Asianet Suvarna News Asianet Suvarna News

ಕರ್ನಾಟಕಕ್ಕಾಗಿ ಒಂದಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್

ಕರ್ನಾಟಕಕ್ಕಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಒಂದಾಗಿದ್ದಾರೆ. ಮೇಕೆದಾಟು ವಿಚಾರವಾಗಿ ಚಳಿಗಾಲದ ಅಧಿವೇಶನದಲ್ಲಿ ಒಗ್ಗಟ್ಟು ಮೆರೆದಿದ್ದಾರೆ. 

Karnataka MPs unite against Tamil Nadu For Mekedatu Project
Author
Bengaluru, First Published Dec 21, 2018, 7:10 AM IST

ನವದೆಹಲಿ :  ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ನಿರ್ಧಾರ ವಿರೋಧಿಸಿ ಕಳೆದೊಂದು ವಾರದಿಂದ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತಮಿಳುನಾಡಿನ ಸಂಸದರಿಗೆ, ಕರ್ನಾಟಕದ ಸಂಸದರು ಗುರುವಾರ ಪಕ್ಷಭೇದ ಮರೆತು ಒಗ್ಗಟ್ಟಾಗಿ ತಿರುಗೇಟು ನೀಡುವ ಮೂಲಕ ಭರ್ಜರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ನಾವೆಲ್ಲಾ ಒಂದು ಎಂಬ ಸಂದೇಶವನ್ನು ದಿಲ್ಲಿ ಮಟ್ಟದಲ್ಲಿ ದೊಡ್ಡದಾಗಿ ಸಾರಿದ್ದಾರೆ. ಇದರಿಂದಾಗಿ ಬರೀ ರಫೇಲ್‌ ಯುದ್ಧವಿಮಾನ ಖರೀದಿ ವಿವಾದವೇ ಪ್ರಧಾನವಾಗುತ್ತಿದ್ದ ಲೋಕಸಭೆ ಕಲಾಪದಲ್ಲಿ ಈ ದಿನ ಮೇಕೆದಾಟು ವಿವಾದವು ‘ಪ್ರಧಾನ ವೇದಿಕೆ’ ಅಲಂಕರಿಸಿತು.

ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರು ಗುರುವಾರ ತೋರಿಸಿದ ಒಗ್ಗಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಡಿವಿಎಸ್‌ ಮನೆಯಲ್ಲಿ ಸಭೆ:  ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳ ಸಂಬಂಧ ಒಗ್ಗಟ್ಟು ಪ್ರದರ್ಶಿಸಲು ಕರ್ನಾಟಕದ ಸಂಸದರು ಪಕ್ಷಭೇದ ಮರೆತು ಗುರುವಾರ ಬೆಳಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ನಿವಾಸದಲ್ಲಿ ಸಭೆ ಸೇರಿದ್ದರು. ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಕರ್ನಾಟಕದ ಜಲ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಪಾಲ್ಗೊಂಡಿದ್ದರು. ಆಗ ತಮಿಳುನಾಡಿನ ಆಕ್ಷೇಪಕ್ಕೆ ಒಗ್ಗಟ್ಟಿನಿಂದ ತಿರುಗೇಟು ನೀಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿತ್ತು.

ಸಂಸತ್‌ನೊಳಗೆ ಹೋರಾಟ:  ಮೇಕೆದಾಟು ವಿಷಯ ಮುಂದಿಟ್ಟುಕೊಂಡು ಕಳೆದೊಂದು ವಾರದಿಂದ ಸಂಸತ್‌ ಕಲಾಪವನ್ನೇ ಬಲಿಪಡೆಯುವ ಮಟ್ಟಿಗೆ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ಸಂಸದರಿಗೆ, ಗುರುವಾರ ಕರ್ನಾಟಕದ ಸಂಸದರು ತಮ್ಮ ಪ್ರತಿಭಟನೆಯ ಬಿಸಿಯನ್ನೂ ಮುಟ್ಟಿಸಿದರು. ಬೆಳಗ್ಗೆ 11 ಗಂಟೆಗೆ ಸಂಸತ್‌ ಕಲಾಪ ಆರಂಭವಾದಾಗ ‘ಕಾವೇರಿ ನೀರು ನಮ್ಮದು. ಮೇಕೆದಾಟು ಬೇಕೇ ಬೇಕು’ ಎಂಬ ಭಿತ್ತಿಚಿತ್ರ ಹಿಡಿದು ಪ್ರತ್ಯಕ್ಷರಾದ ಕರ್ನಾಟಕದ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಂಸದರು ಮೇಕೆದಾಟು ಯೋಜನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡು ಸಂಸದರ ಭಿತ್ತಿಚಿತ್ರಗಳಿಗೆ ಪ್ರತಿಯಾಗಿ ತಮ್ಮ ಭಿತ್ತಿಚಿತ್ರಗಳನ್ನೂ ದೊಡ್ಡದಾಗಿ ಪ್ರದರ್ಶಿಸಿದರು. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಒಗ್ಗಟ್ಟಾಗಿ ಪೋಸ್ಟರ್‌ ಹಿಡಿದು ಬಾವಿಗೆ ಇಳಿದಿದ್ದನ್ನು ಗಮನಿಸಿದ ಅಣ್ಣಾಡಿಎಂಕೆ ಸಂಸದರು, ‘ಇದು ನಿಜವಾದ ಮಹಾಗಠಬಂಧನ (ಮಹಾಮೈತ್ರಿಕೂಟ)’ ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದ ಪ್ರಸಂಗವೂ ನಡೆಯಿತು.

ಈ ವೇಳೆ ಗದ್ದಲದ ನಡುವೆಯೇ ಮಾತನಾಡಿದ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ, ‘ಮೇಕೆದಾಟು ಯೋಜನೆಯು ನೀರಾವರಿ ಯೋಜನೆಯಲ್ಲ. ಅಲ್ಲಿ ಸಂಗ್ರಹವಾದ ನೀರನ್ನು ಕೇವಲ ಕುಡಿವ ನೀರಿಗಾಗಿ ಬಳಸಿಕೊಳ್ಳಲಾಗುತ್ತದೆ. ಸಂಗ್ರಹವಾದ ಮಿಕ್ಕೆಲ್ಲ ನೀರು ತಮಿಳುನಾಡಿಗೇ ಹೋಗುತ್ತದೆ. ಆ ರಾಜ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ’ ಎಂದು ಸಮರ್ಥಿಸಿಕೊಂಡರು. ಆದರೆ ಜೋಶಿ ಮಾತಿಗೆ ತಮಿಳುನಾಡು ಸಂಸದರು ಆಕ್ಷೇಪಿಸಿ ಗಲಾಟೆ ಜೋರು ಮಾಡಿದಾಗ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಕಲಾಪ ಮುಂದೂಡಿದರು.

Follow Us:
Download App:
  • android
  • ios