Asianet Suvarna News Asianet Suvarna News

ಪಿಎಫ್‌ಐ ಬಳಸಿ ಭಾರತ ಮೇಲೆ ಐಸಿಸ್ ದಾಳಿ?

  • ಪಿಎಫ್‌ಐ ನಂಟಿನ ಯುವಕರ ಸೆಳೆಯುತ್ತಿರುವ ಐಸಿಸ್
  • ಇವರಿಗೆ ಜಿಹಾದ್ ತರಬೇತಿ ನೀಡಿ ಉಗ್ರ ದಾಳಿಗೆ ಸಜ್ಜು
  • ಪಿಎಫ್‌ಐ ನಂಟಿನ ಯುವಕರನ್ನು ಸೆಳೆಯುತ್ತಿರುವ ಐಸಿಸ್
  • ಬಹ್ರೈನ್‌ಗೆ ಕರೆದೊಯ್ದು ಜಿಹಾದ್ ತರಬೇತಿ, ಸಿರಿಯಾದಲ್ಲಿ ಹೋರಾಟ?
  • ಆ ನಂತರ ಭಾರತಕ್ಕೆ ಕಳುಹಿಸಿ ಧರ್ಮಯುದ್ಧ ನಡೆಸಲು ಪ್ರಚೋದನೆ
  • ಕೇರಳ ಪೊಲೀಸ್ ಎಫ್’ಐಆರ್‌ನಲ್ಲಿ ಉಲ್ಲೇಖ: ಆರೋಪ ನಿರಾಕರಿಸಿದ ಪಿಎಫ್‌ಐ ಸಂಘಟನೆ
ISIS Using PFI For Attack On India Says Report

ನವದೆಹಲಿ: ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್, ಭಾರತೀಯ ಯುವಕರನ್ನೇ ಬಳಸಿಕೊಂಡು ಭಾರತದ ಮೇಲೆ ಧರ್ಮಯುದ್ಧ ಸಾರುವ ಸಂಚು ರೂಪಿಸಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.  ಜೊತೆಗೆ ಐಸಿಸ್‌ನ ಈ ದುಷ್ಕೃತ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ನಂಟಿರುವ ಕೆಲ ವ್ಯಕ್ತಿಗಳೂ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೇರಳದ ನೂರಾರು ಯುವಕರು ಇತ್ತೀದಿನ ದಿನಗಳಲ್ಲಿ ಗಲ್ಫ್ ರಾಷ್ಟ್ರಗಳ ಮೂಲಕ ಸಿರಿಯಾಕ್ಕೆ ತೆರಳಿದ್ದಾರೆ ಎಂಬುದು ಖಚಿತವಾಗಿತ್ತು.

ಅದರ ಬೆನ್ನಲ್ಲೇ, ಕೇರಳದಲ್ಲಿ ಹೆಚ್ಚು ಸಕ್ರಿಯವಾಗಿರುವ ಪಿಎಫ್‌ಐ ಸಂಘಟನೆ ನಂಟಿನ ಕೆಲವರಿಗೆ ಐಸಿಸ್ ಉಗ್ರರ ಜೊತೆ ನಂಟಿರುವ ಕುರಿತು ಮೊದಲ ಬಾರಿಗೆ ಸ್ವತಃ ಕೇರಳ ಪೊಲೀಸರೇ ಎಫ್‌ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಉಗ್ರರು ದಕ್ಷಿಣ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿರುವ ವಿಷಯ ಇದೆ. ಈ ಕುರಿತ ಮಾಹಿತಿ ತನ್ನ ಬಳಿ ಇದೆ ಎಂದು ‘ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.  ಆದರೆ ತಮ್ಮ ಸಂಘಟನೆಗೆ ಐಸಿಸ್ ಜೊತೆ ಯಾವುದೇ ನಂಟಿಲ್ಲ. ಇದು ನಮ್ಮ ವಿರುದ್ಧ ಕೇಂದ್ರ ಸರ್ಕಾರದ ಸಂಚು ಎಂದು ಪಿಎಫ್‌ಐ ಹೇಳಿಕೊಂಡಿದೆ.

ಎಫ್‌ಐಆರ್‌ನಲ್ಲೇನಿದೆ?: ‘ಪಿಎಫ್‌ಐ ಜೊತೆ ನಂಟು ಹೊಂದಿರುವ ಯುವಕರನ್ನು, ಐಸಿಸ್ ಉಗ್ರರು ತಮ್ಮ ಜಾಲಕ್ಕೆ ಸೆಳೆಯುತ್ತಿದ್ದಾರೆ. ಹೀಗೆ ಸಿಕ್ಕಿಬಿದ್ದವರನ್ನು ಮೊದಲು ಬಹ್ರೇನ್‌ಗೆ ಕರೆತರಲಾಗುತ್ತದೆ. ಅಲ್ಲಿಗೆ ಅವರಿಗೆ ಜಿಹಾದ್ ಬಗ್ಗೆ ಮತ್ತಷ್ಟು ತರಬೇತಿ ನೀಡಿ, ಬಳಿಕ ಸಿರಿಯಾಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಕೆಲ ಕಾಲ ಹೋರಾಡಿದ ಬಳಿಕ ಅದೇ ವ್ಯಕ್ತಿಗಳನ್ನು ಮರಳಿ ಭಾರತಕ್ಕೆ ಕಳುಹಿಸಿ, ತವರಿನಲ್ಲೇ ಧರ್ಮಯುದ್ಧ ಸಾರುವಂತೆ ಪ್ರೇರೇಪಿಸಲಾಗುತ್ತಿದೆ’ ಎಂದು ಕೇರಳ ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

‘ಜೊತೆಗೆ ಹೀಗೆ ತರಬೇತಿ ಪಡೆದವರಿಗೆ ಭಾರತದಲ್ಲಿ, ವಿಶೇಷವಾಗಿ ದಕ್ಷಿಣ ಭಾರತದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಐಸಿಸ್ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಮೂಲಕ ಭಾರತವನ್ನು ಇಸ್ಲಾಮಿಕ್ ದೇಶವಾಗಿ ಮಾಡುವಂತೆ ಪ್ರೇರೇಪಿಸಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಮಾಹಿತಿ ಇದೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ. ಇತ್ತೀಚೆಗಷ್ಟೇ ಕೇರಳ ಪೊಲೀಸರು ಕಣ್ಣೂರಿನ 6 ಯುವಕರು ಐಸಿಸ್ ಸೇರಲು ಸಿರಿಯಾಕ್ಕೆ ತೆರಳಿದ್ದನ್ನು ಖಚಿತಪಡಿಸಿದ್ದರು. ಅವರ ಹೆಸರು ಮತ್ತು ಫೋಟೋಗಳನ್ನು ಕೂಡಾ ಬಹಿರಂಗಪಡಿಸಿದ್ದರು. ಅಲ್ಲದೆ

ಪಿಎಫ್‌ಐ ಕಾರ್ಯಕರ್ತ ಕೆಒಪಿ ತಲಸ್ಸೀಮ್ ಎಂಬಾತ ಕೊಲ್ಲಿ ದೇಶದಲ್ಲಿ ಇದ್ದುಕೊಂಡೇ ಹವಾಲಾ ಜಾಲದ ಮೂಲಕ ಕೇರಳಕ್ಕೆ ಹಣ ಕಳುಹಿಸುತ್ತಿದ್ದಾನೆ. ಈ ಹಣವನ್ನು, ಯುವಕರನ್ನು ಉಗ್ರ ಜಾಲಕ್ಕೆ ಸೆಳೆಯಲು ಬಳಸಲಾಗುತ್ತಿದೆ ಎಂಬ ಮಾಹಿತಿಯನ್ನೂ ಕೇರಳ ಪೊಲೀಸರು ಬಹಿರಂಗಪಡಿಸಿದ್ದರು.

 

Follow Us:
Download App:
  • android
  • ios