Asianet Suvarna News Asianet Suvarna News

ಬೆಂಗಳೂರು ಯುವಜನರಲ್ಲಿ ಆತ್ಮವಿಶ್ವಾಸ ಕೊರತೆ ಜಾಸ್ತಿ

ಪೋಷಕರ ಪ್ರತಿಷ್ಠೆ, ಕನಸುಗಳು, ಆಸೆಗಳೇ ಮಕ್ಕಳ ಆತ್ಮವಿಶ್ವಾಸ ಕುಂದಿಸುತ್ತಿದೆ ಮತ್ತು ಇದು ಶಾಲಾ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಿಸುತ್ತಿದೆ. ಪೋಷಕರಲ್ಲಿ ತಮ್ಮ ದುಮ್ಮಾನ ಹೇಳಿಕೊಳ್ಳಲಾಗದ ಮಕ್ಕಳು ಇದೀಗ ಯುವ ಸಹಾಯವಾಣಿಯ ಮೊರೆ ಹೋಗ ತೊಡಗಿದ್ದಾರೆ.

Low Confidence level in Bengaluru Youth Says Study

ಬೆಂಗಳೂರು: ಪೋಷಕರ ಪ್ರತಿಷ್ಠೆ, ಕನಸುಗಳು, ಆಸೆಗಳೇ ಮಕ್ಕಳ ಆತ್ಮವಿಶ್ವಾಸ ಕುಂದಿಸುತ್ತಿದೆ ಮತ್ತು ಇದು ಶಾಲಾ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಿಸುತ್ತಿದೆ. ಪೋಷಕರಲ್ಲಿ ತಮ್ಮ ದುಮ್ಮಾನ ಹೇಳಿಕೊಳ್ಳಲಾಗದ ಮಕ್ಕಳು ಇದೀಗ ಯುವ ಸಹಾಯವಾಣಿಯ ಮೊರೆ ಹೋಗ ತೊಡಗಿದ್ದಾರೆ. ದಿನೇ ದಿನೇ ಯುವ ಸಹಾಯವಾಣಿಗೆ ಬರುತ್ತಿರುವ ಶಾಲಾ ಮಕ್ಕಳ ಕರೆ ಸಂಖ್ಯೆ ಹೆಚ್ಚುತ್ತ ಸಾಗಿದೆ. ಹಾಗಂತ ಹೇಳುತ್ತದೆ.

ಸ-ಮುದ್ರ ಪ್ರತಿಷ್ಠಾನ ನಡೆಸಿದ ಸಮೀಕ್ಷೆ. ಕೌಟುಂಬಿಕ ವಾತಾವರಣ, ಸಂಬಂಧಗಳಲ್ಲಿ ಬಿರುಕು, ಮಾನಸಿಕ ಒತ್ತಡ, ಖಿನ್ನತೆ, ಹತಾಶೆ ಮನೋಭಾವ, ಪರೀಕ್ಷಾ ಭಯ, ಭಗ್ನ ಪ್ರೇಮ, ಸಣ್ಣಪುಟ್ಟ ನಿರಾಸೆ, ಜೀವನ ವೈಫಲಗಳು, ಶೈಕ್ಷಣಿಕ ಹಾಗೂ ವೃತ್ತಿ ಗೊಂದಲಗಳು ಯುವಜನತೆಯಲ್ಲಿ ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ.

ರಾಜ್ಯದಲ್ಲೇ ಬೆಂಗಳೂರಿನ ಯುವಜನರಲ್ಲಿ ಅತಿ ಹೆಚ್ಚಿನ ಆತ್ಮವಿಶ್ವಾಸದ ಕೊರತೆ ಕಂಡು ಬಂದಿದೆ ಎಂದು ಸ-ಮುದ್ರ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ. ಸ-ಮುದ್ರ ಪ್ರತಿಷ್ಠಾನ ಕೈಗೊಂಡ ಸಮೀಕ್ಷೆ ಹಾಗೂ ಸ-ಮುದ್ರ ಆರಂಭಿಸಿರುವ ಯುವ ಸಹಾಯವಾಣಿಯಲ್ಲಿ ಯುವಜನತೆ ತಮ್ಮ ನೋವು-ನಲಿವುಗಳನ್ನು ತೋಡಿಕೊಂಡಿದ್ದಾರೆ. ಪರೀಕ್ಷೆ ಸಂದರ್ಭ, ಕೌಟುಂಬಿಕ ಸಂಬಂಧಗಳು, ಇತರೆ ಸಾಮಾಜಿಕ ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಮಕ್ಕಳಲ್ಲಿನ ಮನೋಭಾವವನ್ನು ಅಧ್ಯಯನ ನಡೆಸಲಾಗಿದೆ.

