Asianet Suvarna News Asianet Suvarna News

ಮೇ 19 ರಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸ್ಫೋಟ!

ರಾಜ್ಯ ರಾಜಕೀಯದಲ್ಲಿ ಮೇ 19ರ ಬಳಿಕ ಭಾರೀ ಬದಲಾವಣೆಯೊಂದು ಸಂಭವಿಸಲಿದೆ ಎನ್ನಲಾಗುತ್ತಿದೆ. 

Major Change in Karnataka Politics After May 19
Author
Bengaluru, First Published May 4, 2019, 8:10 AM IST

ಬೆಂಗಳೂರು :  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದೇ ಬಿಂಬಿಸಲಾಗುತ್ತಿದ್ದರೂ, ಈ ವಿಪ್ಲವ ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆ ಮತದಾನದ ದಿನವಾದ ಮೇ 19ರ ನಂತರವೇ ಭರ್ಜರಿಯಾಗಿ ಆರಂಭವಾಗುವ ಎಲ್ಲಾ ಲಕ್ಷಣಗಳಿವೆ.

ಬಿಡಿಎ ಸೇರಿದಂತೆ ಕಾಂಗ್ರೆಸ್‌ ಶಾಸಕರು ಅಧ್ಯಕ್ಷರಾಗಿರುವ ನಿಗಮ ಮಂಡಳಿಗಳನ್ನು ಅಧಿಕಾರಿಗಳ ಮೂಲಕ ನಿಯಂತ್ರಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆನ್ನಲಾದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಶಾಸಕರು ಬಹಿರಂಗವಾಗಿ ತಿರುಗಿಬಿದ್ದು ಮುಖ್ಯಮಂತ್ರಿ ಬದಲಾವಣೆಯ ಕೂಗು ಹುಟ್ಟುಹಾಕಲು ಸಜ್ಜಾಗಿದ್ದರು. ಆದರೆ, ಉಪ ಚುನಾವಣೆಯ ಮೇಲೆ ಇಂತಹ ವಿಪ್ಲವದಿಂದ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ಕಡಿವಾಣ ಹಾಕಿದ್ದರು ಎನ್ನಲಾಗಿದೆ.

ಉಪ ಚುನಾವಣೆವರೆಗೂ ಇಂತಹ ಯಾವುದೇ ಬೆಳವಣಿಗೆಗೆ ಆಸ್ಪದ ನೀಡಬಾರದು ಎಂಬ ಸಿದ್ದರಾಮಯ್ಯ ಅವರ ತಾಕೀತಿನಿಂದಾಗಿ ಸುಮ್ಮನಿರುವ ಕಾಂಗ್ರೆಸ್‌ ಶಾಸಕರು ಮೇ 19 ಮುಗಿಯುತ್ತಿದ್ದಂತೆಯೇ ದೊಡ್ಡ ಪ್ರಮಾಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ನ ಕೆಲ ಸಚಿವರ ವಿರುದ್ಧವೂ ಧ್ವನಿಯೆತ್ತುವ ಎಲ್ಲಾ ಸಾಧ್ಯತೆಗಳಿವೆ ಎಂಬ ಮಾಹಿತಿ ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೆ ಅಧಿಕಾರ ನೀಡಲಾಗಿದ್ದರೂ ಅದನ್ನು ಚಲಾಯಿಸಲು ಅವಕಾಶ ದೊರೆಯುತ್ತಿಲ್ಲ. ಅಧಿಕಾರಿ ವರ್ಗವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿಗಳು ತಮ್ಮ ಕಚೇರಿಯ ಮೂಲಕವೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕ್ಷೇತ್ರದಲ್ಲೂ ಕಾಂಗ್ರೆಸ್‌ ಶಾಸಕರಿಗಿಂತ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಜೆಡಿಎಸ್‌ನ ಅಭ್ಯರ್ಥಿಗಳ ಮಾತಿಗೆ ಮನ್ನಣೆ ದೊರೆಯುವಂತೆ ಆಡಳಿತ ನಡೆಸುತ್ತಿದ್ದಾರೆ ಎಂಬುದು ಕಾಂಗ್ರೆಸ್‌ ಶಾಸಕರ ದೂರು. ಬಿಡಿಎ ಅಧ್ಯಕ್ಷ ಎಸ್‌.ಟಿ. ಸೋಮಶೇಖರ್‌ ಅವರು ಇದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಇವರಲ್ಲದೆ, ಇನ್ನೂ ಹಲವು ನಿಗಮ ಮಂಡಳಿಗಳ ಅಧ್ಯಕ್ಷರಿಗೂ ಇದೇ ಅಸಮಾಧಾನವಿದೆ.

'ಕುಂದಗೋಳ, ಚಿಂಚೋಳಿಯಲ್ಲಿ ಕಾಂಗ್ರೆಸ್‌ಗೆ ಗೆಲುವು'

