Asianet Suvarna News Asianet Suvarna News

ಉದ್ಯೋಗ ಕೊಡಿಸುವುದಾಗಿ ಕೋಟ್ಯಂತರ ರು. ವಂಚನೆ

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರುಪಾಯಿ ವಂಚಿಸಿದ ಪ್ರಕರಣ ಸಂಬಂಧ ವಂಚನೆಗೊಳಗಾದ ತಾಲೂಕಿನ ಸುಮಾರು 25 ಜನರು ಸದಾಶಿವಗಡದ ವಿಜಯ ಗಜೀನಕರ ಎಂಬಾತನನ್ನು ಸೋಮವಾರ ನಗರ ಪೊಲೀಸ್ ಠಾಣೆಗೆ ಕರೆತಂದು ನ್ಯಾಯಕ್ಕಾಗಿ ಆಗ್ರಹಿಸಿದರು.

Man Who Cheated 25 People Hand over to Police

ಕಾರವಾರ (ನ.21): ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರುಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.  ತಾಲೂಕಿನ ಸುಮಾರು 25 ಜನ ವಂಚಿಸಿದ ಸದಾಶಿವಗಡದ ವಿಜಯ ಗಜೀನಕರ ಎಂಬಾತನನ್ನು ಸೋಮವಾರ ನಗರ ಪೊಲೀಸ್ ಠಾಣೆಗೆ ಕರೆತಂದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವಂಚನೆಗೊಳಗಾದ ನಿತೇಶ ಉರ್ಗೇಕರ್ ಮಾತನಾಡಿ, ಸಿ ಗ್ರೂಪ್ ಹುದ್ದೆಗೆ ₹ 6ರಿಂದ ₹ 6.5 ಲಕ್ಷ ಹಾಗೂ ಡಿ ಗ್ರೂಪ್ ಹುದ್ದೆಗೆ ₹ 4ರಿಂದ ₹ 4.5 ಲಕ್ಷ ತೆಗೆದುಕೊಂಡಿದ್ದಾರೆ. ಕಾರವಾರ, ಬೆಳಗಾವಿ, ಶಿರಸಿ, ಗೋವಾ, ಮಹಾರಾಷ್ಟ್ರ ಒಳಗೊಂಡು 60ಕ್ಕೂ ಹೆಚ್ಚಿನ ಮಂದಿಯಿಂದ ಇವರು ಹಣ ಪಡೆದಿದ್ದಾರೆ.

ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಬಗ್ಗೆ ಸಂಶಯವಿದೆ. ಇನ್ನು, ನಮ್ಮ ಜತೆಗೆ ಕಲ್ಕತ್ತಾಕ್ಕೆ ಸಂದರ್ಶನಕ್ಕೆ ಬಂದ ಇತರೆಡೆಯ ಯುವಕರ ಎಸ್'ಎಸ್‌'ಎಲ್‌'ಸಿ, ಪಿಯುಸಿ, ತಾಂತ್ರಿಕ ಶಿಕ್ಷಣದ ಮೂಲ ದಾಖಲೆಗಳನ್ನು ಪಡೆದಿದ್ದು, ಕೆಲವರ ದಾಖಲೆ ವಾಪಸ್ ನೀಡಿದ್ದಾರೆ. ಬಹುತೇಕ ಮಂದಿಯ ದಾಖಲೆಗಳು ಅವರ ಬಳಿಯೇ ಇದೆ. ಇದರಿಂದ ನಮಗೆ ಬೇರೆಡೆ ಕೆಲಸಕ್ಕೆ ಅರ್ಜಿ ಸಲ್ಲಿಸಲೂ ಸಮಸ್ಯೆಯಾಗಿದೆ ಎಂದರು. ವಂಚನೆಗೊಳಗಾದ ವ್ಯಕ್ತಿಯ ತಂದೆ ಪಾಂಡುರಂಗ ನಾಯ್ಕ, ನಮ್ಮ ಮಗನ ಬಳಿ ₹ 6.5 ಲಕ್ಷ ಪಡೆದು ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದರು.

2 ವರ್ಷವಾದರೂ ಕೆಲಸ ಸಿಗದ ಕಾರಣ ಅವರಿಗೆ ದೂರವಾಣಿಯಿಂದ ಕರೆ ಮಾಡುತ್ತಿದ್ದೆ. ಆದರೆ, ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅನುಮಾನ ಬಂದು ಬೇರೆಯವರಲ್ಲಿ ವಿಚಾರಿಸಿದಾಗ ವಂಚನೆ ಮಾಡಿದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆತಂಕಗೊಂಡು ಪೊಲೀಸ್‌'ಠಾಣೆಗೆ ಹಣ ಪಡೆದ ವಿಜಯ ಎಂಬುವವರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದೇವೆ. ಇವನ ಜತೆಗಿದ್ದ ಮಂಜುನಾಥ ಸಾಳಸ್ಕರ್ ಸೇರಿ ಇವರದ್ದೊಂದು ಗುಂಪೇ ಇರುವ ಸಂಶಯವಿದೆ. ಪೊಲೀಸರು ಈ ಬಗ್ಗೆ ತನಿಖೆ ಮಾಡಿ ನ್ಯಾಯ ನೀಡಬೇಕು ಎಂದರು. ಸೂರಜ್ ನಾಯ್ಕ, ಚೇತಕ್ ಸೇರಿ 25ಕ್ಕೂ ಹೆಚ್ಚಿನವರು ಪೊಲೀಸ್ ಠಾಣೆ ಎದುರು ಸೇರಿದ್ದರು. ವಿಜಯ ಗಜೀನಕರ ಅವರಿಂದ ಪ್ರತಿಕ್ರಿಯೆ ಪಡೆಯಲು ಪೊಲೀಸರು ಅವಕಾಶ ನೀಡಿಲ್ಲ.

Follow Us:
Download App:
  • android
  • ios