Asianet Suvarna News Asianet Suvarna News

23 ಸ್ಥಾನ ಮೇಲಕ್ಕೇರಿದ ನರೇಂದ್ರ ಮೋದಿ ಸರ್ಕಾರ

ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ವಿಶ್ವದ 190 ದೇಶಗಳ ಶ್ರೇಯಾಂಕ ಪಟ್ಟಿಯೊಂದು ವಿಶ್ವಬ್ಯಾಂಕ್‌ ಬುಧವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭರ್ಜರಿ 23 ಸ್ಥಾನ ಮೇಲಕ್ಕೇರಿದೆ. 

India jumps 23 places in ease of business ranking
Author
Bengaluru, First Published Nov 1, 2018, 7:42 AM IST

ವಾಷಿಂಗ್ಟನ್‌/ನವದೆಹಲಿ: ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ವಿಶ್ವದ 190 ದೇಶಗಳ ಶ್ರೇಯಾಂಕ ಪಟ್ಟಿಯೊಂದು ವಿಶ್ವಬ್ಯಾಂಕ್‌ ಬುಧವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭರ್ಜರಿ 23 ಸ್ಥಾನ ಮೇಲೇರುವ ಮೂಲಕ 77 ಸ್ಥಾನ ತಲುಪಿದೆ. ಜೊತೆಗೆ ಅತ್ಯಂತ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅತ್ಯಂತ ಹೆಚ್ಚು ಆರ್ಥಿಕ ಸುಧಾರಣೆಗಳನ್ನು ತಂದ ದೇಶಗಳ ಪೈಕಿ ಭಾರತವೂ ಒಂದು ವಿಶ್ವಸಂಸ್ಥೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ.

2019ರ ಲೋಕಸಭಾ ಚುನಾವಣೆಗೂ ಮುನ್ನ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗುತ್ತಿದ್ದ ಕೇಂದ್ರ ಸರ್ಕಾರಕ್ಕೆ, ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿರುವ ವರದಿ, ಹೊಸ ಟಾನಿಕ್‌ ನೀಡಿದೆ. ಈ ನಡುವೆ ವರದಿಯನ್ನು ಸ್ವಾಗತಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ರಿಯಲ್‌ ಎಸ್ಟೇಟ್‌ ಸೇರಿದಂತೆ ಇನ್ನಿತರೆ ಕೆಲ ಕ್ಷೇತ್ರಗಳು ಸುಧಾರಣೆ ಅಳವಡಿಕೆಯಾದರೆ, ಟಾಪ್‌ 50ರೊಳಗೆ ಭಾರತ ಸೇರುವುದು ಕಷ್ಟವೇನಲ್ಲ ಎಂದು ಹೇಳಿದ್ದಾರೆ.

ಹೈಜಂಪ್‌: ದೇಶವೊಂದರಲ್ಲಿ ಉದ್ಯಮ ಸ್ಥಾಪಿಸಲು ಉದ್ಯಮಿಗಳು ವಹಿಸಬೇಕಾದ ಶ್ರಮ ಸೇರಿದಂತೆ 10 ಮಾನದಂಡಗಳಲ್ಲಿ ಯಾವ್ಯಾವ ದೇಶಗಳು ಎಂಥ ವಾತಾವರಣ ಹೊಂದಿದೆ ಎಂಬುದನ್ನು ಪರಿಗಣಿಸಿ ವಿಶ್ವಬ್ಯಾಂಕ್‌ ಪ್ರತಿ ವರ್ಷ ವರದಿ ಬಿಡುಗಡೆ ಮಾಡುತ್ತದೆ. ಉದ್ಯಮ ಆರಂಭ, ನಿರ್ಮಾಣ ಗುತ್ತಿಗೆ, ವಿದ್ಯುತ್‌ ಸಂಪರ್ಕ, ಸಾಲ, ತೆರಿಗೆ ಪಾವತಿ, ಗಡಿಯಾಚೆಗಿನ ವ್ಯಾಪಾರ, ಒಪ್ಪಂದ ಜಾರಿ, ದಿವಾಳಿ ಪ್ರಕ್ರಿಯೆ ನಿರ್ವಹಣೆ ಸೇರಿದಂತೆ 10 ಅಂಶಗಳನ್ನು ವರದಿ ತಯಾರಿಕೆಗೆ ಪರಿಗಣಿಸಲಾಗುತ್ತದೆ. ಭಾರತ ಈ 10ರ ಪೈಕಿ 6 ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಏಕೀಕೃತ ತೆರಿಗೆ ಪಾವತಿಗೆ ಜಿಎಸ್‌ಟಿ ಜಾರಿ, ದಿವಾಳಿ ತಡೆ ಪ್ರಕ್ರಿಯೆಯಲ್ಲಿ ಸುಧಾರಣೆ ಮೊದಲಾದ ಕ್ರಮಗಳಿಂದಾಗಿ ಭಾರತ ಈ ವರ್ಷ 23 ಸ್ಥಾನ ಏರಿಕೆ ಕಾಣುವ ಮೂಲಕ 77ನೇ ಸ್ಥಾನ ತಲುಪಿದೆ ಎಂದು ವರದಿ ಹೇಳಿದೆ.

ಕಳೆದ ವರ್ಷ ಕೂಡಾ ಭಾರತ 31 ಸ್ಥಾನಗಳ ಭಾರೀ ಏರಿಕೆ ದಾಖಲಿಸುವ ಮೂಲಕ 131ನೇ ಸ್ಥಾನದಿಂದ 100ನೇ ಸ್ಥಾನಕ್ಕೆ ಏರಿತ್ತು. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಈ ಪಟ್ಟಿಯಲ್ಲಿ ಭಾರತ 65 ಸ್ಥಾನಗಳಷ್ಟುಭಾರೀ ಏರಿಕೆ ಕಂಡಿದೆ.

ಟಾಪ್‌ 5: ನ್ಯೂಜಿಲೆಂಡ್‌, ಸಿಂಗಾಪುರ, ಡೆನ್ಮಾಕ್‌, ಹಾಂಕಾಂಗ್‌ ಮತ್ತು ದಕ್ಷಿಣ ಕೊರಿಯಾ ಟಾಪ್‌ 5 ಸ್ಥಾನದಲ್ಲಿವೆ. ಅಮೆರಿಕ 8, ಚೀನಾ 46, ಪಾಕಿಸ್ತಾನ 136ನೇ ಸ್ಥಾನದಲ್ಲಿದೆ.

ವಿಶ್ವಬ್ಯಾಂಕ್‌ ಮೆಚ್ಚುಗೆ: 2 ವರ್ಷದಲ್ಲಿ 50ಕ್ಕೂ ಹೆಚ್ಚು ಸ್ಥಾನಗಳ ಏರಿಕೆ ಕಂಡಿರುವ ಭಾರತದ ಸಾಧನೆಯನ್ನು ವಿಶ್ವಸಂಸ್ಥೆ ಪ್ರಶಂಸಿಸಿದೆ. ಜೊತೆಗೆ ಸುಧಾರಣಾ ಪ್ರಕ್ರಿಯೆಯಲ್ಲಿ ಅತ್ಯಂತ ಗಣನೀಯ ಸಾಧನೆ ಮಾಡಿದ ಟಾಪ್‌ 10 ದೇಶಗಳ ಪೈಕಿ ಭಾರತ ಕೂಡಾ ಒಂದು ಮೆಚ್ಚುಗೆ ವ್ಯಕ್ತಪಡಿಸಿದೆ.

Follow Us:
Download App:
  • android
  • ios