Asianet Suvarna News Asianet Suvarna News

ಇಂದಿರಾ ಕ್ಯಾಂಟೀನಲ್ಲಿ ನಿತ್ಯ 1400 ಜನರಿಗೆ ತಿಂಡಿ, ಊಟ

2 ದಿನದಲ್ಲಿ ಅಧಿಕೃತ ಆದೇಶ ಪ್ರಕಟ

ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನದ

ಊಟ ತಲಾ 500 ಪ್ಲೇಟ್ ಏರಿಕೆ

ರಾತ್ರಿ ಊಟದ ಸಂಖ್ಯೆ 400 ಪ್ಲೇಟ್’ಗೆ ಹೆಚ್ಚಿಸಲು ಬಿಬಿಎಂಪಿ ನಿರ್ಧಾರ

Indira Canteen to serve food to more people

ಬೆಂಗಳೂರು: ಉದ್ಯಾನ ನಗರಿಯ ಬಡಜನರಿಗಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರಸ್ತುತ ಮೂರೂ ಹೊತ್ತಿನಿಂದ 900 ಜನರಿಗೆ ನೀಡುತ್ತಿರುವ ತಿಂಡಿ- ಊಟದ ಸಂಖ್ಯೆ ಶೀಘ್ರದಲ್ಲೇ 1400 ಜನರಿಗೆ ಏರಿಕೆಯಾಗಲಿದೆ.

ಬೆಳಗಿನ ವೇಳೆ 300 ಜನರಿಗೆ ನೀಡುತ್ತಿರುವ ತಿಂಡಿಯ ಸಂಖ್ಯೆಯನ್ನು 500 ಜನರಿಗೆ, ಮಧ್ಯಾಹ್ನ ಕೂಡ 300 ಜನರಿಗಿರುವ ಊಟದ ಸೌಲಭ್ಯವನ್ನು 500 ಜನರಿಗೆ ಹಾಗೂ ರಾತ್ರಿ ವೇಳೆ 300 ಜನರಿಗೆ ನೀಡುತ್ತಿರುವ ಊಟದ ಸೌಲಭ್ಯವನ್ನು 400 ಜನರಿಗೆ ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಕಳೆದ ಆಗಸ್ಟ್ 16ರಿಂದ 101 ವಾರ್ಡುಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಬಿಸಲಾಗಿದ್ದು, ಪ್ರಸ್ತುತ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಪ್ರತಿ ಹೊತ್ತಿಗೆ 300

ಜನರಂತೆ ಮೂರೂ ಹೊತ್ತಿನಿಂದ 900 ಜನರಿಗೆ ಕಡಿಮೆ ದರದಲ್ಲಿ ತಿಂಡಿ, ಊಟ ನೀಡಲಾಗುತ್ತಿದೆ.

ಆದರೆ, ಹೆಚ್ಚಿನ ಊಟಕ್ಕಾಗಿ ಎಲ್ಲೆಡೆ ಬೇಡಿಕೆ ಬರುತ್ತಿದೆ. ನಿತ್ಯ ನೂರಾರು ಜನ ಕ್ಯಾಂಟೀನ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಅಂತಿಮವಾಗಿ ತಿಂಡಿ-ಊಟ ದೊರೆಯದೇ ಹಿಂತಿರುಗುತ್ತಿದ್ದಾರೆ. ಹಾಗಾಗಿ ಪ್ರತೀ ಕ್ಯಾಂಟೀನ್‌ನಿಂದ ಎಷ್ಟು ಹೆಚ್ಚುವರಿ ತಿಂಡಿ, ಊಟಕ್ಕೆ ಬೇಡಿಕೆ ಇದೆ ಎಂದು ಬಿಬಿಎಂಪಿ ತನ್ನ ವಲಯ ಜಂಟಿ ಆಯುಕ್ತರಿಂದ ವರದಿ ತರಿಸಿಕೊಂಡಿದೆ.

ಆ ವರದಿ ಪ್ರಕಾರ, ಬಹುತೇಕ ಕ್ಯಾಂಟೀನ್‌ಗಳಲ್ಲಿ ಪ್ರಸ್ತುತ ಬೆಳಗ್ಗೆ ನೀಡುತ್ತಿರುವ 300 ಪ್ಲೇಟ್ ತಿಂಡಿಯನ್ನು 500ಕ್ಕೆ, ಅದೇ ರೀತಿ ಮಧ್ಯಾಹ್ನದ ಊಟವನ್ನು ಕೂಡ 300ರಿಂದ 500 ಪ್ಲೇಟ್‌ಗೆ ಹೆಚ್ಚಿಸುವಂತೆ ಹಾಗೂ ರಾತ್ರಿ ಊಟದ ಸಂಖ್ಯೆಯನ್ನು 300ರಿಂದ 400 ಪ್ಲೇಟ್‌ಗೆ ಹೆಚ್ಚಿಸುವಂತೆ ಬೇಡಿಕೆ ಬಂದಿದೆ.

