Asianet Suvarna News Asianet Suvarna News

2.5 ಕೋಟಿ ಗೆಲ್ಲಲು ಕರ್ನಾಟಕ ಸರ್ಕಾರ ಆಫರ್

ಕರ್ನಾಟಕ ಸರ್ಕಾರ ಇದೀಗ ಭರ್ಜರಿ ಆಫರ್ ಒಂದನ್ನು ನೀಡಿದೆ. ಸರ್ಕಾರವು ಭರ್ಜರಿ 2.5 ಕೋಟಿ ಹಣ ಗೆಲ್ಲುವ ಅವಕಾಶವೊಂದನ್ನು ನೀಡಿದೆ. 

Karnataka Govt Decided To Give Subsidy To Tourist Place Shooting
Author
Bengaluru, First Published Dec 6, 2018, 8:14 AM IST

ಬೆಂಗಳೂರು :  ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಲನಚಿತ್ರಗಳನ್ನು ಚಿತ್ರೀಕರಣಗೊಳಿಸಲು ಅವಕಾಶ ನೀಡುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ರಾಜ್ಯದಲ್ಲಿ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಅನುಷ್ಠಾನಗೊಳಿಸಲು ಸಚಿವ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬುಧವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕನಿಷ್ಠ ಐದು ಕೋಟಿ ರು. ಬಂಡವಾಳ ಹೂಡಿಕೆ ಮಾಡುವ ಸಿನಿಮಾಗಳಿಗೆ ಒಂದರಿಂದ ಎರಡೂವರೆ ಕೋಟಿ ರು.ವರೆಗೆ ಸಹಾಯ ಧನವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ನೀಡಲಾಗುವುದು. ರಾಜ್ಯದ ಪ್ರೇಕ್ಷಣೀಯ ಸ್ಥಳಗಳನ್ನು ಚಲನಚಿತ್ರಗಳ ಮೂಲಕ ಬಿಂಬಿಸಿ ಪ್ರವಾಸಿಗರನ್ನು ಸೆಳೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಬೈರೇಗೌಡ ಅವರು, ಚಲನಚಿತ್ರಗಳಲ್ಲಿ ರಾಜ್ಯದ ಪ್ರವಾಸಿ ತಾಣ ಚಿತ್ರೀಕರಿಸಿ ಪ್ರದರ್ಶಿಸುವ ಮೂಲಕ ಪ್ರವಾಸಿಗರ ಭೇಟಿಯನ್ನು ಹೆಚ್ಚಿಸುವ ಉದ್ದೇಶದಿಂದ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಅನುಷ್ಠಾನಗೊಳಿಸಲು ಒಪ್ಪಿಗೆ ಸೂಚಿಸಲಾಗಿದೆ. ಸಿನಿಮಾದ ಒಟ್ಟಾರೆ ಬಂಡವಾಳ ಹೂಡಿಕೆ ಮತ್ತು ಪ್ರವಾಸಿ ತಾಣಗಳ ದೃಶ್ಯವನ್ನು ಎಷ್ಟರ ಮಟ್ಟಿಗೆ ವೈಭವೀಕರಿಸಲಾಗಿದೆ ಎಂಬುದನ್ನು ತುಲನೆ ಮಾಡಿ ಸಹಾಯ ಧನ ನೀಡಲಾಗುತ್ತದೆ ಎಂದು ಹೇಳಿದರು.

ಸಹಾಯ ಧನ ನೀಡಲು ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ. ಮಾರ್ಗಸೂಚಿಯ ಮಾನದಂಡಗಳ ಅನ್ವಯ ಸಹಾಯ ಧನ ಬಿಡುಗಡೆ ಮಾಡಲಾಗುವುದು. ಸಿನಿಮಾ ಸಹ ಒಂದು ಜಾಹೀರಾತು ಮಾಧ್ಯಮವಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಸರ್ಕಾರಕ್ಕೂ ಆದಾಯ ಬರಲಿದೆ. ಯೂರೋಪ್‌ ದೇಶಗಳ ಕೆಲವು ದೃಶ್ಯಗಳನ್ನು ಹಿಂದಿ ಸಿನಿಮಾಗಳಲ್ಲಿ ನೋಡಿದ ಬಳಿಕ ಹಲವು ಇತರೆ ಭಾಷೆಗಳ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು ಆ ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಮುಂದಾಗುತ್ತಿರುವುದನ್ನು ಕಂಡಿದ್ದೇವೆ. ಜೊತೆಗೆ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದರು.

