Asianet Suvarna News Asianet Suvarna News

ತುಮಕೂರಲ್ಲಿ ಘೋರ ದುರಂತ : ಲಾರಿ ಚಾಲಕನನ್ನು ಬಡಿದು ಕೊಂದ ಮಾಲಿಕ!

ತುಮಕೂರಿನಲ್ಲಿ ಲಾರಿ ಮಾಲಿಕನೋರ್ವ ಅಪಘಾತವಾಗಿದ್ದಕ್ಕೆ ಲಾರಿ ಚಾಲಕನನ್ನು ಬಡಿದು ಕೊಂಡ ಅಮಾನವೀಯ ಘಟನೆ ನಡೆದಿದೆ. ಈ ಸಂಬಂಧ ಲಾರಿ ಮಾಲಿಕ ಸೇರಿ ನಾಲ್ವರು ಆರೋಪಿಗಳನ್ನು ಶಿರಾ ಪೊಲೀಸರು ಬಂಧಿಸಿದ್ದಾರೆ.

Lorry Driver Beaten To Death From Lorry Owner
Author
Bengaluru, First Published Dec 15, 2018, 8:07 AM IST

ತುಮಕೂರು :  ಅಪಘಾತ ಮಾಡಿದ್ದನ್ನೇ ನೆಪವಾಗಿಟ್ಟು ಲಾರಿ ಮಾಲಿಕನೊಬ್ಬ ತನ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಡ್ರೈವರ್‌ಗಳನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ಪರಿಣಾಮ ಒಬ್ಬಾತ ಮೃತಪಟ್ಟಅತ್ಯಂತ ಅಮಾನವೀಯ ಘಟನೆಗೆ ತುಮಕೂರು ಜಿಲ್ಲೆ ಸಾಕ್ಷಿಯಾಗಿದೆ. ಶಿರಾ ಹೊರವಲಯದಲ್ಲಿ ಘಟನೆ ನಡೆದಿದ್ದು ಲಾರಿ ಮಾಲಿಕ ಸೇರಿ ನಾಲ್ವರು ಆರೋಪಿಗಳನ್ನು ಶಿರಾ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕಡತಾಳ್‌ ಗ್ರಾಮದ ನಿವಾಸಿ ಬಸಪ್ಪ(38) ಎಂಬವರೇ ಮೃತಪಟ್ಟದುರ್ದೈವಿ ಚಾಲಕ. ಅದೇ ಗ್ರಾಮದ ನಿವಾಸಿಯಾದ ಮತ್ತೊಬ್ಬ ಚಾಲಕ ಸೋಮಪ್ಪ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಾದ ಲಾರಿ ಮಾಲಿಕ ಬಾಳಪ್ಪ, ಆತನ ಸಹಚರರಾದ ಸಂತೋಷ, ಪರಶುರಾಮ, ಅಡವಪ್ಪನನ್ನು ಬಂಧಿಸಲಾಗಿದೆ.

ಘಟನೆ ವಿವರ: ಬೈಲಹೊಂಗಲ ತಾಲೂಕಿನ ಕಡತಾಳ್‌ ಗ್ರಾಮದ ನಿವಾಸಿಗಳಾದ 38 ವರ್ಷದ ಬಸಪ್ಪ ಹಾಗೂ ಸೋಮಪ್ಪ ಇಬ್ಬರು ಬೆಳಗಾವಿ ಮೂಲದ ಬಾಳಪ್ಪ ಎಂಬುವರ ಬಳಿ ಹಲವು ವರ್ಷಗಳಿಂದ ಡ್ರೈವರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಡಿ.10ರಂದು ಮಾಲಿಕ ಬಾಳಪ್ಪನ ಆದೇಶದಂತೆ ಚಾಲಕರಿಬ್ಬರು ಪುಣೆಯಲ್ಲಿ ಕಂಟೈನರ್‌ ಲಾರಿಗೆ ಬೈಕ್‌ನ ರಿಮ್‌ ತುಂಬಿಕೊಂಡು ಚೆನ್ನೈ ಕಡೆಗೆ ಹೊರಟಿದ್ದಾರೆ. 11ರಂದು ಆ ಲಾರಿ ಶಿರಾ ಹೊರವಲಯದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಚಾಲಕರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಅವರಿಬ್ಬರು ಮಾಲಿಕ ಬಾಳಪ್ಪನಿಗೆ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಂಜಾನೆ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದ ಮಾಲಿಕ ಇಬ್ಬರು ಡ್ರೈವರ್‌ಗಳಾದ ಬಸಪ್ಪ ಹಾಗೂ ಸೋಮಪ್ಪ ಅವರಿಗೆ ಕಟ್ಟಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಮೂರು ದಿನಗಳ ಕಾಲ ಅಲ್ಲೇ ಅಲ್ಲೇ ಠಿಕಾಣಿ ಹೂಡಿದ್ದ ಬಾಳಪ್ಪ ಮತ್ತವರ ಬೆಂಬಲಿಗರು ಇಬ್ಬರು ಚಾಲಕರನ್ನು ಕಂಟೈನರ್‌ ಲಾರಿಯಲ್ಲಿಯೇ ಕೂಡಿ ಹಾಕಿ ಅನ್ನ ನೀರು ಕೊಡದೆ ಚಿತ್ರಹಿಂಸೆ ನೀಡಿದ್ದಾರೆ. ಈ ಹಿಂಸೆ ತಡೆಯಲಾರದೆ ಬಸಪ್ಪ ತೀವ್ರ ಅಸ್ವಸ್ಥಗೊಂಡಿದ್ದು ಕೂಡಲೇ ಆತನನ್ನು ಶಿರಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಳಪ್ಪ ಸಾವಿಗೀಡಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಶಿರಾ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಧಾವಿಸಿ ಸೋಮಪ್ಪನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ. ಬಸಪ್ಪ ಸಂಬಂಧಿಕರು ಮೃತ ದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮತ್ತೊಬ್ಬ ಚಾಲಕ ಸೋಮಪ್ಪಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow Us:
Download App:
  • android
  • ios