ಕೆಲವು ಕ್ಯಾಂಟೀನ್‌ಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಆದರೆ, ಸದ್ಯದ ಮಟ್ಟಿಗೆ ಎಲ್ಲ ಕ್ಯಾಂಟೀನ್‌ಗಳಲ್ಲೂ ಪ್ರತಿ ದಿನ 900 ಜನರಿಗೆ ಸೀಮಿತವಾಗಿರುವ ಊಟ ತಿಂಡಿಯ ಸೌಲಭ್ಯವನ್ನು 1400 ಜನರಿಗೆ ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಲಾಗಿದೆ. ಪಾಳಿಕೆ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಇದುವರೆಗೆ 35 ಲಕ್ಷ ಜನರಿಗೆ ಊಟ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ತಲಾ 5 ರು.ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ತಲಾ 10 ರು. ಊಟ ನೀಡಲಾಗುತ್ತಿದೆ. ಪ್ರಸ್ತುತ ಇರುವ 101 ಇಂದಿರಾ ಕ್ಯಾಂಟೀನ್‌ಗಳಿಂದ ಆ.16ರಿಂದ ಇದುವರೆಗೆ ನಿತ್ಯ 90 ಸಾವಿರಕ್ಕೂ ಹೆಚ್ಚು ಜನರಂತೆ ಸುಮಾರು 33ರಿಂದ 35 ಲಕ್ಷ ಜನರಿಗೆ ಉಪಹಾರ, ಊಟ ವಿತರಿಸಲಾಗಿದೆ.

ತಿಂಡಿ, ಊಟದ ಸಂಖ್ಯೆ 1400 ಜನರಿಗೆ ಹೆಚ್ಚಿಸುವುದರಿಂದ 101 ಕ್ಯಾಂಟೀನ್‌ಗಳಲ್ಲಿ ನಿತ್ಯ ತಿಂಡಿ, ಊಟ ಸೇವಿಸುವವರ ಸಂಖ್ಯೆ 1.47 ಲಕ್ಷ ಜನರಿಗೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಲಯ ಜಂಟಿ ಆಯುಕ್ತರಿಂದ ಪ್ರತಿ ವಾರ್ಡ್‌ನಲ್ಲಿ ಊಟ, ತಿಂಡಿಗೆ ಎಷ್ಟು ಪ್ರಮಾಣದ ಬೇಡಿಕೆ ಹೆಚ್ಚಾಗಿದೆ ಎಂಬ ವರದಿ ತರಿಸಿಕೊಳ್ಳಲಾಗಿದೆ. ಬಹುತೇಕ ಎಲ್ಲಾ ಕ್ಯಾಂಟೀನ್’ಗಳಲ್ಲೂ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನದ ಊಟದ ಸಂಖ್ಯೆಯನ್ನು ತಲಾ 500 ಜನರಿಗೆ ಮತ್ತು ರಾತ್ರಿ ಊಟದ ಸಂಖ್ಯೆಯನ್ನು 400 ಜನರಿಗೆ ಹೆಚ್ಚಿಸಲು ಬೇಡಿಕೆ ಬಂದಿದೆ. ಬೇಡಿಕೆಯನುಸಾರ ತಿಂಡಿ, ಊಟದ ಸಂಖ್ಯೆ ಹೆಚ್ಚಿಸಲು ಶೀಘ್ರ ಆದೇಶ ಮಾಡಲಾಗುವುದು.

ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

ಅ.2ರಂದೇ ಬಾಕಿ ಎಲ್ಲಾ  ಕ್ಯಾಂಟೀನ್ ಆರಂಭ ಡೌಟು

ಬಾಕಿ ಇರುವ 97 ವಾರ್ಡುಗಳಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಇಂದಿರಾ ಕ್ಯಾಂಟೀನ್’ಗಳನ್ನು ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವು ವಾರ್ಡುಗಳಲ್ಲಿ ಮಾತ್ರ ಇನ್ನೂ ಸ್ಥಳಾವಕಾಶದ ಕೊರತೆ ಇದೆ. ಮಾಹಿತಿ ಪ್ರಕಾರ ಸುಮಾರು 15 ವಾರ್ಡುಗಳಲ್ಲಿ ಗುರುತಿಸಲಾಗಿರುವ ಜಾಗಗಳಿಗೆ ಸ್ಥಳೀಯ ಶಾಸಕರು, ಕಾರ್ಪೊರೇಟರ್‌ಗಳಿಂದ ಅಡ್ಡಿಯಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ 97 ಕ್ಯಾಂಟೀನ್‌ಗಳ ಆರಂಭಕ್ಕೆ ನೀಡಿರುವ ಅ.2ರ ಗಡುವಿಗೆ ಇನ್ನು ಒಂದು ವಾರವಷ್ಟೇ ಬಾಕಿ ಇರುವುದರಿಂದ ಅಂದು ಎಲ್ಲಾ 97 ಕ್ಯಾಂಟೀನ್‌ಗಳೂ ಉದ್ಘಾಟನೆಯಾಗುವುದು ಅನುಮಾನ ಎನ್ನುತ್ತವೆ ಬಿಬಿಎಂಪಿ ಮೂಲಗಳು.

 

Follow Us:
Download App:
  • android
  • ios