Asianet Suvarna News Asianet Suvarna News

ಮತ್ತೆ 3 ಜಿಲ್ಲೆಗಳಲ್ಲಿ ಐಟಿ ಬೇಟೆ!: ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಆಪ್ತರಿವರು!

ಮತ್ತೆ 3 ಜಿಲ್ಲೆಗಳಲ್ಲಿ ಐಟಿ ಬೇಟೆ| ಉತ್ತರ ಕರ್ನಾಟಕದ ಗುತ್ತಿಗೆದಾರರು, ಉದ್ಯಮಿಗಳ ಮೇಲೆ ದಾಳಿ| ಈ ಪೈಕಿ ನಾಲ್ಕು ಮಂದಿ ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಆಪ್ತರು| ರಾಜಕೀಯಕ್ಕೆ ಪಿಡಬ್ಲ್ಯುಡಿ ಹಣ ಬಳಕೆ: ಜೇಟ್ಲಿ ದಾಳಿ

IT raid On Three districts of uttara Karnataka
Author
Bangalore, First Published Apr 11, 2019, 7:35 AM IST

 

 ಬೆಂಗಳೂರು[ಏ.11]: ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಳ ಬಲವಾದ ವಿರೋಧದ ಮಧ್ಯೆಯೂ ರಾಜ್ಯದಲ್ಲಿ ಗುತ್ತಿಗೆದಾರರ ಹಾಗೂ ಉದ್ಯಮಿಗಳ ಮೇಲಿನ ಐಟಿ ದಾಳಿ ಮುಂದುವರಿದಿದೆ. ಮಂಗಳವಾರ ರಾತ್ರಿಯಷ್ಟೇ ಬಳ್ಳಾರಿಯ ಪಂಚತಾರಾ ಹೋಟೆಲ್‌ ಒಂದಕ್ಕೆ ದಿಢೀರ್‌ ದಾಳಿ ನಡೆಸಿದ್ದ ಆದಾಯ ಇಲಾಖೆ ಅಧಿಕಾರಿಗಳು ಬುಧವಾರದಂದೂ ಉತ್ತರ ಕರ್ನಾಟಕದ ನಾಲ್ಕು ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ವಂಟಮುತ್ತೆ, ಕಾಗವಾಡ ತಾಲೂಕಿನ ಶಿರಗುಪ್ಪಿದ ಪ್ರಥಮ ದರ್ಜೆ ಗುತ್ತಿಗೆದಾರ ಆರ್‌.ಎಸ್‌.ಪಾಟೀಲ್‌, ಘಟಪ್ರಭಾದ ಉದ್ಯಮಿ ಜಯಶೀಲ ಶೆಟ್ಟಿ, ದಾವಣಗೆರೆಯ ಪ್ರಥಮ ದರ್ಜೆ ಗುತ್ತಿಗೆದಾರ ಉದಯ ಶಿವಕುಮಾರ್‌, ಬಳ್ಳಾರಿಯ ಉದ್ಯಮಿ ಶ್ರೀನಿವಾಸ ಸರ್ವಶೆಟ್ಟಿಅವರ ಮೇಲೆ ಐಟಿ ದಾಳಿ ನಡೆದಿವೆ.

ಇವರಲ್ಲಿ ಪ್ರಕಾಶ್‌ ವಂಟಮುತ್ತೆ, ಆರ್‌.ಎಸ್‌.ಪಾಟೀಲ್‌ ಅವರು ಸಂಸದ ಪ್ರಕಾಶ್‌ ಹುಕ್ಕೇರಿ ಅವರ ಆಪ್ತರಾಗಿದ್ದರೆ, ಜಯಶೀಲ ಶೆಟ್ಟಿಅವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಆಪ್ತರಾಗಿದ್ದಾರೆ. ಉದಯ ಶಿವಕುಮಾರ್‌ ಅವರು ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಜೆಡಿಎಸ್‌ ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಆಪ್ತವಲಯಗಳಲ್ಲಿ ಗುರುತಿಸಿಕೊಂಡಿದ್ದರೆ ಉದ್ಯಮಿ ಶ್ರೀನಿವಾಸ್‌ ಸರ್ವ ಶೆಟ್ಟಿಮಾತ್ರ ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ.