ಸಚಿವ ಸಂಪುಟ ಸಭೆಯ ಇತರೆ ತೀರ್ಮಾನಗಳು

* ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ಬೀದರ್‌ನಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನು ಪ್ರಾರಂಭಿಸಲು 20 ಕೋಟಿ ರು. ಸಾಲ ಒದಗಿಸಲು ಒಪ್ಪಿಗೆ. ಆಡಳಿತ ಮಂಡಳಿ ಅವ್ಯವಹಾರದಿಂದ ಉಂಟಾಗಿರುವ 192 ಕೋಟಿ ರು. ನಷ್ಟಕ್ಕೆ ಇದನ್ನು ಬಳಕೆ ಮಾಡುವಂತಿಲ್ಲ ಎಂಬ ಷರತ್ತನ್ನೂ ವಿಧಿಸಲಾಗುವುದು.

* ಘಟಪ್ರಭಾ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಗೆ 573 ಕೋಟಿ ರು. ಅನುದಾನ ಮಂಜೂರು ಮಾಡಲು ತೀರ್ಮಾನ.

* ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಹಾಡ್ಯ ಗ್ರಾಮದ ಬಳಿಕ ಕಾವೇರಿ ನದಿಯಿಂದ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 15 ಕೋಟಿ ರು. ಮಂಜೂರು ಮಾಡಲು ಒಪ್ಪಿಗೆ.

* ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟಗಾರರ ಲಾಭವನ್ನು ಕ್ವಿಂಟಲ್‌ಗೆ 80 ರು.ನಿಂದ 100 ರು.ಗೆ ಹೆಚ್ಚಿಸಲು ಸಹಮತ.

* ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾರಂಭಕ್ಕೆ ಸಮ್ಮತಿ. 3.40 ಕೋಟಿ ರು. ಅಂದಾಜು ವೆಚ್ಚದಲ್ಲಿ ಕಾಲೇಜು ನಿರ್ಮಾಣ.

* ಕನಕಪುರದಲ್ಲಿ ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ. 300 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣಕ್ಕಾಗಿ ನಾಲ್ಕು ವರ್ಷಕ್ಕೆ 450 ಕೋಟಿ ರು. ವೆಚ್ಚವಾಗಲಿದ್ದು, ಪ್ರಸ್ತಕ ವರ್ಷದಲ್ಲಿ 90 ಕೋಟಿ ರು. ಬಿಡುಗಡೆ.

4ನೇ ಶನಿವಾರ ರಜೆ ಬಗ್ಗೆ ಚರ್ಚೆ

ರಾಜ್ಯ ಸರ್ಕಾರಿ ನೌಕರರ 6ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಹಲವು ಭತ್ಯೆಗಳ ಪರಿಷ್ಕರಣೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇದರಿಂದ 400 ಕೋಟಿ ರು. ಹೆಚ್ಚುವರಿಯಾಗಿ ಸರ್ಕಾರ ಭರಿಸಬೇಕಾಗುತ್ತದೆ. ಇನ್ನು, ಜಯಂತಿಗಳ ಆಚರಣೆ ಮಾಡುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ, ಜಯಂತಿಗೆ ರಜೆ ಕೊಡುವ ಬದಲು ಸರ್ಕಾರಿ ಕಚೇರಿಗಳನ್ನು ನಡೆಸಿ ಪ್ರತಿ ತಿಂಗಳು ನಾಲ್ಕನೇ ಶನಿವಾರ ರಜೆ ನೀಡುವ ಶಿಫಾರಸನ್ನು ವೇತನ ಆಯೋಗವು ಮಾಡಿದೆ. 

ಈ ಬಗ್ಗೆ ಚರ್ಚೆ ನಡೆದಿದ್ದು, ರಜೆಯ ನಿಗದಿಗೆ ಸಂಬಂಧಿಸಿದಂತೆ ಈಗಾಗಲೇ ರಚನೆಯಾಗಿರುವ ಸಚಿವ ಸಂಪುಟದ ಉಪಸಮಿತಿಯು ಜಯಂತಿಗಳ ರಜೆ ಮತ್ತು ನಾಲ್ಕನೇ ಶನಿವಾರ ರಜೆ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಿದೆ. ಬಳಿಕ ಆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Follow Us:
Download App:
  • android
  • ios