ಇದರ ಜತೆಗೆ ಕುಮಾರಸ್ವಾಮಿ ಅವರೊಂದಿಗೆ ಸಹಕರಿಸುತ್ತಿರುವ ಕೆಲ ಕಾಂಗ್ರೆಸ್‌ ಸಚಿವರ ಬಗ್ಗೆಯೂ ಶಾಸಕರಿಗೆ ಅಸಮಾಧಾನವಿದೆ. ಅದರಲ್ಲೂ ಬೆಂಗಳೂರಿನ ಶಾಸಕರು ಈ ವಿಚಾರದಲ್ಲಿ ಕೆಂಡಾಮಂಡಲರಾಗಿದ್ದಾರೆ. ಈ ಶಾಸಕರ ಪ್ರಕಾರ ಬಿಬಿಎಂಪಿ ಬಜೆಟ್‌ ಅನ್ನು ಮೊಟಕುಗೊಳಿಸಿದ್ದರಿಂದ ತಮಗೆ ದೊರೆಯುತ್ತಿದ್ದ ಅನುದಾನ ಕಡಿತವಾಗುತ್ತದೆ ಎಂದು ಗೊತ್ತಿದ್ದರೂ ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ಸಚಿವರು ನಡೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನವೇ ಈ ಎಲ್ಲದರ ಬಗ್ಗೆ ಧ್ವನಿಯೆತ್ತಲು ಈ ಶಾಸಕರು ಸಜ್ಜಾಗಿದ್ದರೂ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ತೆಪ್ಪಗಿರುವಂತೆ ಹೈಕಮಾಂಡ್‌ ಖಡಕ್‌ ಸೂಚನೆ ನೀಡಿದ್ದರಿಂದ ಯಾವುದೇ ವಿಪ್ಲವ ಘಟಿಸಿರಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆಯೇ ಸೋಮಶೇಖರ್‌ ನೇತೃತ್ವದಲ್ಲಿ ಕೆಲ ಶಾಸಕರು ಸಭೆ ಸೇರಲು ಮುಂದಾಗಿದ್ದರೂ ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಉಪ ಚುನಾವಣೆ ಸಮೀಪದಲ್ಲಿರುವಾಗ ಗೊಂದಲ ಹುಟ್ಟುಹಾಕಬಾರದು ಎಂದು ತಾಕೀತು ಮಾಡಿದ್ದರು.

ಹೀಗಾಗಿ ಕಾಂಗ್ರೆಸ್‌ ಶಾಸಕರು ಉಪ ಚುನಾವಣೆಯ ಮತದಾನದ ದಿನ ಮುಗಿಯಲು ಕಾಯುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು. ಹಾಗಂತ, ಈಗ ಎಲ್ಲವೂ ತಣ್ಣಗಾಗಿಲ್ಲ. ಕನ್ನಡಪ್ರಭಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸೋಮಶೇಖರ್‌, ಬೈರತಿ ಬಸವರಾಜು, ಅಖಂಡ ಶ್ರೀನಿವಾಸ್‌, ಮುನಿರತ್ನ ಸೇರಿದಂತೆ ಹಲವು ಶಾಸಕರು ಈಗಾಗಲೇ ಒಂದು ಸುತ್ತಿನ ರಹಸ್ಯ ಸಭೆಯನ್ನು ನಡೆಸಿದ್ದು, ತಮ್ಮ ಅಧಿಕಾರ ಮೊಟಕುಗೊಳಿಸಲಾಗುತ್ತಿರುವ ಮತ್ತು ಕ್ಷೇತ್ರದಲ್ಲಿ ತಮ್ಮ ಕೆಲಸ ಕಾರ್ಯ ನಡೆಯದಿರುವ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಉಪ ಚುನಾವಣೆ ಮತದಾನದ ದಿನ ಮುಗಿಯುತ್ತಿದ್ದಂತೆಯೇ ಈ ಶಾಸಕರು ಕಾಂಗ್ರೆಸ್‌ನ ಎಲ್ಲಾ ನಿಗಮ ಮಂಡಳಿಗಳ ಶಾಸಕರ ಸಭೆಯನ್ನು ಬಹಿರಂಗವಾಗಿ ಆಯೋಜಿಸುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಕಾಂಗ್ರೆಸ್‌ನ ಸಚಿವರ ವಿರುದ್ಧ ಧ್ವನಿಯೆತ್ತಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಕೆಲ ಸಚಿವರು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಈ ಶಾಸಕರು ಈಗಾಗಲೇ ಹಲವು ಬಾರಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಸಮನ್ವಯ ಸಮಿತಿ ಸಭೆಗಳಲ್ಲಿ ಕಾಂಗ್ರೆಸ್‌ ಶಾಸಕರ ಅಸಮಾಧಾನದ ವಿಚಾರವನ್ನು ಪ್ರಸ್ತಾಪಿಸಿ ಇಂತಹ ನಡವಳಿಕೆ ಮೈತ್ರಿ ಸರ್ಕಾರದಲ್ಲಿ ಸರಿಯಲ್ಲ ಎಂದು ಹಲವು ಬಾರಿ ಹೇಳಿದ್ದರೂ ಜೆಡಿಎಸ್‌ ನಾಯಕತ್ವ ತನ್ನ ತಂತ್ರಗಾರಿಕೆಯನ್ನು ಮುಂದುವರೆಸಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೂ ಬೇಸರವಿದೆ ಎನ್ನಲಾಗಿದೆ. ಈ ವಿಚಾರವನ್ನು ಅವರು ಹೈಕಮಾಂಡ್‌ ಗಮನಕ್ಕೂ ತಂದಿದ್ದಾರೆ ಎನ್ನುತ್ತವೆ ಮೂಲಗಳು.

ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಯಲ್ಲಿ ಪಕ್ಷದ ಹಿತ ಕಾಯಬೇಕು ಎಂಬ ದೃಷ್ಟಿಯಿಂದ ಶಾಸಕರಿಗೆ ಸದ್ಯ ಗೊಂದಲ ಉಂಟುಮಾಡದಂತೆ ತಾಕೀತು ಮಾಡಿದ್ದರೂ, ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸುವುದನ್ನು ತಡೆಯುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ ಶಾಸಕರಿಂದ ದೊಡ್ಡ ಬಂಡಾಯವನ್ನು ನಿರೀಕ್ಷಿಸಬಹುದು ಎಂದೇ ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.

Follow Us:
Download App:
  • android
  • ios