Asianet Suvarna News Asianet Suvarna News

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ

2019ರ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಗೆಲುವು ಶತಸಿದ್ಧ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. 

Mahagataband Will Win In Next Lok Sabha Election Says HD Deve Gowda
Author
Bengaluru, First Published Nov 5, 2018, 11:39 AM IST

ಹಾಸನ :  ‘‘2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಯಲ್ಲಿ ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿ ರಚನೆಯಾಗುವ ಮಹಾಮೈತ್ರಿ ಕೂಟ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲಿಕ್ಕೆ ಆಗದು. ಬಿಜೆಪಿಯೇತರ ಹೋರಾಟಕ್ಕಾಗಿ ಅಗತ್ಯವಾಗಿದ್ದ ಮಹಾಮೈತ್ರಿ ಕೂಟ ರಚನೆಗೆ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನವೇ ಮುನ್ನುಡಿ ಬರೆದಾಗಿದೆ. ದೇಶದಲ್ಲಿ ಮುಂದೆನಿದ್ದರೂ ಬಿಜೆಪಿ ಮತ್ತು ಮಹಾಮೈತ್ರಿ ಕೂಟದ ನಡುವೆ ಚುನಾವಣಾ ರಾಜಕೀಯ ಹೋರಾಟ’

-ಹೀಗೆಂದು ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ದೇಶದಲ್ಲಿ ಮುಂದಾಗುವ ಚುನಾವಣೆ ರಾಜಕೀಯದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ ದೊಂದಿಗೆ ಮಾತನಾಡಿದ ಗೌಡರು, ಮಹಾಮೈತ್ರಿ ಕೂಟ ಒಗ್ಗಟ್ಟಿನಿಂದ ಹೋರಾಟ ಮಾಡುವ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಅಣಿಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಶರದ್‌ ಯಾದವ್‌ ಕೂಡ ಮಹಾಮೈತ್ರಿ ಕೂಟ ರಚನೆ ಮಾಡುವ ಉತ್ಸುಕತೆಯಲ್ಲಿ ಇದ್ದಾರೆ. ರಾಹುಲ್‌ ಗಾಂಧಿ ಸಹ ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಬಿಜೆಪಿಯೇತರ ಹೋರಾಟಕ್ಕಾಗಿ ಮಹಾಮೈತ್ರಿ ಕೂಟ ರಚನೆ ಆಗುವ ಬಗ್ಗೆ ಯಾವುದೇ ಅನುಮಾನವೂ ಇಲ್ಲ. ಚರ್ಚೆಯ ಆಗತ್ಯವೂ ಇಲ್ಲ ಎಂದರು.

ಎರಡು ಹಂತದಲ್ಲಿ ಮೈತ್ರಿ:  ಚುನಾವಣೆ ಪೂರ್ವ ಹಾಗೂ ಚುನಾವಣೋತ್ತರ ಎರಡೂ ಹಂತಗಳ ಮೈತ್ರಿಗೆ ಮಹಾಕೂಟ ಸಿದ್ಧವಾಗಿದೆ. ಒಂದು ಚುನಾವಣೆ ಪೂರ್ವದಲ್ಲೇ ಮೈತ್ರಿ ಕೂಟದಡಿ ತೆಲಗುದೇಶಂ, ಆಮ್‌ ಆದ್ಮಿ, ಆರ್‌ಜೆಡಿ, ಫಾರೂಕ್‌ ಆಬ್ದುಲ್ಲಾ, ಶರದ್‌ ಯಾದವ್‌, ಅಜಿತ್‌ ಸಿಂಗ್‌ ಮತ್ತು ಅಖಿಲೇಶ್‌ ಯಾದವ್‌ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್‌ ನೊಂದಿಗೆ ಸೀಟು ಹಂಚಿಕೆ ಮಾಡಿಕೊಂಡರೆ, ಚುನಾವಣೆ ನಂತರದಲ್ಲಿ ಅನೇಕ ಕಡೆ ಮೈತ್ರಿ ಅಥವಾ ಹೊಂದಾಣಿಕೆ ಬಿಜೆಪಿಯೇತರ ಪಕ್ಷಗಳೊಂದಿಗೆ ಆಗುತ್ತದೆ ಎಂದು ತಿಳಿಸಿದರು.

ಎನ್‌ಡಿಎ ವೈಫಲ್ಯಗಳೇ ನಮಗೆ ಅಸ್ತ್ರ:  ಎನ್‌ಡಿಎ ಬಿಜೆಪಿ, ಶಿವಸೇನೆ, ಅಕಾಲಿದಳ ಮತ್ತು ನಿತೀಶ್‌ ಕುಮಾರ್‌ ಪಕ್ಷದೊಡನೆ ಮೈತ್ರಿ ಮಾಡಿಕೊಂಡು ಬರುವ ಲೋಕಸಭೆ ಚುನಾವಣೆ ಎದುರಿಸುತ್ತದೆ. ಆದರೆ, ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಗೆಲವು ಪಡೆಯಲು ಸಾಧ್ಯವೇ ಇಲ್ಲ. ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಬಲಯುತವಾಗಿವೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ ಮಾಡಿದ್ದು ದೇಶದಲ್ಲಿ ಬಿಜೆಪಿ ವಿರುದ್ದದ ಅಲೆ ಏಳಲು ಕಾರಣವಾಗಿದೆ. ಅಲ್ಲದೇ ಕಾಶ್ಮೀರ, ಹರಿಯಾಣ ಮತ್ತು ಗುಜರಾತ್‌ ನಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿಗಳ ಸಮಸ್ಯೆ ಸೇರಿದಂತೆ ದೇಶದ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಗೆಹರಿಸಿಲ್ಲ ಎಂದರು. ದೇಶದ ಸಂವಿಧಾನದತ್ತ ಸಂಸ್ಥೆಗಳಾದ ಸಿಬಿಐ, ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ ಬಿಐ) ನಂತಹ ಸಂಸ್ಥೆಗಳನ್ನು ರಾಜಕೀಯ ಧರ್ಮಕ್ಕೆ ವಿರುದ್ಧ ಬಳಸಿಕೊಳ್ಳುವ ಮೂಲಕ ನಾಶ ಮಾಡಲಾಗಿದೆ. ಇದು ದೇಶದ ಅಭಿವೃದ್ಧಿಯಾ ಎಂದು ಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಮಾನ್ಯೀಕರಣದಿಂದಲೇ ಸಮಸ್ಯೆ:  ದಿವಂಗತ ಇಂದಿರಾಗಾಂಧಿ ಅವರು ಬ್ಯಾಂಕ್‌ ಗಳನ್ನು ರಾಷ್ಟಿ$್ತೕಕರಣ ಮಾಡಿ ಬಡವರು ಬ್ಯಾಂಕ್‌ ಗಳಿಗೆ ಬರುವಂತೆ ಮಾಡಿದರು. ಆದರೆ ಪ್ರಧಾನಿ ಮೋದಿ ಅವರು ನೋಟು ಅಮಾನ್ಯೀಕರಣ ಮಾಡಿ ಬಡವರು ಬ್ಯಾಂಕ್‌ ಕಂಡರೆ ಭಯ ಬಿದ್ದು ಓಡುವಂತೆ ಮಾಡಿದರು. ಬ್ಯಾಂಕ್‌ ಗಳಲ್ಲಿ ಹಣಕಾಸು ವಹಿವಾಟಿಗೆ ಇಲ್ಲಸಲ್ಲದ ನಿಯಮಗಳನ್ನು ತರಲಾಯಿತು. ಇದು ಜನರ ಆನೇಕ ರೀತಿಯ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಯಿತು ಎಂದು ಟೀಕಾ ಪ್ರಹಾರ ನಡೆಸಿದರು.

ಈ ಕಾರಣಗಳಿಂದ ದೇಶದ ಜನತೆ ಮಹಾಮೈತ್ರಿ ಕೂಟಕ್ಕೆ ಒಲವು ತೋರಿಸುವುದು ಶತಸಿದ್ಧ . ಆದ್ದರಿಂದ ಮೈತ್ರಿ ಕೂಟ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಖಚಿತ. ಇದನ್ನು ಯಾರು ತಪ್ಪಿಸಲಿಕ್ಕೆ ಸಾಧ್ಯವಿಲ್ಲ ಎಂಬ ಅದಮ್ಯ ವಿಶ್ವಾಸವನ್ನು ಗೌಡರು ವ್ಯಕ್ತಪಡಿಸಿದರು.

ಪ್ರಧಾನಿ ಅಭ್ಯರ್ಥಿ ಈಗ ಅಪ್ರಸ್ತುತ:  ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಯಾರು ಎಂಬುದಕ್ಕಿಂತ, ಅಧಿಕಾರದ ಪ್ರಶ್ನೆಗಿಂತ ದೇಶ ರಕ್ಷಣೆ ಮುಖ್ಯ ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ಪ್ರಧಾನಿ ಯಾರಾಗುತ್ತಾರೆ ಎಂಬುದು ಅಪ್ರಸ್ತುತ ಎಂದು ಹೇಳಿದರು.

ಐಕ್ಯತೆ ಬಾಯಿಯಲ್ಲಷ್ಟೇ:  ಆರ್‌ಎಸ್‌ಎಸ್‌ ಮುಖಂಡರು ದೇಶದ ಏಕತೆ, ಧರ್ಮ, ಸಂಸ್ಕೃತಿ, ವಿವಿಧತೆಯಲ್ಲಿ ಐಕ್ಯತೆ ಸಾಧನೆ ಬಗ್ಗೆ ಬಾಯಿಯಲ್ಲಿ ಮಾತನಾಡುತ್ತಾರೆ ಅಷ್ಟೇ. ಅದು ವಾಸ್ತವದಲ್ಲಿ ಕಾರ್ಯಗತಗೊಂಡಿದ್ದರೇ ಕಾಶ್ಮೀರ ಮತ್ತಿತರ ಕಡೆ ಅಶಾಂತಿ ಉಲ್ಬಣಗೊಳ್ಳುತ್ತಿರಲಿಲ್ಲ. ಭಾರತ ಆನೇಕ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಒಳಗೊಂಡಿವೆ. ಅವೆಲ್ಲಾ ಒಂದಾಗಿ ನಡೆಯುವಂತೆ ಮಾಡುವುದು ಇಂಡಿಯಾ ದೇಶದ ಇಂದಿನ ತುರ್ತು ಅಗತ್ಯವಾಗಿದೆ. ದೇಶದ ಸಾಮರಸ್ಯ ನೆಲೆಸುವಂತೆ ಮಾಡುವಲ್ಲಿ ವಿಫಲತೆಯನ್ನು ಕಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಗೌಡರು.


ವರದಿ : ದಯಾಶಂಕರ ಮೈಲಿ

Follow Us:
Download App:
  • android
  • ios