ಸಮೀಕ್ಷೆ ಪ್ರಕಾರ ವರ್ಷವೊಂದಕ್ಕೆ 3000 ಯುವಜನರಲ್ಲಿ ಶೇ.40ರಷ್ಟು ಆತ್ಮಹತ್ಯೆ ಪ್ರಕರಣಗಳು ಪರೀಕ್ಷಾ ಸಂದರ್ಭದಲ್ಲಿ ನಡೆದಿರುವುರುವುದು ದೃಢಪಟ್ಟಿದೆ. ಆಧುನಿಕ ಯುಗ ಯುವಜನತೆಯನ್ನು ತಂತ್ರಜ್ಞಾನದತ್ತ ಸೆಳೆಯುತ್ತಲೇ ಮಾನಸಿಕವಾಗಿ ಕುಗ್ಗಿಸುತ್ತಿದೆ. ಪಟ್ಟಣ, ನಗರದ ಯುವಜನರು ಕಂಪ್ಯೂಟರ್, ವಾಟ್ಸ್‌ಅಪ್, ವಿವಿಧ ಆಟಗಳ ಚಟ(ಗೇಮ್ಸ್)ಕ್ಕೆ ದಾಸರಾಗುತ್ತಿದ್ದಾರೆ. ಜತೆಗೆ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು, ಪ್ರೀತಿ-ಪ್ರೇಮದಲ್ಲಿನ ಸೋಲು-ನೋವು ಮಾನಸಿಕ ದೌರ್ಬಲ್ಯಕ್ಕೆ ಕಾರಣವಾಗುತ್ತಿದೆ. ಆತ್ಮಹತ್ಯೆಗೂ ಪ್ರೇರಣೆಯಾಗುತ್ತಿದೆ.

ಮಕ್ಕಳ ಮೇಲೆ ಒತ್ತಡ: ಸಾಮಾಜಿಕ ಪಲ್ಲಟಗಳು ಕುಟುಂಬಗಳನ್ನು ಬರಿದಾಗಿಸುತ್ತಿವೆ. ಮಾನಸಿಕ ಖಿನ್ನತೆ ಯುವಜನರನ್ನು ಕುಗ್ಗಿಸುತ್ತಿವೆ. ನಮ್ಮ ಮಕ್ಕಳು ನಮ್ಮಂತೆ ಬೆಳೆಯಬಾರದು. ಅವರಿಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗಬೇಕು. ನಾವು ಕಂಡ ಕನಸುಗಳು, ಭರವಸೆಯನ್ನು ಈಡೇರಿಸಬೇಕು. ನಾವು ತೋರಿದ ಹಾದಿಯಲ್ಲೇ ಸಾಗಬೇಕು. ನಮ್ಮಚ್ಛಿಯಂತೆ ಓದಬೇಕು ಎಂಬ ಪೋಷಕರ ಅಭಿಲಾಷೆಗಳು ಮಕ್ಕಳನ್ನು ಒತ್ತಡಕ್ಕೆ ಗುರಿಯಾಗಿಸುತ್ತಿವೆ. ಪೋಷಕರ ಆಸೆ, ಅಹಂಕಾರ, ಪ್ರತಿಷ್ಠೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.

14ರಿಂದ 30 ವರ್ಷದವರು ‘ಆತ್ಮಹತ್ಯೆ’ ಎಂಬ ಕಬಂಧಬಾಹುವಿನ ಸುಳಿಗೆ ಸಿಲುಕುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ ಪ್ರತಿಷ್ಠಾನದ ಅಧಿಕಾರಿಗಳು. ಕರೆಗಳ ಮಹಾಪೂರ: ಪರೀಕ್ಷೆ ಭಯ, ಏಕಾಗ್ರತೆ ತೊಂದರೆ, ಕಡಿಮೆ ಅಂಕ, ಒತ್ತಡ, ಸಂಬಂಧಗಳ ಸಂಘರ್ಷ, ಅಪನಂಬಿಕೆ, ಪ್ರೀತಿ-ಪ್ರೇಮ, ಸೀಟ್ ಸಿಗದಿರುವುದು, ಕೆಲಸದ ಸಂದರ್ಶನದಲ್ಲಿ ವೈಫಲ್ಯ, ತುಮುಲಗಳನ್ನು ಮಕ್ಕಳು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ ಮಕ್ಕಳು ಕಂಪ್ಯೂಟರ್, ಮೊಬೈಲ್, ಮೋಟಾರ್ ಬೈಕ್‌ಗೆ ಅಡಿಕ್ಟ್ ಆಗಿರುವುದು, ರಾತ್ರಿ ಪೂರ್ತಿ ಗೇಮ್ ಆಡುವುದು, ಬೆಳಗ್ಗೆ ಬೇಗ ಏಳದಿರುವುದು, ಶಿಕ್ಷಣಿಕ ಹಿನ್ನಡೆ, ಒಂಟಿಯಾಗಿರುವುದು ಹೀಗೆ ವಿವಿಧ ವಿಚಾರಗಳನ್ನು ಪೋಷಕರೂ ಹೇಳಿಕೊಂಡಿದ್ದಾರೆ.

