Asianet Suvarna News Asianet Suvarna News

ರೈತರಿಗೆ ಮೋದಿ ಸರ್ಕಾರದಿಂದ ಭಾರೀ ಗುಡ್ ನ್ಯೂಸ್

ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮೋದಿ ಸರ್ಕಾರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಪ್ರಮುಖ ಅನುಕೂಲಕರ ಯೋಜನೆಗಳನ್ನು ಜಾರಿ ತರಲು ಗಂಭೀರ ಚಿಂತನೆ ನಡೆಸಿದೆ. 

Narendra Modi Govt May Announce Major Relief Plan For Farmers
Author
Bengaluru, First Published Dec 29, 2018, 8:04 AM IST

ನವದೆಹಲಿ: ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾದ ಕೃಷಿಕರ ಸಮಸ್ಯೆ ಮುಂಬರುವ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಬಹುದು ಎಂದು ಕಳವಳಗೊಂಡಿರುವ ಕೇಂದ್ರ ಸರ್ಕಾರ, ರೈತರ ಉದ್ಧಾರಕ್ಕಾಗಿ ಎರಡು ಯೋಜ ನೆಗಳನ್ನು ಪ್ರಕಟಿಸಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಸಕಾಲಕ್ಕೆ ಬೆಳೆ ಸಾಲ ಮರುಪಾವತಿಸುವ ರೈತರಿಗೆ ಈಗ ನೀಡುತ್ತಿರುವ ಬಡ್ಡಿ ರಿಯಾಯಿತಿ ಬದಲಿಗೆ ಬಡ್ಡಿ ಸಂಪೂರ್ಣ ಮನ್ನಾ, ಆಹಾರ ಬೆಳೆಗಳ ವಿಮಾ ಪ್ರೀಮಿಯಂ ಮನ್ನಾ ಹಾಗೂ ತೋಟಗಾರಿಕಾ ಬೆಳೆಗಳ ವಿಮಾ ಪ್ರೀಮಿಯಂ ಮೊತ್ತ ಕಡಿತದಂತಹ ಯೋಜನೆಗಳನ್ನು ಪ್ರಕಟಿಸುವ ಸಂಬಂಧ ಪರಿಶೀಲನೆಯಲ್ಲಿ ತೊಡಗಿದೆ.

ಏನೇನು ಕೊಡುಗೆ?: ಸದ್ಯ ರೈತರಿಗೆ ಶೇ. 7 ರ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ  ಸಾಲ ದೊರೆಯುತ್ತಿದೆ. ಅದನ್ನು ಸಕಾಲಕ್ಕೆ ಮರುಪಾವತಿಸಿದರೆ ಶೇ.3 ಬಡ್ಡಿ  ರಿಯಾಯಿತಿ, ಅಂದರೆ ಒಟ್ಟಾರೆ ಶೇ. 4  ರ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿದೆ. ಸಕಾಲಕ್ಕೆ ಸಾಲ ಮರುಪಾವತಿಸುವ ರೈತರಿಗೆ ಬಡ್ಡಿರಿಯಾಯಿತಿ ನೀಡುವ ಬದಲು ಸಂಪೂರ್ಣ ಬಡ್ಡಿ ಯನ್ನೇ ಮನ್ನಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬಡ್ಡಿ ರಿಯಾಯಿತಿ ಯೋಜನೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 15000 ಕೋಟಿ ರು. ಹೊರೆ ಬೀಳುತ್ತಿದೆ.  

