Asianet Suvarna News Asianet Suvarna News

ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಅರೆ ಪಾರ್ಶ್ವವಾಯು ಪೀಡಿತ

ತಮ್ಮ ಮನೆಗೆ ರಸ್ತೆಯಿಲ್ಲದಿರುವುದಿಂದ ವಾಹನ ನೀಡಲು ಸಾಧ್ಯವಿಲ್ಲವೆಂದು ಪಂಚಾಯತ್ ಆಡಳಿತ ಅವರ ಕೋರಿಕೆಯನ್ನು ತಳ್ಳಿ ಹಾಕಿತ್ತು.

Kerala Man Semi Paralysed Has Dug For 3 Years Finally He Has A Road

ತಿರುವನಂತಪುರಂ(ಜ.11): ಕೇರಳದ ತಿರುವನಂತಪುರಂನಲ್ಲಿ ಅರೆ ಪಾರ್ಶ್ವವಾಯು ಪೀಡಿತರೊಬ್ಬರು ಸತತ ಮೂರು ವರ್ಷಗಳ ಪ್ರಯತ್ನದ ಮೂಲಕ ತಮ್ಮ ಮನೆಗೆ ರಸ್ತೆಯೊಂದನ್ನು ಏಕಾಂಗಿಯಾಗಿ ನಿರ್ಮಿಸಿ ಕೇರಳದ ಮಾಂಜಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ‘ಎನ್‌ಡಿಟಿವಿ’ಯು ವರದಿಮಾಡಿದೆ.

ತೆಂಗಿನ ಮರ ಹತ್ತುವ ಕಾರ್ಮಿಕ, 59 ವರ್ಷದ ಶಶಿ ಜಿ ಎಂಬವರು ಭಾಗಶಃ ಪಾರ್ಶ್ವವಾಯು ಪೀಡಿತರು. ತಿರುವನಂತಪುರಂನಲ್ಲಿ 18 ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಅವರು ಹಾಸಿಗೆ ಹಿಡಿದಿದ್ದರು. ಬಲಗೈ ಮತ್ತು ಎಡ ಕಾಲು ಪಾರ್ಶ್ವವಾಯು ಪೀಡಿತವಾಗಿ ಅವರ ಕೈ ಕಾಲುಗಳು ದುರ್ಬಲವಾಗಿದ್ದುದರಿಂದ, ನಿಧಾನಕ್ಕೆ ನಡೆಯುತ್ತಿದ್ದರು. ತಮ್ಮ ಜೀವನಾವಶ್ಯಕ ಸಂಪಾದನೆಗೆ ಸಣ್ಣ ಉದ್ಯಮವೊಂದನ್ನು ನಡೆಸಲು ತಮಗೆ ತ್ರಿಚಕ್ರ ವಾಹನವೊಂದನ್ನು ನೀಡುವಂತೆ ಸ್ಥಳೀಯ ಪಂಚಾಯತ್‌'ನಲ್ಲಿ ಅವರು ಕೋರಿಕೊಂಡಿದ್ದರು. ತಮ್ಮ ಮನೆಗೆ ರಸ್ತೆಯಿಲ್ಲದಿರುವುದಿಂದ ವಾಹನ ನೀಡಲು ಸಾಧ್ಯವಿಲ್ಲವೆಂದು ಪಂಚಾಯತ್ ಆಡಳಿತ ಅವರ ಕೋರಿಕೆಯನ್ನು ತಳ್ಳಿ ಹಾಕಿತ್ತು. ರಸ್ತೆ ಬೇಡಿಕೆಯಿರಿಸಿದಾಗ ಬಹುತೇಕರು ಅಪಹಾಸ್ಯದ ನಗೆ ಬೀರಿದ್ದರು.

‘‘ಪಾರ್ಶ್ವವಾಯು ಪೀಡಿತರಾಗಿರುವುದರಿಂದ ವಾಹನ ನೀಡುವ ನೀಡುವ ಸಾಧ್ಯತೆಗಳಿಲ್ಲ ಎಂದು ಪಂಚಾಯತ್ ಹೇಳಿತ್ತು. ರಸ್ತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರೂ, ಯಾವತ್ತೂ ಆ ಬಗ್ಗೆ ಗಮನ ಹರಿಸಲಿಲ್ಲ’’ ಎಂದು ಶಶಿ ಹೇಳುತ್ತಾರೆ. ಹೀಗಾಗಿ ಸ್ವಯಂ ತಾವೇ ರಸ್ತೆ ಅಗೆಯಲು ಶಶಿ ನಿರ್ಧರಿಸಿದರು ಮತ್ತು ತಮ್ಮ ಕಾರ್ಯವನ್ನು ನಿಲ್ಲಿಸಲಿಲ್ಲ. ಪ್ರತಿ ದಿನ ಆರು ಗಂಟೆಗಳ ಕಾಲ ಅವರು ರಸ್ತೆ ನಿರ್ಮಾಣದಲ್ಲಿ ನಿರತರಾದರು. ಈ ಹಿಂದೆ ದಿಣ್ಣೆಯೊಂದನ್ನು ಹತ್ತಿ ಹೋಗಬೇಕಾಗಿತ್ತು. ಆದರೆ ಶಶಿ ಅವರ ಪ್ರಯತ್ನದಿಂದ, ಈಗ ಸಣ್ಣ ವಾಹನಗಳು ಚಲಿಸಬಹುದಾದ ೨೦೦ ಮೀಟರ್ ಉದ್ದದ ಕಚ್ಚಾ ರಸ್ತೆಯೊಂದು ಪೂರ್ಣಗೊಂಡಿದೆ.

‘‘ನನ್ನಿಂದ ಸಾಧ್ಯವಿಲ್ಲವೆಂದು ಜನರು ಭಾವಿಸಿದ್ದರು. ಆದರೆ ಪ್ರಯತ್ನಿಸಿದರೆ ರಸ್ತೆ ನಿರ್ಮಿಸಬಹುದೆಂದು ನಾನು ಭಾವಿಸಿದ್ದೆ. ಪಂಚಾಯತ್ ನನಗೆ ವಾಹನ ನೀಡದಿದ್ದರೂ ತೊಂದರೆಯಿಲ್ಲ, ಕನಿಷ್ಠ ಭವಿಷ್ಯದಲ್ಲಿ ಜನರಿಗೆ ಓಡಾಡುವುದಕ್ಕೆ ರಸ್ತೆಯೊಂದು ನಿರ್ಮಾಣವಾಯಿತು’’ ಎಂದು ಶಶಿ ಹೇಳುತ್ತಾರೆ. ಶಶಿ ಅವರ ಪ್ರಯತ್ನಕ್ಕೆ ಇದೀಗ ಗ್ರಾಮಸ್ಥರು, ನೆರೆ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

Follow Us:
Download App:
  • android
  • ios