Asianet Suvarna News Asianet Suvarna News

ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು: ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಮುಂದಿನ ಹೆಜ್ಜೆ!

ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು| ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಮುಂದಿನ ಹೆಜ್ಜೆ ಇರಿಸಲು ನಿರ್ಧಾರ| ಅನರ್ಹ ಶಾಸಕರು ಹೇಳಿದವರಿಗೆ ಟಿಕೆಟ್‌, ಇಲ್ಲವೇ ಮೇಲ್ಮನೆ ಸದಸ್ಯತ್ವ

Karnataka By Elections Candidate selection Is The Biggest Challenge Before BJP
Author
Bangalore, First Published Sep 22, 2019, 8:17 AM IST

ಬೆಂಗಳೂರು[ಸೆ.22]: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆ ವಿಚಾರವು ಬಿಜೆಪಿಗೆ ಕಗ್ಗಂಟಾಗಿದ್ದು, ಅನರ್ಹಗೊಂಡಿರುವ ಶಾಸಕರ ಕುರಿತು ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣವಾಗಿರುವ ಅನರ್ಹಗೊಂಡಿರುವ ಶಾಸಕರ ಅಭಿಪ್ರಾಯಕ್ಕೆ ಮಣೆ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಸರ್ಕಾರವನ್ನು ಉಳಿಸಿಕೊಳ್ಳುವ ಒಂದು ಪ್ರಯತ್ನ ಇದಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅನರ್ಹಗೊಂಡಿರುವ ಶಾಸಕರಿಗೆ ವ್ಯತಿರಿಕ್ತವಾಗಿ ತೀರ್ಪು ಬಂದರೆ ಅವರ ಬೆಂಬಲಿಗರಿಗೆ ಅಥವಾ ಸೂಚಿಸುವ ವ್ಯಕ್ತಿಗಳಿಗೆ ಟಿಕೆಟ್‌ ನೀಡುವ ಬಗ್ಗೆ ಗಂಭೀರವಾಗಿ ಆಲೋಚನೆ ನಡೆದಿದೆ. ಆದರೆ, ಎಲ್ಲಾ ಕ್ಷೇತ್ರಗಳಿಗೂ ಇದು ಅನ್ವಯವಾಗುವುದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅನರ್ಹಗೊಂಡಿರುವ ಶಾಸಕರಿಗೆ ಆದ್ಯತೆ ನೀಡಲಾಗುವುದು. ಉಳಿದ ಕ್ಷೇತ್ರದಲ್ಲಿ ಬಿಜೆಪಿಯ ನಾಯಕರಿಗೆ ಟಿಕೆಟ್‌ ನೀಡುವ ಬಗ್ಗೆ ಸಮಾಲೋಚನೆಗಳು ನಡೆದಿದೆ ಎಂದು ಹೇಳಲಾಗಿದೆ.

ಬಿಜೆಪಿ ನಾಯಕರಿಗೆ ಟಿಕೆಟ್‌ ನೀಡಿದರೆ ಅನರ್ಹಗೊಂಡಿರುವ ಶಾಸಕರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಳ್ಳಲು ಅನರ್ಹ ಶಾಸಕರ ಪಾತ್ರ ನಿರ್ಣಾಯಕವಾಗಿದೆ. ಅವರ ತ್ಯಾಗಕ್ಕೆ ಸೂಕ್ತ ಫಲ ಸಿಗದಿದ್ದರೆ ಬಿಜೆಪಿ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನು ಅರಿತ ಬಿಜೆಪಿ ಮುಖಂಡರು ಅನರ್ಹಗೊಂಡಿರುವ ಶಾಸಕರಿಗೆ ಸೂಕ್ತ ಸ್ಥಾನ-ಮಾನ ಕಲ್ಪಿಸಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸಭಾಧ್ಯಕ್ಷರ ತೀರ್ಪನ್ನು ಪ್ರಶ್ನಿಸಿ ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿದೆ. ಸೋಮವಾರ ಈ ಬಗ್ಗೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣೆ ದಿನಾಂಕ ಘೋಷಣೆಯಾಗಿರುವ ಕಾರಣ ಸುಪ್ರೀಂಕೋರ್ಟ್‌ ಅನರ್ಹಗೊಂಡಿರುವ ಶಾಸಕರ ವಿರುದ್ಧ ತೀರ್ಪು ಪ್ರಕಟವಾದರೆ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ. ಆಗ ರಾಜಕೀಯ ಜೀವನಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಇದರಿಂದ ಸರ್ಕಾರ ವಿರುದ್ಧ ಬಂಡಾಯ ಸಾರುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಅನರ್ಹಗೊಂಡಿರುವ ಶಾಸಕರು ಸೂಚಿಸುವವರಿಗೆ ಟಿಕೆಟ್‌ ನೀಡಿದರೆ ಸರ್ಕಾರಕ್ಕೆ ಯಾವುದೇ ಅಪಾರ ಇರುವುದಿಲ್ಲ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಒಟ್ಟಾರೆ ಸೋಮವಾರ ಸುಪ್ರೀಂಕೋರ್ಟ್‌ನ ತೀರ್ಪಿನ ಮೇಲೆ ಬಿಜೆಪಿ ಮುಂದಿನ ನಡೆ ಇರಲಿದೆ ಎನ್ನಲಾಗಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

Follow Us:
Download App:
  • android
  • ios