ಸಂಪೂರ್ಣ ಬಡ್ಡಿಯನ್ನೇ ಮನ್ನಾ ಮಾಡಿದರೆ ಇನ್ನೂ 15 ಸಾವಿರ ಕೋಟಿ ರು. ಅಂದರೆ ಒಟ್ಟು 30 ಸಾವಿರ ಕೋಟಿ ರು. ಹೊರೆ ಬೀಳಲಿದೆ. ಇದೇ ವೇಳೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಆಹಾರ ಬೆಳೆಗಳನ್ನು ಬೆಳೆಯುವ ರೈತರು ಪಾವತಿಸುವ ವಿಮಾ ಪ್ರೀಮಿಯಂ ಅನ್ನು ಸಂಪೂರ್ಣ ಮನ್ನಾ ಮಾಡಲು ಹಾಗೂ ತೋಟ ಗಾರಿಕಾ ಬೆಳೆಗಳ ಪ್ರೀಮಿಯಂ ಮೊತ್ತವನ್ನು ಕಡಿತಗೊಳಿಸುವ ಕುರಿತು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ನೇರ ನಗದು ವರ್ಗಾವಣೆ: ಸಂಕಷ್ಟದಲ್ಲಿರುವ ರೈತರ ಅನುಕೂಲಕ್ಕಾಗಿ ಮಧ್ಯಪ್ರದೇಶದ ಮಾದರಿಯಲ್ಲಿ ‘ಭಾವಾಂತರ’ (ಭಾವ್ ಎಂದರೆ ದರ, ಅಂತರ ಎಂದರೆ ವ್ಯತ್ಯಾಸ- ‘ದರ ವ್ಯತ್ಯಾಸ’) ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಜಾರಿಗೊಳಿಸಿರುವ ‘ರೈತಬಂಧು’ ಯೋಜನೆಯನ್ನೂ ಪರಿಶೀಲಿಸುತ್ತಿದೆ.

ಕನಿಷ್ಠ ಬೆಂಬಲ ಬೆ ಲೆ ಹಾಗೂ ಮಾರುಕಟ್ಟೆ ಬೆಲೆಯ ನಡುವಣ ಅಂತರದ ಮೊತ್ತವನ್ನು ರೈತರಿಗೆ ವರ್ಗಾವಣೆ ಮಾಡುವುದು ‘ಭಾವಾಂತರ’ ಯೋಜನೆ ತಿರುಳು. ರೈತ ಬಂಧು ಯೋಜನೆಯಡಿ ಭೂಮಾಲೀಕರಿಗೆ ಪ್ರತಿ ವರ್ಷ ಎಕರೆಗೆ 8 ಸಾವಿರ ರು. ವರ್ಗಾವಣೆ ಮಾಡಲಾಗುತ್ತದೆ. ಇವೆರಡು ಯೋಜನೆಗಳ ಬಗ್ಗೆಯೂ ಸರ್ಕಾರ ಉತ್ಸುಕವಾಗಿದ್ದು, ಯಾವ ಯೋಜನೆ ಜಾರಿಗೆ  ತರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 

ಆದರೆ ಈ ಯೋಜನೆಯಡಿ ಹಣ ನೇರವಾಗಿ ಭೂಮಿಯ ಖಾತೆದಾರರಿಗೆ ವರ್ಗಾವಣೆ ಆಗುತ್ತದೆ. ಭೂಮಿಯನ್ನು ಗುತ್ತಿಗೆ ಪಡೆದ ರೈತರಿಗೆ ಲಾಭ ಸಿಗದು. ಹೀಗಾಗಿ ಯಾವ ರೀತಿಯಲ್ಲಿ ಯೋಜನೆ ಜಾರಿಗೊಳಿಸಬಹುದು ಎಂಬುದರ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.

1 ಲಕ್ಷ ರು.ವರೆಗಿನ ಸಾಲ ಮನ್ನಾ?: ಭಾವಾಂತರ, ರೈತ  ಬಂಧು ಯೋಜನೆಗಳಿಗೆ ಪರ‌್ಯಾಯವಾಗಿ ಬೆಳೆ ವಿಮಾ ಯೋಜನೆಯನ್ನು ಮರುವಿನ್ಯಾಸಗೊಳಿಸಬೇಕು, ರೈತರಿಗೆ ಹೆಚ್ಚು ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಮತ್ತು 1 ಲಕ್ಷ ರು.ವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios