದ್ದೇಶದಿಂದ ತಿದ್ದುಪಡಿ ನಿಯಮದಲ್ಲಿ ರೂಪಿಸಲಾಗಿದೆ ಎಂಬುದಾಗಿ ತಿಳಿಸಿ ಅರಣ್ಯ ಇಲಾಖೆ 2013ರ ಮೇ 20ರಂದು ಗೆಜೆಟ್‌ ಅಧಿಸೂಚನೆ ಪ್ರಕಟಿಸಿತ್ತು.

ಈ ತಿದ್ದುಪಡಿಗೆ ಆಕ್ಷೇಪಿಸಿ ವ್ಯಕ್ತಪಡಿಸಿದ್ದ ಅರ್ಜಿದಾರರು, ತಿದ್ದುಪಡಿ ನಿಯಮ ಜಾರಿಯಾದರೆ ಅರಣ್ಯ ಪ್ರದೇಶಕ್ಕೆ ಅಪಾಯವಾಗಲಿದೆ. ಸಾಮಿಲ್‌ಗಳು ಅಣಬೆಗಳಂತೆ ಬೆಳೆಯುತ್ತವೆ. ನಿರ್ದಾಕ್ಷಿಣ್ಯವಾಗಿ ಮರಗಳನ್ನು ಕಡಿದು ಹಾಕುವುದರಿಂದ ವ್ಯಾಪಕ ಅರಣ್ಯ ನಾಶಕ್ಕೆ ಕಾರಣವಾಗಲಿದೆ. ನೈಸರ್ಗಿಕ ಸಂಪತ್ತು ಅಳಿದು ಹೋಗಲಿದೆ ಹಾಗೂ ವನ್ಯಜೀವಿ ಸಂಕುಲ, ಪ್ರಾಣಿ-ಪಕ್ಷಿಗಳು, ಅಪರೂಪದ ಜೀವವೈವಿಧ್ಯ ಸಸ್ಯಪ್ರಬೇಧ ವಿನಾಶದ ಅಂಚಿಗೆ ತಲುಪಲಿದೆ ಎಂದು ದೂರಿದ್ದರು.

ಅಲ್ಲದೆ, ತಿದ್ದುಪಡಿ ನಿಯಮಕ್ಕೆ ವಿಧಾನಸಭೆಯ ಉಭಯ ಸದನಗಳ ಒಪ್ಪಿಗೆ ಸಹ ದೊರೆತಿಲ್ಲ. ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳಿಗೆ ತದ್ವಿರುದ್ಧವಾಗಿದೆ. ಆದ್ದರಿಂದ ಸಂವಿಧಾನ ಹಾಗೂ ಕಾನೂನು ಬಾಹಿರವಾಗಿರುವ ಈ ತಿದ್ದುಪಡಿ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಹೈಕೋರ್ಟ್‌ ಅರ್ಜಿಯನ್ನು ಪುರಸ್ಕರಿಸಿದೆ. ಅರ್ಜಿದಾರರ ಪರ ವಕೀಲ ಎನ್‌. ರವೀಂದ್ರನಾಥ ಕಾಮತ್‌ ವಾದ ಮಂಡಿಸಿದ್ದರು.

Follow Us:
Download App:
  • android
  • ios