ಸಂಸದ ಹುಕ್ಕೇರಿಗೆ ಆಪ್ತರು:

ಚಿಕ್ಕೋಡಿ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಪ್ರಕಾಶ ಹುಕ್ಕೇರಿ ಅವರ ಇಬ್ಬರು ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿವೆ. ಬುಧವಾರ ಬೆಳ್ಳಂಬೆಳಗ್ಗೆ ಪಟ್ಟಣದ ಇಂದಿರಾ ನಗರದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಪ್ರಕಾಶ ಹುಕ್ಕೇರಿ ಅವರ ಆಪ್ತ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ವಂಟಮುತ್ತೆ ಅವರ ಮನೆಗೆ ಆಗಮಿಸಿ ಐಟಿ ಶಾಕ್‌ ನೀಡಿದೆ. ಇನ್ನೊಬ್ಬ ಪ್ರಕಾಶ ಹುಕ್ಕೇರಿ ಅವರ ಆಪ್ತ ಗುತ್ತಿಗೆದಾರ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಆರ್‌.ಎಸ್‌.ಪಾಟೀಲ ಅವರ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಮಹತ್ವದ ಕಡತ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಗೋಕಾಕ್‌ ಶಾಸಕಗೆ ಆಪ್ತ:

ಇದೇವೇಳೆ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ, ಘಟಪ್ರಭಾ ಪಟ್ಟಣದ ಜಯಶೀಲ ಶೆಟ್ಟಿಅವರ ಮನೆ, ಕಚೇರಿ ಹಾಗೂ ಬಾರ್‌ಗಳ ಮೇಲೆ ಬುಧವಾರ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹಾಂತೇಶ ನಗರದಲ್ಲಿರುವ ಅವರ ಮನೆ ಮತ್ತು ಕಚೇರಿಯಲ್ಲಿ ದಾಖಲಾತಿ ವಶಪಡಿಸಿಕೊಂಡು ಸಂಜೆವರೆಗೂ ಪರಿಶೀಲನೆ ಮುಂದುವರೆಸಿದ್ದಾರೆ.

ಎಸ್ಸೆಸ್ಸೆಂ, ಶಾಸಕ ಬಾಲಕೃಷ್ಣಗೆ ಆಪ್ತ:

ಮಾಜಿ ಸಚಿವ ಕಾಂಗ್ರೆಸ್‌ನ ಎಸ್‌.ಎ​ಸ್‌.​ಮ​ಲ್ಲಿ​ಕಾ​ರ್ಜುನ್‌, ಶ್ರವಣಬೆಳ​ಗೊ​ಳದ ಜೆಡಿ​ಎಸ್‌ ಶಾಸಕ ಸಿ.ಎ​ನ್‌.​ಬಾ​ಲ​ಕೃಷ್ಣ ಇಬ್ಬರಿಗೂ ಆಪ್ತ​ರಾದ ಪ್ರಥಮ ದರ್ಜೆ ಗುತ್ತಿಗೆದಾರ ಉದಯ ಶಿವಕುಮಾರ್‌ ಅವರ ದಾವ​ಣ​ಗೆರೆಯ ನಿವಾ​ಸ ‘ಮಂಜು ಕೃಪ’ದ ಮೇಲೆ ಆದಾಯ ತೆರಿಗೆ ಅಧಿ​ಕಾ​ರಿ​ಗಳ ತಂಡವು ಸಂಜೆ ದಿಢೀರ್‌ ದಾಳಿ ನಡೆ​ಸಿತು. ರಾತ್ರಿಯೂ ಕೂಡ ಆವರ ಆಸ್ತಿ, ವಹಿ​ವಾಟು, ಕಾಗದ ಪತ್ರ​ ಸೇರಿ​ದಂತೆ ಅಪಾರ ಪ್ರಮಾ​ಣದ ಕಡ​ತ​ಗಳ ಪರಿ​ಶೀ​ಲ​ನೆ ಮುಂದುವರಿದಿದೆ.

ಪಕ್ಷದೊಂದಿಗೆ ಗುರುತಿಸಿಕೊಳ್ಳದ ಉದ್ಯಮಿ:

ಬಳ್ಳಾರಿ ನಗರದ ತಾಳೂರು ರಸ್ತೆಯ ರೇಣುಕಾ ನಗರದಲ್ಲಿರುವ ಆಯಿಲ್‌ ಹಾಗೂ ಮದ್ಯ ಉದ್ಯಮಿ ಶ್ರೀನಿವಾಸ ಸರ್ವಶೆಟ್ಟಿಎಂಬುವರ ಮನೆ ಹಾಗೂ ಖಾಸಗಿ ಬ್ಯಾಂಕ್‌ ಮೇಲೆ ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಮನೆಗೆ ಆಗಮಿಸಿದ ಆರು ಜನರಿದ್ದ ಅಧಿಕಾರಿಗಳ ತಂಡ ಸುಮಾರು ಏಳೆಂಟು ತಾಸುಗಳ ಕಾಲ ತಪಾಸಣೆ ನಡೆಸಿತು. ಮತ್ತೊಂದು ತಂಡ ಖಾಸಗಿ ಬ್ಯಾಂಕ್‌ಗೆ ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿತು. ಉದ್ಯಮಿ ಶ್ರೀನಿವಾಸ್‌ ಸರ್ವ ಶೆಟ್ಟಿಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ, ವಿವಿಧ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios