Asianet Suvarna News Asianet Suvarna News

ರಾಜಕೀಯ ಕ್ರಾಂತಿ: ಏಕಾಏಕಿ ಪ್ರಧಾನಿ ವಜಾಗೊಳಿಸಿ ರಾಜಪಕ್ಸೆ ಆಯ್ಕೆ

ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಪ್ರಧಾನಿಯನ್ನು ಏಕಾಏಕಿ ಹುದ್ದೆಯಿಂದ ಕೆಳಕ್ಕೆ ಇಳಿಸಿ ನೂತನ ಪ್ರಧಾನಿಯನ್ನು ಆಯ್ಕೆ ಮಾಡಿರುವ ಘಟನೆ ಶ್ರೀಲಂಕದಲ್ಲಿ ನಡೆದಿದೆ.

Mahinda Rajapaksa becomes new Prime Minister of Sri Lanka
Author
Bengaluru, First Published Oct 27, 2018, 7:15 AM IST

ಕೊಲಂಬೊ: ಶ್ರೀಲಂಕಾದಲ್ಲಿ ಶುಕ್ರವಾರ ಸಂಜೆ ನಡೆದ ದಿಢೀರ್‌ ವಿದ್ಯಮಾನವೊಂದರಲ್ಲಿ ಹಾಲಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪದಚ್ಯುತಗೊಳಿಸಿದ್ದಾರೆ. ಇದೇ ವೇಳೆ ತಮ್ಮ ಮಾಜಿ ಸ್ನೇಹಿತ ಹಾಗೂ ಹಿಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಹೊಸ ಪ್ರಧಾನಮಂತ್ರಿಯನ್ನಾಗಿ ನೇಮಿಸಿದ್ದು, ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ವಿಚಿತ್ರವೆಂದರೆ 2015ರಲ್ಲಿ ತಮ್ಮದೇ ಆದ ಶ್ರೀಲಂಕಾ ಫ್ರೀಡಂ ಪಕ್ಷದ (ಎಸ್‌ಎಫ್‌ಪಿ) ರಾಜಪಕ್ಸೆ ವಿರುದ್ಧ ಅವರ ಸಂಪುಟದಲ್ಲೇ ಮಂತ್ರಿಯಾಗಿದ್ದ ಸಿರಿಸೇನ ಬಂಡೆದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆಗ ಯುನೈಟೆಡ್‌ ನ್ಯಾಷನಲ್‌ ಪಾರ್ಟಿಯ (ಯುಎನ್‌ಪಿ) ವಿಕ್ರಮಸಿಂಘೆ ಅವರು ಸಿರಿಸೇನರನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಿ ತಾವು ಪ್ರಧಾನಿಯಾಗಿದ್ದರು. ಇತ್ತೀಚೆಗೆ ಭಾರತಕ್ಕೆ ಸಂಬಂಧಿಸಿದ ವಿದೇಶಾಂಗ ಹಾಗೂ ಆರ್ಥಿಕ ನೀತಿಯ ಕುರಿತಂತೆ ಸಿರಿಸೇನ ಹಾಗೂ ವಿಕ್ರಮಸಿಂಘೆ ಅವರ ನಡುವಿನ ಸಂಬಂಧ ಹಳಸಿತ್ತು. ಇದರ ಪರಿಣಾಮವೇ ಈಗಿನ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.

ಈಗ ಒಂದೇ ಪಕ್ಷದಲ್ಲಿದ್ದರೂ ವೈರಿಗಳಾಗಿದ್ದ ರಾಜಪಕ್ಸೆ ಹಾಗೂ ಸಿರಿಸೇನ ಅವರು ಪುನಃ ಒಟ್ಟಾಗಿದ್ದು, ಅವರಿಗೆ 95 ಸಂಸದರ ಬೆಂಬಲವಿದೆ. ಆದರೆ ವಿಕ್ರಮಸಿಂಘೆ ಅವರ ಯುಎನ್‌ಪಿಗೆ 105 ಸದಸ್ಯರ ಬೆಂಬಲವಿದೆ. ಹೀಗಾಗಿ ಬಹುಮತ ಸಾಬೀತುಪಡಿಸಲು ರಾಜಪಕ್ಸೆ ಯಶಸ್ವಿಯಾಗುತ್ತಾರಾ ಎಂದು ಕಾದುನೋಡಬೇಕಿದೆ. ಈ ನಡುವೆ, ಸಿರಿಸೇನ ನಡೆ ಸಂವಿಧಾನಬಾಹಿರವಾಗಿದ್ದು, ಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪದಚ್ಯುತಿಗೆ ಏನು ಕಾರಣ?

ಸಿರಿಸೇನ ಅವರು ಇತ್ತೀಚೆಗೆ ತಮ್ಮನ್ನು ಹತ್ಯೆ ಮಾಡಲು ಭಾರತದ ಗುಪ್ತಚರ ಸಂಸ್ಥೆ ‘ರಾ’ ಯತ್ನಿಸಿದೆ ಎಂದು ಆರೋಪಿಸಿದ್ದರು ಎಂದು ವರದಿಯಾಗಿತ್ತು. ಆದರೆ ಬಳಿಕ ಅವರು ಇದನ್ನು ನಿರಾಕರಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಭಾರತಕ್ಕೆ ಬಂದರು ಒಂದನ್ನು ಲೀಸ್‌ ನೀಡುವ ಸಂಬಂಧ ರನಿಲ್‌ ವಿಕ್ರಮಸಿಂಘೆ ಹಾಗೂ ಸಿರಿಸೇನ ನಡುವೆ ಭಿನ್ನಮತ ಏರ್ಪಟ್ಟಿತ್ತು. ಇದೇ ರನಿಲ್‌ ಪದಚ್ಯುತಿಗೆ ಕಾರಣ ಎನ್ನಲಾಗಿದೆ.

Follow Us:
Download App:
  • android
  • ios