Asianet Suvarna News Asianet Suvarna News

ಯಾದಗಿರಿ ಗಡಿಯಲ್ಲಿ ಮರೆಯಾಗುತ್ತಿದೆ ಕನ್ನಡ ಭಾಷೆ

ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ 30 ಗಡಿ ಗ್ರಾಮಗಳಲ್ಲಿ  ತೆಲಗು ಭಾಷೆ ಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡ ಭಾಷೆ ಕಗ್ಗೊಲೆಯಾಗುತ್ತಿದೆ.

Kannada Language Face Problem at Yadgir Border

ಯಾದಗಿರಿ(ನ.21): ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ತೆಲಗು ಭಾಷೆ ಪ್ರಭಾವ ಒಂದೆಡೆಯಾದರೆ, ಇನ್ನೊಂದೆಡೆ ಇಂಗ್ಲಿಷ್ ವ್ಯಾಮೋಹದಿಂದ ಪಕ್ಕದ ತೆಲಂಗಾಣ ಭಾಗದಲ್ಲಿ ಮಕ್ಕಳು ಶಿಕ್ಷಣ ಕಲಿಯುತ್ತಿರುವುದರಿಂದ ಜಿಲ್ಲೆಯ ಗುರುಮಠಕಲ್ ವ್ಯಾಪ್ತಿಯಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿರುವುದು ದುರಂತ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮಗಳಾದ ಕುಂಟಿಮರಿ, ನಸಲವಾಯಿ, ಮಾಧ್ವಾರ, ಅನಪುರ, ಕಣೆಕಲ್, ಚಿಲ್ಲಾಪುರ, ಗೋರೆನೋರು, ನಂದೇಪಲ್ಲಿ, ಪದ್ದೇಪಲ್ಲಿ, ನಾಮಪಲ್ಲಿ, ರಾಂಪಲ್ಲಿ, ಕಾಟಂಪಲ್ಲಿ, ಶಂಕರಪಲ್ಲಿ, ಗೋಲಪಲ್ಲಿ, ಮಡೆಪಲ್ಲಿ, ಬೂರಗಪಲ್ಲಿ, ಮೀಟಿ ತಿಪಡಂಪಲ್ಲಿ, ಪರಮೇಶ್ವರಪಲ್ಲಿ, ಅಮ್ಮಾಪಲ್ಲಿ, ಮಲಸಲಪಲ್ಲಿ, ಮುಸ್ಲೆ ಪಲ್ಲಿ, ಘಟಮನಪಲ್ಲಿ, ಚಿಮರಸಪಲ್ಲಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೆಲಗು ಭಾಷೆ ಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡ ಭಾಷೆ ಕಗ್ಗೊಲೆಯಾಗುತ್ತಿದೆ.

ಗಡಿ ಭಾಗದ ಗ್ರಾಮಗಳಿಗೆ ತೆಲಂಗಾಣ ರಾಜ್ಯದ ನಾರಾಯಣಪೇಠ ನಗರ ಕೇವಲ 10 ರಿಂದ 15 ಕಿ.ಮಿ.ಅಂತರ ಇರುವುದರಿಂದ ಈ ಭಾಗದ ಗ್ರಾಮಸ್ಥರು ಆಡುವ ಭಾಷೆ ತೆಲಗು ಆಗಿದ್ದು, ಕರ್ನಾಟಕದಲ್ಲಿರುವ ಇವರಿಗೆ ಕನ್ನಡ ದ್ವಿತೀಯ ಭಾಷೆಯಾಗಿರುವುದು ದುರಂತ. ಈ ಗಡಿ ಗ್ರಾಮಗಳಲ್ಲಿ ಆಡುವ ಭಾಷೆ ತೆಲಗು ಆಗಿರುವುದರಿಂದ ಇಲ್ಲಿರುವ ಕನ್ನಡ ಶಾಲೆಗಳಿಗೆ ಬರುವ ಶಿಕ್ಷಕರಿಗೆ ಕನ್ನಡ, ಇಂಗ್ಲಿಷ್‌ನೊಂದಿಗೆ ತೆಲಗು ಕಡ್ಡಾಯವಾಗಿ ಬರಲೇ ಬೇಕು. ಇಲ್ಲದಿದ್ದರೆ ಮಕ್ಕಳಿಗೆ ಪಾಠ ಬೋಧನೆ ಮಾಡಲು ಹರ ಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಶಾಲೆಗಳಲ್ಲಿ ಕನ್ನಡದೊಂದಿಗೆ ತೆಲಗು ಭಾಷೆಗಳಲ್ಲಿ ಬೋಧನೆ ಮಾಡಲು ಸಾಧ್ಯವಾಗದ ಹಲವಾರು ಶಿಕ್ಷಕರು, ಈ ಗ್ರಾಮಗಳಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ. ಗಡಿ ಗ್ರಾಮಗಳಲ್ಲಿ ತೆಲಗು ಭಾಷೆಯ ಪ್ರಭಾವ ಹೆಚ್ಚಾಗಿರುವುದರಿಂದ ಇಲ್ಲಿನ ಪಾಲಕರು ಅನಿವಾರ್ಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಕ್ಕದ ನಾರಾಯಣಪೇಠ ನಗರಕ್ಕೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ.

ಗಡಿ ಗ್ರಾಮಗಳಲ್ಲಿ ಸುಮಾರು 38 ಕನ್ನಡ ಶಾಲೆಗಳನ್ನು ತೆರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, 217 ಶಾಲೆ ಕೊಠಡಿಗಳ ಪೈಕಿ 26 ದುರಿಸ್ತಿಯಲ್ಲಿದ್ದು, 32 ಶಾಲೆ ಕೊಠಡಿಗಳು ಶಿಥಿಲಗೊಂಡಿದ್ದು, ಉಳಿದ 159 ಶಾಲೆಗಳು ಉತ್ತಮವಾಗಿವೆ. ಸಮರ್ಪಕ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಮತ್ತು ಶಿಕ್ಷಕರ ಲಭ್ಯತೆ ಇಲ್ಲದೇ ಇರುವುದರಿಂದ ಕರ್ನಾಟಕದ

ಗಡಿಯಲ್ಲಿದ್ದುಕೊಂಡು ಮಕ್ಕಳು ನೆರೆಯ ತೆಲಂಗಾಣದ ನಾರಾಯಣಪೇಠ ನಗರಕ್ಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿ ಕನ್ನಡ ಭಾಷೆಗೆ ಆದ್ಯತೆ ಕೊಡುವಂತೆ ಅಲ್ಲಿನ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆ ಭಾಗಗಳಲ್ಲಿ ಕನ್ನಡ ಶಾಲೆಗಳು ಮುಚ್ಚುವ ಅನಿವಾರ್ಯತೆ ಎದುರಾಗಬಹುದು.

ವರದಿ: ಶಂಕರಬಾಬು ರೆಡ್ಡಿ - ಕನ್ನಡಪ್ರಭ

Follow Us:
Download App:
  • android
  • ios