2008ರಿಂದ 2016-17ವರೆಗೆ 17698ಕ್ಕೂ ಅಧಿಕ ಕರೆಗಳು ಬಂದಿವೆ. 2016ರ ಮಾರ್ಚ್ 31ರವರೆಗೆ 2940 ಕರೆಗಳು ಬಂದಿದ್ದು, 200ಕ್ಕೂ ಹೆಚ್ಚು ಮಕ್ಕಳಿಗೆ ಖುದ್ದಾಗಿ ಮಾರ್ಗದರ್ಶನ ನೀಡಲಾಗಿದೆ. ಪರೀಕ್ಷೆ ಸಮಯದಲ್ಲಿ ದಿನಕ್ಕೆ 200ರಿಂದ 300 ಕರೆಗಳು ಬರುತ್ತವೆ. 2016-17ರಲ್ಲಿ ಬಂದ 940 ಕರೆಗಳಲ್ಲಿ 10ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಆಸಕ್ತಿ ತಳೆದವರು.

ಅವರಿಗೆ ಸಮಾಲೋಚನೆ ನಡೆಸಲಾಗಿದೆ. ಪೋಷಕರ ಸಮ್ಮುಖದಲ್ಲೇ 13ರಿಂದ 30 ವಯಸ್ಸಿನವರನ್ನು ಕೌನ್ಸಿಲಿಂಗ್‌ಗೆ ಒಳಪಡಿಸಲಾಗಿದೆ. ಕೊಳಚೆ ಪ್ರದೇಶದವರು, ಗ್ರಾಮೀಣ ಭಾಗ, ಅರೆನಗರ ಪ್ರದೇಶ, ವಲಸಿಗರು, ಬಡ ಕುಟುಂಬದಿಂದ ಬಂದ ಯುವಕ-ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ, ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತದೆ. 2008ರಿಂದ 2016ರವರೆಗೆ 1474 ಮಕ್ಕಳ ಭವಿಷ್ಯ ರೂಪಿಸಲಾಗಿದೆ. ಸಮಾಲೋಚನೆ, ಕಂಪ್ಯೂಟರ್, ಇಂಗ್ಲಿಷ್, ಟ್ಯಾಲಿ, ಸಂದರ್ಶನ ಕೌಶಲ್ಯಗಳು ಹೀಗೆ ಬದುಕು ಕಟ್ಟಿಕೊಳ್ಳಲು ಕನ್ನಡದಲ್ಲೇ ತರಬೇತಿ ನೀಡಲಾಗುತ್ತದೆ. ಆಸಕ್ತರು ಯುವ ಸಹಾಯವಾಣಿ  9880396331 ಕರೆ ಮಾಡಬಹುದು.

ಮಾನಸಿಕ ದೌರ್ಬಲ್ಯಕ್ಕೆ ಬಲಿ: ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ನೋವುಗಳಿಗೆ ಹೆದರಿ ಸಾವಿನ ಕದ ತಟ್ಟುವಂತಹ ಘಟನೆಗಳು ಜರುಗುತ್ತಿವೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಬೆಂಗಳೂರು ಗ್ರಾಮಾಂತರದಲ್ಲಿ 2014-15ರ ವರ್ಷಾಂತ್ಯಕ್ಕೆ 627 (ಮಹಿಳೆಯರು, ಹೆಣ್ಣು ಮಕ್ಕಳು), 1248 (ಯುವಕರು, ವಯಸ್ಕರು) ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಮಹಿಳೆಯರು 105, ಗಂಡಸರು 284 ಸೇರಿದಂತೆ ಒಟ್ಟು 2664 ಆತ್ಮಹತ್ಯೆ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ 2014-15ರಲ್ಲಿ ಒಟ್ಟು 10786 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ. 2015ರಲ್ಲಿ ಸುಮಾರು 11 ಸಾವಿರ ಜನರು (ರೈತರು, ಮಹಿಳೆಯರು, ಮಕ್ಕಳು, ಯುವಜನತೆ) ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ.40ರಷ್ಟು 16ರಿಂದ 30 ವರ್ಷದೊಳಗಿನವರು ಮಾನಸಿಕ ಒತ್ತಡ, ಖಿನ್ನತೆಯಿಂದ ಆತ್ಮಹತ್ಯೆ ಹಾದಿ ತುಳಿದಿದ್ದಾರೆ. 2016-17ನೇ ಸಾಲಿನಲ್ಲಿ ದಿನಕ್ಕೆ 3-4 ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿವೆ. ಇದರಲ್ಲಿ ರೈತರು, ಮಹಿಳೆಯರು, ಯುವಜನತೆ ಸೇರಿದ್ದಾರೆ. ಇಡೀ ದೇಶದಲ್ಲಿ ಶೇ.20ರಷ್ಟು ಜನರು ಕಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ಪ್ರತಿಷ್ಠಾನದ ಸದಸ್ಯರು.

(ಸಾಂದರ್ಭಿಕ ಚಿತ್ರ)

 

Follow Us:
Download App:
  • android
  • ios